ಪ್ರಕೃತಿಯೂ ಪಂಚಭೂತಗಳೂ ಎಲ್ಲ ಜೀವಿಗಳಿಗೆ ಸಮನಾಗಿ ಹಂಚಲ್ಪಟ್ಟಿವೆ. ಯಾವುದರ ಮೇಲೂ ಯಾರಿಗೂ ಹೆಚ್ಚಿನ ಅಥವಾ ಕಡಿಮೆ ಅಧಿಕಾರವಿಲ್ಲ. ಆದ್ದರಿಂದ ಮೇಲು – ಕೀಳೆಂಬ ತರತಮ ಭಾವವನ್ನು ಕಿತ್ತೊಗೆದು ಒಗ್ಗಟ್ಟಿನಿಂದ ಬಾಳಿ ಎನ್ನುತ್ತದೆ ಅಥರ್ವ ವೇದ.

ಸಮಾನೀ ಪ್ರಪಾ ಸಹ ವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ |
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ || (ಅಥರ್ವ.೩.೩೦.೬.)
“ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ. ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ. ನೀವೆಲ್ಲರೂ ಒಂದೇ ಬಂಧನದಲ್ಲಿ ಬೆಸೆದುಕೊಂಡಿದ್ದೀರಿ (ನಿಮ್ಮೆಲ್ಲರ ಜೀವನವೂ ಅಂತಃಸಂಬಂಧ ಹೊಂದಿದೆ). ಬೇರೆಬೇರೆಯಾಗಿ ಪರಿಧಿಯನ್ನು ಸ್ಪರ್ಶಿಸುವ ಚಕ್ರದ ಕಡ್ಡಿಗಳು ಚಕ್ರದ ಹೊಕ್ಕುಳನ್ನು (ಕೇಂದ್ರವನ್ನು) ಒಟ್ಟಾಗಿ ಸೇರುವಂತೆ, ನೀವೆಲ್ಲರೂ ಒಗ್ಗೂಡಿ ಅಗ್ನಿಯನ್ನು (ಭಗವಂತನನ್ನು) ಆರಾಧಿಸಿ” ಎನ್ನುತ್ತದೆ ಅಥರ್ವ ವೇದ.
ಭಗವಂತನ ಆರಾಧನೆ ಎಂದರೆ ದೇವರ ಮೂರ್ತಿಯನ್ನಿಟ್ಟು ಪೂಜಿಸುವುದು, ದೇಗುಲಗಳಲ್ಲಿ ಉತ್ಸವವನ್ನು ಆಚರಿಸುವುದು, ಹೋಮಹವನಾದಿಗಳನ್ನು ನಡೆಸುವುದು ಎಂದಷ್ಟೇ ಅರ್ಥವಲ್ಲ. ನಾವು ಪಡೆದ ಮಾನುಷ ಶರೀರವನ್ನು ಸಮರ್ಥವಾಗಿ ಬಳಸಿಕೊಂಡು ಸನ್ಮಾರ್ಗದಲ್ಲಿ ಸಾಗುವುದು ಕೂಡಾ ಭಗವಂತನ ಆರಾಧನೆಯೇ. ಏಕೆಂದರೆ ಭಗವಂತ ಪ್ರತಿಯೊಂದು ಜೀವದಲ್ಲೂ ನೆಲೆಸಿದ್ದಾನೆ. ನಾವು ನಮ್ಮ ಅಂತರಂಗದಲ್ಲಿರುವ ಭಗವಂತನಿಗೆ ಅಪಚಾರವಾಗದಂತೆ ನಡೆದುಕೊಳ್ಳುವುದಕ್ಕಿಂತ ದೊಡ್ಡ ಪೂಜೆ ಇದೆಯೇ?
ಭಗವಂತನಿಗೆ ಅಪಚಾರವಾಗದಂತೆ ನಡೆದುಕೊಳ್ಳುವುದು ಎಂದರೇನು? ಈ ಸೃಷ್ಟಿಯನ್ನು ಗೌರವಿಸುವುದು. ಅದು ಹೇಗೆ? ಈ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಅರಿತು, ಯಾವ ಜೀವಿಗೂ, ಯಾವ ವ್ಯಕ್ತಿಗೂ ನೋವಾಗದಂತೆ, ಅವಮಾನವಾಗದಂತೆ ನಡೆದುಕೊಳ್ಳುವುದು. ಸಹಮಾನವರ ಘನತೆಯನ್ನು ಎತ್ತಿಹಿಡಿಯುವುದು. ಜಾತಿ, ವರ್ಣ ಅಥವಾ ವರ್ಗಗಳ ಹೆಸರಲ್ಲಿ ತಾರತಮ್ಯ ಮಾಡದಂತೆ ನಾವೆಲ್ಲರೂ ಒಂದೇ ಸೂತ್ರಕ್ಕೆ ಬೆಸೆದುಕೊಂಡವರು ಎಂಬ ಸತ್ಯವನ್ನು ತ್ರಿಕರಣ ಪೂರ್ವಕ ಸ್ವೀಕರಿಸಿ ಜೀವಿಸುವುದು.
“ಅನ್ನ, ಗಾಳಿ, ನೀರು, ನೆಲಗಳ ಹಂಚಿಕೆಯಲ್ಲಿ ಸಮಾನತೆಯ ಆಚರಣೆಯೇ ಭಗವಂತನ ಸರ್ವಶ್ರೇಷ್ಠ ಆರಾಧನೆ” – ಇದು ಮೇಲಿನ ಅಥರ್ವ ವೇದ ಶ್ಲೋಕದ ಸರಳ ವಿವರಣೆ.
Atyanta sarala susamskruta sakala jeevigala sarvatra shreshthavaada poojaa vidhaana. Thank u vth morning wishes🌝🌝