ಸನ್ಯಾಸಿಗೆ ಪ್ರೇಮದ ಬಗ್ಗೆ ಹೇಗೆ ಗೊತ್ತು !? : Tea time story

ತುಂಬು ಬದುಕನ್ನು ಬಾಳಿದ ಒಬ್ಬ ವಯಸ್ಸಾದ ಸನ್ಯಾಸಿಯನ್ನು ಯುವತಿಯರ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾತ್ಮದ ಶಿಕ್ಷಕನನ್ನಾಗಿ ನೇಮಿಸಲಾಯಿತು.

ಯುವತಿಯರು ಮೇಲಿಂದ ಮೇಲೆ ಪ್ರೇಮದ ಬಗ್ಗೆ ತಮ್ಮೊಳಗೆ ಮಾತನಾಡಿಕೊಳ್ಳುವುದನ್ನು ಗಮನಸಿದ ಸನ್ಯಾಸಿ, ಒಂದು ದಿನ ಆ ಯುವತಿಯರನ್ನು ಎಚ್ಚರಿಸಿದ.
“ ಏನೇ ಅತಿಯಾದರೂ ಬದುಕಿನಲ್ಲಿ ಅದರಿಂದಾಗುವ ಅಪಾಯವನ್ನು ಮೊದಲು ತಿಳಿದುಕೊಳ್ಳಿ.
ಕಾದಾಟದಲ್ಲಿ ಅತಿಯಾದ ಕೋಪ, ಅಜಾಗರೂಕತೆಗೆ ಕೊನೆಗೆ ಸಾವಿಗೆ ಕಾರಣವಾಗುತ್ತದೆ.
ಧಾರ್ಮಿಕ ನಂಬಿಕೆಗಳ ಬಗ್ಗೆ ಅತಿ ಉತ್ಸಾಹ, ಸಂಕುಚಿತ ಸ್ವಭಾವಕ್ಕೆ, ಹಿಂಸೆಗೆ ದಾರಿಯಾಗುವುದು.
ಪ್ರೇಮದಲ್ಲಿ ಅತಿ ಉತ್ಕಟತೆ, ಮನಸ್ಸಿನಲ್ಲಿ ಪ್ರೇಮಿಯ ಬಗ್ಗೆ ಕಲ್ಪನೆಗಳನ್ನು ಹುಟ್ಟುಹಾಕುವುದು. ಮುಂದೆ ಈ ಕಲ್ಪನೆಗಳು ಕೃತಕ, ಹುಸಿ ಎಂದು ಸಿದ್ಧವಾದಾಗ ಹುಟ್ಟುವ ಸಿಟ್ಟು, ನೆಮ್ಮದಿಯನ್ನು ನಾಶ ಮಾಡುವುದು.
ಅತಿಯಾಗಿ ಪ್ರೇಮಿಸುವುದೆಂದರೆ, ಚೂರಿಯ ಮೊನೆಯಿಂದ ಜೇನಿನ ಹನಿಯನ್ನು ನೆಕ್ಕಿದಂತೆ”

“ ಗಂಡು ಹೆಣ್ಣಿನ ಪ್ರೇಮದ ಬಗ್ಗೆ ನಿನಗೆ ಹೇಗೆ ಗೊತ್ತು? ನೀನು ಸನ್ಯಾಸಿ ಅಲ್ವಾ? “
ಒಬ್ಬ ಯುವತಿ ಪ್ರಶ್ನೆ ಮಾಡಿದಳು.

“ ನಾನು ಸನ್ಯಾಸಿಯಾದ ಕಥೆಯನ್ನು ಮುಂದೆ ಯಾವಾಗಲಾದರೂ ನಿಮಗೆ ಹೇಳುತ್ತೇನೆ “
ಸನ್ಯಾಸಿ ನಗುತ್ತ ಎದ್ದು ಹೋದ.

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply