ಕುಡುಕನನ್ನು ಕೊಂದಿದ್ದು ನೀರೋ ಮದ್ಯವೋ? : ನಸ್ರುದ್ದೀನ್ ಕಥೆ

Mullaಒಂದೂರಿನಲ್ಲಿ ಒಬ್ಬ ಮಹಾ ಕುಡುಕನಿದ್ದ. ಅವನ ಹೆಂಡತಿ ಅವನಿಗೆ ಕುಡಿತ ಬಿಡುವಂತೆ ಯಾವಾಗಲೂ ಒತ್ತಾಯಿಸುತ್ತಿದ್ದಳು. ಒಂದು ದಿನ ಗಾಬರಿಯಿಂದ ಅವನ ಬಳಿ ಓಡಿ ಬಂದು, “ಇಲ್ಲಿ ನೋಡು. ನಿಮ್ಮೂರಿನವನೊಬ್ಬ ವಿಪರೀತ ಕುಡಿದು ದೋಣಿ ನಡೆಸುವಾಗ ನೀರಿಗೆ ಬಿದ್ದು ಸತ್ತನಂತೆ. ಒಳ್ಳೇ ಮಾತಿನಲ್ಲಿ ಹೇಳುತ್ತಿದ್ದೇನೆ, ಇನ್ನಾದರೂ ಕುಡಿಯೋದು ಬಿಡು!” ಎಂದು ಬೈಯತೊಡಗಿದಳು. 

ಆ ಕುಡುಕನಿಗೂ ಮುಲ್ಲಾ ನಸ್ರುದ್ದೀನನಿಗೂ ಒಳ್ಳೇ ಗೆಳೆತನ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಸ್ರುದ್ದೀನ್ ಕಿವಿಗೆ ಅವರ ಸಂಭಾಷಣೆ ಬಿತ್ತು. “ಏನು ವಿಷಯ?” ಎಂದು ವಿಚಾರಿಸಿದ. ಕುಡುಕನ ಹೆಂಡತಿ ಅವನಿಗೆ ಕುಡುಕ ಸತ್ತ ಸುದ್ದಿ ಹೇಳಿದಳು.

ನಸ್ರುದ್ದೀನ್ ಗಡ್ಡ ನೀವಿಕೊಳ್ಳುತ್ತಾ, “ಅವನು ನದಿಗೆ ಬಿದ್ದು ಸತ್ತನಲ್ಲವೆ?” ಎಂದು ಕೇಳಿದ.
“ಹೌದು” ಎಂದಳು ಕುಡುಕನ ಹೆಂಡತಿ.
“ಅವನು ನೀರಿಗೆ ಬೀಳುವವರೆಗೂ ಸತ್ತಿರಲಿಲ್ಲ ಅಲ್ಲವೆ?’
“ಹೌದು. ಏನು ಹೇಳಲು ಹೊರಟಿದ್ದೀಯ ನೀನು!?’ ಕೇಳಿದಳು ಸಿಟ್ಟಿನಿಂದ.

“ಹಾಗಾದರೆ, ಅವನನ್ನು ಕೊಂದಿರುವುದು ನೀರೇ ಹೊರತು ಅವನು ಕುಡಿದಿದ್ದ ಮದ್ಯವಲ್ಲ ಬಿಡು” ಅಂದ ನಸ್ರುದ್ದೀನ್, “ಇನ್ನು ಮೇಲೆ ನೀರು ಇರುವಲ್ಲಿ ಹೋಗಬೇಡ” ಎಂದು ಕಣ್ಣು ಮಿಟುಕಿಸುತ್ತಾ ಗೆಳೆಯನಿಗೆ ಕಿವಿಮಾತು ಹೇಳಿದ! 

(ಸಂಗ್ರಹ ಮತ್ತು ಅನುವಾದ : ಅಲಾವಿಕಾ )

Leave a Reply