ಸತ್ಯ : ತಾವೋ ಧ್ಯಾನ ~ 24

ಸತ್ಯ ಎಂದು ನಾವು ಯಾವುದನ್ನ ಹೆಸರಿಸುತ್ತೆವೆಯೋ ಅದನ್ನ ಮೂರು ವಿಧವಾಗಿ ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ. ಮೊದಲನೇಯದು ಅನುಭವ ಜನ್ಯವಾದ ಸತ್ಯ. ಎರಡನೇಯ ಬಗೆಯ ಸತ್ಯ, ತರ್ಕದಿಂದ ಹುಟ್ಟಿದ್ದು. ಮೂರನೇ ಬಗೆಯ ಸತ್ಯ ಇವೆರಡಕ್ಕಿಂತಲೂ ಭಿನ್ನವಾದದ್ದು. ಅದೇ ‘ಅನುಭಾವ’ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ತಾವೋ ಮಾತಿಗೆ ನಿಲುಕುವುದಿಲ್ಲ
ಮಾತಿಗೆ ನಿಲುಕುವುದು ತಾವೋ ಅಲ್ಲ.

ಆದ್ದರಿಂದ ಸಂತನಿಗೆ,
ಮಾತಿನ ಹುಕಿಯಿಲ್ಲ, ಮುಟ್ಟುವ ಬಯಕೆಯಿಲ್ಲ,
ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ.

ಅವನಿಗೆ
ಸಿಕ್ಕು ಬಿಡಿಸುವುದು ಇಷ್ಟ,
ಮೈ ಮನಸ್ಸು ಹದಗೊಳಿಸುವುದರಲ್ಲಿ ಆಸಕ್ತಿ,
ಧೂಳು ನೆಲೆಗೊಳಿಸುವಲ್ಲಿ ತನ್ಮಯತೆ
ಇದು ಸಹಜ ಸ್ಥಿತಿ.

ಆಗ
ಪ್ರೇಮ, ತಿರಸ್ಕಾರ ಕಾಡುವುದಿಲ್ಲ
ಲಾಭ, ನಷ್ಟ ಬಾಧಿಸುವುದಿಲ್ಲ
ಮಾನ, ಅಪಮಾನ ಆಟ ಆಡಿಸುವುದಿಲ್ಲ.

ಸತತವಾಗಿ ತನ್ನನ್ನು ತಾನು ಹಂಚಿಕೊಳ್ಳುವುದರಿಂದ
ತಾವೋ, ಸದಾ ಹೊಚ್ಚ ಹೊಸತು.

~ ಲಾವೋತ್ಸು

***

ಸತ್ಯ ಎಂದು ನಾವು ಯಾವುದನ್ನ ಹೆಸರಿಸುತ್ತೆವೆಯೋ ಅದನ್ನ ಮೂರು ವಿಧವಾಗಿ ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ.

ಮೊದಲನೇಯದು ಅನುಭವ ಜನ್ಯವಾದ ಸತ್ಯ. ಒಮ್ಮೆ ನೀವು ಏನನ್ನೋ ಅನುಭವಿಸಿದ ಮೇಲೆ ನೀವು ಅದರ ಬಗ್ಗೆ ಪೂರ್ಣವಾಗಿ ಬಲ್ಲಿರಿ. ಬೇರೆ ಯಾರೂ ಮನವೊಲಿಸುವ ಅವಶ್ಯಕತೆ ಇಲ್ಲ. ಇದು ನಿಮ್ಮ ಸತ್ಯ. ಅದೇ ಸತ್ಯ, ಬೇರೆಯವರಿಗೆ ಬೇರೆ ಅನುಭವಗಳನ್ನು ಕೊಡಬಹುದು. ಆದ್ದರಿಂದ ಇದು ನಿಮ್ಮ ವೈಯಕ್ತಿಕ ಸತ್ಯ.

ಎರಡನೇಯ ಬಗೆಯ ಸತ್ಯ, ತರ್ಕದಿಂದ ಹುಟ್ಟಿದ್ದು. ಈ ಸತ್ಯವನ್ನು ತಕ್ಷಣ ಪರಿಶೀಲಿಸುವುದು ಸಾಧ್ಯವಿಲ್ಲ. ಏಕೆಂದರೆ ಇದರ ಸೂಕ್ಷ್ಮ ಸ್ವಭಾವ( ಪರಮಾಣುಗಳ ಹಾಗೆ) ಅಥವಾ ಅನಂತ ಸಾಧ್ಯತೆ (ಕಾಲದೊಡನೆ ಬ್ರಹ್ಮಾಂಡಗಳ ಚಲನೆಯ ಹಾಗೆ) ಅಥವಾ ಅದರ ಅಮೂರ್ತ ಸ್ಥಿತಿಯ( ವಿಚಾರ, ಕಲ್ಪನೆಗಳ ಹಾಗೆ) ಕಾರಣಗಳಿಂದಾಗಿ. ಇದು ಸತ್ಯ ಇರಬಹುದು ಆದರೆ ಇದರ ಸತ್ಯಾಸತ್ಯತೆ ವಿಷ್ಲೇಷಣೆಯಿಂದ ನಿರ್ಧಾರವಾಗಿರುವುದು, ಭೌತಿಕ ಪರೀಕ್ಷೆ ಅಸಾಧ್ಯ.

ಈ ಎರಡೂ ಬಗೆಯ ಸತ್ಯಗಳಿಗೆ ಒಂದು ಸೀಮಿತತೆ ಇದೆ. ಅವು ಸಾಪೇಕ್ಷ. ಆದ್ದರಿಂದ ಈ ಬಗೆಯ ಸತ್ಯಗಳು ಸುಳ್ಳಿಗಿಂತಲೂ, ಕೇವಲ ಅಭಿಪ್ರಾಯಗಳಿಗಿಂತಲೂ, ಶ್ರದ್ಧೆಗಿಂತಲೂ, ಮೂಢ ನಂಬಿಕೆಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿರುವಾಗಲೂ ಇವುಗಳಿಗೆ ಒಂದು ಅವಧಿ, ಒಂದು ಪರಿಮಿತಿ ಇದೆ.

ಮೂರನೇ ಬಗೆಯ ಸತ್ಯ ಇವೆರಡಕ್ಕಿಂತಲೂ ಭಿನ್ನವಾದದ್ದು. ಅದೇ ‘ಅನುಭಾವ’. ಇದು ಅನುಭವಕ್ಕಿಂತ ಭಿನ್ನ, ನೇರ ಅಧ್ಯಾತ್ಮಿಕ ಅರಿವು. ಇದು ಸಂಪೂರ್ಣವಾಗಿ ಅಂತರಂಗಕ್ಕೆ ಸಂಬಂಧಪಟ್ಟದ್ದು, ಒಳಗಿನ ಶಕ್ತಿಕೇಂದ್ರಗಳೆಲ್ಲ ತೆರೆದುಕೊಂಡಾಗ ಮಾತ್ರ ಸಾಧ್ಯವಾಗುವ ನೇರ ಪ್ರಮಾಣ.

ಈ ಅರಿವು ನಮಗೆ ಯಾವ ಧಾರ್ಮಿಕ, ಅಧ್ಯಾತ್ಮಿಕ ಗ್ರಂಥಗಳಿಂದಲೂ ದೊರಕುವಂಥದಲ್ಲ. ಯಾವ ಗುರುವೂ ನಮಗೆ ಈ ಸತ್ಯವನ್ನು ಪರಿಚಯಿಸಲಾರ. ಸೂಫಿ ಹಫೀಜ್ ಈ ಅರಿವನ್ನು ಸಾಧ್ಯವಾಗಿಸುತ್ತೇವೆ ಎಂದು ವ್ಯಾಪಾರ ಮಾಡುವ ಗುರುಗಳನ್ನು ಹೀಗೆ ಅಣಕಿಸುತ್ತಾನೆ.

ಉಪದೇಶ ಮಾಡುವ
ಗುರುಗಳು,
ತಂತ್ರಗಳನ್ನು ಕಲಿಸಲು
ಶುರು ಮಾಡುತ್ತಿದ್ದಂತೆಯೇ
ನಾವು ದೂರ ಹೋಗಿ
ನಿಲ್ಲುವುದು ಜಾಣತನ.

ಕೆಲ ದೇವರಿಗೆ ಸಂಯಮ ಕಡಿಮೆ.
ಸಿಟ್ಟು ಬಂದರೆ ಚಪ್ಪಲಿ ತೆಗೆದು
ಆ ಗುರುವಿನತ್ತ ಎಸೆದುಬಿಡುತ್ತಾರೆ.

~ ಹಫೀಜ್

***

ಒಮ್ಮೆ ರಮಣರನ್ನ ಯುಜಿ ಪ್ರಶ್ನೆ ಮಾಡುತ್ತಾರೆ, “ ಈ ಅರಿವನ್ನು ನೀವು ನನಗೆ ಕೊಡಬಲ್ಲಿರಾ? “ ಆಗ ರಮಣರು “ ನಾನೇನೋ ಕೊಡಬಲ್ಲೆ ನೀನು ಪಡೆದುಕೊಳ್ಳಬಲ್ಲೆಯಾ? “ ಎಂದು ತಿರುಗಿ ಪ್ರಶ್ನೆ ಮಾಡುತ್ತಾರೆ. ಯುಜಿ, ರಮಣರಿಬ್ಬರಿಗೂ ಇದು ಕೊಡು ಕೊಳ್ಳುವ ವ್ಯವಹಾರವಲ್ಲ ಎನ್ನುವ ಸ್ಪಷ್ಟತೆ ಇತ್ತು.

ಧ್ಯಾನ, ಸತ್ಯದ ಈ ಮುಖವನ್ನು ನಮಗೆ ಪರಿಚಯಿಸುತ್ತದೆ, ಬೇರೆ ಯಾವ ಸಂಶಯ, ಪರೀಕ್ಷೆಗಳಿಗೆ ಇಲ್ಲಿ ಜಾಗವಿಲ್ಲ. ಏಕೆಂದರೆ ಈ ಅರಿವು ಶಬ್ದಗಳಿಗೆ ನಿಲುಕುವಂಥದಲ್ಲ , ವಿವರಗಳಿಗೆ ಸಾಧ್ಯವಾಗುವಂಥದಲ್ಲ, ತರ್ಕಕ್ಕೆ ಸಿಗುವಂಥದಲ್ಲ. ಇದನ್ನೇ ವಚನವೊಂದರಲ್ಲಿ ಅಲ್ಲಮ ಪ್ರಭು ಅದ್ಭುತವಾಗಿ ಪ್ರಸ್ತುತಪಡಿಸುತ್ತಾನೆ.

ವಸುಧೆಯಿಲ್ಲದ ಬೆಳಸು
ರಾಜಾನ್ನದ ಹೆಸರಿಲ್ಲದ ಓಗರ
ವೃಷಭ ಮುಟ್ಟದ ಹಯನು
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆನು.
ಶಿಶು ಕಂಡ ಕನಸಿನಂತೆ
ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು.

ಅನುಭಾವ, ಶಿಶು ಕಂಡ ಕನಸಿನಂತೆ. ಮಗು ಕನಸು ಕಾಣುತ್ತದೆ, ಆನಂದ ಅನುಭವಿಸುತ್ತದೆ, ಭಯಗ್ರಸ್ತವಾಗುತ್ತದೆ ಆದರೆ ಅದರ ವರ್ಣನೆ ಮಾಡಲು ಅದಕ್ಕೆ ಶಬ್ದಗಳಿಲ್ಲ, ಹಾಗೆಯೇ ಈ ಸತ್ಯ, ಮಾತಿಗೆ, ಇಂದ್ರಿಯಗಳ ಸ್ಪರ್ಶಕ್ಕೆ ನಿಲುಕುವಂಥದಲ್ಲ.

ಬಸವಣ್ಣ ಕೂಡ ಈ ಅನುಭಾವವನ್ನು ಕುರಿತು ಚಿಂತನೆ ಮಾಡಿದ್ದಾನೆ.

ಅನುಭಾವ ಅನುಭಾವವೆಂದೆಂಬಿರಿ
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿ ಭೋ
ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿ ಭೋ
ಅಂತರಂಗದ ಶುದ್ಧಿ ಕಾಣಿ ಭೋ
ಅನುಭಾವವೆಂಬುದು ರಚ್ಚೆಯ ಮಾತೆ
ಅನುಭಾವವೆಂಬುದು ಸಂತೆಯ ಸುದ್ದಿಯೆ
ಅನುಭಾವವೆಂಬುದೇನು ಬೀದಿಯ ಪಸರವೆ
ಏನೆಂಬೆ ಹೇಳಾ ಮಹಾಘನವನು
ಆನೆಯ ಮಾನದೊಳಗಿಕ್ಕಿದರಡಗುವುದೆ
ದರ್ಪಣದೊಳಗಡಗುವುದಲ್ಲದೆ
ಕಂಡ ಕಂಡಲ್ಲಿ ಗೋಷ್ಠಿ
ನಿಂದ ನಿಂದಲ್ಲಿ ಅನುಭಾವ
ಬಂದ ಬಂದಲ್ಲಿ ಪ್ರಸಂಗವ ಮಾಡುವ
ಪಾತಕರ ತೋರದಿರಯ್ಯಾ
ಕೂಡಲಚೆನ್ನಸಂಗಮದೇವ.

ಈ ಅನುಭಾವದ ರುಚಿಯನುಂಡವರು ಇದನ್ನು ಅನುಭವಗಳ ಮಡಿಲಿಗೆ, ತರ್ಕದ ತೊಟ್ಟಿಲಿಗೆ ಹಾಕದೇ ಒಡಲ ಕೆಂಡದಂತೆ ಜೋಪಾನ ಮಾಡಬೇಕಾಗುತ್ತದೆ.

ಆದ್ದರಿಂದಲೇ, ಅಪನಂಬಿಕೆಗಳಿಂದ, ದ್ವಂದ್ವ ಗಳಿಂದ ದೂರವಾಗಿರಲು ತಾವೋ ಹಿಂಬಾಲಕರು ತಮ್ಮ ಅರಿವನ್ನು ಪ್ರದರ್ಶನ ಮಾಡಲು ಹೋಗುವುದಿಲ್ಲ ಆಗಲೇ ಈ ಸತ್ಯ ಸಂಪೂರ್ಣ ಮತ್ತು ಸ್ವಂತ.

Leave a Reply