ಸ್ವರ್ಗ ಎಂಬುದು ಭೋಗಾಸಕ್ತರ ಕಲ್ಪನೆ : ಬೆಳಗಿನ ಹೊಳಹು

ಸ್ವರ್ಗದ ಕಲ್ಪನೆಯನ್ನು ಕಿತ್ತೆಸೆಯಿರಿ. ಯಾರಾದರೂ ಶಾಶ್ವತವಾಗಿ ಸುಖದಿಂದ ಇರಬಹುದಾದ ಲೋಕವೊಂದಿದೆ ಅನ್ನುವುದೇ ದೊಡ್ಡ ಭ್ರಮೆ. ಅದು ತೊಲಗಬೇಕು. ಎಲ್ಲಿ ಸುಖವಿದೆಯೋ ಅಲ್ಲಿ ದುಃಖವಿದ್ದೇ ಇರುವುದು ~ ಸ್ವಾಮಿ ವಿವೇಕಾನಂದ

ಸ್ವರ್ಗವೆಂಬುದು ನಮ್ಮ ಕಾಮನೆಗಳಿಂದ ಹುಟ್ಟಿಕೊಂಡ ಒಂದು ಮೂಢನಂಬಿಕೆಯಷ್ಟೆ. ಬಯಕೆ ಒಂದು ಬಂಧನ, ಅದೊಂದು ಅವನತಿ.

ಈ ಜೀವನವೇ ವಿಶ್ವ ಜೀವನ. ಸ್ವರ್ಗ ಮುಂತಾದ ಲೋಕಗಳೆಲ್ಲ ಇಲ್ಲೇ ಇವೆ. ಮಾನವನನ್ನು ಹೋಲುವ ದೇವತೆಗಳೆಲ್ಲ ಇಲ್ಲಿರುವರು. ದೇವತೆಗಳು ತಮ್ಮಂತೆ ಮನುಷ್ಯನನ್ನು ಸೃಷ್ಟಿಸಲಿಲ್ಲ. ಆದರೆ ಮನುಷ್ಯನು ತನ್ನಂತೆ ದೇವತೆಗಳನ್ನು ಸೃಷ್ಟಿಸಿದನು. ಇಲ್ಲಿದೆ ದೇವತೆಗಳ ಮೂಲ ರೂಪ. ಇಂದ್ರನಿಲ್ಲಿರುವನು. ವರುಣನಿಲ್ಲಿರುವನು. ಮತ್ತು ವಿಶ್ವದ ಎಲ್ಲ ದೇವತೆಗಳೂ ಇಲ್ಲಿಯೇ ಇರುವರು. ನಮ್ಮ ಅಲ್ಪ ಪ್ರತಿರೂಪಗಳನ್ನೇ ನಾವು ದೇವತೆಗಳೆಂದು ಕಲ್ಪಿಸಿಕೊಳ್ಳುತ್ತಿರುವೆವು. ಈ ದೇವತೆಗಳ ಮೂಲ ರೂಪ ನಾವೇ. ಪೂಜಾ ಯೋಗ್ಯವಾದ, ಸತ್ಯವಾದ, ಏಕಮಾತ್ರ ದೇವತೆಗಳು ನಾವೇ.

ಯಾರಿಗೆ ಪ್ರಪಂಚ ಭೋಗಭೂಮಿಯೋ ಯಾರಿಗೆ ಪ್ರಪಂಚವೆಂದರೆ ಕೇವಲ ಊಟೋಪಚಾರಗಳಲ್ಲಿ ಕಳೆಯುವುದಾಗಿದೆಯೋ, ಅವರಿಗೂ ಪ್ರಾಣಿಗಳಿಗೂ ವ್ಯತ್ಯಾಸವೇನೂ ಇಲ್ಲ. ಅಂತಹ ಜನರೇ ಸ್ವಾಭಾವಿಕವಾಗಿ ಒಂದೊಂದು ಸ್ವರ್ಗಲೋಕವನ್ನು ಕಲ್ಪಿಸಿಕೊಳ್ಳುವರು. ಏಕೆಂದರೆ ಅವರ ಭೋಗಕ್ಕೆ ಈ ಜೀವನ ಸಕಾಗುವುದಿಲ್ಲ. ಅವರ ಭೋಗಾಸಕ್ತಿಗೆ ಮೇರೆ ಇಲ್ಲ. ಆದ್ದರಿಂದಲೇ ಯಾವ ಅಡೆತಡೆಯೂ ಇಲ್ಲದ ಒಂದು ಭೋಗಭೂಮಿಯನ್ನು ಅವರು ಕಲ್ಪಿಸಿಕೊಳ್ಳುವರು ಮತ್ತು ಅದನ್ನು ಸ್ವರ್ಗ ಅನ್ನುವರು. ಯಾರು ಇಂಥ ಲೋಕಕ್ಕೆ ಹೋಗಬೇಕು ಎಂದು ಬಯಸುವರೋ ಅವರು ಅಲ್ಲಿಗೆ ಹೋಗಲೇಬೇಕು. ಈ ಲೋಕದ ಕನಸು ಆದಮೇಲೆ ಸ್ವರ್ಗಲೋಕದ ಕನಸಿಗೆ ಹೋಗುವರು. ಅಲ್ಲಿ ಅವರಿಗೆ ಸಾಕಷ್ಟು ಭೋಗವಸ್ತುಗಳಿವೆ. ಈ ಕನಸು ಭಗ್ನವಾದರೆ ಅವರು ಮತ್ತೊಂದು ಲೋಕವನ್ನು ಕಲ್ಪಿಸಿಕೊಳ್ಳಬೇಕಾಗುವುದು. ಹೀಗೆ ಅವರು ಕನಸಿನಿಂದ ಕನಸಿಗೆ ಚಲಿಸುತ್ತಲಿರುವರು.

ಆದ್ದರಿಂದ, ಸ್ವರ್ಗದ ಕಲ್ಪನೆಯನ್ನು ಕಿತ್ತೆಸೆಯಬೇಕು. ಯಾರಾದರೂ ಶಾಶ್ವತವಾಗಿ ಸುಖದಿಂದ ಇರಬಹುದಾದ ಲೋಕವೊಂದಿದೆ ಅನ್ನುವುದೇ ದೊಡ್ಡ ಭ್ರಮೆ. ಅದು ತೊಲಗಬೇಕು. ಎಲ್ಲಿ ಸುಖವಿದೆಯೋ ಅಲ್ಲಿ ದುಃಖವಿದ್ದೇ ಇರುವುದು. ಸಂತೋಷ ಇರುವ ಕಡೆ ಕಷ್ಟ ಬರಲೇಬೇಕು. ಇದು ನಿಯಮ. ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇದ್ದೇ ಇರುವುದು. ಸುಖಕ್ಕೆ ದುಃಖ, ದುಃಖಕ್ಕೆ ಸುಖ… ಹೀಗೆ.

ನಿಮ್ಮ ಪಾಲಿಗೆ ಏನು ಬರಲಿದೆ ಎಂದು ಚಿಂತಿಸುತ್ತ ಕೂರಬೇಡಿ. ನಿಮ್ಮ ತಪ್ಪುಗಳ ಕುರಿತು ಪಾಪಪ್ರಜ್ಞೆ ಇಟ್ಟುಕೊಳ್ಳಬೇಡಿ. ನಿಮ್ಮ ತಪ್ಪುಗಳಿಗೆ ಕೃತಜ್ಞರಾಗಿರಿ. ಅವು ನಿಮಗೆ ಸಂಭಾಳಿಸಿಕೊಳ್ಳುವ ಅವಕಾಶ ನೀಡಿವೆ. ಆ ತಪ್ಪುಗಳು ನೀವು ಇಂದು ಎಲ್ಲಿದ್ದೀರೋ ಅಲ್ಲಿಗೆ ತಲುಪಿಸುವ ದಾರಿಗಳಾಗಿದ್ದವು. ಆದ್ದರಿಂದ ಪಾಪಪ್ರಜ್ಞೆಯನ್ನು ಬಿಟ್ಟು, ಭ್ರಮೆಗಳನ್ನು ಬಿಟ್ಟು, ಆದರ್ಶಗಳಿಗೆ ಬದ್ಧರಾಗಿ ಮುನ್ನಡೆಯಿರಿ.

(ಆಧಾರ : ವಿವೇಕಾನಂದರ ಕೃತಿಶ್ರೇಣಿ)

Leave a Reply