ಕಬ್ಬಿಣದ ಸರಪಳಿ ಹರೀತಲೇ ಪರಾಕ್… : ಮೈಲಾರಲಿಂಗ ಸ್ವಾಮಿಯ ಕಾರಣಿಕ ಭವಿಷ್ಯ ಏನು ಹೇಳುತ್ತಿದೆ?

ಪ್ರತಿಬಾರಿಯಂತೆ ಈ ಬಾರಿಯೂ ಮೈಲಾರಲಿಂಗ ಕಾರಣಿಕ ಕೇಳಿಬಂದಿದೆ. ‘ಕಬ್ಬಿಣದ ಸರಪಳಿ ಹರೀತಲೇ ಪರಾಕ್’ ಎಂಬ ಭವಿಷ್ಯ ಮೊಳಗಿದೆ. ಇದರ ಅರ್ಥವೇನೆಂದು ಎಲ್ಲ ವರ್ಗಗಳ ಜನರೂ ತಮಗೆ ಅನ್ವಯವಾಗುವಂತೆ ವಿಶ್ಲೇಷಣೆ ನಡೆಸುತ್ತಿದ್ದಾರೆ…

ನೆನ್ನೆ (ಫೆ.22) ಹಾವೇರಿಯ ಮೈಲಾರದಲ್ಲಿರುವ ಡೆಂಕನಮರಡಿಯಲ್ಲಿ ಮೈಲಾರಲಿಂಗೇಶ್ವರ ಕಾರಣಿಕ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ಗೊರವಯ್ಯ ಬಿಲ್ಲುಗಂಬವೇರಿ ಆಕಾಶಕ್ಕೆ ಮೊಗ ಮಾಡಿ “ಸದ್ದಲೇ….” ಅಂದಾಗ ಸುತ್ತ ನೆರೆದಿದ್ದ ಸಾವಿರಾರು ಜನ ಮೌನಕ್ಕೆ ಮೊರೆ ಹೋದರು. ಗೊರವಯ್ಯ ಹೇಳುವ ಕಾರಣಿಕ (ಭವಿಷ್ಯ)ಕ್ಕೆ ರೈತರು, ರಾಜಕಾರಣಿಗಳು, ವ್ಯಾಪಾರಿಗಳು ಹೆಚ್ಚು ಕಾತರದಿಂದ ಕಾಯುತ್ತಿದ್ದರು. ಗೊರವಯ್ಯ ರಾಮಣ್ಣ “ಕಬ್ಬಿಣದ ಸರಪಳಿ ಹರೀತಲೇ ಪರಾಕ್….” ಎಂದು ಭವಿಷ್ ನುಡಿದು ಬಿಲ್ಲಿನೊಡನೆ ಕೆಳಗೆ ಬಿದ್ದೊಡನೆ ನೆರೆದಿದ್ದ ಜನರ ಸ್ಪಂದನೆ ಮುಗಿಲು ಮುಟ್ಟಿತ್ತು.

ಇದು ಪ್ರತಿ ವರ್ಷ ಭರತ ಹುಣ್ಣಿಮೆಯ ದಿನ ನಡೆಯುವ ಮೈಲಾರಲಿಂಗ ಜಾತ್ರೆಯಲ್ಲಿ ಕಂಡು ಬರುವ ದೃಶ್ಯ. ಪ್ರತಿ ವರ್ಷವೂ ಗೊರವಯ್ಯ ಬಿಲ್ಲುಗಂಬವೇರಿ ಕಾರಣಿಕ ಹೇಳುತ್ತಾರೆ. ಕೇವಲ ಒಂದೆರಡು ವಾಕ್ಯಗಳಲ್ಲಿ ಒಗಟಿನಂತೆ ಹೇಳಲಾಗುವ ಈ ಕಾರಣಿಕವನ್ನು ಸಮಾಜದ ಎಲ್ಲ ವರ್ಗದ ಜನರೂ ತಮಗೆ ಅನ್ವಯಿಸುವಂತೆ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಮತ್ತು ಈ ವರ್ಷ ತಮ್ಮ ಭಾಗ್ಯದಲ್ಲೇನು ಬರೆದಿದೆ ಎಂದು ಅವಲೋಕಿಸುತ್ತಾರೆ. ಸಾಮುದಾಯಿಕವಾಗಿ ರೈತರು ವರ್ಷದ ಮಲೆ ಬೆಳೆಗಳ ಸುಳಿವನ್ನು ಈ ಕಾರಣಿಕದಲ್ಲಿ ಪಡೆಯುತ್ತಾರೆ. ಸರ್ಕಾರದ ಏಳುಬೀಳುಗಳ ಮುನ್ಸೂಚನೆಯನ್ನು ರಾಜಕಾರಣಿಗಳು ಈ ಕಾರಣಿಕದಿಂದ ಪಡೆದರೆ, ವ್ಯಾಪಾರಿಗಳು ಲಾಭ ನಷ್ಟಗಳ ಸುಳಿವಿಗಾಗಿ ಹುಡುಕುತ್ತಾರೆ.

ಈ ವರ್ಷದ ಕಾರಣಿಕ “ಕಬ್ಬಿಣದ ಸರಪಳಿ ಹರೀತಲೇ ಪರಾಕ್…” ಇದನ್ನು ರೈತರು ಸಾಲದ ಸಂಕೋಲೆಯಿಂದ ಮುಕ್ತಿ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ರಾಜಕೀಯದಲ್ಲಿರುವವರು ‘ದುರಾಡಳಿತದಿಂದ ಮುಕ್ತಿ’ ಎಂದೂ ದೇಶ ಜಾಗತಿಕವಾಗಿ ಎಲ್ಲ ರೀತಿಯಲ್ಲೂ ಸರ್ವಸ್ವತಂತ್ರವಾಗಲಿರುವುದರ ಸೂಚನೆ ಎಂದೂ ತಮ್ಮ ತಮ್ಮ ಪಕ್ಷಗಳ ಒಲವಿನ ಆಧಾರದ ಮೇಲೆ ವ್ಯಾಖ್ಯಾನಿಸಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ‘ಸಂಕಷ್ಟದಿಂದ ಮುಕ್ತಿ’ ಎಂದು ಇದನ್ನು ವ್ಯಾಖ್ಯಾನಿಸಿಕೊಂಡಿದ್ದಾರೆ.

ಕಳೆದ ವರ್ಷ ಆಕಾಶ ಗಿಡಕ್ಕೆ ಗಿಳಿ ಕಿತ್ತಿತಲೇ ಪರಾಕ್ ಎಂದು ಕಾರಣಿಕವಾಗಿತ್ತು. ಅದನ್ನು ರಾಜ್ಯ ರಾಜಕೀಯ ಬೆಳವಣಿಗೆಗೆ ಅನ್ವಯಿಸಿ, ಈಗಿನ ಸರ್ಕಾರ ರಚನೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗಿದೆ. ನಾವು ಇದನ್ನು ನಮಗೆ ನಾವೇ ಬಿಗಿದುಕೊಂಡ, ಕಬ್ಬಿಣದಷ್ಟೇ ಶಕ್ತಿಶಾಲಿಯಾದ ‘ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯೆಂಬ ಸರಪಳಿ ಹರಿಯುತ್ತದೆ’ ಎಂದು ಅರ್ಥೈಸಿಕೊಳ್ಳಬಹುದು.

ಪ್ರತಿಬಾರಿಯೂ ಮೈಲಾರ ಕಾರಣಿಕಗಳು ಹೀಗೆ ರಹಸ್ಯಮಯವಾಗಿಯೂ ಕಾವ್ಯಾತ್ಮಕವಾಗಿಯೂ ಇರುತ್ತವೆ. “ತುಂಬಿದ ಕೊಡ ಮೂರು ಭಾಗವಾಗಿತಲೇ ಪರಾಕ್..!”, “ಮುತ್ತಿನ ರಾಶಿ ಹೋಳಾದೀತಲೇ ಪರಾಕ್..!”,  “ಸೃಷ್ಟಿ ಸಿರಿ ನಾಶವಾದೀತಲೇ ಪರಾಕ್..!”, “ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್..!”, “ಆಕಾಶಕ್ಕೇ ಸಿಡಿಲು ಬಡದಿತಲೇ ಪರಾಕ್..!”,  “ಹುಟ್ಟಿದ ಕೂಸು ಕಷ್ಟಪಟ್ಟು, ಸುಖ ಪಟ್ಟೀತಲೇ ಪರಾಕ್..!”, “ಮಳಿ-ಬೆಳಿ ಸಂಪಾದೀತಲೇ ಪರಾಕ್..!” ಇವು ಮೈಲಾರಲಿಂಗನ ಈ ಹಿಂದಿನ ಕೆಲವು ಕಾರಣಿಕದ ನುಡಿಗಳು.

ಮೈಲಾರ ಲಿಂಗೇಶ್ವರನ ಸ್ಥಳ ಪುರಾಣ

ಹಿಂದೆ ಮಲ್ಲಾಸುರ ಮತ್ತು ಮಣಿಕಾಸುರ ಎಂಬ ರಾಕ್ಷಸ ಸಹೋದರರಿದ್ದರು. ಅವರು ಬ್ರಹ್ಮನನ್ನು ಒಲಿಸಿಕೊಂಡು,  ಮಾನವನಿಂದ ಮರಣ ಬಾರದಂತೆ ವರವನ್ನು ಪಡೆದಿದ್ದರು. ವರ ಪಡೆದು ಕೊಬ್ಬಿದ ಅವರು ಲೋಕಕಂಟಕರಾದರು. ಅವರಿಗೆ ಬೆದರಿದ ಮುನಿಗಳು ಶಿವನ ಮೊರೆ ಹೋದರು. ಆಗ ಶಿವ ಮೈಲಾರನ ಅವತಾರ ತಾಳಿ ಏಳು ಕೋಟಿ ಗೊರವರನ್ನು ಕಟ್ಟಿಕೊಂಡು ಆ ರಾಕ್ಷಸರ ವಿರುದ್ದ ಯುದ್ದಕ್ಕೆ ನಿಂತ.

ಹತ್ತು ದಿನಗಳ ಯುದ್ದದ ನಂತರ ಮೈಲಾರ (ಶಿವ) ತನ್ನ ಶಕ್ತಿಯನ್ನು ಕಳೆದುಕೊಂಡು ಯುದ್ದರಂಗದಿಂದ ಕಾಲುಕೀಳಬೇಕಾಯ್ತು. ಆಗ ಶಿವನ ಗಣಗಳಲ್ಲಿ ಒಂದಾದ ವೀರಭದ್ರನು ತನ್ನ ಕೇಶವನ್ನು ನೆಲಕ್ಕೆ ಸ್ಪರ್ಶಿಸಿದಾಗ ಪಂಚ ಯುದ್ದ ವೀರರು ಹುಟ್ಟಿಕೊಂಡರು. ಅದರಲ್ಲಿ ಒಬ್ಬ ಕಂಚವೀರ. ಈತ ಮಣಿಕಾಸುರ, ಮಲ್ಲಾಸುರರನ್ನು ಸೋಲಿಸಿ ಮೈಲಾರನಿಗೆ ತಂದೊಪ್ಪಿಸಿದ. ಆಮೇಲೆ ಮೈಲಾರ ಈ ಇಬ್ಬರೂ ರಾಕ್ಷಸರನ್ನು ಸಂಹರಿಸಿದ. ಹೀಗೆ ಸಂಹಾರ ನಡೆಸಿದ ಸ್ಥಳವೇ ಡೆಂಕನ ಮರಡಿ ಎಂದು ಪ್ರತೀತಿ.

ಅಂದಿನಿಂದ ಗೊರವರು ಮೈಲಾರ ಲಿಂಗೇಶ್ವರನಿಗೆ ನಡೆದುಕೊಳ್ಳುತ್ತಾ ಬಂದರು. ಅವರಲ್ಲಿ ಕಾರಣಿಕ ನುಡಿಯುವ ಸಂಪ್ರದಾಯ ಶುರುವಾಗಿದ್ದು ಯಾವಾಗ ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಸಮುದಾಯ ಮತ್ತು ಸ್ಥಳಪುರಾಣಗಳು ಸಾಕ್ಷಾತ್ ಶಿವನೇ ಈ ಪರಂಪರೆಗೆ ನಾಂದಿ ಹಾಡಿದ ಅನ್ನುತ್ತಾರೆ.

1 Comment

Leave a Reply