ಭಗವಂತನೇನು ಬಿಕರಿಯ ವಸ್ತುವೇ!? : ಓಶೋ

oshoಓಶೋ ರಜನೀಶ್ ಹೇಳುತ್ತಾರೆ, “ಎಲ್ಲಿಯವರೆಗೆ ನಿನಗೆ ಯೋಗ್ಯತೆ ಇದೆಯೆಂದು ಭಾವಿಸಿರುವೆಯೋ ಅಲ್ಲಿಯವರೆಗೂ ನೀನು ಅಯೋಗ್ಯ. ನಿನಗೆ ಅಡಚಣೆ ತಪ್ಪಿದ್ದಲ್ಲ” ಎಂದು. 

ಗವಂತನಿಗೆ ತನ್ನ ಸೃಷ್ಟಿಯ ಪ್ರತಿ ಜೀವಿಯ ಮೇಲೂ ಪ್ರೀತಿ ಇರುತ್ತದೆ ಎನ್ನುವುದೇನೋ ನಿಜವೇ. ಆದರೆ ಆತನನ್ನು `ಹೊಂದಲು’, ಆತನ ಪ್ರೀತಿಯನ್ನು `ಅರಿತುಕೊಳ್ಳಲು’ ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ನಿರ್ದಿಷ್ಟ ಅರ್ಹತೆ ಇರಬೇಕಾಗುತ್ತದೆ. ಇದು ಹೇಗೆಂದರೆ, ದೂರದಲ್ಲಿ ಒಂದು ಸದ್ದಾಗುತ್ತದೆ. ಆ ಸದ್ದು ಎಲ್ಲರಿಗೂ ಕೇಳಿಸುವುದಿಲ್ಲ. ಅದನ್ನು ಕೇಳಿಸಿಕೊಳ್ಳಲು ಸೂಕ್ಷ್ಮ ಪ್ರಜ್ಞೆ ಹಾಗೂ ಚುರುಕಿನ ಕಿವಿಗಳು ಇರಬೇಕಾಗುತ್ತದೆ.
ಭಗವಂತನ ಸಂಗತಿಯಲ್ಲೂ ಹಾಗೆಯೇ. ಭಗವಂತ ಇರುತ್ತಾನೆ. ಆತನನ್ನು ಅರಿಯಲು ಸೂಕ್ಷ್ಮ ಪ್ರಜ್ಞೆ ಹಾಗೂ ಗ್ರಹಿಕೆಯ ಸಾಮಥ್ರ್ಯ ಇರುವವರಿಗೆ ಮಾತ್ರ ಸಾಧ್ಯವಾಗುತ್ತದೆ. ಭಗವಂತನ ಅರಿವಿನ ವಿಷಯದಲ್ಲಿ ಎಲ್ಲಕ್ಕಿಂತ ಮೊದಲು ಇರಬೇಕಾದುದು ವಿನಯವಂತಿಕೆ.

ಓಶೋ ರಜನೀಶ್ ಹೇಳುತ್ತಾರೆ, “ಎಲ್ಲಿಯವರೆಗೆ ನಿನಗೆ ಯೋಗ್ಯತೆ ಇದೆಯೆಂದು ಭಾವಿಸಿರುವೆಯೋ ಅಲ್ಲಿಯವರೆಗೂ ನೀನು ಅಯೋಗ್ಯ. ನಿನಗೆ ಅಡಚಣೆ ತಪ್ಪಿದ್ದಲ್ಲ. ಅಹಂಕಾರ ತಪ್ಪಿದ್ದಲ್ಲ. ಯೋಗ್ಯತೆ ಎಂದರೆ ಅಹಂಕಾರ – ಅಹಂಭಾವ. ನೀನು ನಿಂತಿರುವುದು ಪರಮಾತ್ಮನ ಮಂದಿರ. ಇನ್ಯಾವುದೋ ಆಫೀಸಿನ ಅಥವಾ ಅಂಗಡಿಯ ಮುಂದಲ್ಲ ಎನ್ನುವುದು ನೆನಪಿರಲಿ. ಭಗವಂತನನ್ನು ಕಾಣಲು ಬೇಕಾಗಿರುವುದು ನಿರಹಂಕಾರ” ಎಂದು.

`ನನಗೆ ಭಗವಂತನನ್ನು ಕಾಣುವ ಯೋಗ್ಯತೆ ಇಲ್ಲ’ ಎಂದು ಯೋಚಿಸುವಾಗ ಅಲ್ಲಿ ನಿರಾಶಾ ಭಾವನೆ ಇರಬಾರದು. ನನಗೆ ಆ ಯೋಗ್ಯತೆ ಇಲ್ಲ, ಆದರೆ ದಕ್ಕಿಸಿಕೊಳ್ಳುವ ಬಯಕೆ ಇದೆ ಎನ್ನುವ ಆಶಾವಾದ ಹಾಗೂ ವಿನಮ್ರ ಪ್ರಯತ್ನ ಅಲ್ಲಿರಬೇಕು. ಆದರೆ ನಾವು ಅದೆಷ್ಟು ಭ್ರಾಂತರಾಗಿದ್ದೇವೆ ಎಂದರೆ, ನಮಗೆ ನಮ್ಮ ಅಯೋಗ್ಯತೆಯೂ ಯೋಗ್ಯತೆಯಾಗಿಯೇ ಕಾಣುವುದು. `ನಾನು ಅಯೋಗ್ಯ, ಆದ್ದರಿಂದ ನನಗೆ ಭಗವಂತ ದೊರೆಯಲಿಲ್ಲ’ ಎಂದುಕೊಳ್ಳುವಿರಾದರೆ ನಿಮಗೆ ನಿಮ್ಮನ್ನು ಯೋಗ್ಯರನ್ನಾಗಿಸಿಕೊಳ್ಳುವ ತುಡಿತವಿದೆ ಎಂದರ್ಥ. ಒಂದು ವೇಳೆ ಭಗವಂತ ದೊರೆಯದಿದ್ದರೆ ಸಿಗಲೇಬೇಕೆಂಬ ನಿಬಂಧನೆಯೇನಿಲ್ಲ. ಅಕಸ್ಮಾತ್ ದೊರೆತರೆ ನನ್ನಂತಹ ಅಲ್ಪನಿಗೂ ದೊರೆತುಬಿಟ್ಟನಲ್ಲ! ಎನ್ನುವ ಧನ್ಯತೆ ನಿನ್ನಲ್ಲಿ ಉದಿಸುವುದು ಎನ್ನುತ್ತಾರೆ ಓಶೋ.

ನಮ್ಮಲ್ಲಿ ಕೆಲವರು ಗೊಣಗಾಡುವುದಿದೆ. `ಇಷ್ಟೆಲ್ಲ ಜಪ ತಪಗಳನ್ನು ಮಾಡಿದರೂ ಭಗವಂತ ದೊರಕುತ್ತಿಲ್ಲ. ಅದೆಷ್ಟು ವ್ರತ ಮಾಡಿದೆ, ಪೂಜೆ ಮಾಡಿದೆ, ಕರ್ಪೂರ ಉರಿಸಿದೆ, ಆರತಿ ಬೆಳಗಿದೆ…. ಏನು ಮಾಡಿದರೂ ಭಗವಂತ ನನಗೆ ಒಲಿಯಲೇ ಇಲ್ಲ!’ ಎಂದು ಆಕ್ಷೇಪ ತೋರುವುದಿದೆ. ಇಷ್ಟೆಲ್ಲ ಆಮಿಷ ಒಡ್ಡಿ ನನಗೊಲಿಯಬೇಕೆಂದು ತಾಕೀತು ಮಾಡಲು ಭಗವಂತನೇನು ಬಿಕರಿಯ ವಸ್ತುವೇ? ನಾನು ಎಷ್ಟೆಲ್ಲ ಮಾಡಿದರೂ ಭಗವಂತ ಗೋಚರಿಸಲಿಲ್ಲ ಎನ್ನುವ ಹೇಳಿಕೆಯಲ್ಲೇ ನಮ್ಮ ಅಹಂಕಾರ ಎದ್ದು ತೋರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  

1 Comment

Leave a Reply