ರಾಜ್ಯ ಕಳೆದುಕೊಂಡು ಭಿಕ್ಷುಕನಾದ ಜನಕ ಮಹಾರಾಜನ ಕಥೆ

ಇನ್ನೇನು ಜನಕ ಅದನ್ನು ತಿನ್ನಲು ಕೂರಬೇಕು… ಗಿಡುಗವೊಂದು ರೆಕ್ಕೆ ಫಡಫಡಿಸುತ್ತಾ ಹಾರಿಬಂದು ದೂಳೆಬ್ಬಿಸಿತು. ಜನಕನ ಕೈಯಿಂದ ಅನ್ನದ ಕೊಟ್ಟೆ ಜಾರಿಬಿದ್ದು ಮಣ್ಣಲ್ಲಿ ಕಲೆಸಿಹೋಯಿತು. ಹಸಿದ ಜನಕ, ಮಣ್ಣಲ್ಲಿ ಅನ್ನ, ಒಂದೇ ಸಮ ಸುರಿಯುತ್ತಿರುವ ಕಣ್ಣೀರು… ಕ್ಷಣ ಕಳೆದು ಕಣ್ತೆರೆದರೆ, ಎದುರಲ್ಲಿ ಮಂತ್ರಿ ಆತಂಕದಿಂದ ನಿಂತಿದ್ದಾನೆ! ~ ಸಾ.ಹಿರಣ್ಮಯಿ

ashta 5ಮಿಥಿಲೆಯ ರಾಜಧಾನಿಯ ಮೇಲೆ ಶತ್ರು ರಾಜನೊಬ್ಬ ಆಕ್ರಮಣ ಮಾಡಿದ. ಧಿಡೀರನೆ ಮುತ್ತಿಗೆ ಹಾಕಿದ ಸೇನೆಯನ್ನು ಎದುರಿಸಲಾಗದೆ ಜನಕನ ಸೈನ್ಯ ಸೋತುಹೋಯಿತು. ಜನಕ ಮಹಾರಾಜ ಅಧಿಕಾರಚ್ಯುತನಾಗಬೇಕಾಯಿತು.

ಸೈನಿಕರು ಜನಕನನ್ನು ಬಂಧಿಸಿ, ಶತ್ರು ರಾಜನೆದುರು ಕರೆದೊಯ್ದರು. ಆ ರಾಜ, “ನಾನು ನಿನ್ನನ್ನು ಕೊಲ್ಲುವುದಿಲ್ಲ. ಆದರೆ ಒಂದು ಷರತ್ತು. ಅದನ್ನು ನಡೆಸಿದರೆ ನಿನ್ನನ್ನು ಹೊರಟುಹೋಗಲು ಬಿಡುತ್ತೇನೆ” ಎಂದು ದರ್ಪದಿಂದ ನುಡಿದ. ಜನಕ ಅದಕ್ಕೆ ತನ್ನ ಒಪ್ಪಿಗೆ ಸೂಚಿಸಿದ.

“ನಿನ್ನ ಮೇಲು ವಸ್ತ್ರಗಳು, ಆಭರಣ ಎಲ್ಲವನ್ನೂ ಕಳಚಿ ಬರಿಗಾಲಲ್ಲಿ ಈ ರಾಜ್ಯದಿಂದ ಹೊರಟುಹೋಗಬೇಕು. ಇದೇ ನನ್ನ ಷರತ್ತು” ಅಂದ ಶತ್ರು ರಾಜ.

ಅದರಂತೆ ಜನಕ ಕೌಪೀನವನ್ನುಳಿದ ಮಿಕ್ಕೆಲ್ಲವನ್ನೂ ಕಳಚಿಟ್ಟ. ಹಿಂದೆ ತಿರುಗಿ ನೋಡದೆ ಅಲ್ಲಿಂದ ಹೊರಟುಬಿಟ್ಟ. ಅವನು ಇನ್ನೇನು ಅರಮನೆಯ ಆವರಣ ದಾಟಬೇಕು, ಅಷ್ಟರಲ್ಲಿ ಸೇವಕರು ಡಂಗುರ ಸಾರುತ್ತಿದ್ದರು. “ಪದಚ್ಯುತ ಜನಕ ರಾಜನಿಗೆ ಯಾರೂ ಆಶ್ರಯ ನೀಡಕೂಡದು. ಅವರನ್ನು ಯಾರೂ ಮಾತಾಡಿಸಕೂಡದು. ಇದು ರಾಜಾಜ್ಞೆ. ಇದಕ್ಕೆ ತಪ್ಪಿ ನಡೆದರೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಅವರು ಕೂಗುತ್ತಿದ್ದರು.

ಇದನ್ನು ಕೇಳಿದ ಜನಕ ತೀವ್ರ ವ್ಯಾಕುಲಗೊಂಡ. ಹಿಂದಿನ ದಿನದವರೆಗೂ ತನ್ನ ಪ್ರಜೆಗಳಾಗಿದ್ದ ಜನರಲ್ಲಿ ಯಾರಾದರೂ ಆಶ್ರಯ ನೀಡುವರೆಂದು ಭಾವಿಸಿ ಅವನು ಅಲ್ಲಿಂದ ಹೊರಟುಬಂದಿದ್ದ. ಆದರೆ ಇಲ್ಲಿ…!? ಯಾರೂ ರಾಜಾಜ್ಞೆಯನ್ನು ಮೀರುವಂತಿಲ್ಲ. ಯಾರೂ ತನಗೆ ಆಶ್ರಯ ನೀಡುವಂತಿಲ್ಲ.

ಜನಕ ದಿನಗಟ್ಟಲೆ ಬರಿಗಾಲಲ್ಲಿ ನಡೆದ. ನಡೆಯುತ್ತ ನಡೆಯುತ್ತ ರಾಜ್ಯದ ಗಡಿಯನ್ನೂ ದಾಟಿದ. ಇಲ್ಲಿ ಅವನು ಆಶ್ರಯ ಪಡೆಯಲು ಯಾರ ಅಡ್ಡಿಯೂ ಇರಲಿಲ್ಲ. ಬಹಳ ದಿನಗಳಿಂದ ತುತ್ತು ಅನ್ನವನ್ನೂ ತಿನ್ನದೆ ಅವನ ಹೊಟ್ಟೆ ಚುರುಗುಡುತ್ತಿತ್ತು. ಮೊದಲು ಎದುರಾದ ವ್ಯಕ್ತಿಗೆ ಕೈಮುಗಿದು, ಸೊಂಟ ಬಗ್ಗಿಸಿ, “ಅಯ್ಯಾ, ಸಾಯುವಂಥ ಹಸಿವಾಗಿದೆ. ದಯವಿಟ್ಟು ಏನಾದರೂ ತಿನ್ನಲು ಕೊಡು” ಅಂದ. ಆ ವ್ಯಕ್ತಿ ತನ್ನ ಬುತ್ತಿ ಗಂಟನ್ನು ಬಿಚ್ಚಿ, ಅದರಲ್ಲೇ ಸ್ವಲ್ಪ ಅನ್ನವನ್ನು ಅವನಿಗೆ ಕೊಟ್ಟು ಹೊರಟುಹೋದ.

ಇನ್ನೇನು ಜನಕ ಅದನ್ನು ತಿನ್ನಲು ಕೂರಬೇಕು… ಗಿಡುಗವೊಂದು ರೆಕ್ಕೆ ಫಡಫಡಿಸುತ್ತಾ ಹಾರಿಬಂದು ದೂಳೆಬ್ಬಿಸಿತು. ಜನಕನ ಕೈಯಿಂದ ಅನ್ನದ ಕೊಟ್ಟೆ ಜಾರಿಬಿದ್ದು ಮಣ್ಣಲ್ಲಿ ಕಲೆಸಿಹೋಯಿತು. ಹಸಿದ ಜನಕ, ಮಣ್ಣಲ್ಲಿ ಅನ್ನ, ಒಂದೇ ಸಮ ಸುರಿಯುತ್ತಿರುವ ಕಣ್ಣೀರು!

ಜನಕ ಹಗುರವಾಗಿ ಕಣ್ಣೊರೆಸಿಕೊಳ್ತಾ ನಿಟ್ಟುಸಿರಿಟ್ಟು ರೆಪ್ಪೆ ಮುಚ್ಚಿದ.   

ಕ್ಷಣ ಕಳೆದು ಕಣ್ತೆರೆದರೆ, ಎದುರಲ್ಲಿ ಮಂತ್ರಿ ಆತಂಕದಿಂದ ನಿಂತಿದ್ದಾನೆ! ದರ್ಬಾರಿನಲ್ಲಿ ಮಾತಿನ ಗಿಜಿಗಿಜಿ ಸದ್ದು… ತಮ್ಮ ಪ್ರೀತಿಯ ರಾಜ ಕಣ್ಣೀರು ಸುರಿಸುತ್ತಾ ಕುಳಿತಿರುವುದು ಏಕೆಂದು ಸಭಿಕರಿಗೆ ಅರ್ಥವಾಗುತ್ತಿಲ್ಲ. ಜನಕನಿಗೆ ಈಗ ತಾನು ಅರಮನೆಯಲ್ಲೇ ಇದ್ದೇನೆಂದು ಅರಿವಾಗುತ್ತಿದೆ. “ಅಯ್ಯೋ! ಕೌಪೀನದಲ್ಲೆ!?” ಎಂದು ಗಾಬರಿಯಾಗುತ್ತಾನೆ. ಇಲ್ಲ… ರಾಜವಸ್ತ್ರಗಳನ್ನೆ ಧರಿಸಿದ್ದೇನೆ. ತಲೆಯಲ್ಲಿ ಕಿರೀಟವಿದೆ. ಮಂತ್ರಿ ಕೈಮುಗಿದುಕೊಂಡು ಎದುರಲ್ಲಿ ನಿಂತಿದ್ದಾನೆ. ಸಿಂಹಾಸನದ ಪಕ್ಕದಲ್ಲಿ ಹಣ್ಣುಹಂಪಲುಗಳ ಹರಿವಾಣವಿದೆ. ಅಂದರೆ… ತಾನಿನ್ನೂ ರಾಜನಾಗಿಯೇ ಇದ್ದೇನೆ!. ಹಾಗಾದರೆ ಯುದ್ಧದಲ್ಲಿ ಸೋತು ಭಿಕಾರಿಯಾಗಿದ್ದು… ಹಸಿದಿದ್ದು… ಊಟ ಚೆಲ್ಲಿಹೋಗಿದ್ದು… ಅವೆಲ್ಲವೂ ಒಂದು ಕನಸಾಗಿತ್ತೇ!? ನನಗೇಕೆ ಇಂಥಾ ಕನಸು ಬಿತ್ತು!?

ಸೋಜಿಗಗೊಳ್ಳುತ್ತಾನೆ ಜನಕ. ದಿನಗಟ್ಟಲೆ ಈ ಕುರಿತು ಪಂಡಿತರೊಂದಿಗೆ, ಜ್ಞಾನಿಗಳೊಂದಿಗೆ ಚರ್ಚೆ ಮಾಡುತ್ತಾನೆ. ಸ್ವಪ್ನ ಫಲ – ದೋಷಗಳನ್ನು ಹೇಳಬಲ್ಲ ಜ್ಯೋತಿಷಿಗಳನ್ನು ಕರೆಸುತ್ತಾನೆ. ಈ ಯಾವುದರಿಂದಲೂ ಉತ್ತರ ಸಿಗುವುದಿಲ್ಲ. ಅಪ್ರತಿಮ ಅದ್ವೈತಿ, ಅಷ್ಟಾವಕ್ರ ಮುನಿ ಜನಕ ಮಹಾರಾಜನ ಬಳಿ ಬರುವುದು ಈ ಸಂದರ್ಭದಲ್ಲೇ. ಅವರಿಗೆ ಯಥೋಚಿತ ಸತ್ಕಾರ ನೀಡಿ ತನ್ನ ಅನುಮಾನವನ್ನು ಮುಂದಿಡುತ್ತಾನೆ ಜನಕ. ಅದಕ್ಕೆ ಉತ್ತರವಾಗಿ ಅಷ್ಟಾವಕ್ರ ಮುನಿ ನೀಡುವ ಬೋಧನೆಯೇ ‘ಅಷ್ಟಾವಕ್ರ ಗೀತಾ’.

“ಕ್ಷಣಿಕವಾದ ಯಾವುದೂ ನಿಜವಲ್ಲ. ಕನಸು ಹೇಗೆ ಕ್ಷಣಿಕವೋ ಬದುಕೂ ಕ್ಷಣಿಕ. ಆದ್ದರಿಂದ ಬದುಕೂ ಮಿಥ್ಯೆಯೇ. ಎಚ್ಚೆತ್ತ ಕೂಡಲೇ ಕನಸು ಹರಿಯುವಂತೆ, ಆತ್ಮಜ್ಞಾನ ಹೊಂದಿದ ದಿನ ಜೀವನದ ಮಿಥ್ಯೆಯೂ ಸರಿಯುವುದು” ಎಂದು ತಿಳಿಹೇಳುತ್ತಾನೆ ಅಷ್ಟಾವಕ್ರ. ಈ ಬೋಧನೆಯಿಂದ ಜನಕನ ಅಂತರಂಗ ಶಾಂತವಾಗುತ್ತದೆ. ಬದುಕನ್ನು ಗ್ರಹಿಸಬೇಕಾದ ನೈಜ ದೃಷ್ಟಿಕೋನವನ್ನು ಪಡೆದು, ಮುಂದೆ ಮಹಾರಾಜ ಜನಕ ಮಹರ್ಷಿ ಜನಕನೆಂದೂ ಹೆಸರಾಗುತ್ತಾನೆ.

ಅಷ್ಟಾವಕ್ರ ಗೀತೆಯ ಮೊದಲ ಅಧ್ಯಾಯದ ಕೆಲವು ಅರ್ಥ ಮತ್ತು ತಾತ್ಪರ್ಯಗಳನ್ನು ಇಲ್ಲಿ ಓದಬಹುದು :   https://aralimara.com/tag/ಅಷ್ಟಾವಕ್ರ-ಗೀತಾ/

4 Comments

  1. ಆಗಾಗ ದಾರಿ ತಪ್ಪುವ ಮನಸ್ಸಿಗೆ ಮಾರ್ಗದರ್ಶನವನ್ನು ನೀಡುತ್ತದೆ.. ಅದರ ಜೊತೆಯಲ್ಲೇ ಹೊಸ ಬೆಳಕನ್ನು ನೀಡುತ್ತದೆ..

  2. ದಯವಿಟ್ಟು ಅಷ್ಟಾವಕ್ರ ಗೀತೆಯನ್ನು ಮುಂದುವರೆಸಿ

Leave a Reply