ಸಂಪತ್ತು ಇದ್ದರೆ ಎಲ್ಲವೂ ಇದೆ! : ಭರ್ತೃಹರಿಯ ನೀತಿ ಶತಕ

ಯಸ್ಯಾಸ್ತಿವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ |
ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇಜನಾಃ ಕಾಂಚನ ಮಾಶ್ರಯಂತೇ ||ನೀತಿ ಶತಕ ||

ಅರ್ಥ: ಯಾರಲ್ಲಿ ಸಂಪತ್ತಿದಯೋ, ಅವನೇ ಸದ್ವಂಶ ಸಂಜಾತ. ಅವನೇ ಮಹಾ ಪಂಡಿತ. ಅವನೇ ಸಕಲ ಶಾಸ್ತ್ರಗಳನ್ನು ತಿಳಿದವ. ಅವನೇ ಗುಣವಂತ. ಅವನೇ ಒಳ್ಳೆಯ ಮಾತುಗಾರ. ಅವನೇ ಸುರಸುಂದರಾಂಗ. ಎಲ್ಲಾ ಗುಣಗಳು ಸಂಪತ್ತನ್ನು ಆಶ್ರಯಿಸಿ ಇರುತ್ತವೆ. (ವ್ಯಂಗ್ಯೋಕ್ತಿ)

ತಾತ್ಪರ್ಯ: ಆಧುನಿಕ ಯುಗಕ್ಕೆ ಕನ್ನಡಿ ಹಿಡಿದಂತಹ ಸುಭಾಷಿತ ಇದು. ಹಣವೊಂದಿದ್ದರೆ ಎಲ್ಲವೂ ಇದ್ದಂತೆ ಎನ್ನುವ ಭಾವನೆ ವೇಗವಾಗಿ ಹಬ್ಬುತ್ತಿದೆ. ಸಂಪತ್ತೊಂದಿದ್ದರೆ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ವಿಚಿತ್ರ ವರ್ತನೆಯನ್ನು ಕೆಲವರಲ್ಲಿ ಕಾಣುತ್ತೇವೆ. ನಮ್ಮ ಸಮಾಜವೂ ಸಹ ಹಣ ಇದ್ದವರಿಗೆ ಮಣೆ ಹಾಕುತ್ತದೆ. ಯಾಕೆಂದರೆ ಹಣದ ಪರಿಣಾಮ ಹಾಗೂ ಪ್ರಭಾವ ಎರಡೂ ಶೀಘ್ರದಲ್ಲಿ ಕಂಡು ಬರುತ್ತದೆ. ಆದರೆ ವಿದ್ಯೆ, ವಿನಯ ಮೊದಲಾದವುಗಳ ಪ್ರಯೋಜನ ತಡವಾಗಿ ಬಂದೀತು ಅಥವಾ ಬಾರದೇ ಇರಲೂಬಹುದು. ಈ ಕಾರಣದಿಂದ ಅನಾದಿ ಕಾಲದಿಂದಲೂ ಸಂಪತ್ತಿಗೆ ಹಾಗೂ ಸಂಪತ್ತಿದ್ದವರಿಗೆ ಅವರಲ್ಲಿ ಏನೂ ಇರದೇ ಇದ್ದರೂ ಎಲ್ಲವೂ ಇದೆ ಎನ್ನುವ ಪರಿಯಲ್ಲಿ ಮನ್ನಣೆ ನೀಡಲಾಗುತ್ತಿದೆ.

ಆದರೆ, ಕೇವಲ ಸಂಪತ್ತಿನ ಆಧಾರದ ಮೇಲೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೇ ಇಲ್ಲ. ಗುಣವಿಲ್ಲದ ಸಮಾಜ ಯಾವ ಆದರ್ಶವನ್ನೂ ನೀಡಲಾರದು. ಆದಕಾರಣ ಮನುಷ್ಯನ ಮನೋವೃತ್ತಿಯಲ್ಲಿ ಬದಲಾವಣೆ ಆಗಬೇಕು. ಸಂಪತ್ತು ಕ್ಷಣಿಕವಾದದ್ದು. ಇಂದು ಬರುತ್ತದೆ, ನಾಳೆ ಹೋಗುತ್ತದೆ. ಲಕ್ಷ್ಮೀ ಯಾವಾಗಲೂ ಚಂಚಲೆ. ಆದಕಾರಣ ಸಂಪತ್ತಿಗೆ ಗೌರವ ಇರಲಿ. ಆದರೆ ಅತಿಯಾದ ಗೌರವ ಬೇಡ ಎನ್ನುವ ಸಂದೇಶವನ್ನು ಭರ್ತೃಹರಿ ತನ್ನ ವ್ಯಂಗ್ಯೋಕ್ತಿಯ ಮೂಲಕ ನೀಡಿದ್ದಾನೆ.

Leave a Reply