ಸವತಿಯನ್ನು ಸುಟ್ಟಳು ಮಾಗಂಡಿಯಾ; ಸಕದಾಗಾಮಿಯಾದಳು ಸಾಮಾವತಿ

ಬುದ್ಧ ಪ್ರೇಮದಿಂದ ಸಾಮಾವತಿ ಮತ್ತವರ ಸಖಿಯರು ಮೈತ್ರೀಭಾವ ಹೊಂದಿದವರಾಗಿ ಸದ್ಗತಿ ಪಡೆದರು. ಬುದ್ಧ ದ್ವೇಷದಿಂದ ಮಾಗಂಡಿಯಾ ಮತ್ತವಳ ಸೇವಕರು ಮತ್ಸರ ತುಂಬಿಕೊಂಡು ದುರ್ಗತಿ ಪಡೆದರು. ಮುಂದೆ ಈ ಪ್ರಕರಣ ನಾಡಿನ ಜನರಿಗೊಂದು ಪಾಠವಾಯಿತು ~ ಗಾಯತ್ರಿ 

woman series 2

ಮಹಾಸತಿ ಸಾಮಾವತಿಯ ಕಥೆ ಬಹಳ ಸಂಕೀರ್ಣ. ವದ್ದವತಿ ಸಾಮ್ರಾಜ್ಯದ ಅರಸನ ಮಗಳೀಕೆ. ತನ್ನ ರಾಜ್ಯದಲ್ಲಿ ಕ್ಷಾಮ ಡಾಮರಗಳುಂಟಾದಾಗ ಕೌಶಾಂಬಿ ರಾಜ್ಯದ ಸಿರಿವಂತ ಘೋಷಿತನಿಗೆ ದತ್ತು ನೀಡಲ್ಪಟ್ಟಳು. ಅಪೂರ್ವ ಲಾವಣ್ಯವತಿಯಾದ ಈಕೆ ವಿನಯವಂತಳೂ ಗುಣವಂತಳೂ ಆಗಿದ್ದಳು. ಅವಂತಿಯ ಅರಸ ಉದಯನ, ಈಕೆಯನ್ನು ನೋಡುತ್ತಲೇ ಮೋಹ ಪರವಶನಾಗಿ ವಿವಾಹ ಪ್ರಸ್ತಾಪ ಸಲ್ಲಿಸಿದ. ಸಾಮಾವತಿಯ ಪೋಷಕರು ಸಂತಸದಿಂದ ಸಮ್ಮತಿಸಿದರು. ಹೀಗೆ ಉದಯನನ ಎರಡನೇ ರಾಣಿಯಾದಳು ಸಾಮಾವತಿ.

ಸಾಮಾವತಿಯನ್ನು ಮದುವೆಯಾಗುವ ವೇಳೆಗೆ ಉದಯನ ಕೌಶಾಂಬಿಯನ್ನೂ ಗೆದ್ದುಕೊಂಡಿದ್ದ. ಆದ್ದರಿಂದ ಆಕೆಯನ್ನು ಕೌಶಾಂಬಿಯ ಅರಮನೆಯಲ್ಲೇ ಇರಿಸಿಕೊಂಡ. ಈ ಅರಮನೆಯಲ್ಲಿ ಖುಜುತ್ತರಾ ಎನ್ನುವ ಸೇವಕಿಯೊಬ್ಬಳಿದ್ದಳು. ಪ್ರತಿ ದಿನ ಸುಮನ ಹೂಗಾರನಿಂದ ಹೂಮಾಲೆಗಳನ್ನು ತರುವುದು ಆಕೆಯ ಕೆಲಸವಾಗಿತ್ತು. ಹಾಗೆ ಅವಳು ಹೋದಾಗ ಕೆಲ ಬಾರಿ ಸುಮನನು ಬುದ್ಧವಚನಗಳನ್ನು ಆಲಿಸಲು ಹೋಗಿರುತ್ತಿದ್ದ. ಅವನನ್ನು ಅನುಸರಿಸಿ ಖುಜುತ್ತರಾಳೂ ಅಲ್ಲಿಗೆ ಹೋಗುತ್ತಿದ್ದಳು. ಹೀಗೆಯೇ ಅವಳಲ್ಲಿ ಬುದ್ಧವಚನಗಳಲ್ಲಿ ಆಸಕ್ತಿ ಬೆಳೆಯಿತು.  ಈಕೆ ತಾನು ಕೇಳಿದ ಬುದ್ಧವಚನಗಳನ್ನು ಅರಮನೆಯ ತನ್ನ ಸಖಿಯರಿಗೂ ಹೇಳುತ್ತಿದ್ದಳು. ಹೀಗೆ ಹೇಳುವಾಗ ಕೆಲವೊಮ್ಮೆ ರಾಣಿ ಸಾಮಾವತಿಯೂ ಅವರ ನಡುವೆ ಬಂದು ಕೂರುತ್ತಿದ್ದಳು. ಬರಬರುತ್ತ ಸಾಮಾವತಿಯು ಬುದ್ಧವಚನಗಳಿಂದ ಆಕರ್ಷಿತಳಾದಳು. ರಾಣಿ ಸಾಮಾವತಿ ಮತ್ತು ಅವಳ ಎಲ್ಲ ಸೇವಕಿಯರೂ ಬಹಳ ಬೇಗ ಮೈತ್ರಿಗುಣ ಸಂಪನ್ನರಾದರು.

ಮಾಗಂಡಿಯಾಳ ಮತ್ಸರ
ಹೀಗಿರುತ್ತ, ರಾಜಾ ಉದಯನನು ಮಾಗಂಡಿಯಾ ಎಂಬ ಮತ್ತೊಬ್ಬಳನ್ನು ಮದುವೆಯಾದನು. ಈಕೆ ಕುರೂರಥದ ಮಗಂಡಿಯ ಎಂಬುವವನ ಮಗಳು. ಅತ್ಯಂತ ಸುಂದರಿ. ಈಕೆಯನ್ನು ಮದುವೆಯಾಗಲು ಶ್ರೀಮಂತರೂ, ರಾಜಕುಮಾರರೂ ಸಾಲುಗಟ್ಟಿ ನಿಂತಿದ್ದರು. ಆದರೆ ಮಗಂಡಿಯನು ಅತ್ಯಂತ ಚೆಲುವಿಯಾದ ತನ್ನ ಮಗಳಿಗೆ ಸರ್ವಶ್ರೇಷ್ಠ ವರನನ್ನು ಹುಡುಕಿ ಮದುವೆ ಮಾಡುವುದಾಗಿ ಹೇಳಿ ಅವರೆಲ್ಲರನ್ನು ತಿರಸ್ಕರಿಸಿದ್ದನು. ಮಾಗಂಡಿಯಾಳಿಗಂತೂ ತನ್ನ ಚೆಲುವಿನ ಬಗ್ಗೆ ವಿಪರೀತ ಮದವಿತ್ತು.
ಒಮ್ಮೆ ಬುದ್ಧನು ಊರೂರು ಸಂಚರಿಸುತ್ತಾ ಕುರುಹಟ್ಟಕ್ಕೆ ಬಂದನು. ಅವನ ಚೆಲುವು, ಕಾಂತಿ, ತಪ್ಪಿಸಿಕೊಳ್ಳಲಾಗದ ಆಕರ್ಷಣೆಗಳಿಗೆ ಬೆರಗಾದ ಮಗಂಡಿಯನು ಈತನೇ ತನ್ನ ಮಗಳಿಗೆ ಸೂಕ್ತನಾದ ವರನೆಂದು ನಿಶ್ಚಯಿಸಿದನು. ತನ್ನ ಮಗಳ ಮದುವೆ ಪ್ರಸ್ತಾಪ ಮುಂದಿಟ್ಟರೆ, ಇವನು ಬೇಡವೆನ್ನುವ ಮೂರ್ಖನಿರಲಾರ ಎಂದು ತನಗೆ ತಾನೆ ತೀರ್ಮಾನ ತೆಗೆದುಕೊಂಡು, ಬುದ್ಧನನ್ನು ಅಲ್ಲೇ ಕೊಂಚ ಕಾಯುವಂತೆ ಹೇಳಿ ಮನೆಗೋಡಿದನು. ಹೆಂಡತಿಯನ್ನೂ ಮಗಳನ್ನೂ ಅಲ್ಲಿಗೆ ಕರೆತಂದು, ಬುದ್ಧನೆದುರು ನಿಂತು, ಈಕೆಯ ಪಾಣಿಗ್ರಹಣ ಮಾಡು ಎಂದನು.

ಮಗಂಡಿಯನ ವರ್ತನೆಗೆ ಬುದ್ಧ ನಗುತ್ತಾ ತನ್ನ ಬಗ್ಗೆ ಹೇಳಿಕೊಂಡನು ಮತ್ತು ದೇಹದ ಅನಿತ್ಯತೆಯನ್ನೂ ರೋಗ, ಮುಪ್ಪು, ಸಾವುಗಳನ್ನೂ ಕುರಿತು ವಿವರಿಸಿದನು. ಮಾರನ ಕುಮಾರಿಯರನ್ನೇ ಕಣ್ಣೆತ್ತಿಯೂ ನೋಡದ ತಾನು ಮಾಗಂಡಿಯಾಳನ್ನು ಮದುವೆಯಾಗುವುದುಂಟೇ!? ಎಂದು ಹೆಳಿ ಅಲ್ಲಿಂದ ನಡೆದುಬಿಟ್ಟನು.
ಇದನ್ನು ಮಾಗಂಡಿಯಾ ಸವಾಲಾಗಿ ಸ್ವೀಕರಿಸಿದಳು. ತನ್ನಂಥ ಚೆಲುವೆಗೇ ಬೆನ್ನು ತೋರಿದ ಈ ಅಲೆಮಾರಿಗೆ ಪಾಠ ಕಲಿಸುತ್ತೇನೆ ಎಂದು ನಿರ್ಧರಿಸಿದಳು. ತಂದೆಯೊಡನೆ ಹಟ ಹಿಡಿದು, ರಾಜಾ ಉದಯನನಲ್ಲಿಗೆ ಕರೆದೊಯ್ಯುವಂತೆ ಹೇಳಿದಳು. ತನ್ನ ರೂಪಕ್ಕೆ ರಾಜ ಮಾರುಹೋಗದೆ ಇರಲಾರ ಎನ್ನುವುದನ್ನು ಆಕೆ ಅರಿತಿದ್ದಳು. ಅದರಂತೆಯೇ ಆಯಿತು. ಮಾಗಂಡಿಯಾಳನ್ನು ಉದಯನ ಮದುವೆಯಾದ. ಆಕೆಯನ್ನು ತನ್ನ ಮೂರನೆ ಹೆಂಡತಿಯೆಂದು ಘೋಷಿಸಿ ಕೌಶಾಂಬಿಯ ಅರಮನೆಯಲ್ಲೇ ಇರಿಸಿದ.
ತನ್ನೊಡನೆ ಪ್ರೇಮ ಸಲ್ಲಾಪಗಳಿಂದ ಇದ್ದರೂ ಉದಯನನು ರಾಣಿ ಸಾಮಾವತಿಯ ಬಳಿ ಹೋಗುವುದು ಮಾಗಂಡಿಯಾಳಿಗೆ ಸಹಿಸದಾಯಿತು. ಅಲ್ಲದೆ, ರಾಜನು ಸಾಮಾವತಿಯ ಗುಣಗಳನ್ನು ವಿಶೇಷವಾಗಿ ಪ್ರಶಂಸಿಸುತ್ತಿದ್ದ. ಇದಕ್ಕೆ ಮತ್ಸರ ಪಟ್ಟ ಮಾಗಂಡಿಯಾ, ಏನಾದರೂ ಮಾಡಿ ರಾಜನನ್ನು ಶಾಶ್ವತವಾಗಿ ಆಕೆಯಿಂದ ದೂರ ಮಾಡಬೇಕು ಎಂದು ನಿರ್ಧರಿಸಿಕೊಂಡಳು.

ಅಂತಃಪುರದ ಕೋಲಾಹಲ
ಮೊದಲೇ ತನಗೆ ಮಗ್ಗುಲ ಮುಳ್ಳಾಗಿರುವ ಸಾಮಾವತಿ, ತನ್ನನ್ನು ತಿರಸ್ಕರಿಸಿದ್ದ ಬುದ್ಧನ ಅನುಯಾಯಿಯೂ ಹೌದು ಎನ್ನುವುದು ತಿಳಿದಮೇಲಂತೂ ಮಾಗಂಡಿಯಾ ಮತ್ತಷ್ಟು ಉರಿಯತೊಡಗಿದಳು. ಆಕೆ ಮತ್ತು ಅವಳ ಸೇವಕಿಯರು ಬುದ್ಧನನ್ನು ಮೆಚ್ಚಿಕೊಳ್ಳುವ ಮೂಲಕ ತನಗೆ ಅವಮಾನ ಎಸಗುತ್ತಿದ್ದಾರೆ ಎಂದವಳು ಭಾವಿಸತೊಡಗಿದಳು. ಇನ್ನು ತಡಮಾಡುತ್ತ ಹೋದರೆ ತನ್ನ ಅಸ್ತಿತ್ವಕ್ಕೆ ಇವರೆಲ್ಲರೂ ಸಂಚಕಾರ ತರುವರೆಂದು ಯೋಚಿಸಿ, ರಾಜನಿಂದಲೇ ಅವರೆಲ್ಲರು ಗಡೀಪಾರು ಶಿಕ್ಷೆ ಪಡೆಯುವಂತೆ ಅಥವಾ ಕೊಲ್ಲಲ್ಪಡುವಂತೆ ಆಗಲು ಸಂಚು ಹೂಡತೊಡಗಿದಳು.

ಒಮ್ಮೆ ರಾಜ ಮಾಗಂಡಿಯಾಳ ಅಂತಃಪುರಕ್ಕೆ ಭೇಟಿ ಕೊಟ್ಟು, ಅಲ್ಲಿಂದ ಸಾಮಾವತಿಯ ಅಂತಃಪುರಕ್ಕೆ ತೆರಳುವುದಾಗಿ ಆಕೆಗೆ ಹೇಳಿಕಳಿಸಿದ್ದ. ಇದಕ್ಕಾಗಿಯೇ ಕಾಯುತ್ತಿದ್ದ ಮಾಗಂಡಿಯಾ, ತನ್ನ ಆಪ್ತ ವಲಯದ ಮೂಲಕ, ಸಾಮಾವತಿಯ ಹಾಸಿಗೆಯಡಿಯಲ್ಲಿ ಹಾವಿನ ಮರಿಯನ್ನು ಇರಿಸಿದಳು. ಇತ್ತ, ರಾಜ ತನ್ನ ಅಂತಃಪುರದಿಂದ ತೆರಳುವಾಗ ಆತನನ್ನು ತಡೆದು ದುಃಖ ನಟಿಸುತ್ತಾ, ‘ನಿಮಗೆ ಇಂದು ಏನೋ ಕೇಡು ಕಾದಿದೆ ಎಂದು ಬಲವಾಗಿ ಅನ್ನಿಸುತ್ತಿದೆ. ದಯವಿಟ್ಟು ಹೋಗಬೇಡಿ. ಆ ಸಾಮಾವತಿ ಬುದ್ಧನ ಹಿಂದೆ ಬಿದ್ದು ನಿಮ್ಮನ್ನು ಮುಗಿಸುವ ಆಲೋಚನೆಯಲ್ಲಿದ್ದಾಳೆ’ ಎಂದಳು. ಆದರೆ ಉದಯನ ಅವಳ ಮಾತು ಕಡೆಗಣಿಸಿ ಸಾಮಾವತಿಯ ಬಳಿ ಬಂದ. ಅವನು ಪಲ್ಲಂಗದ ಮೇಲೆ ಮಾತಾಡುತ್ತಾ ಕುಳಿತಿರುವಾಗ ಪಕ್ಕದಿಂದಲೇ ಹಾಸಿಗೆಯಡಿಯಿಂದ ಹಾವಿನ ಮರಿ ಹೊರಬಂತು. ಸ್ವಲ್ಪ ಎಚ್ಚರ ತಪ್ಪಿದ್ದರೂ ಅದು ಆತನನ್ನು ಕಡಿಯುವ ಸಾಧ್ಯತೆ ಇತ್ತು.

ಘಕ್ಕನೆ ಎದ್ದ ಉದಯನನಿಗೆ ಮಾಗಂಡಿಯಾ ಹೇಳಿದ್ದು ಸರಿ ಅನ್ನಿಸಿತು. ಅಲ್ಲದೆ, ಸಾಮಾವತಿಯೂ ಅವಳ ಸೇವಕಿಯರೂ ಕಿಟಕಿಯಿಂದ ಬುದ್ಧನ ದರ್ಶನ ಪಡೆಯುತ್ತಾರೆನ್ನುವುದು ಆತನಿಗೆ ತಿಳಿದಿತ್ತು. ಸಾಮಾವತಿಯನ್ನು ನಿಂದಿಸಿ, ಆಕೆಯನ್ನು ಶಿಕ್ಷಿಸಲು ಹೊರಟ ರಾಜನಿಗೆ, ಆಕೆಯ ಮುಖದಿಂದ ಸೂಸುತ್ತಿದ್ದ ನಿಷ್ಕಲ್ಮಶ ಭಾವ ಹಾಗೂ ಶಾಂತ ಮುದ್ರೆಗಳು ಸೆಳೆದವು. ಈಕೆ ದೋಷಿ ಇರಲಾರಳು ಎನ್ನಿಸಿತು. ಬುದ್ಧನ ಕುರಿತು ಆಕೆಯನ್ನು ವಿಚಾರಿಸಲಾಗಿ, ಸಮಾವತಿಯು ತಾನು ಅರ್ಥೈಸಿಕೊಂಡ ಬುದ್ಧವಚನಗಳನ್ನು ಹೇಳಿದಳು. ರಾಜ ಅದರಿಂದ ಸಂತುಷ್ಟನಾಗಿ ಸಾಮಾವತಿ ಮತ್ತವಳ ಎಲ್ಲ ಸೇವಕಿಯರಿಗೆ ಬುದ್ಧ ದರ್ಶನಕ್ಕೆ ಮುಕ್ತ ಅವಕಾಶ ನೀಡಿದ. ಹಾಗೂ ಬುದ್ಧ ಮತ್ತು ಅವನ ಗಣವನ್ನು ಅರಮನೆಗೆ ಆಹ್ವಾನಿಸಿ ಔತಣ ನೀಡಲು, ಧರ್ಮ ಪ್ರವಚನ ಆಲಿಸಲು ಸೂಚಿಸಿದ.

ಸಾಮಾವತಿಗೆ ಸ್ವರ್ಗವೇ ಸಿಕ್ಕಂತಾಯಿತು. ಆಕೆ ಅತ್ಯಂತ ವಿನಮ್ರಳಾಗಿ ರಾಜನಿಗೆ ವಂದಿಸಿದಳು ಮತ್ತು ಮರುದಿನವೇ ಬುದ್ಧಗಣಕ್ಕೆ ಆಹ್ವಾನ ಕಳುಹಿಸಿದಳು. ಇತ್ತ ಮಾಗಂಡಿಯಾ, ತಾನೊಂದು ಬಗೆದರೆ, ಆಗಿದ್ದೇ ಮತ್ತೊಂದು. ಅದು ಕೂಡ ತನ್ನ ವಿರುದ್ಧವೇ ಆಯಿತು ಎಂದು ಮತ್ತಷ್ಟು ವಿಚಲಿತಳಾದಳು. ಉದಯನನೂ ಮಾಗಂಡಿಯಾಳ ಚಾಡಿ ಮಾತಿನಿಂದ ಬೇಸತ್ತು ಆಕೆಯನ್ನು ದೂರವಿಡತೊಡಗಿದ. ಇದರಿಂದ ಕ್ರೋಧಗೊಂಡ ಮಾಗಂಡಿಯಾ ಸಾಮಾವತಿಯನ್ನು ಅವಳೆಲ್ಲರ ಸೇವಕಿಯರ ಸಹಿತ ಸುಟ್ಟು ಕೊಂದುಹಾಕುವ ಯೋಜನೆ ರೂಪಿಸತೊಡಗಿದಳು.

ಮುಕ್ತಾಯ
ತನ್ನ ನಂಬಿಕಸ್ಥ ಸೇವಕರನ್ನು ಕರೆಸಿಕೊಂಡ ಮಾಗಂಡಿಯಾ, ರಾಜಾ ಉದಯನನು ಬೇಟೆಗೆ ಹೊರಡುವ ದಿನ ನಿಗದಿ ಮಾಡಿಕೊಂಡು, ಸಾಮಾವತಿಯ ಅಂತಃಪುರಕ್ಕೆ ಬೆಂಕಿ ಇಡುವಂತೆ ಸೂಚಿಸಿದಳು. ಈ ವಿಷಯ ಸಾಮಾವತಿಗೆ ತಿಳಿಯಿತಾದರೂ ಅದನ್ನು ರಾಜನಿಗೆ ತಿಳಿಸುವುದಾಗಲೀ, ಅದರಿಂದ ತಪ್ಪಿಸಿಕೊಳ್ಳುವ ಯೋಚನೆಯನ್ನಾಗಲೀ ಅವಳು ಮಾಡಲಿಲ್ಲ. ತಾನು ಇರುವಷ್ಟೂ ಕಾಲ ಮಾಗಂಡಿಯಾ ತನ್ನನ್ನು ದ್ವೇಷಿಸುವುದರಲ್ಲಿಯೇ ಕಾಲಹರಣ ಮಾಡುತ್ತಾಳೆ. ಹಾಗೆ ಆಗಬಾರದೆಂದರೆ ನಿಯತಿಯಲ್ಲಿ ಏನಿದೆಯೋ ಅದನ್ನು ಆಗಗೊಡುವುದೇ ಸರಿಯಾದ ಮಾರ್ಗ ಎಂದವಳು ನಿರ್ಧರಿಸಿದಳು.

ಉದಯನನು ಬೇಟೆಗೆ ಹೊರಟ. ಇತ್ತ ಮಾಗಂಡಿಯಾಳ ಸೇವಕರು ಸಾಮಾವತಿಯ ಅಂತಃಪುರಕ್ಕೆ ಬೆಂಕಿ ಇಟ್ಟರು. ಮೊದಲೇ ನಿರ್ಧರಿಸಿದ್ದಂತೆ ಸಾಮಾವತಿ ಮತ್ತು ಅವಳೆಲ್ಲ ಸೇವಕಿಯರೂ ಧ್ಯಾನ ಮಾಡಲು ಆರಂಭಿಸಿದರು. ಸಾವಿನ ಎದುರು ಶಾಂತರಾಗಿ ಕುಳಿತಿದ್ದುದರಿಂದ ಹಾಗೂ ದೇಹ ಭಾವ ಮೀರಿದ್ದರಿಂದ ಸಾಮಾವತಿಯೂ ಸೇರಿದಂತೆ ಅವರಲ್ಲಿ ಕೆಲವರು ಸಕದಾಗಾಮಿ ಸ್ಥಿತಿ ಪಡೆದರು. ಉಳಿದವರು ಕೂಡಾ ಬುದ್ಧಬೋಧೆಗಳನ್ನು ನೆನೆಯುತ್ತ ಪ್ರಾಣ ತೊರೆಯಲಾಗಿ ಉನ್ನತ ಫಲಗಳನ್ನು ಪಡೆದರು.

ತನ್ನ ಎರಡನೆ ರಾಣಿಯ ಅಂತಃಪುರಕ್ಕೆ ಬೆಂಕಿ ಬಿದ್ದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜನು ಬೇಟೆಯನ್ನು ಮೊಟಕುಗೊಳಿಸಿ ಅರಮೆಗೆ ಧಾವಿಸಿದ. ಆದರೆ ಆ ವೇಳೆಗಾಗಲೇ ಎಲ್ಲವೂ ದಹಿಸಿ ಬೂದಿಯಾಗಿತ್ತು. ಇದು ಮಾಗಂಡಿಯಾಳ ಹೀನ ಕೃತ್ಯವೇ ಎನ್ನುವುದು ಅವನಿಗೆ ಸ್ಪಷ್ಟವಾಗಿತ್ತು. ಆದರೂ ಸಮಾಧಾನ ನಟಿಸುತ್ತಾ ‘ಈ ಸಾಮಾವತಿಯಿಂದ ನನಗೆ ಯಾವಾಗಲೂ ಆಪತ್ತು ಕಾದಿತ್ತು. ಸದ್ಯ! ನಾನಿನ್ನು ನಿಶ್ಚಿಂತನಾಗಿ ಇರಬಹುದು. ಈಕೆಯ ಅಂತಃಪುರಕ್ಕೆ ಬೆಂಕಿ ಇಡಿಸಿದವರು ಯಾರೋ ನನ್ನನ್ನು ಅತಿಯಾಗಿ ಪ್ರೀತಿಸುವ ನನ್ನ ಹಿತೈಶಿಯೇ ಇರಬೇಕು’ ಎಂದ. ಮಾಗಂಡಿಯಾ ಉಲ್ಲಾಸದಿಂದ ಎದ್ದು ನಿಂತು ತನ್ನ ಪ್ರತಾಪ ಹೇಳಿಕೊಂಡಳು. ರಾಜ ಕೊಡಬಹುದಾದ ಬಹುಮಾನಕ್ಕೆ ಕಾದಳು. ಉದಯನ ಆಕೆಯನ್ನೂ ಆಕೆಯ ಸೇವಕರನ್ನೂ ಬಂಧಿಸಿ, ಗಲ್ಲಿಗೇರಿಸುವಂತೆ ಆಜ್ಞಾಪಿಸಿದ.

 

 

Leave a Reply