ದೀರ್ಘತಮಸನ ಮೊಮ್ಮಗಳು ಘೋಷಾ ಕಕ್ಷಿವತೀ

ಚಂದ್ರವಂಶದಲ್ಲಿ ಬೆಳೆದ ರಾಜಕುಮಾರಿ ಕುಷ್ಟರೋಗಕ್ಕೆ ಒಳಗಾಗಿ, ಅದನ್ನು ಗೆದ್ದು ಬಂದು, ರಾಜಕುಮಾರನನ್ನು ಮದುವೆಯಾದ ಕಥೆ ಹೂವಿನ ಹಾದಿಯಲ್ಲಿ ಹೆಣೆಯಲ್ಪಟ್ಟಿದ್ದಲ್ಲ! ಓದಿ, ದೀರ್ಘತಮಸನ ಮೊಮ್ಮಗಳು ಘೋಷಾಳ ಚರಿತೆ….  ~ ಚೇತನಾ ತೀರ್ಥಹಳ್ಳಿ

ghoshaಯುವಾಂ ಹ ಘೋಷಾ ಪರ್ಯಶ್ವಿನಾ ಯತೀ ರಾಜ್ಞ ಊಚೇ ದೃಹಿತಾಪೃಛೇ ವಾಂ ನರಾ| ಭೂತಂ ಮೇ ಅಹ್ನ ಉತ ಭೂತಮಕ್ತವೇsಶ್ವಾವತೇ ರಥ್ನೀ ಶಕ್ತಮರ್ವತೇ||

ಗ್ವೇದದ 10ನೇ ಅಧ್ಯಾಯದಲ್ಲಿ ಬರುವ ಶ್ಲೋಕವಿದು. ಇದರಲ್ಲಿ ಋಷಿಗಳು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಿದ ಕಕ್ಷೀವತ ರಾಜರ್ಷಿಯ ಮಗಳು ಘೋಷಾ ಕಕ್ಷೀವತಿಯ ಬಗ್ಗೆ ಹೇಳುತ್ತಿದ್ದಾರೆ. ಘೋಷಾ ವೈದ್ಯ ದೇವತೆಗಳಾದ ಅಶ್ವಿನೀ ಕುಮಾರರನ್ನು ಕುರಿತು ತಪಸ್ಸು ಮಾಡುತ್ತಾಳೆ. ಅವರನ್ನು ಒಲಿಸಿಕೊಳ್ಳಲು ಆಕೆ ನುಡಿದ ಮಾತುಗಳು ಶ್ಲೋಕಗಳಾಗಿ ಋಗ್ವೇದದಲ್ಲಿ ಸೇರ್ಪಡೆಯಾಗಿವೆ.

`ದಿನದಲ್ಲಿ ನೀವು ನನ್ನ ಜೊತೆಗಿರಿ. ಇರುಳಲ್ಲೂ ನೀವು ನನ್ನ ಜೊತೆಗಿರಿ. ರಥಾರೂಢನೂ ಶೂರಧೀರನೂ ಆದ ರಾಜಕುಮಾರನನ್ನು ಹೊಂದಲು ನನಗೆ ಸಹಾಯ ಮಾಡಿ’ ಎಂದು ಇಲ್ಲಿ ಘೋಷಾ ಅಶ್ವಿನೀ ದೇವತೆಗಳನ್ನು ಕೇಳಿಕೊಳ್ಳುತ್ತಿದ್ದಾಳೆ.

ಘೋಷಾಳ ಈ ಪ್ರಾರ್ಥನೆಗೆ ಕಾರಣವೇನು? ಸುಪ್ರಸಿದ್ಧ ದೀರ್ಘತಮಸನೆಂಬ ಮುನಿಯ ಮಗನಾದ ಕಕ್ಷೀವತನ ಮಗಳಿಗೆ, ಚಂದ್ರವಂಶದ ಅರಸು ಪರಿವಾರದಲ್ಲಿ ಬೆಳೆದ ರಾಜಕುಮಾರಿಗೆ ಅಶ್ವಿನೀ ದೇವತೆಗಳನ್ನು ಕುರಿತು ಹಗಲೂ ರಾತ್ರಿಯೂ ನನ್ನ ಜೊತೆಗಿರಿ ಎಂದು ಕೇಳಿಕೊಳ್ಳುವಂಥ ತುರ್ತು ಏನಿತ್ತು? ಅದೂ ಅಲ್ಲದೆ, ಒಬ್ಬ ರಾಜಕುಮಾರಿ ತನಗೊಬ್ಬ ಶೂರನೂ ಧೀರನೂ ಆದ ರಾಜನನ್ನು ದೊರಕಿಸಿಕೊಡಿ ಎಂದು ಏಕೆ ಬೇಡಿಕೊಳ್ಳುತ್ತಿದ್ದಾಳೆ? ಸ್ವಯಂವರಗಳ ಕಾಲದಲ್ಲಿ ಅಂತಹ ಅನಿವಾರ್ಯ ಉಂಟಾಗಿದ್ದು ಹೇಗೆ?

ಈ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಈ ನಿಟ್ಟಿನಲ್ಲಿ ನೋಡುತ್ತ ಹೋದಾಗ ಘೋಷಾ ಎಂಬ ರಾಜಕುವರಿಯ ಅಂತರಂಗ ನಮ್ಮೆದುರು ಅನಾವರಣಗೊಳ್ಳುತ್ತದೆ.

ವೈಚಿತ್ರ್ಯಗಳ ಮೊತ್ತ

ಘೋಷಾ ಜನಿಸಿದ ಮನೆಯೇ ಒಂದು ಬಗೆಯ ವಿಚಿತ್ರದ್ದು. ತಾತಂದಿರಾದ ದೀರ್ಘತಮಸ ಮತ್ತು ವಿತಥ ಇಬ್ಬರೂ ಭಾರದ್ವಾಜರು. ಅಂದರೆ ಎರಡು ಬಾರಿ ಭರಿಸಲ್ಪಟ್ಟವರು. ಇನ್ನೂ ಸರಳವಾಗಿ ಹೇಳಬೇಕೆಂದರೆ ಏಕಕಾಲಕ್ಕೆ ಇಬ್ಬರು ತಂದೆಯನ್ನು ಹೊಂದಿದ್ದವರು. ದೇವ ಗುರು ಬೃಹಸ್ಪತಿ ಮತ್ತು ಆತನ ಅಣ್ಣ ಉತಥ್ಯರೇ ಈ ಭಾರದ್ವಾಜರ ತಂದೆಯರು. ತಾಯಿ ಮಮತಾ.

ವಾಸ್ತವದಲ್ಲಿ ಈ ಭಾರದ್ವಾಜರು ದೇವತೆಗಳು ಚಂದ್ರವಂಶದ ಉಳಿವಿಗಾಗಿ ನಡೆಸಿದ್ದ ಪ್ರಯೋಗ ಫಲ. ದುಷ್ಯಂತನ ಮಗ ಭರತ ತನ್ನ ಸಂತಾನದ ಮುಂದುವರಿಕೆ ಕಾಣದೇ ದುಃಖಿತನಾಗಿ ಪ್ರಾರ್ಥಿಸಿದಾಗ, ಭರತವರ್ಷದ ಉಳಿವಿಗಾಗಿ ಮತ್ತು ಸಮರ್ಥ ರಾಜನ ಸೃಷ್ಟಿಗಾಗಿ ದೇವತೆಗಳು ಸಹಾಯಕ್ಕೆ ನಿಲ್ಲುತ್ತಾರೆ. ಬೃಹಸ್ಪತಿಯ ಜಾಣ್ಮೆ, ಬುದ್ಧಿವಂತಿಕೆ ಹಾಗೂ ಉತಥ್ಯನ ಸಹನೆ ಸಾಮಥ್ರ್ಯಗಳ ಮಿಶ್ರಣದ ಭ್ರೂಣ ಸೃಷ್ಟಿಗಾಗಿ ಮಮತಾ ಪ್ರಯೋಗಪಾತ್ರೆಯಾಗುತ್ತಾಳೆ. ಆದರೆ ಮೊದಲ ಬಾರಿ ಗರ್ಭ ಧರಿಸಿದಾಗ ಭ್ರೂಣಸ್ಥ ಶಿಶುವು ಬೃಹಸ್ಪತಿಯನ್ನು ಕೆಣಕುತ್ತದೆ. ಪರಿಣಾಮವಾಗಿ ಆತನಿಂದ ಕುರುಡಾಗಿ ಜನಿಸು ಎಂಬ ಶಾಪವನ್ನು ಪಡೆಯುತ್ತದೆ. ಹೀಗೆ ಹುಟ್ಟುತ್ತಲೇ ಕಣ್ಣಲ್ಲಿ ತಮಸ್ಸು (ಅಂಧಕಾರ) ಹೊತ್ತು ಬಂದ ಶಿಶುವೇ ದೀರ್ಘತಮಸ.

ಎರಡನೆ ಬಾರಿಯ ಪ್ರಯೋಗ ಯಶಸ್ವಿಯಾಗಿ ಜನಿಸಿದ ಮಗುವಿಗೆ `ನಿರಾಶೆಯ ಸನ್ನಿವೇಶದಲ್ಲಿ ದೊರೆತವನು’ ಅನ್ನುವ ಅರ್ಥ ಬರುವ `ವಿತಥ’ ಎಂಬ ಹೆಸರನ್ನಿಡುತ್ತಾರೆ. ಈ ಮಗುವನ್ನು ಭರತನು ದತ್ತು ತೆಗೆದುಕೊಂಡು ಸಾಕುತ್ತಾನೆ. ಮುಂದೆ ರಾಜನಾಗಿ ಚಂದ್ರವಂಶವನ್ನು ಮುನ್ನಡೆಸುವ ವಿತಥ, ಅನಂತರದಲ್ಲಿ ಸನ್ಯಾಸ ಸ್ವೀಕರಿಸಿ ಭಾರದ್ವಾಜ ಹೆಸರಿನ ಮುನಿಯಾಗುತ್ತಾನೆ. ಈತನ ಹೆಸರಿನಲ್ಲಿ ಸಾವಿರಾರು ಋಚೆಗಳಿದ್ದು, ಋಗ್ವೇದದ ಬಹು ಮುಖ್ಯ ಸ್ಥಾನವನ್ನು ವ್ಯಾಪಿಸಿವೆ.

ಈತನ ಅಣ್ಣ ದೀರ್ಘತಮಸ ಬಹುದೊಡ್ಡ ವಿದ್ವಾಂಸನಾಗಿ ಬೆಳೆಯುತ್ತಾನೆ. ಪ್ರದ್ವೇಶೀ ಎಂಬಾಕೆಯನ್ನು ಮದುವೆಯಾಗಿ ಕಕ್ಷೀವತನೂ ಸೇರಿದಂತೆ ಹಲವು ಮಕ್ಕಳ ತಂದೆಯಾಗುತ್ತಾನೆ. ಈ ಕಕ್ಷೀವತನ ಮಗಳು ಘೋಷಾ ತನ್ನ ತಂದೆಯ ಚಿಕ್ಕಪ್ಪನ ಮಕ್ಕಳ ಒಡನಾಟದಲ್ಲಿ, ಅರಮನೆಯಲ್ಲಿ ರಾಜಕುವರಿಯಾಗಿಯೇ ಬೆಳೆಯುತ್ತಾಳೆ. ಬಾಲ್ಯದಲ್ಲಿ ಕಕ್ಷೀವತನಿಂದ ಉತ್ತಮ ವಿದ್ಯಾಭ್ಯಾಸ ಪಡೆದಿದ್ದು ಪಂಡಿತಳೂ ಆಗಿದ್ದ ಘೋಷಾಳ ಬದುಕು ತಿರುವು ಪಡೆದುಕೊಳ್ಳುವುದು ಒಂದು ಕೆಟ್ಟ ಕಾಯಿಲೆಯ ಪರಿಣಾಮದಿಂದ.

ಕುಷ್ಟ ರೋಗದಿಂದ ಕಂಗೆಟ್ಟ ಕಕ್ಷೀವತೀ

ಘೋಷಾಗೆ ಬಂದೆರಗುವ ಕಾಯಿಲೆ ಸಾಮಾನ್ಯದ್ದಲ್ಲ. ಈ ಆಧುನಿಕ ಕಾಲದಲ್ಲೂ ಬೆಚ್ಚಿ ಬೀಳಿಸುವಂಥ ಕುಷ್ಟ ರೋಗ ಆಕೆಯನ್ನು ಅಡರಿಕೊಳ್ಳುತ್ತದೆ. ಕೈಕಾಲುಗಳ ಒಂದೊಂದೇ ಭಾಗ ಕರಗುತ್ತ ವಿಕಾರ ರೂಪ ತಾಳತೊಡಗುತ್ತಾಳೆ ಘೋಷಾ. ಆಕೆಯ ಈ ಭೀಕರ ಅವಸ್ಥೆಯನ್ನು ಕಂಡು ಅರಮನೆಯ ಪರಿವಾರ ಬೆಚ್ಚಿಬೀಳುತ್ತದೆ. ಅತ್ತ ತಂದೆಯೂ ಆಕೆಯನ್ನು ತನ್ನ ಆಶ್ರಮಕ್ಕೆ ಸೇರಗೊಡುವುದಿಲ್ಲ. ಎಲ್ಲ ಕಡೆಯ ತಿರಸ್ಕಾರದಿಂದ ಹಾಗೂ ಮತ್ತೊಬ್ಬರಿಗೆ ತನ್ನ ಕಾಯಿಲೆ ಹರಡದಿರಲಿ ಅನ್ನುವ ಕಾಳಜಿಯಿಂದ ನಾಡು ಬಿಟ್ಟು ಕಾಡುಪಾಲಾಗುತ್ತಾಳೆ ಘೋಷಾ.

ಆದರೇನು? ಹರೆಯದು ಈ ಬುದ್ಧಿವಂತೆಗೆ ವಯೋಸಹಜವಾದ ಕಾಮನೆಗಳು ಬಿಡುವುದಿಲ್ಲ. ದಿನೇದಿನೇ ಅಕ್ಷರಶಃ ಕರಗುತ್ತಿರುವ ತನ್ನ ದೇಹದ ಅವಸ್ಥೆಯ ಬಗ್ಗೆ ಅಸಹ್ಯವನ್ನೂ ಅನುಕಂಪವನ್ನೂ ತಾಳುತ್ತ, ಅದರಿಂದ ಹೊರಬರುವ ಯೋಗವಿದೆಯೇ? ಉಳಿದ ತನ್ನ ವಾರಗೆಯ ಹೆಣ್ಣುಗಳಂತೆ ಮದುವೆಯಾಗಿ ಸಂಸಾರ ಹೂಡುವ ಭಾಗ್ಯವಿದೆಯೇ…? ಎಂದು ಹಂಬಲಿಸಿ ಕನಲುತ್ತಾಳೆ. ಅದರಿಂದ ಹೊರಬರಲು ಆಕೆಯ ಸಂಸ್ಕಾರ ನೆರವಿಗೆ ಬರುತ್ತದೆ. ತಪಸ್ಸು ಕೈಗೊಳ್ಳಲು ಪ್ರಚೋದಿಸುತ್ತದೆ. ಘೋಷಾಳಿಗೆ ಆರೋಗ್ಯ ಕರುಣಿಸುವ ಅಶ್ವಿನೀ ಕುಮಾರರ ಬಗ್ಗೆ ಸಾಕಷ್ಟು ತಿಳಿವಳಿಕೆಯಿದೆ. ಆ ಯಮಳ ದೇವತೆಗಳು ಚ್ಯವನ ಋಷಿಗೆ ಯೌವನ ಕರುಣಿಸಿದ್ದನ್ನು ಆಕೆ ಬಲ್ಲಳು. ಹಾಗೆಯೇ ಅನೇಕರಿಗೆ ಮದುವೆ ಮಾಡಿಸಿದ, ಮಕ್ಕಳನ್ನು ಕರುಣಿಸಿದ ಕಥೆಗಳನ್ನೂ ಕೇಳಿದ್ದಾಳೆ.

ತನ್ನ ತಪಸ್ಸು ಪೂರೈಸಿ, ಒಲಿದು ಬಂದು ಕೋರಿಕೆ ಮನ್ನಿಸುವಂತೆ ಬೇಡಿ ಅಶ್ವಿನೀ ದೇವತೆಗಳನ್ನು ಉತ್ಕಟವಾಗಿ ಸ್ತುತಿಸುತ್ತಾಳೆ ಘೋಷಾ. ಆರಂಭದಲ್ಲಿ ಉಲ್ಲೇಖಿಸಿದ ಶ್ಲೋಕದ ಹಿನ್ನೆಲೆ ಇದು.

ದೇವತೆಗಳ ಅಭಯ

ಆಕೆಯ ತಪಸ್ಸಿಗೆ ಒಲಿಯುವ ಅಶ್ವಿನಿಗಳು ಬಂದು ಹರಸುತ್ತಾರೆ. ಚಿಕಿತ್ಸೆ ನೀಡಿ ಘೋಷಾಳ ಕುಷ್ಠ ಕಳೆಯುತ್ತಾರೆ. ಅಮಾವಾಸ್ಯೆ ಕಳೆದು ಮತ್ತೆ ತುಂಬಿಕೊಳ್ಳುವ ಚಂದಿರನಂತೆ ಕಳೆದುಹೋದ ಸೌಂದರ್ಯವನ್ನೂ ಯೌವನವನ್ನೂ ಮರಳಿ ಪಡೆಯುತ್ತಾಳೆ ಘೋಷಾ. ಅನಂತರದಲ್ಲಿ ಆಕೆಗೆ ಸುಂದರ ರಾಜಕುಮಾರನೊಬ್ಬನ ಜೊತೆ ಮದುವೆಯಾಗುತ್ತದೆ. ಮಕ್ಕಳನ್ನು ಪಡೆದು ತುಂಬು ಸಂಸಾರ ನಡೆಸುತ್ತಾಳೆ ಈ ಋಷಿ ರಾಜಕುಮಾರಿ.

ಅಶ್ವಿನೀ ದೇವತೆಗಳನ್ನು ಕುರಿತ ಘೋಷಾಳ ಉತ್ಕಟ ಸ್ತುತಿಗಳು ಆ ಕಾಲದ ಋಷಿಗಳ ಮಧ್ಯೆ ಮಹತ್ವದ ಋಚೆಗಳಾಗಿ ಮನ್ನಣೆ ಪಡೆಯುತ್ತವೆ. ಋಗ್ವೇದದಲ್ಲಿಯೂ ಸ್ಥಾನ ಪಡೆಯುತ್ತವೆ. ಋಗ್ವೇದದ ಹತ್ತನೇ ಅಧ್ಯ್ಯಾದಲ್ಲಿ ತಲಾ ಹದಿನಾಲ್ಕು ಶ್ಲೋಕಗಳನ್ನುಳ್ಳ ಎರಡು ಋಚೆಗಳು ಈಕೆಯ ಹೆಸರಲ್ಲಿವೆ. ಮೊದಲ ಋಚೆ ಅಶ್ವಿನೀದೇವತೆಗಳ ಉದ್ದೀಪನೆ ಹಾಗೂ ಸ್ತುತಿಗೆ ಮೀಸಲಾಗಿದ್ದರೆ, ಎರಡನೆಯದು ಘೋಷಾಳ ವೈಯಕ್ತಿಕ ಕಾಮನೆಗಳನ್ನು ಹೇಳಿಕೊಳ್ಳುವಂಥದ್ದು. ಈ ರಚನೆಗಳಲ್ಲಿ ಆಕೆಯ ಅಭೀಪ್ಸೆ, ತೀವ್ರತೆ ಹಾಗೂ ಪಡೆದೇ ತೀರಬೇಕೆನ್ನುವ ದೃಢ ಮನಸ್ಕತೆಗಳು ಢಾಳಾಗಿ ಕಾಣುತ್ತವೆ.

 

Leave a Reply