ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲ : ಅಧ್ಯಾತ್ಮ ಡೈರಿ

ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ! ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!? ~ ಅಲಾವಿಕಾ

‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ.
‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು.
~
ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು…
ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ ದಾರಿಯಾಗೋದು. ಬಂಧುಗಳ ಕಿವಿಮಾತು ಹೇಳೋಲ್ವೇ, ‘ಆಗಾಗ ಜಗಳಾಡ್ತ ಇದ್ರೇನೇ ಪ್ರೀತಿ ಎಷ್ಟಿದೆ ಅಂತ ಗೊತ್ತಾಗೋದು’ ಅಂತ!
ಪ್ರೀತಿಯ ಸಾಬೀತಿಗೆ ಶುರುವಾಗುವ ಜಗಳ ರೂಢಿಯಾಗಿಬಿಟ್ಟರೆ ಕಷ್ಟ. ಕೈಮೀರಿ ಹೋದರೆ ತುಂಬಾನೇ ಕಷ್ಟ.
~
ಅನ್ನಿಸುತ್ತೆ, ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ!
ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!?
~
ಅದಕ್ಕೇ, ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ,
ಅಂಟಿಕೊಂಡಿಲ್ಲದ, ಬಿಡಲಾಗದ
ಚೆಂದದೊಂದು ಸಂಬಂಧ ನಮಗೆ ಸಾಧ್ಯವಾಗಬೇಕು.
ಆಗಲಾದರೂ ನಮ್ಮ ಸಂಗಾತಿ ನಮಗೆ ದಾರಿಹೋಕರಂತೆ, ಜೊತೆಯಾತ್ರಿಯಂತೆ, ಎಲ್ಲರಂತೆ ಅನ್ನಿಸುತ್ತ ಕೊನೆತನಕ ಜತೆ ನಡೆಯಬಹುದು.
ಅಥವಾ ಎಲ್ಲರನ್ನೂ ಸಂಗಾತಿಯಂತೆಯೇ ಭಾವಿಸುತ್ತಾ, ಹರಿವಿನಲ್ಲಿ ಒಂದಾಗಿ ಕ್ಷಣಕ್ಷಣದ ತುದಿಯನ್ನು ಮುಟ್ಟುತ್ತ ಇರಬಹುದು.

Leave a Reply