ವೇದಕಾಲೀನ ಚಿತ್ರಣ ಬದಲಾಗಿ, ಹೆಣ್ಣುಮಕ್ಕಳಿಗೆ ಧರ್ಮಾನುಷ್ಠಾನದ, ಅಧ್ಯಾತ್ಮ ಸಾಧನೆಯ ಅಧಿಕಾರವಿಲ್ಲ ಎಂಬಂತಹ ವಾತಾವರಣ ಮೂಡಿದ್ದ ಸಂದರ್ಭದಲ್ಲಿ ಶರಣ ಹಾಗೂ ದಾಸ ಚಳವಳಿಗಳು ಭಾರೀ ಬದಲಾವಣೆಯನ್ನೆ ಉಂಟು ಮಾಡಿದವು. ಪರಿಣಾಮವಾಗಿ ನಮ್ಮ ನಾಡಿನಲ್ಲಿ ಹಲವಾರು ಮಹಿಳಾ ಭಕ್ತ ಕವಿಗಳ, ಅನುಭಾವಿಗಳ ಉದಯವಾಯಿತು. ಅಂತಹ ಕೆಲವು ಸಾಧಕಿಯರ ಕಿರು ಪರಿಚಯ ಇಲ್ಲಿದೆ…
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು? ಕಣ್ಣು ಕಾಣದ ಗಾವಿಲರು!
ಪೆಣ್ಣಲ್ಲವೆ ನಮ್ಮನೆಲ್ಲ ಹಡೆದ ತಾಯಿ? ಪೆಣ್ಣಲ್ಲವೆ ನಮ್ಮನೆಲ್ಲ ಪೊರೆದವಳು!?
ದುರದೃಷ್ಟವಶಾತ್ ಇಂದಿಗೂ ಪ್ರಸ್ತುತವಾಗಿರುವ ಈ ಪ್ರಶ್ನೆಯನ್ನು ಹದಿನೇಳನೆಯ ಶತಮಾನದಲ್ಲಿಯೇ ಕೇಳುವ ಧೈರ್ಯ ತೋರಿದಾಕೆ ಸಂಚಿಯ ಹೊನ್ನಮ್ಮ. ಹೊನ್ನಮ್ಮ `ಹದಿಬದೆಯ ಧರ್ಮ’ ಎಂಬ ಸಾಂಗತ್ಯ ಕಾವ್ಯದ ಕರ್ತೃ. ಗೃಹಿಣಿಯೊಬ್ಬಳ ಕರ್ತವ್ಯಗಳ ಬಗ್ಗೆ ಮಾತನಾಡುತ್ತಲೇ ಹೊನ್ನಮ್ಮ ಹೆಣ್ಣುಮಕ್ಕಳನ್ನು ಕೀಳಾಗಿ ನೋಡುವವರ ಕಿವಿಯನ್ನೂ ಹಿಂಡುತ್ತಾಳೆ. ಧರ್ಮದ ಬಗ್ಗೆ ಮಾತನಾಡುತ್ತಲೇ ಅದರ ಹೆಸರಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸುತ್ತ `ಕುವರನಾದೊಡೆ ಬಂದ ಸಿರಿಯೇನದರಿಂದ? ಕುವರಿಯಾದೊಡೆ ಕುಂದೇನು?’ ಎಂದು ಕೇಳುತ್ತಾಳೆ.
ಇಂತಹ ಸಂವೇದನಾಶೀಲ ಮಹಿಳೆಯರ ದೊಡ್ಡದೊಂದು ಯಾದಿಯೇ ನಮ್ಮೆದುರಿಗಿದೆ. ಹೊನ್ನಮ್ಮನಿಗಿಂತಲೂ ಮುಂಚಿನಿಂದಲೇ ಕನ್ನಡತಿಯರು ಅನುಭಾವದಿಂದ ಕಂಡುಕೊಂಡ ಸಮಾನತೆಯನ್ನು ಸಾರುತ್ತ ತಾರತಮ್ಯತೆಯನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ನಮ್ಮ ಜಾನಪದದ ತಾಯಂದಿರಂತೂ ಹಾಡುಹಾಡುತ್ತಲೇ ದೈವಭಕ್ತಿಯನ್ನೂ, ಅಧ್ಯಾತ್ಮ ತತ್ತ್ವಗಳನ್ನೂ ಲೀಲಾಜಾಲವಾಗಿ ಅಭಿವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲ, ವಿಡಂಬನೆಯ ಚಾಟಿ ಬೀಸಿ ಢಾಂಬಿಕತೆಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಕ್ತಿ ಮಾತ್ರವಲ್ಲ, ವೈಚಾರಿಕತೆ ಕೂಡಾ…
ಕನ್ನಡದ ನೆಲ ಭಕ್ತಿಚಳವಳಿಯ ಕಿಡಿ ಹೊತ್ತಿಸಿದ ನೆಲ. ಶರಣ ಹಾಗೂ ದಾಸ ಪರಂಪರೆಗಳೆರಡೂ ತಮ್ಮದೆ ಶೈಲಿಯಲ್ಲಿ ಭಕ್ತಿ ವೈಚಾರಿಕತೆಯನ್ನು ಹರಡಿ ಆಧ್ಯಾತ್ಮಿಕ ಸಾಧನೆಯ ಜೊತೆಗೇ ಸಾಮಾಜಿಕ ಕ್ರಾಂತಿಯನ್ನೂ ಉಂಟು ಮಾಡಿದವು. ಈ ನಿಟ್ಟಿನಲ್ಲಿ ಬಹು ಮುಖ್ಯವಾದದ್ದು ಮಹಿಳೆಯರ ಅಭಿವ್ಯಕ್ತಿಗೆ ಅವಕಾಶ ಉಂಟಾಗಿದ್ದು. ಹೆಣ್ಣುಮಕ್ಕಳಿಗೆ ಧರ್ಮಾನುಷ್ಠಾನದ, ಅಧ್ಯಾತ್ಮ ಸಾಧನೆಯ ಅಧಿಕಾರವಿಲ್ಲ ಎಂಬಂತಹ ವಾತಾವರಣವಿದ್ದ ಸಂದರ್ಭದಲ್ಲಿ ಈ ಚಳವಳಿಗಳು ಭಾರೀ ಬದಲಾವಣೆಯನ್ನೆ ಉಂಟು ಮಾಡಿದವು. ಪರಿಣಾಮವಾಗಿ ನಮ್ಮ ನಾಡಿನಲ್ಲಿ ಹಲವಾರು ಮಹಿಳಾ ಭಕ್ತ ಕವಿಗಳ, ಅನುಭಾವಿಗಳ ಉದಯವಾಯಿತು. ದಾಸ ಹಾಗೂ ಶರಣ ಪರಂಪರೆಗಳೆರಡರಲ್ಲೂ ಮಹಿಳೆಯರು ಭಕ್ತಿ ಸಾಹಿತ್ಯ ರಚಿಸತೊಡಗಿದರು. ಈ ಸಾಹಿತ್ಯವು ಆಧ್ಯಾತ್ಮಿಕವಾಗಿ ಎಷ್ಟೋ ವೈಚಾರಿಕವಾಗಿಯೂ ಸತ್ವಭರಿತವಾಗಿದ್ದವು. ಅವುಗಳಲ್ಲಿ ಬಹುತೇಕರು ಸ್ತ್ರೀ ಸಂವೇದನೆ ಹಾಗೂ ಸ್ತ್ರೀ ವಿಶಿಷ್ಟ ಅಭಿವ್ಯಕ್ತಿಯನ್ನು ಕಾಣಿಸಿದ್ದರು.
ಅಂತಹ ಕೆಲವು ಅಧ್ಯಾತ್ಮ ಸಾಧಕಿಯರ ಕಿರುಪರಿಚಯ ಇಲ್ಲಿದೆ:
ಅತ್ತಿಮಬ್ಬೆ
ಬಹುಶಃ ಅತ್ತಿಮಬ್ಬೆಯನ್ನು ಆಕೆಯ `ದಾನ ಚಿಂತಾಮಣಿ’ ಎಂಬ ವಿಶೇಷಣದ ಹೊರತಾಗಿ ನೆನೆಸಿಕೊಳ್ಳುವವರು ಅಪರೂಪ. ತೈಲಪ ಚಕ್ರವರ್ತಿಯ ಕಾಲದ ಈ ಸ್ತ್ರೀರತ್ನ ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಗಳೆರಡಕ್ಕೆ ಅಪಾರವಾದ ದೇಣಿಗೆ ನೀಡಿ ಬೆಳೆಸಿದಳು. ತೈಲಪನಿಗೆ ತಾಯಿಯಂತೆ ಸಲಹೆ ನೀಡಬಲ್ಲಷ್ಟು ಮೇಧಾವಿಯಾಗಿದ್ದ ಈಕೆಯ ಕುರಿತು ಇತಿಹಾಸದಲ್ಲಿ ಅಪಾರ ಗೌರವಾದರಗಳು ವ್ಯಕ್ತವಾಗಿವೆ. ಜೈನ ಮತಾವಲಂಬಿಯಾಗಿದ್ದ ಅತ್ತಿಮಬ್ಬೆಯು ಲಕ್ಕುಂಡಿಯ ಬ್ರಹ್ಮ ಜಿನಾಲಯವೂ ಸೇರಿದಂತೆ ನೂರಾರು ಜಿನಾಲಯಗಳ ನಿರ್ಮಾಣ ಮಾಡಿಸಿದಳು. ರನ್ನನನ್ನು ತೈಲಪನ ಆಸ್ಥಾನಕ್ಕೆ ಪರಿಚಯಿಸಿದ ಈಕೆ, ಆತನಿಂದ ಅಜಿತನಾಥ ಪುರಾಣವನ್ನು ಬರೆಯಿಸಿ ಪ್ರಚುರಪಡಿಸದಳು. ಪೆÇನ್ನನಿಂದ ಶಾಂತಿ ಪುರಾಣ ಬರೆಸಿ, ಸಾವಿರ ಪ್ರತಿಗಳನ್ನು ಮಾಡಿಸಿ ವಿತರಿಸಿದ್ದಳು. ಅತ್ತಿಮಬ್ಬೆಯನ್ನು ಕುರಿತಾದ ಶಾಸನಗಳಲ್ಲಿ `ದಾನಚಿಂತಾಮಣಿ’ ಮಾತ್ರವಲ್ಲದೆ `ಕವಿವರ ಕಾಮಧೇನು’, `ಜಿನಶಾಸನ ರಕ್ಷಾ ಮಣಿ’ ಇತ್ಯಾದಿ ಬಿರುದುಗಳೂ ದಾಖಲಾಗಿವೆ.
ಅಕ್ಕಮಹಾದೇವಿ
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕ ಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ ಮಹಾದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ನಿರ್ವಾಣದಲ್ಲಿ ಮನೆ ತೊರೆದು ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಕ್ಕ ಮಹಾದೇವಿಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ವೈಚಾರಿಕತೆ, ಭಾವತೀವ್ರತೆ, ಆಧ್ಯಾತ್ಮದ ಉತ್ತುಂಗ ತಿಳಿವು ಅಕ್ಕನ ವಚನಗಳಲ್ಲಿ ಕಂಡುಬರುತ್ತವೆ
ಮುಕ್ತಾಯಕ್ಕ
ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಮುಕುಟಪ್ರಾಯದಂತಿದ್ದ ಅಲ್ಲಮಪ್ರಭುಗಳೊಡನೆ ತಾತ್ತ್ವಿಕ ಸಂವಾದ ನಡೆಸಿದ ಕೀರ್ತಿ ಮುಕ್ತಾಯಕ್ಕನದ್ದು. ತನ್ನ ಸಹೋದರನಾದ ಅಜಗಣ್ಣನು ತೀರಿಕೊಂಡಾಗ ಅಣ್ಣನ ಅಗಲಿಕೆಯ ನೋವಿನಲ್ಲೂ ಆಕೆ ಜ್ಞಾನಯೋಗಿ ಅಲ್ಲಮಪ್ರಭುಗಳೊಂದಿಗೆ ಸಂವಾದ ನಡೆಸುತ್ತಾಳೆ. ಈ ಮಾತುಕತೆ ಉನ್ನತ ಅಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು, ಮುಕ್ತಾಯಕ್ಕನ ತಿಳಿವಳಿಕೆಗೆ ಕನ್ನಡಿಯಂತಿವೆ.
ಆಯ್ದಕ್ಕಿ ಲಕ್ಕಮ್ಮ
ಬಸವಣ್ಣರ ಸಹಾನುವರ್ತಿಗಳಾಗಿದ್ದ ಆಯ್ದಕ್ಕಿ ಮಾರಯ್ಯನ ಹೆಂಡತಿ ಲಕ್ಕಮ್ಮ. ಈಕೆಯೂ ಶರಣೆಯಾಗಿದ್ದು, ಗಂಡನೊಡನೆ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತಂದು, ಅದರಿಂದ ಜೀವನ ಹೊರೆಯುತ್ತಿದ್ದರು. ಒಮ್ಮೆ ಬಸವಣ್ಣನವರು ಬೇಕೆಂದೇ ತುಸು ಹೆಚ್ಚು ಅಕ್ಕಿಯನ್ನು ದಾರಿಯಲ್ಲಿ ಬೀಳಿಸಿ ಹೋಗಿದ್ದರು, ಮಾರಯ್ಯನಿಗೆ ಅದು ದಕ್ಕಲಿ ಎಂಬ ಉದ್ದೇಶದಿಂದ. ಮಾರಯ್ಯ ಅವನ್ನೆಲ್ಲ ಆಯ್ದು ಮನೆಗೆ ತಂದಾಗ ಗಂಡನಿಗೆ ತಿಳಿಹೇಳಿ, ತಾವು ದಿನಾಲು ಸಂಗ್ರಹಿಸುತ್ತಿದ್ದಷ್ಟನ್ನು ಮಾತ್ರ ಇಟ್ಟುಕೊಂಡು ಬಸವಣ್ಣನಿಗೆ ಮರಳಿಸುವಂತೆ ಮಾಡುತ್ತಾರೆ. ಕೆಲವು ವಚನಗಳನ್ನೂ ರಚಿಸಿರುವ ಶರಣೆ ಲಕ್ಕಮ್ಮ ತ್ಯಾಗ ಜೀವನಕ್ಕೆ, ಬದ್ಧತೆಗೆ ಮಾದರಿಯಾಗಿ ಇಂದಿಗೂ ನೆನೆಯಲ್ಪಡುತ್ತಾರೆ.
ಹೆಳವನಕಟ್ಟೆ ಗಿರಿಯಮ್ಮ
ವಿಜಯದಾಸರ ಶಿಷ್ಯ ಗೋಪಾಲದಾಸರ ಅನುಗ್ರಹ ಉಪದೇಶ ಹಾಗೂ ಪ್ರಭಾವಗಳಿಂದ ಹರಿದಾಸ ಮಹಿಳೆಯೆನಿಸಿಕೊಂಡ ಹೆಳವನಕಟ್ಟೆ ಗಿರಿಯಮ್ಮ `ಹೊನ್ನು ತಾ ಗುಬ್ಬಿ ಹೊನ್ನು ತಾ’ ಮುಂತಾದ ಅನೇಕ ಸುಪ್ರಸಿದ್ಧ ಪದಪದ್ಯಗಳನ್ನು ರಚಿಸಿದ್ದಾಳೆ. ಕರ್ನಾಟಕದ ಮೀರಾಬಾಯಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದ ಗಿರಿಯಮ್ಮ `ಹೆಳವನಕಟ್ಟೆ ರಂಗ’ ಅಂಕಿತದಿಂದ ಹಲವಾರು ಹಾಡುಗಳನ್ನು ಬರೆದಿದ್ದಷ್ಟೇ ಅಲ್ಲದೆ ಭಕ್ತಿ ಸಾಹಿತ್ಯದ ಸಮರ್ಪಣ ಗೀತೆಗಳನ್ನು ರಚಿಸಿದ್ದಾಳೆ. ಈಕೆಯ ಭಕ್ತಿಪಾರಮ್ಯದ ಕುರಿತು ಹಲವು ದಂತಕತೆಗಳಿದ್ದು, ಇಂದಿಗೂ ಮಲೆಬೆನ್ನೂರು, ರಾಣಿಬೆನ್ನೂರು, ಹರಿಹರ ಭಾಗಗಳಲ್ಲಿ ಗಿರಿಯಮ್ಮನ ಮಹಿಮೆಯನ್ನು, ಸಿದ್ಧಿಯನ್ನು ಹೆಂಗಳೆಯರು ನೆನೆಯುತ್ತಾರೆ.
ಹರಪನಹಳ್ಳಿ ಭೀಮವ್ವ
ನಿರಕ್ಷರಕುಕ್ಷಿಯಾಗಿ, ಮೂವತ್ತೇಳನೆಯ ವಯಸ್ಸಿಗೇ ಪತಿ ತೀರಿಕೊಂಡಾಗ, ಉಳಿದ ಬದುಕನ್ನು ದೇವರ ಪಾದಗಳಲ್ಲಿ ಸಮರ್ಪಣ ಮಾಡಿಕೊಂಡ ಭೀಮವ್ವನಿಗೆ ಹಾಡೇ ಬದುಕಾಯಿತು. ಬದುಕೇ ಹಾಡಾಯಿತು. ತವರುಮನೆಯ `ಭೀಮವ್ವ’ ಅತ್ತೆಮನೆಯ ಕೃಷ್ಣಾಬಾಯಿ ಈ ಎರಡೂ ಹೆಸರುಗಳನ್ನು ಸಹಸ್ಪಂದಿಯಾಗಿ `ಭೀಮೇಶಕೃಷ್ಣ’ ಕಾವ್ಯನಾಮವಾಯಿತು. ಹಾಡು ರಚಿಸುವುದು ದೈವದತ್ತ ಹಾಗೂ ಲೀಲಾಜಾಲವಾಗಿದ್ದ ಭೀಮವ್ವನ `ಮುಯ್ಯದ ಹಾಡು’ ಇಂದಿಗೂ ಸಹಸ್ರಾರು ಮನೆಗಳಲ್ಲಿ ನಿನದಿಸುತ್ತಿದೆ. ವೈಷ್ಣವ ಭಕ್ತಿ ಪಂಥದ ಸಾಹಿತ್ಯಕ್ಕೆ, ಭೀಮವ್ವನವರ ಕೊಡುಗೆ ಮಹತ್ವದ್ದು. ಇಂದಿಗೂ ದಕ್ಷಿಣ ಭಾರತದ ಸಹಸ್ರಾರು ಸಂಪ್ರದಾಯಸ್ಥ ಕುಟುಂಬಗಳು, ಭಜನಾಮಂಡಲಿಯ ಸದಸ್ಯರು ಶ್ರಾವಣ ಮಾಸ ಬಂತೆಂದರೆ ಸಾಕು, ಹರಪನಹಳ್ಳಿ ಭೀಮವ್ವನವರ ಸಾಹಿತ್ಯದ ಮೂಲಕ ಹಬ್ಬಗಳ ಸಂಭ್ರಮವನ್ನು ಆಚರಿಸುತ್ತಾರೆ.
ಗಲಗಲಿ ಅವ್ವನವರು
ಗಲಗಲಿ ಪಾಂಡಿತ್ಯಕ್ಕೆ, ಸಾಹಿತ್ಯ ಸಂಸ್ಕೃತಿಗೆ ಹೆಸರಾದ ಮನೆತನ. ಅಂತಹ ಮನೆತನದ ಮುಕುಟ ಮಣಿಯಂತೆ ಹೆಸರಾದವರು ಗಲಗಲಿ ಅವ್ವನವರು. ಶಾಸ್ತ್ರ ಸಂಪ್ರದಾಯ ವಿಚಾರಗಳಲ್ಲಿ ಅದ್ಭುತ ಜ್ಞಾನವಿದ್ದ ಅವ್ವನವರ ಪಾಂಡಿತ್ಯದ ಪ್ರಖರತೆ ಎಷ್ಟಿತ್ತೆಂದರೆ ಪುಣೆಯ ಪೇಶ್ವೆಯವರು ಅವ್ವನವರ ಹೆಸರಿನಿಂದಲೇ ಸನದು ಹೊರಡಿ ವಾರ್ಷಿಕ ಅನುದಾನ ನೀಡಿದ್ದರು! ಮೈಸೂರರ ಮಹಾರಾಜರು ಕೂಡಾ ಭೂಕಾಣಿಕೆಗಳನ್ನಿತ್ತು ಗೌರವಿಸಿದ್ದರು. `ರಾಮೇಶ’ ಹಾಗೂ `ರಮಿ ಅರಸ’ ಅಂಕಿತದ ಅವ್ವನವರು ಮುಯ್ಯದ ಹಾಡು, ಶ್ರೀಕೃಷ್ಣಜನ್ಮದ ಹಾಡು ಮೊದಲಾದ ಗೀತೆಗಳನ್ನೂ ಹಲವು ಉಗಾಭೋಗಗಳನ್ನೂ ರಚಿಸಿದ್ದಾರೆ.
ಮಹಾರಾಣಿ ಶಾಂತಲೆ
ಹೊಯ್ಸಳ ಅರಸ ವಿಷ್ಣುವರ್ಧನನ ಪ್ರಸ್ತಾಪ ಬಂದಾಗ ಶಾಂತಲೆಯ ಉಲ್ಲೇಖವಿಲ್ಲದೆ ಅದು ಪೂರ್ಣವಾಗದು. ಶಾಂತಲೆಯು ನಾಟ್ಯಶಾಸ್ತ್ರ ಪಾರಂಗತೆಯಾಗಿದ್ದಂತೆಯೇ ಶಾಸ್ತ್ರ ಜ್ಞಾನವನ್ನೂ ಹೊಂದಿದ್ದಳು. ಅಸಾಧಾರಣ ದೈವ ಭಕ್ತೆಯಾಗಿದ್ದಳು. ಪತಿ ವಿಷ್ಣುವರ್ಧನನೊಂದಿಗೆ ದೇವಾಲಯ ನಿರ್ಮಾಣ ಕಾರ್ಯಗಳಲ್ಲಿ ಸರಿಸಮನಾಗಿ ನಿಂತು ಮುತುವರ್ಜಿ ವಹಿಸಿದ್ದಳು. ಬೇಲೂರು, ಹಳೇಬೀಡುಗಳ ದೇವಾಲಯ ನಿರ್ಮಾಣ ಕಾರ್ಯಗಳಲ್ಲಿ ಶಾಂತಲೆ ಶಿಲ್ಪಿಗಳಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದಳಂತೆ. ಅವಳ ಉಸ್ತುವಾರಿಯಿಂದಲೇ ವು ಅಷ್ಟು ಮನೋಹರವಾಗಿ ರೂಪುಗೊಂಡಿವೆ ಎನ್ನುವ ಮಾತು ಕೇಳಿಬರುತ್ತದೆ. ಜೈನ ಕುಲದವಳಾಗಿದ್ದ ಶಾಂತಲೆ ವಿಷ್ಣುವಿಗೆ ಸಮರ್ಪಿತವಾದ ಚೆನ್ನಿಗರಾಯನ ದೇವಸ್ಥಾನ ನಿರ್ಮಾಣಕ್ಕೆ ಕಾರಣಳಾಗಿದ್ದು ಆಕೆಯ ಸರ್ವಮತಾನುರಾಗವನ್ನು ಸಾಬೀತುಪಡಿಸುತ್ತದೆ.
ಸರಸ್ವತೀ ಬಾಯಿ
ಶರಣ ಮಾರಯ್ಯನಂತೆಯೇ ಹೀಗೆ ಹೆಂಡತಿಯಿಂದ ತಿಳಿವು ಪಡೆದ ಮತ್ತೊಬ್ಬ ಸಾಧಕ – ದಾಸಶ್ರೇಷ್ಠರಾದ ಪುರಂದರ ದಾಸರು. ಸ್ವತಃ ಪುರಂದರರೇ `ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ಹಾಡಿ ಹಾರೈಸುವಷ್ಟರ ಮಟ್ಟಿಗೆ ಅವರ ಬದುಕಿನಲ್ಲಿ ಪತ್ನಿ ಸರಸ್ವತೀ ಬಾಯಿಯವರ ಪಾತ್ರವಿದೆ. ಈಕೆ ಕೂಡ ಭಕ್ತಿಪ್ರಧಾನವಾದ ದಾಸರ ಪದಗಳನ್ನು ರಚಿಸಿರುವರೆಂದು ಹೇಳಲಾಗುತ್ತದೆ.