ಘಾಸಿಗೊಳಿಸುವ ಮಾತು ವಿನಾಶಕ್ಕೆ ಮೂಲ : ಋಗ್ವೇದ

ನಮ್ಮ ಮಾತು ಯಾರನ್ನೂ ಘಾಸಿಗೊಳಿಸುವಂತೆ ಇರಬಾರದು. ಇಂಥಾ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ. ಇವು ವಿನಾಶವನ್ನಷ್ಟೆ ತರಬಲ್ಲವು ~ ಋಗ್ವೇದ

rugveda
ನುಷ್ಯ ಜೀವಿಯ ಹೆಚ್ಚುಗಾರಿಕೆ ಇರುವುದು ಅಭಿವ್ಯಕ್ತಿಯಲ್ಲಿ. ಅಭಿವ್ಯಕ್ತಿಯ ವಿವಿಧ ಪ್ರಕಾರಗಳಲ್ಲಿ ಮಾತು ಬಹಳ ಮುಖ್ಯವಾದದ್ದು. ಮಾತಿಗಿರುವ ಮಹತ್ವ ಮತ್ಯಾವ ಮಾಧ್ಯಮಕ್ಕೂ ಇಲ್ಲ. ಆದ್ದರಿಂದಲೇ ವೇದಗಾದೆಗಳೆಲ್ಲವೂ ಮಾತು ಹೇಗಿರಬೇಕು ಅನ್ನುವ ಬಗ್ಗೆ ಮೇಲಿಂದ ಮೇಲೆ ಎಚ್ಚರ ಹೇಳಿರುವುದು.

ಮಾತು ಹೇಗೇ ಇದ್ದರೂ ಅದು ದೇಶಕಾಲಕ್ಕೆ ತಕ್ಕಂತೆ ಅರ್ಥ ಪಡೆಯುತ್ತದೆ. ಹಾಗೆಯೇ ವಿಭಿನ್ನ ವ್ಯಕ್ತಿ (ಅಥವಾ ಸಮುದಾಯ)ಗಳಲ್ಲಿ ವಿಭಿನ್ನ ಅರ್ಥಗಳನ್ನು ಹುಟ್ಟಿಸುತ್ತದೆ. ಆದ್ದರಿಂದ ಮಾತಾಡುವಾಗ ವಿಶೇಷ ಎಚ್ಚರಿಕೆಯನ್ನು ವಹಿಸಬೇಕು.

‘ನಾಲಿಗೆ ಚಾಕುವಿಗಿಂತ ಹರಿತ’ ಅನ್ನುವ ನುಡಿಗಟ್ಟಿದೆ ಅಲ್ಲವೆ? “ಮಾತು ಆಯುಧಕ್ಕಿಂತಲೂ ಹೆಚ್ಚು ತೀವ್ರವಾಗಿ ಘಾಸಿಗೊಳಿಸುತ್ತದೆ” ಎಂಬುದನ್ನಿದು ಹೇಳುತ್ತದೆ. ಮಾತಿನಿಂದ ಆದ ಗಾಯ ಸುಲಭಕ್ಕೆ ಮಾಯುವಂಥದ್ದಲ್ಲ. ಆ ಗಾಯದ ಬಿರುಕಿನಲ್ಲಿ ದ್ವೇಷದ ಬೀಜ ಮೊಳೆಯುತ್ತದೆ. ಸೇಡಾಗಿ ಬೆಳೆದು ಹಿಂಸೆಗೆ, ಕದನಕ್ಕೆ ಕಾರನವಾಗುವ ಅಪಾಯವೂ ಇರುತ್ತದೆ.

ಋಗ್ವೇದ ಹೇಳುತ್ತಿರುವುದು ಇದನ್ನೇ. ನಾವೇನೋ ನಮ್ಮ ರೋಷವನ್ನು ಕಡಿಮೆ ಮಾಡಿಕೊಳ್ಳಲು, ಮತ್ತೊಬ್ಬರನ್ನು ಅಧೀರರನ್ನಾಗಿ ಮಾಡಲು, ಅಥವಾ ಅಹಂಕಾರದಿಂದ ಮತ್ತೊಬ್ಬರಿಗೆ ಘಾಸಿಯಾಗುವಂತೆ ಮಾತಾಡಿ ಮರೆತುಬಿಡಬಹುದು. ಇದರಿಂದ ನಾವೇನೂ ಸಾಧಿಸಿದಂತೆ ಆಗುವುದಿಲ್ಲ. ಆದರೆ ಇಂಥಾ ಮಾತುಗಳು ನಾವು ಊಹಿಸಲೂ ಸಾಧ್ಯವಿಲ್ಲದ ವಿನಾಶವನ್ನು ತಂದೆರಚಬಹುದು. ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಸಾಕ್ಷಿಗಳಿವೆ, ಅಲ್ಲವೆ?

ಆದ್ದರಿಂದ ಮಾತು ಬಲ್ಲ ಜಾಣ ಜಾಣೆಯರಾಗುವುದು ನಮ್ಮ ಆಯ್ಕೆಯಾಗಿರಲಿ. ವಿನಾಶಕ್ಕೆ ದೂಕುವ ಎಚ್ಚರಗೇಡಿತನವಲ್ಲ. ಆಗದೇ?

Leave a Reply