ಒಂದು ವರ್ಷ ಪೂರೈಸಿದ ‘ಅರಳಿಮರ’ : ಓದುಗರಿಗೆ ವಂದನೆ ಮತ್ತು ನಿವೇದನೆ

ನಮಸ್ಕಾರ.

ಕಳೆದ ಶಿವರಾತ್ರಿ ಜಾಗರಣೆಯಂದು (ಫೆ.13ರ ನಡು ರಾತ್ರಿ) ಲೋಕಾರ್ಪಣೆಗೊಂಡ ಅರಳಿಮರ ಜಾಲತಾಣಕ್ಕೆ ವರ್ಷ ತುಂಬಿದೆ. ವರ್ಷ ಪೂರ್ತಿ ಒಂದು ದಿನವೂ ತಪ್ಪದಂತೆ ಲೇಖನಗಳನ್ನು ಪ್ರಕಟಿಸುವ ಉತ್ಸಾಹ ಮತ್ತು ಬಲ ತುಂಬಿದ್ದು ನೀವು. ಹೀಗೆ, ಈವರೆಗೆ ನಾವು ಪ್ರಕಟಿಸಿದ ಲೇಖನಗಳ ಸಂಖ್ಯೆ 1,250 ದಾಟಿದೆ. ಈ ಸಂದರ್ಭದಲ್ಲಿ ಜಾಲತಾಣದ ವಿನ್ಯಾಸವನ್ನು ಬದಲಿಸುವ ಪ್ರಯತ್ನ ಮಾಡಿದ್ದೇವೆ. ವಿಡಿಯೋಗಳು, ಚಿತ್ರಿಕೆಗಳು ಸುಲಭವಾಗಿ ಸಿಗುವಂತೆ ರೂಪಿಸಲಾಗಿದೆ. ಈ ಬದಲಾವಣೆ ನಿಮಗೆ ಇಷ್ಟವಾಗುವುದೆಂಬ ನಂಬಿಕೆ ನಮ್ಮದು.

ಮುಂದಿನ ದಿನಗಳಲ್ಲಿ ಜಾಲತಾಣದ ಸ್ವರೂಪ ಮತ್ತಷ್ಟು ಬದಲಾಗಲಿದ್ದು, ನಿಮ್ಮ ಸಹಕಾರ ಅಗತ್ಯವಾಗಿ ಬೇಕಾಗಿದೆ. ಒಂದು ವರ್ಷ ನಮ್ಮ ‘ಅರಳಿ ಬಳಗ’ದ ಸದಸ್ಯರು ತಮ್ಮ ಕೆಲಸಗಳ ನಡುವೆಯೇ ಶ್ರಮ, ಸಮಯ ಮತ್ತು ಹಣವನ್ನೂ ವಿನಿಯೋಗಿಸಿ ಇದನ್ನು ರೂಪಿಸಿದ್ದಾರೆ. ಜಾಲತಾಣವನ್ನು ತಡೆಯಿಲ್ಲದಂತೆ ನಡೆಸಲು ಹಣದ ಅಗತ್ಯವಿದ್ದು, ದೇಣಿಗೆ, ಚಂದಾ ಮತ್ತು ಪ್ರೋತ್ಸಾಹ ಧನ ರೂಪದಲ್ಲಿ ಅದನ್ನು ಸಂಗ್ರಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಬೆಂಬಲ ನಿರೀಕ್ಷಿಸುತ್ತೇವೆ. ಅರಳಿಮರಕ್ಕೆ ‘ಸಹಯೋಗ ರಾಶಿ’ ನೀಡಲು ಬಯಸುವವರು ಪ್ರತಿಕ್ರಿಯೆ ಅಥವಾ E mail (aralimara123@gmail.com) ಮೂಲಕ ತಿಳಿಸಿದರೆ, ಮುಂದಿನ ಪ್ರಕ್ರಿಯೆಗೆ ಅನುಕೂಲವಾಗುವುದು. Mail ಕಳುಹಿಸಲು ಸಾಧ್ಯವಾಗದೆ ಇರುವವರು ಇಲ್ಲಿಯೇ ಕಮೆಂಟ್ ಮಾಡಿಯೂ ತಿಳಿಸಬಹುದು.

ಅರಳಿಮರ ಜಾಲತಾಣವನ್ನು ಓದುಗರ ಸಮಯ, ಧಾವಂತ ಮತ್ತು ಅಗತ್ಯಗಳಿಗೆ ಹೊಂದುವಂತೆ ರೂಪಿಸಲು ಶ್ರಮಿಸುತ್ತಿದ್ದೇವೆ. ಆದ್ದರಿಂದ ಇಲ್ಲಿ ಪ್ರಕಟವಾಗುವ ಪ್ರತಿಯೊಂದು ವಿಷಯದ ಬಗ್ಗೆಯೂ ನಿಮ್ಮ ಪ್ರತಿಕ್ರಿಯೆ ನಮಗೆ ಅವಶ್ಯವಾಗಿ ಬೇಕಿದೆ. ನಿಮ್ಮ ಪ್ರತಿಕ್ರಿಯೆ, ಸಲಹೆ, ನಿರೀಕ್ಷೆಗಳನ್ನು ದಯಮಾಡಿ ತಿಳಿಸಿ. ಜಾಲತಾಣವನ್ನು ಉತ್ತಮಪಡಿಸಲು ಇದರಿಂದ ಸಹಾಯವಾಗುವುದು.

ಒಂದು ವರ್ಷ ಎನ್ನುವಷ್ಟರಲ್ಲೇ ಗಣನೀಯ ಸಂಖ್ಯೆಯ ಓದುಗರನ್ನು ತಲುಪುವಂತೆ ಮಾಡಿದ ಶ್ರೇಯ ಅರಳಿಬಳಗದ ಲೇಖಕರಿಗೆ ಸಲ್ಲುತ್ತದೆ. ಜಾಲತಾಣದ ಮಾರ್ಗದರ್ಶಕರಾದ ಅಚಿಂತ್ಯ ಚೈತನ್ಯ, ಅಂಕಣಕಾರರಾದ ಚಿದಂಬರ ನರೇಂದ್ರ, ಆನಂದ ಪೂರ್ಣ, ಯಾದಿರಾ, ಚೇತನಾ ತೀರ್ಥಹಳ್ಳಿ ಮತ್ತು ಇತರ ಎಲ್ಲ ಅಥಿತಿ ಅಂಕಣಕಾರರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ, ಕೃತಜ್ಞತೆ ಸಲ್ಲಿಸಲು ಬಯಸುತ್ತೇವೆ.

ಸಹಕಾರವಿರಲಿ.
ಪ್ರೀತಿಯಿಂದ,
ಅರಳಿ ಬಳಗ.

 

Leave a Reply