ಬಹಿರಂಗವಾಗಿದ್ದು ಯಾರ ಮೂರ್ಖತನ!? : Tea time story

monkಒಬ್ಬ ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬೇರೆ ಆಶ್ರಮದ ಇಬ್ಬರು ಝೆನ್ ಸನ್ಯಾಸಿಗಳು ಅತಿಥಿಗಳಾಗಿ ಬಂದಿದ್ದರು.

“ ಈ ಆಶ್ರಮದಲ್ಲಿ ಝೆನ್ ಬಗ್ಗೆ ತಿಳುವಳಿಕೆ ಇರುವ ಒಬ್ಬರೂ ಇಲ್ಲ” ಎಂದು ಅವರಿಬ್ಬರೂ ಮಾತನಾಡಿಕೊಳ್ಳುವುದನ್ನ ಆ ಆಶ್ರಮದ ಹಿರಿಯ ಶಿಷ್ಯ ಕೇಳಿಸಿಕೊಂಡ.

ಕೆಲ ಹೊತ್ತಿನ ನಂತರ ಆಶ್ರಮದ ಎಲ್ಲರೂ ಕಟ್ಟಿಗೆ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ಇಬ್ಬರೂ ಅತಿಥಿ ಸನ್ಯಾಸಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಆಶ್ರಮದ ಹಿರಿಯ ಶಿಷ್ಯ ಗಮನಿಸಿದ.

ಅವ ತಕ್ಷಣವೇ ಕಟ್ಟಿಗೆಯೊಂದನ್ನು ಹಿಡಿದುಕೊಂಡು ಆ ಇಬ್ಬರು ಅತಿಥಿಗಳು ಎದುರು ಪ್ರತ್ಯಕ್ಷನಾದ. “ ಈ ಕಟ್ಟಿಗೆಯ ಝೆನ್ ಸ್ವಭಾವದ ಬಗ್ಗೆ ಹೇಳಿ ಹಾಗಾದರೆ” ಎಂದು ಸಿಟ್ಟಿನಿಂದ ಅವರಿಬ್ಬರಿಗೂ ಸವಾಲು ಹಾಕಿದ.

ಅತಿಥಿಗಳಿಬ್ಬರೂ ಮೂಕ ವಿಸ್ಮಿತರಾದರು. ಅವರಿಬ್ಬರ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ.

“ ಈ ಆಶ್ರಮದಲ್ಲಿ ಝೆನ್ ಗೊತ್ತಿರುವವರು ಯಾರು ಇಲ್ಲ ಎಂದು ಹೇಳಿದ ಮಾತನ್ನ ವಾಪಸ್ ತೆಗೆದುಕೊಳ್ಳಿ” ಹಿರಿಯ ಶಿಷ್ಯ ಅವರನ್ನು ಅಣಕಿಸಿ ಮಾತನಾಡಿದ.

ಸಂಜೆ ಆಶ್ರಮದ ಝೆನ್ ಮಾಸ್ಟರ್ ವಾಪಸ್ ಬಂದಾಗ, ಹಿರಿಯ ಶಿಷ್ಯ ನಡೆದಿದ್ದನ್ನೆಲ್ಲ ಮಾಸ್ಟರ್ ಮುಂದೆ ನಿವೇದಿಸಿಕೊಂಡು ಮಾತನಾಡಿದ “ ಇವತ್ತು ಇಬ್ಬರು ಸನ್ಯಾಸಿಗಳ ಮೂರ್ಖತನವನ್ನು ಬಹಿರಂಗ ಮಾಡಿದೆ.”

“ ಓ ಹೌದಾ? ನನಗೇನೋ ಮೂವರು ಸನ್ಯಾಸಿಗಳ ಮೂರ್ಖತನ ಬಹಿರಂಗವಾಗಿದೆ ಎಂದು ಅನಿಸುತ್ತಿದೆಯಲ್ಲ” ಝೆನ್ ಮಾಸ್ಟರ್ ನಕ್ಕು ಬಿಟ್ಟ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply