ಸಾವಿಗೆ ನಮ್ಮ ಸ್ಪಂದನೆ ಹೇಗಿರಬೇಕು?

ಮುಖ್ಯವಾಗಿ ಭಗವದ್ಗೀತೆ ಮಾಡುವುದು ಇದನ್ನೇ. ಸಾವೆಂಬ ಶಾಶ್ವತ ಸತ್ಯವನ್ನು ಅದು ನಮ್ಮ ಮುಖದ ಮುಂದೆ ಹಿಡಿಯುತ್ತದೆ. ನಮ್ಮ ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದೇ ನಮ್ಮ ಆಪ್ತೇಷ್ಟರ ಮತ್ತು ಇತರರ ಸಾವನ್ನು ಎದುರುಗೊಳ್ಳುವ, ಅದಕ್ಕೆ ನ್ಯಾಯ ಸಲ್ಲಿಸುವ ಸಮರ್ಥ ಮಾರ್ಗವೆಂದು ಮನದಟ್ಟು ಮಾಡುತ್ತದೆ ~ ಸಾ.ಹಿರಣ್ಮಯಿ

ಮಾಗಿದ ಹಣ್ಣು ತೊಟ್ಟು ಕಳಚಿ ಬೀಳುವುದಕ್ಕೂ, ಅದನ್ನು ಕಿತ್ತು ತಿನ್ನುವುದಕ್ಕೂ, ಕಲ್ಲು ಬೀಸಿ ಅದರ ಮೈತುಂಬ ಗಾಯ ಮಾಡಿ ನುಜ್ಜುಗುಜ್ಜಾಗಿಸುವುದಕ್ಕೂ ವ್ಯತ್ಯಾಸವಿದೆ. ಈ ಯಾವುದೇ ಬಗೆಯಲ್ಲಿ ಹಣ್ಣು ಕಳಚಿಬಿದ್ದರೂ ಕಳೆದುಕೊಳ್ಳುವುದು ಮರವೇ. ಆದರೆ ಅದು ಅನುಭವಿಸುವ ನೋವು ಮಾತ್ರ ಹಣ್ಣು ಬೀಳಲು ಕಾರಣವಾಗುವ ಪ್ರಕ್ರಿಯೆಗಳ ಮೇಲೆ ನಿಂತಿರುತ್ತದೆ.

ನಾವು ಪ್ರತಿ ದಿನವೂ ಸಾವುಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತೇವೆ. ಎಷ್ಟು ಮನುಷ್ಯರೋ ಅಷ್ಟು ಬಗೆಯ ಸಾವುಗಳೂ ಇದೆ. ಅವಕ್ಕೆ ನಾವು ಸ್ಪಂದಿಸುವ ಬಗೆಯೂ ಅಷ್ಟೇ ಭಿನ್ನ.  ಉದಾಹರಣೆಗೆ; ಮೂರು ದಿನಗಳ ಹಿಂದಷ್ಟೆ ನಡೆದ ದುರಂತ. ನಲವತ್ತಕ್ಕೂ ಹೆಚ್ಚು ಸೈನಿಕರ ಬರ್ಬರ ಹತ್ಯೆ ನಮ್ಮ ಎದೆಗಳನ್ನು ನಡುಗಿಸಿದೆ. ಈ ಸಾವುಗಳು ನಮ್ಮಲ್ಲಿ ದುಃಖಕ್ಕಿಂತ ಹೆಚ್ಚು ರೋಷವನ್ನೂ ಆಕ್ರೋಶವನ್ನೂ ಹುಟ್ಟಿಸಿದೆ. ಇವು ತೀರಾ ಅನ್ಯಾಯದ ಸಾವುಗಳು. ದೇಶ ರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಸೈನಿಕರ ದೇಹಗಳು ಗುರುತೇ ಸಿಗದಂತೆ ಛಿದ್ರವಿಚ್ಛಿದ್ರವಾಗಿ ರಸ್ತೆ ತುಂಬ ಹರಡಿಕೊಂಡ ಚಿತ್ರಣ ಎಂಥವರನ್ನೂ ಕಲುಕದೆ ಇರದು.

ಅದೇ ವೇಳೆ, ಕೆಲವು ತಿಂಗಳ ಹಿಂದೆ ಮಂಡ್ಯದ ಬಳಿ ಬಸ್ ಅಪಘಾತದಲ್ಲಿ ಜನರು ದುರಂತ ಸಾವಿಗೀಡಾದರು. ಆಗಲೂ ನಮ್ಮ ಮನಸ್ಸು ಮಿಡಿದವು. ಅದಕ್ಕೂ ಮುಂಚೆ, ಕಳೆದ ವರ್ಷಾಂತ್ಯದಲ್ಲಿ ನೆರೆ ಪ್ರವಾಹದಲ್ಲಿ ಸಾವುಗಳು ಸಂಭವಿಸಿದವು. ಆ ಸಾವುಗಳಿಗೂ ನಮ್ಮ ಮನ ಕರಗಿತು.

ಯೋಚಿಸಿ ನೋಡಿ… ಈ ಎಲ್ಲ ಸಂದರ್ಭಗಳಲ್ಲೂ ಸಂಭವಿಸಿದ್ದು ಸಾವೇ ಆದರೂ ನಿಮ್ಮ ಸ್ಪಂದನೆಯ ಹಿಂದಿನ ಭಾವನೆ ಭಿನ್ನವಾಗಿತ್ತೆಂಬುದನ್ನು ಗಮನಿಸಿ. ನಮ್ಮದೇ ಕುಟುಂಬ ಅಥವಾ ಸ್ನೇಹವಲಯದ ಯಾರಾದರೂ ತೀರಿಕೊಂಡರೆ ನಿಮ್ಮ ಸ್ಪಂದನೆ ಹೇಗಿರುತ್ತದೆ ಅನ್ನುವುದನ್ನೂ ಊಹಿಸಿ. ಸೂಕ್ಷ್ಮವಾಗಿ ಆಲೋಚಿಸಿದರೆ, ಸಂದರ್ಭಗಳು ಭಿನ್ನವಾದಂತೆಲ್ಲ ಸ್ಪಂದನೆಯೂ ಭಿನ್ನವಾಗಿರುವುದನ್ನು ನೀವು ಕಂಡುಕೊಳ್ಳುತ್ತೀರಿ.

ಏಕೆ ಹೀಗಾಗುತ್ತದೆ? ಏಕೆಂದರೆ, ಈ ಎಲ್ಲ ಸಂದರ್ಭಗಳಲ್ಲೂ ನಾವು ಸ್ಪಂದಿಸುವುದು ನೇರವಾಗಿ ಆ ಜೀವಕ್ಕಲ್ಲ, ಆ ಜೀವದೊಡನೆ ನಾವು ಹೊಂದಿರುವ ಸಂಬಂಧಕ್ಕೆ. ನಾವು ಸ್ಪಂದಿಸುವುದು ಆ ಘಟನೆಗೆ. ಅಪಘಾತದಲ್ಲಿ ಸಾವು ಸಂಭವಿಸಿದಾಗ ತೀರಿಕೊಂಡ ಜೀವಗಳ ಕುಟುಂಬಗಳ ಬಗ್ಗೆ ಚಿಂತಿಸುತ್ತೇವೆ, ಕೈಲಾದರೆ ಸಹಾಯ ಮಾಡುತ್ತೇವೆ. ಆದರೆ ನಮ್ಮನ್ನು ತಲ್ಲಣಿಸುವಂತೆ ಮಾಡುವುದು ಅಪಘಾತವೆಂಬ ಸಂಗತಿ. ಅದು ನಮ್ಮ ಸುಪ್ತಪ್ರಜ್ಞೆಯಲ್ಲಿ ಭಯವಾಗಿ ಕುಳಿತು ನಮ್ಮನ್ನು ಚಡಪಡಿಸುವಂತೆ ಮಾಡುತ್ತಾ ಇರುತ್ತದೆ. ನಾವು ಅಥವಾ ನಮ್ಮ ಆಪ್ತೇಷ್ಟರು ಅಪಘಾತಕ್ಕೀಡಾದರೆ ಅನ್ನುವ ಊಹೆ ನಮ್ಮನ್ನು ಕಾಡತೊಡಗುತ್ತದೆ.

ನಮ್ಮ ಸೈನಿಕರ ಬರ್ಬರ ಹತ್ಯೆ ಅವರ ತಾಯಂದಿರ, ಹೆಂಡತಿ – ಮಕ್ಕಳ ನೋವು ಮತ್ತು ದುಃಖಕ್ಕೆ ಕೊರಳುಬ್ಬುವಂತೆ ಮಾಡುತ್ತದೆ. ಸರಿಯೇ. ಆದರೆ ಅದರ ಜೊತೆಗೊಂದು ರೋಷವೂ ಹುಟ್ಟಿ ಅದು ಶೋಕವನ್ನೂ ಮೀರಿ ಬೆಳೆಯುವುದು ಏಕೆ? ಈ ರೋಷಾವೇಶದಲ್ಲಿ ನಾವು ಮತ್ತಷ್ಟು ಸೈನಿಕರ ತಾಯಂದಿರನ್ನೂ ಹೆಂಡತಿ ಮಕ್ಕಳನ್ನೂ ಶೋಕಕ್ಕೆ ನೂಕುವ ಯುದ್ಧ ನಡೆಯಲೆಂದು ಬಯಸುತ್ತೇವಲ್ಲ, ಅದು ಏಕೆ? ಏಕೆಂದರೆ ನಾವು ಸೈನಿಕರೊಡನೆ ದೇಶವೆಂಬ ಭಾವುಕತೆಯ ಮೂಲಕ ಬೆಸೆದುಕೊಂಡಿರುತ್ತೇವೆ. ಸಾಮಾನ್ಯ ಪ್ರಜೆಗಳಾದ ನಮಗೆ ರಾಜತಾಂತ್ರಿಕ ಪರಿಸ್ಥಿತಿಗಳಾಗಲೀ ಮಿತಿಗಳಾಗಲೀ ತಿಳಿದಿರುವುದಿಲ್ಲ. ಅದನ್ನು ಅಧಿಕಾರ ಮತ್ತು ಜವಾಬ್ದಾರಿಯುಳ್ಳವರು ಅಗತ್ಯವಾಗಿ ನೋಡಿಕೊಳ್ಳುತ್ತಾರೆ. ನಾವು ನಮ್ಮ ರೋಷಭರಿತ ಶೋಕವನ್ನು ಸಮಚಿತ್ತದಿಂದ ವಿಶ್ಲೇಷಿಸಿ  ಸಮಾಧಾನ ತಾಳಲು ಯತ್ನಿಸಬೇಕು.

ಸಾವು ಮತ್ತು ಶೋಕದ ಕುರಿತು ಹೊರಗಿನ ವ್ಯಕ್ತಿ ಮಾತಾಡಲು ಬರುವುದಿಲ್ಲ. ಮೇಲೆ ಹೇಳಿದಂತೆ ಭಿನ್ನ ಸಂದರ್ಭಗಳಲ್ಲಿ ನಮ್ಮ ಸ್ಪಂದನೆಯ ವಿಧಾನ ಭಿನ್ನವಾಗಿರುತ್ತದೆ ಎಂದು ಗುರುತಿಸಬಹುದೇ ಹೊರತು, ಆ ಸ್ಪಂದನೆ ಹೊಮ್ಮದಂತೆ ತಡೆ ಒಡ್ಡುವ ಸಲಹೆ ನೀಡಲು ಸಾಧ್ಯವಿಲ್ಲ. ಸ್ಪಂದನೆ ನಮ್ಮ ನಮ್ಮ ಅಂತರಂಗಕ್ಕೆ ಸಂಬಂಧಿಸಿದ್ದು. ನಮ್ಮ ಅಂತರಂಗ ಕೊಳದ ನೀರಾಗಿದ್ದರೆ, ಕಲ್ಲು ಬಿದ್ದಾಗ ಅಲೆಗಳು ಕಂಪಿಸಿ ಮತ್ತೆ ತಿಳಿಯಾಗುತ್ತದೆ. ಅದು ಕನ್ನಡಿಯಾಗಿದ್ದರೆ, ಕಲ್ಲಿನ ಹೊಡೆತಕ್ಕೆ ಚೂರುಚೂರಾಗಿ ಹೋಗುತ್ತದೆ. 

ಆದ್ದರಿಂದ, ಏನೇ ಮಾಡಿದರೂ ಸಾವಿಗೆ ಪ್ರತಿಯಾಗಿ ನಮ್ಮ ಸ್ಪಂದನೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ಆದರೆ ಅದು ಅತಿರೇಕಕ್ಕೆ ಹೋಗದಂತೆ, ಸಾವನ್ನು ಸ್ವೀಕರಿಸುವಂತೆ, ಹೆಚ್ಚಿನ ನಷ್ಟವನ್ನು ತಡೆಯುವಂತೆ ಮಾಡಬಹುದು. ಮುಖ್ಯವಾಗಿ ಭಗವದ್ಗೀತೆ ಮಾಡುವುದು ಇದನ್ನೇ. ಸಾವೆಂಬ ಶಾಶ್ವತ ಸತ್ಯವನ್ನು ಅದು ನಮ್ಮ ಮುಖದ ಮುಂದೆ ಹಿಡಿಯುತ್ತದೆ. ನಮ್ಮ ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದೇ ನಮ್ಮ ಆಪ್ತೇಷ್ಟರ ಮತ್ತು ಇತರರ ಸಾವನ್ನು ಎದುರುಗೊಳ್ಳುವ, ಅದಕ್ಕೆ ನ್ಯಾಯ ಸಲ್ಲಿಸುವ ಸಮರ್ಥ ಮಾರ್ಗವೆಂದು ಮನದಟ್ಟು ಮಾಡುತ್ತದೆ.

ಆದ್ದರಿಂದ, ಈ ಸಂದರ್ಭದಲ್ಲಿ ನಮ್ಮ ಸೈನಿಕರ ದುರಂತ ಸಾವಿನ ವಿಷಾದ ಮೀರಬೇಕೆಂದರೆ ನಾವು ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಿಸುವುದೊಂದೇ ಸರಿಯಾದ ದಾರಿ.

 

Leave a Reply