ಚಿತ್ತ ಮತ್ತಾಗುವುದೇ ಅಧ್ಯಾತ್ಮವಿಲ್ಲಿ…. : ಒಂದು ಸೂಫಿ ಪದ್ಯ

ಮೂಲ : ಮಕ್‌ಫೀ (ಜೆಬುನ್ನಿಸಾ) | ಕನ್ನಡಕ್ಕೆ: ಸುನೈಫ್

ಕಗ್ಗತ್ತಲ ಪ್ರೇಮ ಪಥವಿದು,
ನಡೆದಷ್ಟೂ ಮುಗಿಯದು
ದಾರಿಗುಂಟ ಹೆಣೆದ ಬಲೆಗಳು!
ಆದರೇನಂತೆ, ಕಾಳು ತುಂಬಿದ ಬಲೆಗೆ
ಪಾರಿವಾಳಗಳು ಬೀಳುವಂತೆ
ಮುನ್ನುಗ್ಗುತ್ತಲೇ ಇದ್ದಾರೆ ಪಥಿಕರು.

ಹೇಳು, ಅದಾವ ಧಾನ್ಯ
ಪಾರಿವಾಳವ ಸೆಳೆಯಿತು?
ಗುಳಿಕೆನ್ನೆಯ ಮೇಲಿನ ಮಚ್ಚೆ ಅದು.
ಹೇಳು, ಪ್ರೇಮ ಬಲೆಯ
ನೇಯ್ದ ವಸ್ತು ಅದಾವುದು?
ಸಂಗಾತಿಯ ಕುಣಿದಾಡುವ ಮುಂಗುರುಳು.

ಪ್ರೇಮ ಸುಗ್ಗಿ ನಡೆಯುವುದಿಲ್ಲಿ
ಚಿತ್ತ ಮತ್ತಾಗುವುದೇ ಅಧ್ಯಾತ್ಮವಿಲ್ಲಿ
ಸಾಕಿ ಮಧುಪಾತ್ರೆಯ ದಾಟಿಸಿದ ಕ್ಷಣ
ನಿನ್ನ ಪಾಲಿನ ಮದಿರೆಯ ಬತ್ತಿಸು

ನಿಟ್ಟುಸಿರುಡುವುದು, ದೂರುವುದು ಎಷ್ಟು ಸುಲಭ
ಲೋಕ ಸಂಕಟ ಹೊತ್ತು ಹಲುಬುವಾಗ
ನೀನು ಮಾತ್ರ ಹೆಮ್ಮೆಯಿಂದಲೇ ಮೌನವಾಗಿ
ನೋವಿನ ಕಾರ್ಕೋಟಕ ವಿಷವನ್ನು ಚಪ್ಪರಿಸುವೆ

ಬೆಳಕಿನ ಸ್ವರ್ಗೀಯ ಒರತೆ ಇಲ್ಲಿರುವುದು
ಅಪಾರ ಅನುಗ್ರಹದ ಝರಿಯು ಇಲ್ಲಿರುವುದು
ಮೂಸಾ ಮಲೆ ಇಳಿಯುವಾಗ ಹೊತ್ತಿದ್ದ ದೈವಕಳೆ
ನಿನ್ನ ಮುಖದ ಮುಂದೆ ಮಂದವಾಗುವುದು

ರಾತ್ರಿಯ ಮದಿರೆ ಹಗಲಿಗೆ ಹೆಗಲಾಗುವುದು
ಬದಲಿಗೆ ಹಗಲು ತನ್ನ ಕನಸುಗಳ
ರಾತ್ರಿಗೆ ದಾಟಿಸಿ ಹಗುರಾಗುವುದು,
ನೆಮ್ಮದಿ ಕಂಡುಕೊಂಡ ಚೇತನದ ದಿನಚಕ್ರವಿದು

ಆದರೆ, ಮಕ್‌ಫೀ,
ಈ ಪ್ರೇಮಹಬ್ಬ ನಡೆಯುವುದಾದರೂ ಎಲ್ಲಿ?
ಎಲ್ಲಿ ಹೋದರು ಹಬ್ಬದ ನೆಂಟರು?
ಹೃದಯದಾಳದಲ್ಲಿ, ನನ್ನಾತ್ಮದ ಬಯಲಿನಲ್ಲಿ
ರಂಗೇರುವುದು ಭಗವಂತನ ಹಬ್ಬವು.

ಜೆಬುನ್ನಿಸಾ ಬಗ್ಗೆ ತಿಳಿಯಲು ಇಲ್ಲಿ ಓದಿ : https://aralimara.com/2019/03/08/zeb/

Leave a Reply