ಆಸ್ಥೆ : ತಾವೋ ಧ್ಯಾನ ~ 23

ಬಡತನ, ಒಂಟಿತನ ಮತ್ತು ಅನಾಥ ಪ್ರಜ್ಞೆ ನಿಮ್ಮನ್ನು ಎದೆಗುಂದಿಸಬಹುದು ಆದರೆ ಈ ಮೂರನ್ನು ನೀವು ನಿಭಾಯಿಸಿಬಿಟ್ಟರೆ ಒಂದು ಅಚಲ ನಿಷ್ಠೆ ನಿಮ್ಮನ್ನು ಸ್ವಾಗತಿಸುತ್ತದೆ ಮತ್ತು ಕೊನೆಯವರೆಗೂ ನಿಮ್ಮೊಡನೆ ಸಾವಧಾನವಾಗಿ ಹೆಜ್ಜೆ ಹಾಕುತ್ತದೆ…  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ತಾವೋ ಬೆನ್ನು ಹತ್ತಿದವರಿಗೆ
ಒಳಗಿನ ಆಸ್ಥೆಯೇ ಸ್ಪೂರ್ತಿ.
ಇಲ್ಲಿ ಯಾವ ಭರವಸೆಗಳಿಲ್ಲವಾದರೂ
ಪ್ರತಿಫಲಗಳು ಅಗಣಿತ.
~
ಜಗತ್ತಿನ ಎಲ್ಲ ಅಧ್ಯಾತ್ಮಿಕ ಸಂಪ್ರದಾಯಗಳಿಗೆ ಹೋಲಿಸಿದರೆ ‘ತಾವೋ’ ಅತ್ಯಂತ ಕಡಿಮೆ ಜನಪ್ರಿಯ ಸಂಪ್ರದಾಯ. ಬೇರೆಲ್ಲ ಸಂಪ್ರದಾಯಗಳು ಸ್ವರ್ಗ, ಸುಖ, ಸಂಪತ್ತು, ಉತ್ಕಟ ಆನಂದ ಮುಂತಾದವುಗಳ ಭರವಸೆ ಕೊಡುತ್ತವೆಯಾದರೆ ತಾವೋದಿಂದ ನಾವು ನಿರೀಕ್ಷಿಸಬಹುದಾದದ್ದು ಈ ಮೂರನ್ನು ಮಾತ್ರ. ಒಂದು ಸಧೃಢ ಆರೋಗ್ಯ ಎರಡು, ಬದುಕಿನ ಅಚ್ಚರಿಯಲ್ಲಿ ಒಂದು ಸ್ಪಷ್ಟದಾರಿ ಮತ್ತು ಮೂರು, ಸಾವಿನ ಭಯದಿಂದ ಮುಕ್ತಿ.

ತಾವೋ ಬಗ್ಗೆ ಹೇಳಿದರೆ ;
ಜಾಣ, ಕೂಡಲೇ ಅಪ್ಪಿಕೊಂಡುಬಿಡುತ್ತಾನೆ,
ಸಾಮಾನ್ಯ, ಅರ್ಧ ಒಪ್ಪಿಗೆ
ಅರ್ಧ ಸಂಶಯದಿಂದ ನೋಡುತ್ತಾನೆ,
ದಡ್ಡನಂತೂ, ಜೋರಾಗಿ ನಕ್ಕು ಬಿಡುತ್ತಾನೆ.
ಅವ ಹಾಗೆ ನಗದೇ ಹೋದರೆ
ಅದು ತಾವೋ ಅಲ್ಲವೇ ಅಲ್ಲ.

ಆದ್ದರಿಂದಲೇ,
ಬೆಳಕಿನ ದಾರಿ, ಕತ್ತಲೆಯಂತೆ ಕಾಣುತ್ತದೆ,
ಮುಂದೆ ಸಾಗುವ ದಾರಿ
ಹಿಂದೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ,
ನೇರ ದಾರಿ
ದೂರ ಅನಿಸುತ್ತದೆ,
ಪರಮ ಶಕ್ತಿಯನ್ನ ಜನ
ಅಶಕ್ತ ಅನ್ನತೊಡಗುತ್ತಾರೆ,
ಸ್ಪಷ್ಟತೆಯನ್ನ
ಅಸ್ಪಷ್ಟ ಎನ್ನಲಾಗುತ್ತದೆ,
ಕಲೆ
ಕ್ಲೀಷೆಯಾಗುತ್ತದೆ,
ಪ್ರೇಮಕ್ಕೆ
ಉದಾಸೀನದ ಹೆಸರು ಇಡಲಾಗುತ್ತದೆ,
ಜ್ಞಾನವನ್ನು
ಬಾಲಿಶ ಎಂದು ಕರೆಯಲಾಗುತ್ತದೆ.

ಹುಡುಕಿದರೆ
ತಾವೋ ಎಲ್ಲೂ ಸಿಗುವುದಿಲ್ಲ
ಆದರೆ ಎಲ್ಲವನ್ನೂ ಸಲಹುತ್ತ
ಪೂರ್ಣಗೊಳಿಸುತ್ತಲೇ ಇರುತ್ತದೆ.
~ ಲಾವೋತ್ಸು

ಆದ್ದರಿಂದಲೇ ತಾವೋ ಗೆ ಅಷ್ಟು ಕಡಿಮೆ ಹಿಂಬಾಲಕರು. ಇಲ್ಲಿ ಥಳಕಿಕೆ ಅವಕಾಶವಿಲ್ಲ, ಗುಂಪುಗಾರಿಕೆಗೆ ಮನ್ನಣೆಯಿಲ್ಲ ಮತ್ತು ಮೇಲು ಕೀಳೆಂಬ ಭೇದಭಾವವಿಲ್ಲ. ಇಲ್ಲಿ ಈ ಎರಡು ಮಾತ್ರ ಸಾಧ್ಯ, ತಾವೋ ನಿಮ್ಮನ್ನು ಪೂರ್ಣವಾಗಿ ಆವರಿಸಿಕೊಂಡಿದೆ ಅಥವಾ ತಾವೋದಿಂದ ತಾತ್ಕಾಲಿಕವಾಗಿ ನೀವು ಹೊರಗಿರುವಿರಿ.

ತಾವೋ ಪಾಲಿಸುವಾಗ ನೀವು ಸಾಕಷ್ಟು ಕಠಿಣರಾಗಬೇಕಾಗುತ್ತದೆ. ಬಡತನ, ಒಂಟಿತನ ಮತ್ತು ಅನಾಥ ಪ್ರಜ್ಞೆ ನಿಮ್ಮನ್ನು ಎದೆಗುಂದಿಸಬಹುದು ಆದರೆ ಈ ಮೂರನ್ನು ನೀವು ನಿಭಾಯಿಸಿಬಿಟ್ಟರೆ ಒಂದು ಅಚಲ ನಿಷ್ಠೆ ನಿಮ್ಮನ್ನು ಸ್ವಾಗತಿಸುತ್ತದೆ ಮತ್ತು ಕೊನೆಯವರೆಗೂ ನಿಮ್ಮೊಡನೆ ಸಾವಧಾನವಾಗಿ ಹೆಜ್ಜೆ ಹಾಕುತ್ತದೆ; ಮತ್ತು ಆಗಲೇ ಕೆಲವು ಸಾಧ್ಯತೆಗಳು ಅತ್ಯಂತ ಸೂಕ್ಷ್ಮವಾಗಿ ನಿಮ್ಮೊಳಗೆ ಒಂದಾಗುತ್ತವೆ.

ಇಲ್ಲಿ ತಕ್ಷಣಕ್ಕೆ ನೀವು ಶ್ರೀಮಂತಲಾಗರಾರಿರಿ, ಪ್ರಭಾವಿಗಳಾಗಲಾರಿರಿ ಆದರೆ ನಿಮ್ಮೊಳಗೊಂದು ನಿಗೂಢ ಸತ್ವ ಇರುವುದನ್ನು ಅತ್ಯಂತ ಖುಶಿಯಿಂದ ಮನಗಾಣುವಿರಿ. ಒಮ್ಮೆ ಈ ಸತ್ವದ ಸವಿಯನ್ನು ಸವಿದುಬಿಟ್ಟರೆ ನಿಮ್ಮ ಸಂಶಯಗಳೆಲ್ಲವೂ ಅಳಿಸಿ ಹೋಗುವವು ಹಾಗು ಬಡತನ ಮತ್ತು ಒಂಟಿತನ ಅತ್ಯಂತ ಸುಲಭವಾಗಿ ನಿಭಾಯಿಸಲ್ಪಡುವವು.

Leave a Reply