ಪುರಂದರ ದಾಸರ ವಿಕಸನ ಪಾಠ : ಒಂದು ಕೀರ್ತನೆ

ದಾಸರೆಂದ ಕೂಡಲೇ ಮೊದಲು ನೆನಪಾಗುವುದು ಪುರಂದರ ದಾಸರು. ಗಹನ ಆಧ್ಯಾತ್ಮಿಕ ತತ್ತ್ವಗಳನ್ನು ಹೇಳುತ್ತಲೇ ಸರಳ ಬದುಕಿನ ಪಾಠಗಳನ್ನೂ ತಮ್ಮ ಕೀರ್ತನೆಗಳ ಮೂಲಕ ಬೋಧಿಸಿದ ದಾಸಶ್ರೇಷ್ಠರು ಇವರು. ಭಕ್ತಿಯಲ್ಲಿ ಪುರಂದರ ಭಜನೆ ಮಾಡುತ್ತಲೇ ಪ್ರಭುತ್ವಕ್ಕೆ ಚಾಟಿ ಏಟು ನೀಡುವ ಕೀರ್ತನೆಗಳನ್ನೂ ರಚಿಸಿದವರು. ಧಾರ್ಮಿಕರಾಗಿದ್ದುಕೊಂಡೇ, ಢಂಬಾಚಾರವನ್ನು ಕಟುವಾಗಿ ಟೀಕಿಸಿದವರು. ಪುರಂದರ ದಾಸರು, ‘ಒಳಗಿದ್ದುಕೊಂಡೇ ಕೊಳೆಯನ್ನು ತೊಳೆಯುವ’ ಅಪಾಯಕಾರಿ ಸಾಹಸಕ್ಕೊಂದು ಮಾದರಿ. 

ಇಲ್ಲಿ ನೀಡಲಾಗಿರುವ ಕೀರ್ತನೆ ಸಾರ್ವಕಾಲಿಕ ವ್ಯಕ್ತಿತ್ವ ವಿಕಸನದ ಪಾಠದಂತಿದೆ. ಮನುಷ್ಯನ ಅಂತರಂಗ ವಿಕಸ ಸಾಧ್ಯವಾಗಬೇಕೆಂದರೆ, ಜೀವನ ಯಾನಕ್ಕೆ ಸೂಕ್ತವಾದ ಮಾರ್ಗವನ್ನು ಆಯ್ದುಕೊಳ್ಳಬೇಕು. ಆಯ್ಕೆ ತಪ್ಪಾದರೆ, ಪರಿಣಾಮವೂ ನಕಾರಾತ್ಮಕವಾಗಿಯೇ ಇರುತ್ತದೆ. ಈ ನಿಟ್ಟಿನಲ್ಲಿ ಪುರಂದರ ದಾಸರು; ಸ್ನೇಹ, ಆಹಾರ, ಸಂಭಾಷಣೆ, ದೇಣಿಗೆ, ಒಡನಾಟ, ಸಂವಹನ – ಈ ವಿಷಯಗಳಲ್ಲಿ ಯಾವುದರ ಬದಲು ನಮ್ಮ ಆಯ್ಕೆ ಯಾವುದಿರಬೇಕು ಎಂದು ಹೇಳುವ ಕೀರ್ತನೆ ಇಲ್ಲಿದೆ : 

ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡ ಜಗಳವೇ ಲೇಸು | ಪ ||

ಡಂಭಕರ ಮನೆಯಪಮಾನದೂಟಕ್ಕಿಂತ
ತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳಾಡುವುದೆ ಲೇಸು ||

ಒಡಲ ಹಂಗಿಸುವರ ಮನೆಯ ಓಗರಕಿಂತ
ಕುಡಿನೀರ ಕುಡಿದುಕೊಂಡಿಹುದೆ ಲೇಸು |
ಬಿಡದೆ ಕಡಿದಾಡುವರ ನೆರೆಯಲಿಹುದಕಿಂತ
ಅಡವಿಯೊಳಜ್ಞಾತವಾಸವೇ ಲೇಸು ||

ಮಸೆದು ಮತ್ಸರಿಸುವನ ಬಳಿಯಲಿಹುದಕಿಂತ
ಹಸನಾದ ಹಾಳುಗುಡಿಗಳೆ ಲೇಸು |
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು ||

{ಇಂದು (ಫೆ.4) ಪುರಂದರದಾಸರ ಪುಣ್ಯತಿಥಿ. }

Leave a Reply