ವರಕವಿ ಅಂಬಿಕಾತನಯದತ್ತ ರಚಿಸಿದ ‘ಗಾಯತ್ರೀ ಸೂಕ್ತ’

ಡಾ.ದ.ರಾ. ಬೇಂದ್ರೆ, ಅಧ್ಯಾತ್ಮದೆಡೆ ತೀವ್ರ ತುಡಿತವಿದ್ದ ಕವಿ. ಆದ್ದರಿಂದಲೇ ಅವರು ವರ ಕವಿ. ಬೇಂದ್ರೆಯವರ ಕವಿತೆಗಳಲ್ಲಿ ಹಲವಾರು ಅನುಭಾವ ಪದ್ಯವನ್ನು ನಾವು ನೋಡಬಹುದು. ಇಲ್ಲಿ ನೀಡಲಾಗಿರುವ ‘ಗಾಯತ್ರೀ ಸೂಕ್ತ’, ಬೇಂದ್ರೆಯವರ ಅರ್ಥಪೂರ್ಣ ರಚನೆಗಳಲ್ಲೊಂದು. 

gayatri

ಲಯದ ಬಸಿರ ಬಯಲಲ್ಲಿ ದೇವ-ಭವ ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ ಹೇಗೊ ರುಚಿಸಿದಾಕೆ
ಸಾಕ್ಷಿಪುರುಷನಾ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ

ಜಡದ ಪ್ರಾಣಗತಿ ಜಡಿದು ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು ಮಣಿಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ ವಿಶ್ವಗಳ ಗೀತೆ ಹಾಡಿದಾಕೆ

ಕೀಟಕೀಟದಲಿ ಮಾಟ ಮಾಡಿ ಹಲಚೆಲುವು ತೂರಿದಾಕೆ
ಪಶುವಿನಿದಿರು ಮರಿದೂಡಿ ಮೋಡಿಯಲಿ ಒಲವ ಹೀರಿದಾಕೆ
ಹಾವಭಾವದಲಿ ಭೋಗ ಯೋಗದಲಿ ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ ಬಲವ ಮೀರಿದಾಕೆ

ಚತುರ್ಮುಖನ ನಾಲಗೆಯ ಹಾಸಿ ತುಟಿದಿಂಬು ಮಾಡಿದಾಕೆ
ವತ್ಸಲಾಂಛನದ ಹೃದಯಕಮಲದಲಿ ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದಲಹರಿ ಈ ಜೀವ ಸೇರಿದಾಕೆ

ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ
ಎತ್ತ ಕಿವಿಯದಿರುವಿದರು ಅತ್ತ ಐಮೊಗದಿ ಮುತ್ತಿದಾಕೆ
ತಮವು ಹಬ್ಬಿದತ್ತತ್ತ ನಿನ್ನ ಸುಳಿಬೆಳಕು ಸುತ್ತಿದಾಕೆ
ಇರುಳ ಕೋಟಿ ಹೆಡೆ ಮೆಟ್ಟಿ ಮಣಿಗಳೊಲು ಚಿಕ್ಕೆಯೊತ್ತಿದಾಕೆ

ಮುತ್ತು ಹವಳ ಬಂಗಾರ ನೀಲಮಣಿ ಸ್ಫಟಿಕ ಛಾಯೆಯಾಕೆ
ಕಣ್ಣ ನಡುವೆ ಒಳಗಣ್ಣ ತೆರೆಯುವಾ ದಿವ್ಯಮಾಯೆಯಾಕೆ
ಬೆಳೆವ ಚಂದ್ರಕಳೆ ಮುಕುಟದವಳೆ ತಂತನದ ಬಣ್ಣದಾಕೆ
ವರದ ಅಭಯ ಕರವಿರಲು ತಾಯಿ ಬಾ ಬೇರೆ ಕರೆಯಬೇಕೆ?

Leave a Reply