Facebookನಲ್ಲಿ ಯಾರಾದರೂ tag ಮಾಡಿದರೆ ನಮಗೆ ಕೋಪವೇಕೆ ಬರುತ್ತದೆ?

ನಮಗೆ ಸಣ್ಣ ವಿಷಯಗಳಲ್ಲಿ ಆಸಕ್ತಿ ಕಡಿಮೆ. ಹಾಗೆ ನೋಟಿಫಿಕೇಶನ್ ಅನ್ನು ಟರ್ನ್ ಆಫ್ ಮಾಡುವುದು ನಮ್ಮ ಅಹಂಕಾರವನ್ನು ತೃಪ್ತಿ ಪಡಿಸುವುದಿಲ್ಲ. ಅಂತಹ ಆಯ್ಕೆಗಳಿದ್ದೂ ಅವನ್ನು ಬಳಸದೆ ಎಲ್ಲರಿಗೂ ಕಾಣಿಸುವಂತೆ ಬೈಯುವುದೇ ನಮಗೆ ಸುಖ! ~ ಅಲಾವಿಕಾ

ಫೇಸ್ ಬುಕ್’ನಲ್ಲಿ ನಾವು ಸಾಮಾನ್ಯವಾಗಿ ಇದನ್ನು ನೋಡಿರುತ್ತೇವೆ. ಕೆಲವರು ಮೇಲಿಂದ ಮೇಲೆ “ಯಾರೂ ನನ್ನನ್ನು ಟ್ಯಾಗ್ ಮಾಡಬೇಡಿ” ಎಂದೋ “ದಯವಿಟ್ಟು ಟ್ಯಾಗ್ ಮಾಡಬೇಡಿ” ಎಂದೋ; ತೀರಾ ರೊಚ್ಚಿಗೆದ್ದು ಕೆಲವರು “ಇನ್ನೊಂದ್ಸಲ ಟ್ಯಾಗ್ ಮಾಡಿದರೆ ಹುಡುಕಿಕೊಂಡು ಬಂದು ಹೊಡಿತೀನಿ” ಎಂದೋ ಪೋಸ್ಟ್ ಹಾಕಿರುತ್ತಾರೆ. ಅವರ ಪೋಸ್ಟ್’ನಲ್ಲಿ ಟ್ಯಾಗ್ ಮಾಡುವುದರಿಂದ ಅವರಿಗಾಗುವ ಕಿರಿಕಿರಿ ಎದ್ದು ಕಾಣುತ್ತದೆ. ಟ್ಯಾಗ್ ಮಾಡಿಸ್ಕೊಳ್ಳುವುದು ಅಷ್ಟೊಂದು ಕಿರಕಿರಿ ಉಂಟುಮಾಡುತ್ತದೆಯೇ?

ನಮ್ಮ ಸಹಜ ಜೀವನದಲ್ಲೂ ಹೀಗಾಗುತ್ತದೆ. ಯಾರೋ ಯಾವುದೋ ಸುದ್ದಿಯಲ್ಲಿ, ಸಂದರ್ಭದಲ್ಲಿ ನಮ್ಮನ್ನು ಉಲ್ಲೇಖಿಸುತ್ತಾರೆ. ಅಥವಾ ಒಳಗೊಳಿಸಿಕೊಳ್ಳುತ್ತಾರೆ. ನಮಗೆ ಆ ಸಂಗತಿಯಲ್ಲಿ ಚೂರೂ ಆಸಕ್ತಿ ಇರುವುದಿಲ್ಲ. ಅಥವಾ ಆಸಕ್ತಿ ಇದ್ದರೂ ನಮ್ಮ ಖಾಸಗಿತನ ಮತ್ತು ಆಯ್ಕೆ ನಮಗೆ ಮುಖ್ಯವಾಗುತ್ತದೆ. “ಯಾರದೋ ಇಷ್ಟದ ವಿಷಯಗಳಿಗೆಲ್ಲ ನಮ್ಮನ್ನು ಯಾಕೆ ತಗುಲಿಹಾಕಬೇಕು?” ಎಂದು ಅಸಹನೆ ತೋರುತ್ತೇವೆ. ರೇಗಿಬೀಳುತ್ತೇವೆ. ಇತ್ತೀಚೆಗಂತೂ ಫೇಸ್ ಬುಕ್ ಗೆಳೆಯ ಮೇಲಿಂದ ಮೇಲೆ ಟ್ಯಾಗ್ ಮಾಡ್ತಿದ್ದನೆಂದು ಸಿಟ್ಟಿಗೆದ್ದ ತರುಣನೊಬ್ಬ ಆತನಿಗೆ ಚಾಕು ಇರಿದು ಕೊಂದೇಹಾಕಿದ ಘಟನೆಯನ್ನು ನಾವು ಕೇಳಿದ್ದೇವೆ. ನಮ್ಮ ಅಸಹನೆಗಳು ಆ ವಿಕೃತಿಯ ಮೊಳೆಯದ ಬೀಜಗಳಷ್ಟೆ. ಆದ್ದರಿಂದ ಎಚ್ಚರಿಕೆ ಅತ್ಯಗತ್ಯ. 

ಹೀಗೆ ಕಿರಿಕಿರಿಗೆ ಒಳಗಾಗುವ, ರೇಗುವ ಮೊದಲು ಒಂದು ನಿಮಿಷ ಯೋಚಿಸಿ. ಹೀಗೆ ಮಾಡುವುದರಿಂದ ನಷ್ಟ ಯಾರಿಗೆ? ಈ ಪ್ರಕ್ರಿಯೆಯಲ್ಲಿ ನಮ್ಮ ಸಮಯವನ್ನೂ ಮನಶ್ಶಾಂತಿಯನ್ನೂ ಕಳೆದುಕೊಳ್ಳುವವರು ನಾವೇ ಆಗಿದ್ದೇವೆ. ಹಾಗೆ ಕಳೆದುಕೊಳ್ಳದಂತೆ ನಾವು ಈ ‘ತಗುಲಿಸಿಕೊಳ್ಳುವ’ ರಗಳೆಯಿಂದ ಹೊರಗೆ ಬರಲು ಸಾಧ್ಯವಿಲ್ಲವೆ?

ಖಂಡಿತಾ ಇದೆ. ಫೇಸ್ ಬುಕ್’ನಲ್ಲಿ ಟ್ಯಾಗ್ ಆದಾಗ ಅದರ ನೋಟಿಫಿಕೇಶನ್ ಮೇಲೆ ಪ್ರೆಸ್ ಮಾಡಿ ‘ರಿಮೂವ್ ಟ್ಯಾಗ್’ ಮಾಡಿದರಾಯ್ತು. ಇದು ಹತ್ತು ಸೆಕೆಂಡ್ ಕೂಡಾ ಬೇಕಾಗದಷ್ಟು ಸಣ್ಣ ಕೆಲಸ. ಅಥವಾ ಐದೇ ಸೆಕೆಂಡ್’ಗಳಲ್ಲಿ ಮುಗಿಯುವ ಇನ್ನೊಂದು ಕೆಲಸವಿದೆ. ಅದು, ನೋಟಿಫಿಕೇಶನ್ ಮೇಲೆ ಪ್ರೆಸ್ ಮಾಡಿ ಟ್ಯಾಗ್ ಆದ ಪೋಸ್ಟ್’ನ ಯಾವ ವಿದ್ಯಮಾನಗಳೂ ಓದಲು ಸಿಗದಂತೆ ‘ಟರ್ನ್ ಆಫ್’ ಮಾಡುವುದು. ಹೀಗೆ ಮಾಡುವುದರಿಂದ ನಮ್ಮ ಹೆಸರು ಟ್ಯಾಗಿಗೆ ಒಳಗಾಗಿದ್ದರೂ ಅಲ್ಲೇನು ನಡೆದರೂ ವಿಷಯ ನಮ್ಮವರೆಗೆ ಬರುವುದಿಲ್ಲ ಮತ್ತು ನಮ್ಮನ್ನು ಬಾಧಿಸುವುದಿಲ್ಲ.

ಇದು ಬಹಳ ಸಣ್ಣ ವಿಷಯ. ಸ್ವಲ್ಪವೇ ಸಮಯವನ್ನು ಬೇಡುವ ವಿಷಯ. ನಾವು ಕೋಪ ಮಾಡಿಕೊಂಡರೆ, ಕಿರಿಕಿರಿಗೆ ಒಳಗಾದರೆ ಐದರಿಂದ ಹತ್ತು ನಿಮಿಷಗಳವರೆಗೆ ಚಿರಿಗುಡುತ್ತಲೇ ಇರುತ್ತೇವೆ. ಅದರ ಬದಲು ಕೆಲವೇ ಸೆಕೆಂಡ್’ಗಳನ್ನು ವಿನಿಯೋಗಿಸಿ ಟ್ಯಾಗ್ ಅನ್ನು ನಿಭಾಯಿಸಬಹುದಾಗಿದೆ. ಆದರೆ ನಮಗೆ ಸಣ್ಣ ವಿಷಯಗಳಲ್ಲಿ ಆಸಕ್ತಿ ಕಡಿಮೆ. ಹಾಗೆ ನೋಟಿಫಿಕೇಶನ್ ಅನ್ನು ಟರ್ನ್ ಆಫ್ ಮಾಡುವುದು ನಮ್ಮ ಅಹಂಕಾರವನ್ನು ತೃಪ್ತಿ ಪಡಿಸುವುದಿಲ್ಲ. ಅಂತಹ ಆಯ್ಕೆಗಳಿದ್ದೂ ಅವನ್ನು ಬಳಸದೆ ಎಲ್ಲರಿಗೂ ಕಾಣಿಸುವಂತೆ ಬೈಯುವುದೇ ನಮಗೆ ಸುಖ!

ಬದುಕಿನಲ್ಲೂ ಹಾಗೇನೇ. ಸುಖಾಸುಮ್ಮನೆ ಏನೇನೋ ವಿಷಯಗಳನ್ನು ತಗಲಾಕುವವರು ಇದ್ದರೆ, ನಿಮ್ಮ ಪಾಡಿಗೆ ಆ ವಿಷಯಗಳು ತಲುಪದಂತೆ ಗಮನ ತುಂಡರಿಸಿಕೊಳ್ಳಿ. ಅಷ್ಟು ಸಾಕು. ಒತ್ತಾಯಪೂರ್ವಕವಾಗಿ ಯಾವುದಾದರೂ ಇವೆಂಟ್’ಗೆ ನಿಮ್ಮನ್ನು ತಗುಲಿಸದರೆ ನೇರವಾಗಿ “ನನಗೆ ಆಸಕ್ತಿ ಇಲ್ಲ” ಎಂದು ಹೇಳಿಬಿಡಿ. ಅಲ್ಲಿಗೆ ಇಡೀ ಪ್ರಕರಣವೇ ಮುಕ್ತಾಯವಾಗುತ್ತದೆ. ಆದರೆ ಕೆಲವರು ಹಾಗೆ ಮಾಡುವುದಿಲ್ಲ. ನೇರವಾಗಿ ಹೇಳುವುದು, ಮತ್ತೊಮ್ಮೆ, ಅಹಂಕಾರಕ್ಕೆ ಅಡ್ಡಿ. ಆದ್ದರಿಂದಲೇ ಹೊಸ ನೆವಗಳನ್ನು ಸೃಷ್ಟಿಸಲು ಹೆಣಗಾಡುತ್ತಾರೆ. ಬಹುತೇಕವಾಗಿ ಸುಮ್ಮನಿದ್ದು, ಇತರರ ಎದುರಲ್ಲಿ ತಮ್ಮನ್ನು ತಗುಲಿಸಿದ ವ್ಯಕ್ತಿಯನ್ನು ಮನಸಾರೆ ಬೈಯುತ್ತಾರೆ.

ಹೀಗೆ ಮಾಡುವುದರಿಂದ ಏನಾಯಿತು? ಅವರದೇ ಸಮಯ ಹೋಯಿತು. ಎನರ್ಜಿ ಬಸಿಯಿತು. ಹಾಗೂ ಅದೇ ವುಷಯವನ್ನು ಪುನರಾವರ್ತಿತವಾಗಿ ಮಾತಾಡಿ ಮಾತಾಡಿ ನಕಾರಾತ್ಮಕತೆ ಹುತ್ತಗಟ್ಟಿತು. ಅಲ್ಲವೆ?

ಆದ್ದರಿಂದ, ಯಾವುದು ಸರಳವೋ, ಯಾವುದು ಸುಲಭವೋ ಅದನ್ನು ಮಾಡಿ. ಟ್ಯಾಗ್ ರಿಮೂವ್ ಮಾಡುವುದು ಸುಲಭ. ನೋಟಿಫಿಕೇಶನ್ ಟರ್ನ್ ಆಫ್ ಮಾಡುವುದು ಸುಲಭ. ಅನ್’ಫಾಲೋ ಮಾಡುವುದು ಸುಲಭ. ಹಾಗೆಯೇ “ಇಲ್ಲ” ಮತ್ತು “ಬೇಡ” ಅನ್ನುವುದು ಕೂಡಾ. ಆದ್ದರಿಂದ, ಪ್ರಯತ್ನ ಮಾಡಿ ನೋಡಿ. ಯಾವುದು ಸುಲಭವೋ ವಾಸ್ತವದಲ್ಲಿ ಕಡುಕಷ್ಟವೆಂದರೆ ಅದೇನೇ. ಆದ್ದರಿಂದ ಇದನ್ನು ಸವಾಲಾಗಿ ಸ್ವೀಕರಿಸಿ, ಟ್ಯಾಗ್ ಮಾಡಿದಾಗ ಕೋಪ ಮಾಡಿಕೊಳ್ಳದೆ ಇರಲು ಪ್ರಯತ್ನಿಸಿ.

ಇಷ್ಟಕ್ಕೂ ಟ್ಯಾಗಿಂಗ್’ಗೆ ಒಳಗಾಗುವುದು ಒಂದು ವಿಷಯವೇ ಅಲ್ಲ. ನಿಜ ಜೀವನದಲ್ಲಾದರೂ ಅಷ್ಟೇ, ಸಾಮಾಜಿಕ ಜಾಲತಾಣದ ಭ್ರಮಾಜಗತ್ತಿನಲ್ಲಾದರೂ ಅಷ್ಟೇ. ಹೆಚ್ಚೆಂದರೆ ಅವರು ನಮ್ಮ ಹೆಸರನ್ನು, ನಮ್ಮ ಚಿತ್ರವನ್ನು ಟ್ಯಾಗ್ ಮಾಡಬಹುದು. ನಾವಾಗಿಯೇ ಅವಕಾಶ ಕೊಡದ ಹೊರತು ಅವರು ‘ನಮ್ಮನ್ನು’ ಎಲ್ಲಿಯೂ ತಗುಲಿಸಲು ಸಾಧ್ಯವೇ ಇಲ್ಲ. ನಾವು ಹೊರತಾಗಿ ಉಳಿಯಲು ಸಾಧ್ಯವಾಗಿಬಿಟ್ಟರೆ, ಯಾರು – ಹೇಗೆ ತಾನೆ ನಮ್ಮನ್ನು ಒಳಗೊಳಿಸಿಕೊಳ್ಳಬಲ್ಲರು!? ಅದು ಸಾಧ್ಯವೇ ಇಲ್ಲದ ಮಾತು! ಆದ್ದರಿಂದ ಈ ನಿಟ್ಟಿನಲ್ಲೂ ಯೋಚಿಸಿ, ಸಮಾಧಾನದಿಂದ ಇರಲು ಯತ್ನಿಸಿ. ಟ್ಯಾಗ್ ತಗುಲಿಸಿಕೊಳ್ಳದೆ ಇರುವುದು ಮತ್ತು ಅದರ ನೋಟಿಫಿಕೇಶನ್’ಗಳಿಂದ ತಪ್ಪಿಸಿಕೊಳ್ಳುವುದು ಒಂದು ಬಗೆಯಾದರೆ, ಟ್ಯಾಗ್’ಗೆ ಒಳಗಾಗಿಯೂ ಒಳಗಾಗದಂತೆ ಇರುವುದು ಮತ್ತೊಂದು ಬಗೆ. ಈ ಎರಡನೇ ಬಗೆ ಸಾಕಷ್ಟು ಸಹನೆ – ಸಮಚಿತ್ತವನ್ನು, ನಿರ್ಲಿಪ್ತಿಯನ್ನು ಬೇಡುತ್ತದೆ. ಸಹನೆ, ನಿರ್ಲಿಪ್ತಿಗಳು ಬದುಕಿನ ಪ್ರತಿ ಹಂತದಲ್ಲೂ ಅಗತ್ಯಿವಿರುವ ಸಂಗತಿಗಳು. ನಿಮಗೆ ತಗುಲಿಸಲಾಗುವ ಟ್ಯಾಗ್’ಗಳು ನೀವು ಈ ಗುಣಗಳನ್ನು ಬೆಳೆಸಿಕೊಳ್ಳುವ ಪ್ರಚೋದನೆ ನೀಡಿದರೆ, ಅದರಿಂದ ನಿಮಗೆ ಉಪಕಾರವೇ ಆದಂತೆ! ಅಲ್ಲವೆ?

ಇನ್ನು, ಸಿಕ್ಕವರಿಗೆಲ್ಲ ಟ್ಯಾಗ್ ಮಾಡುವ ಜನರಿಗಾಗಿ ಬೇರೆಯೇ ಮಾತುಗಳನ್ನು ಹೇಳಲಿಕ್ಕಿದೆ. ಅದು ಮುಂದಿನ ಅಂಕಣದಲ್ಲಿ…..

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.