ರಾಮರಾಜ್ಯದ ಪರಿಕಲ್ಪನೆ ವರ್ತಮಾನದಲ್ಲಿ ಈಡೇರಿಸಲು ಸಾಧ್ಯವೇ?

ಗಾಂಧೀಜಿ ಆಡಳಿತಕ್ಕೆ ಮಾತ್ರವಲ್ಲ, ಇಡಿಯ ರಾಷ್ಟ್ರಕ್ಕೆ ಶ್ರೀ ರಾಮನೇ ಪರಮಾದರ್ಶ ಎಂದು ಆಗಾಗ ಹೇಳುತ್ತಿದ್ದ ಉಲ್ಲೇಖಗಳಿವೆ  ~ ಆನಂದಪೂರ್ಣ

ರಾಮ! ಈ ಹೆಸರಿನ ಜೊತೆಜೊತೆಗೆ ನಮ್ಮ ಮನದಲ್ಲಿ ಎರಡು ವಿಶೇಷಣಗಳು ಹಾದು ಹೋಗುತ್ತವೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮತ್ತು ಪ್ರಜಾರಂಜಕ ರಾಜಾರಾಮ ನಮ್ಮ ಕಲ್ಪನೆಯಲ್ಲಿ ತುಂಬಿಕೊಳ್ಳುತ್ತಾನೆ. ಬಹುಶಃ ಭಾರತದ ಜನಮಾನಸದಲ್ಲಿ ಅತ್ಯುತ್ತಮ ಆಡಳಿತದೊಂದಿಗೆ ನೆನಪಾಗುವ ಮೊದಲ ಹೆಸರು ರಾಮನದ್ದೇ. ಅಷ್ಟರಮಟ್ಟಿಗೆ ಭಗವಂತನೆಂಬ ಮಾನ್ಯತೆಗೆ ಪಾತ್ರನಾಗಿರುವ ಪುರಾಣೈತಿಹಾಸಿಕ ವ್ಯಕ್ತಿಯೂ ಆಗಿರುವ ರಾಮನ ಖ್ಯಾತಿ ಇದೆ.

ಭಾರತದಲ್ಲಷ್ಟೇ ಅಲ್ಲ, ರಾಮನ ಕತೆಗಳು ಹರಡಿರುವ ಇತರ ದೇಶಗಳಲ್ಲಿಯೂ ಈತನಿಗೆ ಉತ್ತಮ ಆಡಳಿತಗಾರನೆಂಬ ಮನ್ನಣೆ ಇದೆ. ಹಾಗೆಂದೇ ಇಂದಿಗೂ ಮಲೇಶಿಯಾದ ರಾಷ್ಟ್ರಾಧ್ಯಕ್ಷರು `ಸೆರಿ ಪಾದುಕಾ ಧೂಲಿ’ (ರಾಮನ ಪಾದುಕೆಯ ಧೂಳಿನ)ಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುತ್ತಾರೆ. ಥಾಯ್ಲೆಂಡಿನ ರಾಜಮನೆತನದಲ್ಲಿ ರಾಜರುಗಳನ್ನೆಲ್ಲ `ರಾಮ’ ಎಂದೇ ಕರೆಯೋದು. ಅಲ್ಲಿ ರಾಮ ಅನ್ನೋದು ರಾಜ ಪದಕ್ಕೆ ಪರ್ಯಾಯ! ಶ್ರೀ ರಾಮನ ಆಡಳಿತ ವರ್ಣನೆಯ ಪ್ರಭಾವವಿದು. ಅಷ್ಟಲ್ಲದೆ ರಾಮರಾಜ್ಯ ಎಂಬ ನುಡಿಗಟ್ಟು ರೂಪುಗೊಂಡಿಲ್ಲ ಅಲ್ಲವೆ?

ಮಹಾತ್ಮಾ ಗಾಂಧೀಜಿಯವರಂತೂ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗುವ ಕನಸು ಕಂಡಿದ್ದರು. ಅದನ್ನು ಸ್ವಾತಂತ್ರ್ಯಪೂರ್ವ ಹೋರಾಟಗಳಲ್ಲೂ ಸ್ವಾತಂತ್ರ್ಯಾನಂತರವೂ ಮತ್ತೆ ಮತ್ತೆ ಘೋಷಿಸಿದ್ದರು. ಇದನ್ನು ಸಾಧಿಸಬೇಕೆಂದರೆ ಗ್ರಾಮಗಳ ಸಬಲೀಕರಣ ಅಗತ್ಯವೆಂದು ಹೇಳುತ್ತಾ ಆ ನಿಟ್ಟಿನ ಯೋಜನೆಗಳನ್ನೂ ರೂಪಿಸಿಕೊಟ್ಟಿದ್ದರು. ಗ್ರಾಮ ಸುರಾಜ್ಯದಿಂದಲೇ ರಾಮರಾಜ್ಯ ಸ್ಥಾಪನೆ ಸಾಧ್ಯ ಎಂಬ ಗಾಂಧೀಜಿ ಆಶಯಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ವರ್ಣನೆಗೊಂಡಿರುವ ಆಡಳಿತ ವೈಖರಿಯೂ ಒಂದು ಪ್ರೇರಣೆಯಾಗಿತ್ತೆಂದು ಧಾರಾಳವಾಗಿ ಹೇಳಬಹುದು. ಸ್ವತಃ ಗಾಂಧೀಜಿ ಆಡಳಿತಕ್ಕೆ ಮಾತ್ರವಲ್ಲ, ಇಡಿಯ ರಾಷ್ಟ್ರಕ್ಕೆ ಶ್ರೀ ರಾಮನೇ ಪರಮಾದರ್ಶ ಎಂದು ಆಗಾಗ ಹೇಳುತ್ತಿದ್ದ ಉಲ್ಲೇಖಗಳಿವೆ.

ರಾಮರಾಜ್ಯದ ಪರಿಕಲ್ಪನೆ
ಇದೀಗ ರಾಜ್ಯದಲ್ಲಿ ಚುನಾವಣೆ ಮುಗಿದಿದೆ. ರಾಜಕಾರಣಿಗಳು `ರಾಮರಾಜ್ಯ ಸ್ಥಾಪನೆ’ಯ ಮಾತುಗಳನ್ನಾಡಿದ್ದನ್ನೂ ನಾವು ನೋಡಿದ್ದೇವೆ. ಅಂಥಾ ವಾಗ್ದಾನಗಳನ್ನು ನೀಡಿದವರಿಗೆ ರಾಮರಾಜ್ಯ ಹೇಗಿತ್ತು ಅನ್ನುವ ಕಲ್ಪನೆಯಾದರೂ ಇದೆಯೇ? ಸುಮಾರು ಏಳೆಂಟು ಸಾವಿರ ವರ್ಷಗಳ ಹಿಂದೆ ಇತ್ತೆಂದು ಹೇಳಲಾಗುವ ರಾಮರಾಜ್ಯವನ್ನು ಈ ಕಾಲದಲ್ಲಿ ಪುನರ್ರಚಿಸುವುದು ಹೇಗೆ ಎಂದು ಅವರು ಆಲೋಚಿಸಿದ್ದಾರೆಯೇ? ಗೊತ್ತಿಲ್ಲ… 

ಈಗ, ‘ರಾಮರಾಜ್ಯ ಸ್ಥಾಪನೆ’ ಎಂಬುದರ ವಾಸ್ತವಾರ್ಥವನ್ನೊಮ್ಮೆ ನೋಡೋಣ. ಪ್ರಜೆಗಳಿಗೆ ಸುಖ, ಸಂತಸ, ನೆಮ್ಮದಿ, ಸಂತೃಪ್ತಿ ಸಮೃದ್ಧವಾಗಿರುವ ಕಾಲವೇ ರಾಮರಾಜ್ಯ. ಯಾವುದೇ ಭಯವಿಲ್ಲದೆ ಪರಸ್ಪರ ಸಮಾಧಾನ ನಂಬಿಕೆಗಳ ಆಧಾರದಲ್ಲಿ ಬೆಳೆದು ಬಂದ ರಾಜ್ಯವೇ ರಾಮರಾಜ್ಯ. ರಾಮ ಆಡಳಿತ ನಡೆಸಿದ್ದು ಅಯೋಧ್ಯೆಯಲ್ಲಿ. ಅಯೋಧ್ಯೆ ಎಂದರೆ `ಯುದ್ಧ ಮಾಡಲಾಗದ/ ಯುದ್ಧ ಇಲ್ಲದ ಸ್ಥಳ’ ಎಂದರ್ಥ. ರಾಮಾಡಳಿತವಿದ್ದಲ್ಲಿ ಯುದ್ಧಭೀತಿಯೇ ಇರಲಿಲ್ಲ. ಯುದ್ಧವಿಲ್ಲದ ಭೂಮಿಯಲ್ಲಿ ಸಹಜವಾಗಿಯೇ ಪ್ರಗತಿ ಸಾಧ್ಯವಾಗುತ್ತದೆ. ಪ್ರಜೆಗಳೂ ಕ್ಷೇಮದಿಂದ ಇರುತ್ತಾರೆ.
ಇಂತಹ ವಾತಾವರಣವನ್ನು ಕಲ್ಪಿಸಿಕೊಡುತ್ತೇವೆ ಎಂದು ಪ್ರತಿಯೊಬ್ಬ ಆಡಳಿತಗಾರನೂ ರಾಜಕಾರಣಿಯೂ ವಾಗ್ದಾನ ನೀಡುತ್ತಲೇ ಬಂದಿದ್ದಾರೆ. ಆದರೆ ಅಂತಹ ಸುವರ್ಣಕಾಲಕ್ಕೆ ಮತ್ತೆ ಸಾಕ್ಷಿಯಾಗುವ ಅವಕಾಶ ಆಧುನಿಕ ಭಾರತಕ್ಕಿನ್ನೂ ಒದಗಿಬಂದಿಲ್ಲ.

ರಾಮನ ಹದಿನಾಲ್ಕು ವರ್ಷಗಳ ವನವಾಸವೇ ಆತನನ್ನು ಸಮರ್ಥ ಆಡಳಿತಗಾರನನ್ನಾಗಿ ರೂಪಿಸಿತ್ತು. ಈ ಅವಧಿಯಲ್ಲಿ ಆತ ಹಲವು ಪ್ರಾಂತಗಳ, ಭಿನ್ನ ಸಂಸ್ಕೃತಿಗಳ ಜನರೊಂದಿಗೆ ಒಡನಾಡಿದ್ದನಷ್ಟೆ? ಈ ಅನುಭವ ಪಾಠವು ಸಮಗ್ರ ಆಡಳಿತ ಯೋಜನೆ ರೂಪಿಸುವಲ್ಲಿ ರಾಮನಿಗೆ ಸಹಕಾರಿಯಾಯಿತೆಂದು ಊಹಿಸಬಹುದು. ಅರಸನಾಗುವ ಮುಂಚಿನ ಈ ವನವಾಸ (ಒಂದರ್ಥದಲ್ಲಿ ದೇಶಾದ್ಯಂತ ಪ್ರವಾಸ), ಈ ಅವಧಿಯ ಸರಳ ಜೀವನಗಳು ರಾಮನಿಗೆ ಅತಿ ದೊಡ್ಡ ಶಿಕ್ಷಣವನ್ನೆ ನೀಡಿದವು. ನಮ್ಮ ರಾಜಕಾರಣಿಗಳೂ ಇಂತಹ ಶಿಕ್ಷಣವನ್ನು ಪಡೆಯುವಂತಾದರೆ (ಮತ ಯಾಚನೆಯ ಪ್ರವಾಸವಲ್ಲ, ಅಧ್ಯಯನ ಪ್ರವಾಸ), ಖಂಡಿತವಾಗಿಯೂ ರಾಮರಾಜ್ಯದ ಕನಸು ನನಸಾಗಿಸಿಕೊಳ್ಳಬಹುದು.

ಮತ್ತೊಂದು ಗ್ರಹಿಕೆಯಂತೆ ರಾಮರಾಜ್ಯ ರಾಮನ ಅನುಪಸ್ಥಿತಿಯಲ್ಲಿ ಭರತ ಕಟ್ಟಿಕೊಟ್ಟ ಆಡಳಿತ. ರಾಮನ ಹೆಸರಲ್ಲಿ ರಾಜ್ಯದ ಯೋಗಕ್ಷೇಮ ನೋಡಿಕೊಳ್ಳುವ ಭರತ ತಾನೂ ಸಾಮಾನ್ಯನಂತೆ ಗ್ರಾಮವೊಂದರಲ್ಲಿ ವಾಸಿಸುತ್ತಾ ದುಡಿಮೆ ಮಾಡುತ್ತ, ಜನರೊಂದಿಗೆ ಬೆರೆತು ಸರಳವಾಗಿ ಜೀವನ ನಡೆಸುತ್ತ ರಾಮನ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಈ ಅವಧಿಯಲ್ಲಿ ಅಯೋಧ್ಯೆ ಅತ್ಯಂತ ಶಾಂತವಾಗಿದ್ದು, ಪ್ರಜೆಗಳು ನೆಮ್ಮದಿಗೆ ಕೊರತೆ ಇಲ್ಲದಂತೆ ಬಾಳುವೆ ಮಾಡುತ್ತಿದ್ದರು ಎನ್ನುತ್ತದೆ ವಾಲ್ಮೀಕಿ ರಾಮಾಯಣ.

ಈ ಹಿನ್ನೆಯಲ್ಲಿ ಬಹುಶಃ ಗಾಂಧೀಜಿಯವರ ರಾಮರಾಜ್ಯದ ಕನಸು ಇದೇ ಇರಬೇಕು ಅನ್ನಿಸುತ್ತದೆ. ಸ್ವತಃ ಆಡಳಿತಗಾರ ಗ್ರಾಮದಲ್ಲಿ ನೆಲೆಸುವುದು, ಗ್ರಾಮ್ಯ ಜೀವನ ನಡೆಸುವ ಮೂಲಕ ಅಭಿವೃದ್ಧಿ ಸಾಧಿಸುವುದು. ಇದೊಂದು ಅತ್ಯುತ್ತಮ, ಪ್ರಯೋಗಸಾಧ್ಯ ಪರಿಕಲ್ಪನೆ. ಹಾಗೆಯೇ ರಾಜನೊಬ್ಬ ಭರತನಂತೆ ಸರಳ ಬದುಕು ರೂಢಿಸಿಕೊಂಡಾಗ ರಾಮರಾಜ್ಯದ ಸ್ಥಾಪನೆ ಸಾಧ್ಯವಾಗುತ್ತದೆ ಎಂಬ ಸಂದೇಶವನ್ನೂ ಈ ಗ್ರಹಿಕೆ ನೀಡುತ್ತದೆ.

ರಾಮನ ಪಾದುಕೆಯ ಅಧಿಕಾರದಡಿಯಲ್ಲಿ ಭರತನೂ ಒಬ್ಬ ಪ್ರಜೆಯೇ ಆಗಿದ್ದ. ತಾನು ಪ್ರಜೆಯಾಗಿದ್ದುಕೊಂಡು, ಪ್ರಜೆಗಳ ಸಮ್ಮತಿಯ ಮೇರೆಗೆ ಅವರಿಗಾಗಿ ಆಡಳಿತ ಕಾರ್ಯ ನಿರ್ವಹಿಸಿದ. ನಮ್ಮ ಪ್ರಜಾಪ್ರಭುತ್ವದ ಪ್ರಭುಗಳೂ ಭರತನ ಈ ಬಗೆಯನ್ನು ರೂಢಿಸಿಕೊಂಡರೆಷ್ಟು ಚೆನ್ನ ಅಲ್ಲವೆ?

 

Leave a Reply