ಮನುಷ್ಯನನ್ನು ಸೃಷ್ಟಿಸಿದ ದೇವರು, ಅವನನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ! : ಸೃಷ್ಟಿಕಥನಗಳು #2

ಪಂಜಾಬಿ ಜನಪದ ಕತೆಗಳ ಪ್ರಕಾರ ದೇವರು ಹಗಲಿರುಳು ಕಷ್ಟಪಟ್ಟು ಮನುಷ್ಯರ ಗೊಂಬೆಗಳನ್ನು ಸೃಷ್ಟಿಸಿದ. ಅದಕ್ಕೆ ಜೀವ ತುಂಬುವ ಮೊದಲೇ ಹಾವು ಬಂದು ಅವನ್ನು ನುಂಗಿ ಹಾಕುತ್ತಿತ್ತು. ಅದಕ್ಕೇ ಅವನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ….

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

panjabi
Internet ಚಿತ್ರ

ಮೊದಲು ಇಡೀ ಸೃಷ್ಟಿಯಲ್ಲಿ ಒಂದು ದೊಡ್ಡದಾದ ಮೊಟ್ಟೆಯಷ್ಟೆ ಇತ್ತು. ಅದರ ಹೊರತಾಗಿ ಏನೂ ಇರಲಿಲ್ಲ. ಒಂದು ದಿನ ಆ ಮೊಟ್ಟೆ ಬಿರುಕು ಬಿಟ್ಟು ಎರಡು ಹೋಳಾಯಿತು. ಮೇಲಿನ ಹೋಳು ಮೇಲಕ್ಕೂ ಕೆಳಗಿನದು ಕೆಳಕ್ಕೂ ಹೋಗಿ ನಿಂತವು. ಮೇಲಿನದು ಆಕಾಶವಾದರೆ, ಕೆಳಗಿನದು ಭೂಮಿಯಾಯಿತು. ಮೊಟ್ಟೆಯ ಲೋಳೆ ನದಿ, ಸಮುದ್ರಗಳಾದವು. ಒಳಗಿನ ಹಳದಿಯು ನೆಲವಾಯಿತು. ಜಗತ್ತಿನ ಸೃಷ್ಟಿಯಾಗಿದ್ದು ಹೀಗೆ.
ಆಮೇಲೆ ದೇವರಿಗೆ ಒಂದಷ್ಟು ಜೀವಿಗಳನ್ನು ಸೃಷ್ಟಿಸುವ ಮನಸಾಯಿತು. ಜಲಚರಗಳನ್ನೂ ಸರೀಸೃಪಗಳನ್ನೂ ಸೃಷ್ಟಿಸಿದ. ಕೊನೆಗೆ ಬಹಳ ಖುಷಿಯ ಮೂಡಿನಲ್ಲಿದ್ದಾಗ ಮನುಷ್ಯನನ್ನು ಸೃಷ್ಟಿಸಲು ಕುಳಿತ.
ಹಗಲಿರುಳು ಕೆಲಸ ಮಾಡಿ ಮನುಷ್ಯರ ಎರಡು ಗೊಂಬೆಗಳನ್ನು ಸೃಷ್ಟಿಸಿದ ದೇವರು ರಾತ್ರಿಯಾಗುವಾಗ ದಣಿದು ಮಲಗಿಬಿಟ್ಟ. ದೇವರು ಮಲಗುತ್ತಲೇ ಒಂದು ಹಾವು ಸರಸರನೆ ಬಂದು ಗೊಂಬೆಗಳನ್ನು ನುಂಗಿಹಾಕಿತು. ಬೆಳಗಾಗೆದ್ದು ನೋಡಿದರೆ ಮನುಷ್ಯರ ಗೊಂಬೆಗಳಿಲ್ಲ! ದೇವರು ಬೇಸರಗೊಂಡರೂ ಸಮಾಧಾನ ಮಾಡಿಕೊಂಡು ಮತ್ತೆ ಮನುಷ್ಯರ ಗೊಂಬೆಗಳನ್ನು ಮಾಡಿದ. ಅವನ್ನು ಒಣಗಲು ಬಿಟ್ಟು ಮಲಗಿದ. ಮತ್ತೆ ಹಾವು ಬಂದು ಅವನ್ನು ನುಂಗಿಹಾಕಿತು.
ದೇವರು ಗೊಂಬೆಗಳನ್ನು ಮಾಡುವುದು, ಹಾವು ನುಂಗಿ ಹಾಕುವುದು – ಹೀಗೆ ಆರು ದಿನಗಳ ಕಾಲ ನಡೆಯಿತು.
ಏಳನೇ ದಿನ ದೇವರು ನಿರ್ಧಾರ ಮಾಡಿಯೇ ಗೊಂಬೆಗಳನ್ನು ಮಾಡಲು ಕುಳಿತ. ಮೊದಲು ಒಂದು ನಾಯಿಯ ಗೊಂಬೆಯನ್ನು ಮಾಡಿ ಅದರಲ್ಲಿ ಜೀವ ತುಂಬಿದ. ಆಮೇಲೆ ಮನುಷ್ಯರ ಗೊಂಬೆಗಳನ್ನು ಮಾಡಿದ. ಮನುಷ್ಯರ ಗೊಂಬೆಗಳ ತಂಟೆಗೆ ಯಾರಾದರೂ ಬಂದರೆ ಕೂಗುವಂತೆ ನಾಯಿಗೆ ಹೇಳಿ ನಿಶ್ಚಿಂತೆಯಿಂದ ಮಲಗಿದ.
ರಾತ್ರಿಯಾಗುತ್ತಲೇ ಹಾವು ಬಂತು. ಮನುಷ್ಯ ಗೊಂಬೆಗಳನ್ನು ನುಂಗಲು ಬಾಯ್ತೆರೆಯುವಾಗ ನಾಯಿ ಗಟ್ಟಿಯಾಗಿ ಊಳಿಡತೊಡಗಿತು. ದೇವರು ಎಚ್ಚರಗೊಂಡು ಹಾವನ್ನು ಓಡಿಸಿದ. ಅವತ್ತಿನಿಂದ ನಾಯಿ ಹೀಗೆ ಮನುಷ್ಯರ ಜೀವವನ್ನು ಸಾವು ಕೊಂಡೊಯ್ಯುವಾಗ ಊಳಿಡೋದು ರೂಢಿಯಾಯಿತು.
ಮಾರನೆ ದಿನ ದೇವರು ಮನುಷ್ಯರ ಗೊಂಬೆಗಳಲ್ಲಿ ಜೀವ ತುಂಬಲು ಆತ್ಮವನ್ನು ಕರೆದ. ಆದರೆ ಆತ್ಮ ಅದರ ಒಳಹೊಕ್ಕಲು ಅಂಜಾಣಿಸಿತು. ಆದರೆ ದೇವರ ಆಜ್ಞೆ ಮೀರುವಂತೆಯೂ ಇಲ್ಲ! ಅದರ ಗೊಂದ ನೋಡಿ ದೇವರು ವಿಷಯ ಏನೆಂದು ವಿಚಾರಿಸಿದ. ಆತ್ಮವು, “ದೇವರೇ! ನಾನೇನೋ ಇದರ ಒಳಗೆ ಹೋಗುತ್ತೇನೆ. ಆದರೆ ನೀನು ನನ್ನನ್ನು ವಾಪಸು ಕರೆಸಿಕೊಳ್ಳಬೇಕು. ಇದರಲ್ಲೇ ಇರಲು ಬಿಟ್ಟುಬಿಡಬಾರದು” ಎಂದಿತು.
ದೇವರು ಹಾಗೆಯೇ ಆಗಲಿ ಎಂದು ಆತ್ಮವನ್ನು ಅದರೊಳಕ್ಕೆ ಕಳಿಸಿದ. ಆಮೇಲೆ ದೇವರು ಗಂಡು ಹಾಗೂ ಹೆಣ್ಣು ಮನುಷ್ಯರನ್ನು ಭೂಮಿಗೆ ಕಳಿಸಿಕೊಟ್ಟ.
ಮನುಷ್ಯರ ಹುಟ್ಟು ಆಗಿದ್ದು ಹೀಗೆ. ಕೊಟ್ಟ ಮಾತಿನಂತೆ ದೇವರು ಆತ್ಮವನ್ನು ವಾಪಸು ಕರೆಸಿಕೊಳ್ಳುವುದನ್ನು ಸಾವು ಎಂದು ಕರೆಯಲಾಯಿತು.

ತೆಂಗಿನಮರದಲ್ಲಿ ‘ಬಿಡುತ್ತಿದ್ದ’ ಮಕ್ಕಳು! : ಮತ್ತೊಂದು ಪಂಜಾಬಿ ಜನಪದ ಕಥೆ

ಮೊದಲೆಲ್ಲ ಮಕ್ಕಳು ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟುತ್ತಿರಲಿಲ್ಲ. ಅವು ತೆಂಗಿನ ಮರದಲ್ಲಿ ಬಿಡುತ್ತಿದ್ದವು. ಮನುಷ್ಯರು ಬೇಕೆಂದಾಗ ಮರದಿಂದ ಕಾಯಿಯನ್ನು ಕಿತ್ತು ತಂದು. ಎರಡು ಭಾಗ ಮಾಡಿ, ಒಳಗಿಂದ ಮಕ್ಕಳನ್ನು ತೆಗೆದು ಸಾಕುತ್ತಿದ್ದರು.
ಹೀಗಾಗಿ ಮನುಷ್ಯರಿಗೆ ತಮ್ಮ ಮಕ್ಕಳ ಮೇಲೆ ವಿಶೇಷ ಮಮಕಾರವೇನಿರಲಿಲ್ಲ. ಅವಕ್ಕೇನಾದರೂ ಕಾಯಿಲೆಯಾದರೆ ಮಕ್ಕಳನ್ನು ತೆಗೆದುಕೊಂಡು ಹೋಗಿ, ತೆಂಗಿನ ಮರದ ಬುಡದಲ್ಲಿ ಬಿಸಾಡಿ, ಮತ್ತೊಂದು ಕಾಯಿಯನ್ನು ಕಿತ್ತು ತರುತ್ತಿದ್ದರು; ಅದರೊಳಗಿಂದ ಮಗುವನ್ನು ತೆಗೆದು ಸಾಕುತ್ತಿದ್ದರು.
ಒಮ್ಮೆ ಭೂಮಿಯಲ್ಲಿ ಭಯಂಕರ ಸಾಂಕ್ರಾಮಿಕ ರೋಗ ಬಂದಡರಿತು. ನೂರಾರು ಮಕ್ಕಳು ರೋಗಪೀಡಿತರಾದರು. ಈ ರೋಗಿ ಮಕ್ಕಳನ್ನು ತಂದೆತಾಯಿಯರು ತೆಂಗಿನ ಮರದ ಬುಡದಲ್ಲಿ ಹಾಕಿ ಹೊಸ ಮಕ್ಕಳನ್ನು ಕಿತ್ತು ತಂದು ಸಾಕತೊಡಗಿದರು. ರೋಗಪೀಡಿತ ಮಕ್ಕಳು ತೆಂಗಿನ ಮರದ ಬುಡದಲ್ಲಿ ನೋವಿನಿಂದ ನರಳುತ್ತಾ ಅಳತೊಡಗಿದವು.
ಒಬ್ಬ ಮುದುಕ ಆ ದಾರಿಯಾಗಿ ಹೋಗುತ್ತಿದ್ದವನು ಅಳುತ್ತಾ ಬಿದ್ದಿರುವ ಮಕ್ಕಳನ್ನು ನೋಡಿದ. ಅವನಿಗೆ ಎಲ್ಲ ವಿಷಯವೂ ಅರ್ಥವಾಯಿತು. ಮರದಲ್ಲಿ ಮಕ್ಕಳು ಹುಟ್ಟುವುದರಿಂದ ಮನುಷ್ಯರಿಗೆ ಅವರ ಮೇಲೆ ಮಮಕಾರವಿಲ್ಲ. ಅವರ ಹೊಟ್ಟೆಯಲ್ಲೇ ಹುಟ್ಟಿದರೆ ಬುದ್ಧಿ ಕಲಯುತ್ತಾರೆ ಅನ್ನಿಸಿತು. ಮುದುಕ ಕಣ್ಣೀರಿಟ್ಟು ದೇವರನ್ನು ಪ್ರಾರ್ಥಿಸಿ, “ಇನ್ನುಮೇಲೆ ಮಕ್ಕಳು ಮನುಷ್ಯ ಹೆಂಗಸಿನ ಹೊಟ್ಟೆಯಲ್ಲಿ ಹುಟ್ಟುವಂತೆ ಮಾಡು” ಎಂದು ಬೇಡಿಕೊಂಡ.
ದೇವರು ಮುದುಕನ ಮಾತಿಗೆ ಸಮ್ಮತಿಸಿದ. ಆಮೇಲಿಂದ ಮಕ್ಕಳು ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟತೊಡಗಿದವು.
(ಪಂಜಾಬ್ ಪ್ರಾಂತ್ಯದಲ್ಲಿ ಪ್ರಚಲಿತದಲ್ಲಿರುವ ಜನಪದ ಕಥೆಗಳಿವು. ಮೌಖಿಕ ಸಂಸ್ಕೃತಿಯಲ್ಲಿ ಜನಪ್ರಿಯತೆ ಪಡೆದಿರುವ ಈ ಎರಡು ಕಥೆಗಳನ್ನು ಗೂಗಲ್’ನಿಂದ ಸಂಗ್ರಹಿಸಲಾಗಿದೆ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.