ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಮ್ಮನೇ ನಮ್ಮ ಪಾಡಿಗೆ ನಾವು ಯಾವ ಅಬ್ಬರವೂ ಇಲ್ಲದೆ, ಯಾರನ್ನೂ ನಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡದೇ ಮುನ್ನಡೆಸಿಕೊಂಡು ಹೋಗುವುದು ತಾವೋ ಸ್ವಭಾವ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ಅದೃಶ್ಯತೆ ಒಂದು ಅದ್ಭುತ ಅವಶ್ಯಕತೆ
ಸಂಘರ್ಷ, ಕೈ ಎಳೆದು ಕರೆದಾಗ
ಬಂಗಾರದ ಖಡ್ಗವನ್ನು ಹಿರಿದು ನಿಲ್ಲು.
~
ಹಲವಾರು ವರ್ಷಗಳ ಹಿಂದೆ ಒಬ್ಬ ವೃದ್ಧ, ರಸ್ತೆ ಬದಿಯಲ್ಲಿ ಅಂಗಡಿ ಹಾಕಿಕೊಂಡು ಬಡ ಬಗ್ಗರಿಗೆ ಸಂಧಿವಾತದ ಔಷಧಿ ಕೊಡುತ್ತಿದ್ದ. ಒಂದು ದಿನ ಆ ರಸ್ತೆಯಲ್ಲಿ ಓಡಾಡಿಕೊಂಡಿದ್ದ ಒಬ್ಬ ಪುಡಿ ರೌಡಿ ಅಂಗಡಿಗೆ ಬಂದು ವೃದ್ಧ ವೈದ್ಯನನ್ನು ಹಣಕ್ಕಾಗಿ ಪೀಡಿಸತೊಡಗಿದ. ರೌಡಿಯೊಡನೆಯ ಸಂಘರ್ಷ ತಪ್ಪಿಸಿಕೊಳ್ಳಲು ಆ ವೃದ್ಧ ತನ್ನಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡಿ ನೋಡಿದ. ವೃದ್ಧನ ಈ ಪ್ರಯತ್ನಗಳನ್ನು ಆ ರೌಡಿ ಹೇಡಿತನ ಎಂದುಕೊಂಡು ಅವನನ್ನು ಮತ್ತಷ್ಟು ತೀವ್ರವಾಗಿ ಕಾಡಲು ಶುರು ಮಾಡಿದ. ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿದಾಗ ಆ ವೃದ್ಧ ತನ್ನ ಬೆರಳುಗಳಿಂದ ರೌಡಿಯ ಗಂಟಲು ಹಿಚುಕಿ ನಿಶ್ಚೇತಗೊಳಿಸಿಬಿಟ್ಟ. ಆಶ್ಚರ್ಯವೆಂದರೆ ಮರುಕ್ಷಣದಿಂದಲೇ ಆ ವೃದ್ಧ ಯಾರಿಗೂ ಕಾಣಿಸಿಕೊಳ್ಳಬಾರದೆಂದು ಊರು ಬಿಟ್ಟು ಕಾಣೆಯಾಗಿಬಿಟ್ಟ. ಆತ ತನ್ನ ಶ್ರೇಷ್ಠತೆಯನ್ನು ಸಾಬೀತು ಮಾಡಲು ಮುಂದಾಗಿದ್ದು ಬೇರೆ ಯಾವ ಅವಕಾಶಗಳೂ ಕಾಣದಿದ್ದಾಗ ಮತ್ತು ಹೀಗಾದ ಮೇಲೆ ಆತ ಮಾಯವಾಗಲೇ ಬೇಕಿತ್ತು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಮ್ಮನೇ ನಮ್ಮ ಪಾಡಿಗೆ ನಾವು ಯಾವ ಅಬ್ಬರವೂ ಇಲ್ಲದೆ, ಯಾರನ್ನೂ ನಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡದೇ ಮುನ್ನಡೆಸಿಕೊಂಡು ಹೋಗುವುದು ತಾವೋ ಸ್ವಭಾವ. ಹೀಗೆ ಮಾಡದೇ ಹೋದಾಗ ನಾವು ಅನಾವಶ್ಯವಾಗಿ ಅನ್ಯರ ಉದ್ವೇಗದ ಪ್ರತಿಕ್ರಿಯೆಗೆ ಬಲಿಯಾಗುತ್ತೇವೆ. ತಾವೋ ಪಾಲಿಸುವವರು ಯಾರ ಹೊಟ್ಟೆಕಿಚ್ಚಿಗೂ, ತಿರಸ್ಕಾರಕ್ಕೂ ಕಾರಣರಾಗದೆ ತಮಗೆ ಬೇಕಾದುದ್ದನ್ನು ಸಾಧಿಸುತ್ತಾರೆ. ಅವರ ಸಾಧನೆ ಅಂತರಂಗದ ಅಭಿವ್ಯಕ್ತಿಯ ಪೂರ್ತಿಗೆ ಮಾತ್ರ.
ಆದರೆ ಒಮ್ಮಿಲ್ಲ ಒಮ್ಮೆ ಈ ಜಗತ್ತಿನಲ್ಲಿ ನೀವು ನಿಮ್ಮನ್ನು ಸಾಬೀತು ಮಾಡಿಕೊಳ್ಳುವ ಸವಾಲು ಎದುರಾಗುತ್ತದೆ. ಹೀಗಾದಾಗ ಯಾವ ಅಧ್ಯಾತ್ಮಕ್ಕೂ ಜೋತು ಬೀಳದೆ ನಿಮ್ಮ ಸಮಸ್ತ ಕೌಶಲ್ಯವನ್ನು ಉಪಯೋಗ ಮಾಡಿ ಅಪಾರ ಅಂತಃಕರಣ ಮತ್ತು ಗಂಭೀರತೆಯೊಂದಿಗೆ ಎದುರಾದ ಕೆಲಸವನ್ನು ಪೂರ್ಣ ಮಾಡಿ ಅನಾಮಿಕರಾಗಿಬಿಡಬೇಕು.
ಶಾಂತಿಗೆ ಕಂಟಕ ಎದುರಾದಾಗ
ಯಾರು ತಾನೆ ಸುಮ್ಮನಿರಲು ಸಾಧ್ಯ?
ವೈರಿಗಳೇನು ಸೈತಾನರೆ?
ಅವರ ಸ್ವಂತಕ್ಕೆ ಘಾಸಿ ಮಾಡುವಲ್ಲಿ
ಸಂತನಿಗೆ ಆಸಕ್ತಿ ಇಲ್ಲ,
ಕೊಂದು ಗೆಲ್ಲುವ ಸಂಭ್ರಮದಲ್ಲಿ
ಅವನಿಗೆ ಪಾಲು ಬೇಕಿಲ್ಲ.
ಸಂತ, ಅತೀ ಗಂಭೀರನಾಗಿ
ಅಪಾರ ಸಂಕಟ ಮತ್ತು ಮಮತೆಯೊಂದಿಗೆ
ಯುದ್ಧರಂಗಕ್ಕೆ ಕಾಲಿಡುತ್ತಾನೆ,
ಮಗನ ಅಂತ್ಯಕ್ರೀಯೆಗಾಗಿ, ಸ್ಮಶಾನಕ್ಕೆ ಕಾಲಿಟ್ಟ
ಹಿರಿಯಜ್ಜನಂತೆ.
ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/03/05/tao-31/