ಆಯುಷ್ಯದ ಪಾತ್ರೆ ಕರಗುತ್ತಲೇ ಇದೆ : ಭರ್ತೃಹರಿಯ ವೈರಾಗ್ಯ ಶತಕ

ಆಯುಷ್ಯವು ರಂಧ್ರ ಇರುವ ಪಾತ್ರದಲ್ಲಿ (ಘಟಿಕಾ ಪಾತ್ರ) ತುಂಬಿದ ನೀರಿನಂತೆ ಕರಗುತ್ತಾ ಇರುತ್ತದೆ. ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಆಯುಷ್ಯ ಪ್ರಮಾಣವನ್ನು ತಡೆ ಹಿಡಿಯಲಿಕ್ಕೆ ಸಾಧ್ಯವಿಲ್ಲ. ಹಾಗಿದ್ದೂ ನಾವು ನಮ್ಮ ಮೂರ್ಖತನದಿಂದ ಆಯಸ್ಸನ್ನೂ ಬದುಕನ್ನೂ ನಷ್ಟ ಮಾಡಿಕೊಳ್ಳುತ್ತಿದ್ದೇವೆ.

ಆದಿತ್ಯಸ್ಯ ಗತಾಗತೈರಹರಹಃಸಂಕ್ಷಿಯತೇ ಜೀವಿತಂ
ವ್ಯಾಪಾರೈರ್ಬಹುಕಾರ್ಯಭಾರಗುರುಭಿಃ ಕಾಲೋಪಿ ನಜ್ಞಾಯತೇ |
ದೃಷ್ಟ್ವಾ ಜನ್ಮಜರಾವಿಪತ್ತಿಮರಣಂ ತ್ರಾಸಶ್ಚನೋತ್ಪದ್ಯತೇ
ಪೀತ್ವಾ ಮೋಹಮಯೀಂ ಪ್ರಮಾದಮದಿರಾಮುನ್ಮತ್ತ ಭೂತಂ ಜಗತ್ || ವೈರಾಗ್ಯ ಶತಕ ||

ಅರ್ಥ: ಸೂರ್ಯನ ಉದಯಾಸ್ತಗಳಿಂದ ಕಳೆಯುವ ಕಾಲ ಪ್ರತಿದಿನವೂ ಆಯುಸ್ಸನ್ನು ಕಡಿಮೆ ಮಾಡುತ್ತದೆ. ಆಸ್ತಿ-ಸಂಪತ್ತು, ತನ್ನ ಕುಟುಂಬ ಇವುಗಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದ್ದಾಗ ಕಾಲ ಕಳೆದದ್ದೇ ತಿಳಿಯುವುದಿಲ್ಲ. ಹುಟ್ಟು, ಮುಪ್ಪು, ಸಾವು ಇವುಗಳನ್ನು ನಿತ್ಯ ನೋಡುತ್ತಿದ್ದರೂ ಅವುಗಳ ಅರ್ಥ ಆಗುವುದೇ ಇಲ್ಲ. ಯಾಕೆಂದರೆ, “ಮೋಹವೆಂಬ ಮದಿರೆಯನ್ನು ಕುಡಿದ ಈ ಜಗತ್ತು ಉನ್ಮತ್ತವಾಗಿದೆ”.

ತಾತ್ಪರ್ಯ: ಮನುಷ್ಯರ ಮೋಹದ ವಿಷಯದಲ್ಲಿ ಭರ್ತೃಹರಿ ಮೊಳಗಿಸಿದ ಎಚ್ಚರಿಕೆಯ ಘಂಟೆಯ ಸಪ್ಪಳ ಯಾರಿಗೂ ಕೇಳುವುದೇ ಇಲ್ಲ. ಆದ ಕಾರಣ ಜನರು ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುವಂತೆ ಆಗಿದೆ. ಇದಕ್ಕೆಲ್ಲಾ ಕಾರಣ ಮೋಹವೆಂಬ ಮದಿರೆ. ಆ ಮದಿರೆಯನ್ನು ಕುಡಿದ ಜಗತ್ತು ತೂರಾಡುತ್ತಿದೆ. ತಮಗೆ ಅನಾಹುತವನ್ನು ತಾವೇ ತಂದುಕೊಳ್ಳುತ್ತಿದೆ.

ಆಯುಷ್ಯವು ರಂಧ್ರ ಇರುವ ಪಾತ್ರದಲ್ಲಿ (ಘಟಿಕಾ ಪಾತ್ರ) ತುಂಬಿದ ನೀರಿನಂತೆ ಕರಗುತ್ತಾ ಇರುತ್ತದೆ. ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಆಯುಷ್ಯ ಪ್ರಮಾಣವನ್ನು ತಡೆ ಹಿಡಿಯಲಿಕ್ಕೆ ಸಾಧ್ಯವಿಲ್ಲ. ಸಾವು, ನೋವುಗಳನ್ನು ಕಂಡರೂ ಸಹ ತಮಗೆ ಸಾವೇ ಇಲ್ಲ ಎಂದು ಭ್ರಮಿಸುವವರೂ ಇದ್ದಾರೆ. ಅಧಿಕಾರ ಇದ್ದವರು ಅಧಿಕಾರ ಕಳೆದುಕೊಂಡದ್ದನ್ನು ನೋಡುತ್ತಿದ್ದರೂ ಸಹ ತಮಗೆ ಬಂದ ಅಧಿಕಾರ ಶಾಶ್ವತ ಎಂದು ಭ್ರಮಿಸಿ, ಮಾಡಬಾರದ ಕೆಲಸವನ್ನೆಲ್ಲ ಮಾಡುತ್ತಾರೆ. ಹೀಗೆ ತಮ್ಮ ಬದುಕನ್ನೂ ಆಯಸ್ಸನ್ನೂ ನಷ್ಟ ಮಾಡಿಕೊಳ್ಳುತ್ತಾರೆ.

Leave a Reply