ಭಗವಂತನಿಗೆಷ್ಟು ಕೋಪ ಬಂದಿರಬೇಕು! : ಒಂದು ದೃಷ್ಟಾಂತ ಕಥೆ

ಒಂದು ಆಶ್ರಮದಲ್ಲಿ ಸಂನ್ಯಾಸಿಯೊಬ್ಬ ಬಹಳ ಕಟ್ಟುನಿಟ್ಟಿನಿಂದ ಜಪಾದಿಗಳನ್ನು ಮಾಡುತ್ತಿದ್ದ. ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ ಜಪಮಾಲೆ ತಿರುಗಿಸುತ್ತ ನಿರ್ದಿಷ್ಟ ಸಂಖ್ಯೆಯ ಜಪ ಮಾಡುತ್ತಿದ್ದ. ಹತ್ತು ವರ್ಷ ಇಷ್ಟು ನಿಷ್ಠೆಯಿಂದ ಸಾಧನೆ ಮಾಡಿದರೂ ಅವನಲ್ಲಿ ಯಾವ ಪರಿವರ್ತನೆಯೂ ಆಗಲಿಲ್ಲ. ಎಲ್ಲರೊಡನೆಯೂ ಜಗಳ ಕಾಯುತ್ತಿದ್ದ. ಕೊಟ್ಟ ಕೆಲಸ ಸರಿಯಾಗಿ ಮಾಡುತ್ತಿರಲಿಲ್ಲ. ವಿಪರೀತ ಸಿಡುಕು ಸ್ವಭಾವ.

ಒಂದು ದಿನ ಅವನಿಗೆ ಬುದ್ಧಿ ಕಲಿಸಬೇಕೆಂದು ಇನ್ನೊಬ್ಬ ಸಂನ್ಯಾಸಿ ನಿರ್ಧರಿಸಿದ. ಈತ ಕೋಣೆಯ ಬಾಗಿಲು ಮುಚ್ಚಿ, ಚಿಲಕ ಹಾಕಿಕೊಂಡು ಜಪಕ್ಕೆ ಕುಳಿತ. ಅದೇ ವೇಳೆಗೆ ಆ ಇನ್ನೊಬ್ಬ ಸಂನ್ಯಾಸಿ ಬಂದು ಜೋರಾಗಿ ಕದ ತಟ್ಟಿ ಅವನ ಹೆಸರು ಕೂಗತೊಡಗಿದ. ಜಪಕ್ಕೆ ಕುಳಿತವನಿಗೆ ಕೋಪ ಬರತೊಡಗಿತು. ಹೇಗೋ ತಡೆದುಕೊಂಡ. ಬಾಗಿಲಾಚೆ ಆ ಸಂನ್ಯಾಸಿ ಈತನ ಹೆಸರು ಹಿಡಿದು ಕರೆಯುತ್ತಲೇ ಇದ್ದು. ಹತ್ತು ನಿಮಿಷ ಹೀಗೇ ಕಳೆಯಿತು. ಈತ ಎದ್ದು ಹೋಗಲಿಲ್ಲ, ಆತ ಹೆಸರು ಕೂಗುವುದು ಬಿಡಲಿಲ್ಲ.

ಜಪ ಮಾಡುತ್ತಿದ್ದ ಸಂನ್ಯಾಸಿಯ ಕೋಪ ನೆತ್ತಿಗೇರಿತು. ರೋಷದಿಂದ ಎದ್ದು ಹೂಂಕರಿಸುತ್ತಾ ಬಾಗಿಲು ತೆಗೆದ. ಬಾಗಲಿಲಾಚೆ ಮುಗುಳ್ನಗುತ್ತ ನಿಂತಿದ್ದ ಸಂನ್ಯಾಸಿಯನ್ನು ಕಂಡು ಇನ್ನಷ್ಟು ಕೆರಳಿದ. ವಾಚಾಮಗೋಚರ ಬೈದ.

ಅವನದೆಲ್ಲ ಮುಗಿದ ಮೇಲೆ ಆ ಸಂನ್ಯಾಸಿ ಶಾಂತನಾಗಿ ಕೇಳಿದ; “ಮಿತ್ರ, ನಾನು ನಿನ್ನ ಹೆಸರು ಹಿಡಿದು ಕರೆದಿದ್ದು ಕೇವಲ ಹತ್ತು ನಿಮಿಷ ಮಾತ್ರ. ಅಷ್ಟಕ್ಕೇ ನೀನು ಇಷ್ಟು ಕೋಪಗೊಂಡೆ. ಇನ್ನು ನೀನು ಹತ್ತು ವರ್ಷಗಳಿಂದ ಒಂದೇ ಸಮನೆ ಭಗವಂತನ ಹೆಸರು ಹಿಡಿದು ಕರೆಯುತ್ತಿರುವೆ. ಅವನಿಗೆ ಇನ್ನೆಷ್ಟು ಕೋಪ ಬಂದಿರಬೇಕು!

Leave a Reply