ಕಡಲ ತಡಿಯಲ್ಲಿ ಮೂಡಿದ್ದ ಒಂದು ಜೊತೆ ಹೆಜ್ಜೆ ಗುರುತು ಯಾರದ್ದು? : ಭಕ್ತ ಮತ್ತು ಭಗವಂತನ ಸಂವಾದ

“ಕಡಲ ತಡಿಯಲ್ಲಿ  ಒಬ್ಬರದೇ ಹೆಜ್ಜೆ ಗುರುತಿದೆ… ನನ್ನ ಕಷ್ಟದ ಸಮಯಗಳಲ್ಲಿ ನೀನು ಎಲ್ಲಿದ್ದೆ?” ಎಂದು ಭಕ್ತ ಪ್ರಶ್ನಿಸಿದಾಗ ಭಗವಂತ ಕೊಟ್ಟ ಉತ್ತರವೇನು ಗೊತ್ತೆ?

ಒಂದು ರಾತ್ರಿ ಭಕ್ತನೊಬ್ಬ ಸಮುದ್ರ ತೀರದಲ್ಲಿ ತಾನು ಭಗವಂತನೊಡನೆ ವಿಹರಿಸುತ್ತಿರುವಂತೆ ಕನಸು ಕಂಡ. ಆಕಾಶದ ಪರದೆಯಲ್ಲಿ ಥಟ್ಟನೆ ತನ್ನ ಹಿಂದಿನ ಜೀವನದ ದೃಶ್ಯಗಳೆಲ್ಲ ಚಲನಚಿತ್ರದಂತೆ ಮೂಡಲಾರಂಭಿಸಿದವು. ಪ್ರತಿಯೊಂದು ದೃಶ್ಯದಲ್ಲೂ ಎರಡು ಜೊತೆ ಹೆಜ್ಜೆ ಗುರುತಗಳು ಇದ್ದವು. ಒಂದು ತನ್ನದು ಮತ್ತೊಂದು ಭಗವಂತನದು. ಜೀವನದ ಕೆಲವು ದೃಶ್ಯಗಳಲ್ಲಿ ಒಂದೇ ಜೊತೆ ಹೆಜ್ಜೆ ಗುರುತಗಳಿದ್ದವು. ಅವು ಭಕ್ತನ ಸಂಕಟದ ದಿನಗಳ ಅವಧಿಯದ್ದು.

ತನ್ನ ಅತ್ಯಂತ ದುಃಖಕರ ಹಾಗೂ ಕಷ್ಟಕರ ಸನ್ನಿವೇಶಗಳಲ್ಲೇ ಆ ರೀತಿ ಇರುವುದನ್ನು ನೋಡಿ ಆಶ್ಚರ್ಯಚಕಿತನಾಗಿ ಕೇಳಿದ; “ಭಗವಂತ! ನೀನು ಸದಾ ನನ್ನ ಜೊತೆ ಇರುವೆನೆಂದು ವಾಗ್ದಾನ ಮಾಡಿದ್ದೆ. ಆದರೆ ನನ್ನ ಜೀವನದ ಅತ್ಯಂತ ಕಷ್ಟದ ಸನ್ನಿವೇಶಗಳಲ್ಲಿ ಒಂದೇ ಜೊತೆ ಹೆಜ್ಜೆ ಗುರುತಿದೆ. ನನಗೆ ತೀವ್ರ ಅಗತ್ಯವಿದ್ದಾಗಲೇ ನೀನು ನನ್ನ ಜೊತೆ ಇರದೆ ಹೋದುದೇಕೆ? ಸಂಕಟಪಡಲು ನನ್ನನ್ನು ಒಂಟಿಯಾಗಿ ಬಿಟ್ಟಿದ್ದೇಕೆ?” ಎಂದು ಕೇಳಿದ. 

ಭಗವಂತ ವಾತ್ಸಲ್ಯದಿಂದ ಭಕ್ತನ ಮುಖವನ್ನೇ ದಿಟ್ಟಿಸುತ್ತಾ ಹೇಳಿದ; “ಮಗೂ! ನಾನು ಯಾವಾಗಲೂ ನಿನ್ನ ಜೊತೆಗೇ ಇದ್ದೆ. ನಿನ್ನ ದುಃಖದ, ಕಷ್ಟದ ದಿನಗಳಲ್ಲಿ ನಿನ್ನನ್ನು ಎತ್ತಿಕೊಂಡು ನಡೆಯುತ್ತಿದ್ದೆ. ಆದ್ದರಿಂದಲೇ ಆ ಎಲ್ಲ ಸಂದರ್ಭಗಳಲ್ಲಿ ಕೇವಲ ಒಂದು ಜೊತೆ ಹೆಜ್ಜೆ ಗುರುತಿದೆ. ಅದು ನನ್ನ ಹೆಜ್ಜೆ ಗುರುತು”.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.