ಈ ಎಲ್ಲ ಘಟನಾವಳಿಗಳ ನಡುವೆಯೂ ಜೆಬಾಳಲ್ಲಿ ಪ್ರೇಮ ಜೀವಂತವಿತ್ತು. ಅವಳೊಳಗಿನ ಸೂಫೀಯತೆ ಅವಳನ್ನು ಎಲ್ಲ ಕಷ್ಟಗಳನ್ನು ನಗುತ್ತಲೇ ಸಹಿಸುವ ಬಲ ನೀಡಿತ್ತು. ಸರ್ವಧರ್ಮ ಸಮಭಾವ ಹೊಂದಿದ್ದ ಜೆಬ್, ತಂದೆಯ ಕ್ರೂರ ನಿರ್ಬಂಧಗಳ ನಡುವೆಯೂ ಸೌಹಾರ್ದದ ಸಂಕೇತವಾಗಿ ಬಾಳಿದಳು ~ ಅಲಾವಿಕಾ

“ನಾನು ಬಾದಷಹನ ಮಗಳು, ವೈಭೋಗಗಳನ್ನು ತ್ಯಜಿಸಿದ್ದೇನೆ. ನನ್ನ ಹೆಸರು ಜೆಬುನ್ನೀಸಾ; ಘನತೆ ನನ್ನ ಹೆಸರಿನಲ್ಲಿಯೇ ಇದೆ. ನಾನು ಸ್ತ್ರೀಕುಲದ ಘನತೆ.”
17ನೇ ಶತಮಾನದ ಮುಘಲ್ ರಾಜಕುಮಾರಿಯೊಬ್ಬಳು ಹೀಗೆ ಘೋಷಿಸಿಕೊಂಡಿದ್ದಳು ಎಂದರೆ ಅವಳ ತಿಳಿವು, ಒಲವು ಮತ್ತು ಧೈರ್ಯಗಳು ಎಂಥವಿದ್ದವು ಯೋಚಿಸಿ!
ಜೆಬುನ್ನೀಸಾ ಔರಂಗಜೇಬನ ಮಗಳು. ದೊಡ್ಡಪ್ಪ ದಾರಾಷುಕೋನ ಅಧ್ಯಾತ್ಮದ ಪ್ರಭಾವಕ್ಕೂ ಇರಾನಿ ಸೂಫಿ ಕವಿ ಫರೀದುದ್ದೀನ್ ಅತ್ತಾರನ ಕಾವ್ಯದ ಪ್ರಭಾವಕ್ಕೂ ಒಳಗಾಗಿದ್ದ ಜೆಬುನ್ನೀಸಾ, ಸ್ವತಃ ಕವಿಯಾಗಿದ್ದಳು, ಅಧ್ಯಾತ್ಮ ಜೀವಿಯೂ ಆಗಿದ್ದಳು. ಉರ್ದು, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕಾವ್ಯ ರಚಿಸುತ್ತಿದ್ದಳು. ಹಿಂದೂ ಧಾರ್ಮಿಕ – ಆಧ್ಯಾತ್ಮಿಕ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದ ಜೆಬುನ್ನೀಸಾ, ತನ್ನದೇ ಆದ ಗ್ರಂಥಾಲಯವನ್ನೂ ಹೊಂದಿದ್ದಳು. ಈಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಪದ್ಯಗಳನ್ನು ರಚಿಸಿದ್ದಾಳೆಂದು ಹೇಳಲಾಗುತ್ತದೆ.
ಅಸಹಿಷ್ಣು ದೊರೆಯಾಗಿದ್ದ ಔರಂಗಜೇಬನಿಗೆ ತನ್ನ ಮಗಳು ಸೂಫಿ, ಕಾವ್ಯ, ಅಧ್ಯಾತ್ಮ ಎಂದೆಲ್ಲ ಓಡಾಡುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಜೆಬುನ್ನೀಸಾ ತನ್ನ ತಂದೆಗೆ ರಾಜತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದಳಾದರೂ ಆತನ ನಡೆ – ನಿಲುವುಗಳನ್ನು ಇಷ್ಟಪಡುತ್ತಿರಲಿಲ್ಲ. ಆಕೆ ಬಹುತೇಕ ಆತನಿಂದ ದೂರವೇ ಇರುತ್ತಿದ್ದಳು. ಕೊಡುಗೈ ದಾನಿಯೂ ದೀನರ ಪಾಲಿಗೆ ದೇವತೆಯೂ ಆಗಿದ್ದ ಜೆಬ್, ತಾನು ಅತ್ಯಂತ ಸರಳ ಜೀವನ ನಡೆಸುತ್ತಿದ್ದಳು.
ಜೆಬುನ್ನೀಸಾ ದೈವಪ್ರೇಮದ ಸೂಫಿಯಾಗಿದ್ದಳು. ಲೌಕಿಕದಲ್ಲಿ ಕವಿಯೂ ಆಗಿದ್ದ ಲಾಹೋರಿನ ರಾಜ್ಯಪಾಲ ಅಕೀಲ್ ಖಾನ್ ರಾಝಿಯನ್ನು ಪ್ರೇಮಿಸುತ್ತಿದ್ದಳು. ಆದರೆ ಔರಂಗಜೇಬನಿಗೆ ಅಕೀಲ್ ಖಾನ್ ತನ್ನ ಅಳಿಯನಾಗುವುದು ಬೇಕಿರಲಿಲ್ಲ. ಜೇಬುನ್ನೀಸಾಳನ್ನು ಅವನ ಭೇಟಿಯಾಗದಂತೆ, ಅವರ ನಡುವೆ ಯಾವ ರೀತಿಯ ವ್ಯವಹಾರವೂ ನಡೆಯದಂತೆ ತಡೆದ. ಜೆಬ್, ಶಾಶ್ವತ ವಿರಹಿಯಾಗಿ ಉಳಿದುಹೋದಳು.
ಇದೇ ವೇಳೆಗೆ, ಷಾಹ್ ಜಹಾನನ ಬಯಕೆಯಂತೆ ಅವಳ ಮದುವೆ ದಾರಾಷುಕೋನ ಮಗ ಸುಲೇಮಾನನೊಡನೆ ನಿಕ್ಕಿಯಾಗಿತ್ತು. ಔರಂಗಜೇಬ್, ರಾಜಕೀಯ ಕಾರಣಗಳಿಗಾಗಿ ಅವನನ್ನೂ ಕೊಲ್ಲಿಸಿದ. ನಂತರದಲ್ಲಿ ತನ್ನ ಅಣ್ಣ ಎರಡನೇ ಆಕ್ಬರನು ಸಿಂಹಾಸನವೇರಲು ನಡೆಸಿದ ಪಿತೂರಿಗೆ ಸಹಕರಿಸಿದಳೆಂದು ಅವಳನ್ನು ಸೆರೆಮನೆಗೆ ಹಾಕಿಸಿದ. ತನ್ನ ಜೀವಿತದ ಕೊನೆಯ ಇಪ್ಪತ್ತು ವರ್ಷಗಳನ್ನು ಜೆಬ್ ಅಲ್ಲಿಯೇ ಕಳೆದಳು.
ಈ ಎಲ್ಲ ಘಟನಾವಳಿಗಳ ನಡುವೆಯೂ ಜೆಬಾಳಲ್ಲಿ ಪ್ರೇಮ ಜೀವಂತವಿತ್ತು. ಅವಳೊಳಗಿನ ಸೂಫೀಯತೆ ಅವಳಿಗೆ ಎಲ್ಲ ಕಷ್ಟಗಳನ್ನು ನಗುತ್ತಲೇ ಸಹಿಸುವ ಬಲ ನೀಡಿತ್ತು. ಸರ್ವಧರ್ಮ ಸಮಭಾವ ಹೊಂದಿದ್ದ ಜೆಬ್, ತಂದೆಯ ಕ್ರೂರ ನಿರ್ಬಂಧಗಳ ನಡುವೆಯೂ ಸೌಹಾರ್ದದ ಸಂಕೇತವಾಗಿ ಬಾಳಿದಳು. ತನ್ನ ಕಾವ್ಯದ ಮೂಲಕ ಹಿಂದೂ – ಮುಸಲ್ಮಾನ ಧರ್ಮಗಳನ್ನು ಬೆಸೆಯುವ ಕೊಂಡಿಯಾದಳು.
ಆದರೆ ಜೆಬಾ ತಾನು ಬದುಕಿದ್ದಷ್ಟೂ ಕಾಲ ಔರಂಗಜೇಬನೆದುರು ತನ್ನೊಳಗಿನ ಕವಿಯನ್ನು ಪ್ರಕಟಗೊಳಿಸಲಿಲ್ಲ. ತನ್ನನ್ನು ತಾನು ಗುಪ್ತವಾಗಿಟ್ಟುಕೊಂಡು, ಅದೇ ಅರ್ಥ ನೀಡುವ ‘ಮಕ್ಫಿ’ ಎಂಬ ಕಾವ್ಯನಾಮದಲ್ಲಿ ಬರೆದಳು. ಮಕ್ಫಿ ಅಂದರೆ ‘ಮರೆಯಲ್ಲಿರುವವಳು’ ಎಂದು.
ಜೆಬುನ್ನೀಸಾಳ ಒಂದು ಪದ್ಯ ಹೀಗಿದೆ :
ನೇರ ಸುಲಭ ದಾರಿಯಲ್ಲಿ ನಡೆಯಲಾರೆ,
ಲೋಕರೂಢಿಗೆ ಲಜ್ಜೆಗೆಟ್ಟ ಮಾನಗೇಡಿ ನಾನು!
ಅಂತಿಮ ತೀರ್ಪಿನ ದಿನ,
ನನ್ನೆದೆಯ ರಕ್ತ ಚಿಮ್ಮಿ
ಮರುಭೂಮಿ ಕೆಂಪಾಗುವುದು;
ತಿಳಿ ಗುಲಾಬಿ ಸ್ವರ್ಗ ಕನಲುವುದು,
ಮರುಭೂಮಿಯ ಹುಚ್ಚು ಬೆಂಕಿ ಹೊಳೆಗೆ.
ಪಶ್ಚಾತ್ತಾಪದ ಒಂದು ಕಣ್ಣ ಹನಿ
ಉರುಳಿ ಬಿದ್ದರೂ ಸಾಕು;
ನನ್ನೆಲ್ಲ ಪಾಪಗಳು ಕೊಚ್ಚಿಹೋಗುವವು.
ಸರ್ವಶಕ್ತನ ಅನುಕಂಪೆಯಲಿ,
ನನ್ನೆಲ್ಲ ಪಾಪಗಳು ಅಳಿಸಿಹೋಗುವವು.
ಬಯಕೆ ಬೇರುಗಳು ಇಳಿದಿವೆ ಕತ್ತಲಾಳದವರೆಗೂ…
ಪಾಪ ಫಲ ತೂಗುತಿವೆ, ಟೊಂಗೆಟೊಂಗೆಯಲ್ಲಿ.
ಸಂತೃಪ್ತಿ, ಷಾಹೀ ಖಜಾನೆ ;
ಕಾಪಿಡಬೇಕು
ಜೂಜಾಡದೆ, ಪೋಲು ಮಾಡದೆ !!
ಹೃದಯವೇ,
ದೂರುಗಳೆಲ್ಲ ನಿನ್ನ ಬಳಿಯೇ ಇರಲಿ;
ದೂಳೆಬ್ಬಿಸದಿರು ಸುರಿದು,
ಸುಂಟರಗಾಳಿಯಾಗಿ
ಕಣ್ಣು ಮುಸುಕುವುದು.
ಅಂತಿಮ ತೀರ್ಪಿನ ದಿನ,
ಮಕ್’ಫಿ,
ಭಗವಂತ ಕ್ಷಮಿಸಲಿರುವನು ನಿನ್ನ.
ಯಾವುದಕ್ಕೂ,
ಪಶ್ಚಾತ್ತಾಪದ ಸೆರಗ ತುದಿ
ಹಿಡಿದಿಟ್ಟುಕೋ, ಗಟ್ಟಿಯಾಗಿ !


[…] ಜೆಬುನ್ನಿಸಾ ಬಗ್ಗೆ ತಿಳಿಯಲು ಇಲ್ಲಿ ಓದಿ : https://aralimara.com/2019/03/08/zeb/ […]
LikeLike