ಭಗ್ನಪ್ರೇಮಿಗೆ ವಾ ಐನ್ ಸಾಇಲ್ ಹೇಳಿದ್ದೇನು!? : ರಾಉಮ್ ಕಥೆಗಳು

Yadira stories

ರಾ-ಉಮ್ ಆಶ್ರಮದ ವಿದ್ಯಾರ್ಥಿಗಳು ಆಶ್ರಮದಲ್ಲಿದ್ದು ಕಲಿಯುವಂತೆಯೇ ಹೊರಗೆ ಓಡಾಡಿಯೂ ಕಲಿಯುತ್ತಿದ್ದರು. ಆಶ್ರಮದಿಂದ ಪೇಟೆಗೆ ಹೋಗುವುದು ಎಂದರೆ ಅದೂ ಕಲಿಕೆಯ ಭಾಗವೇ ಆಗಿತ್ತು. ಆಶ್ರಮದ ಹತ್ತಿರವೇ ಇದ್ದ ಪೇಟೆಯಲ್ಲಿ ರಾ-ಉಮ್ ಆಶ್ರಮದ ವಿದ್ಯಾರ್ಥಿಗಳಿಗೆ ವಿಶೇಷ ಮಹತ್ವವಿತ್ತು. ಈ ವಿದ್ಯಾರ್ಥಿಗಳಿಂದ ಅತ್ಯುತ್ತಮ ಆಧ್ಯಾತ್ಮಿಕ ಸಲಹೆಗಳು ದೊರೆಯುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು.

ಒಂದು ದಿನ ಸಂತೆ ಬೀದಿಯ ಮರದಡಿಯಲ್ಲಿ ಖರೀದಿ ಮುಗಿಸಿ ಕುಳಿತಿದ್ದ ವಾ-ಐನ್-ಸಾಇಲ್ ಬಳಿಗೆ ಯುವಕನೊಬ್ಬ ಬಂದ.
‘ತಾವು ಮಹಾಯೋಗಿನಿಯ ಆಶ್ರಮವಾಸಿಯೇ…?’ ಎಂದು ಕೇಳಿದ.
ವಾ-ಐನ್ ತಲೆಯಲ್ಲಾಡಿಸಿ ಹೌದು ಎಂದು ಸೂಚಿಸಿದ.

ಆ ಯುವಕ ಹೇಳಿದ ‘ನಾನೊಬ್ಬಳು ಹುಡುಗಿಯನ್ನು ಪ್ರೀತಿಸಿದ್ದೆ. ಆದರೆ ಅವಳು ಬೇರೊಬ್ಬನನ್ನು ಮದುವೆಯಾದಳು. ನನಗಿನ್ನು ಈ ಜಗತ್ತು ಬೇಡವೆನಿಸಿದೆ…!’

ವಾ-ಐನ್ ತನ್ನ ಜೋಳಿಗೆಯನ್ನು ಹೆಗಲಿಗೇರಿಸುತ್ತಾ ಎದ್ದು ನಿಂತು ಹೇಳಿದ, ‘ಹುಳುವಿಗೆ ತನ್ನ ಜಗತ್ತು ಮುಗಿಯಿತು ಅನ್ನಿಸತೊಡಗಿದರೆ ಅದು ಚಿಟ್ಟೆಯಾಗುವ ಹೊತ್ತಾಯಿತು ಎಂದರ್ಥ!’

ವಾ-ಐನ್ ಮಾತು ಕೇಳಿ ಆ ಯುವಕ ಕುಣಿಯುತ್ತಾ ಹೊರಟ.

3 Comments

  1. ಮತ್ತಷ್ಟು ಕಥೆಗಳ ನಿರೀಕ್ಷೆಯಲ್ಲಿ ಇದ್ದೇನೆ…ಬಹಳ ಸೊಗಸಾಗಿ ಮೂಡಿವೆ..ಇವನ್ನ ನಮ್ಮ ವಿಧ್ಯಾರ್ಥಿಗಳಿಗೆ ತಿಳಿಸಿ ದಿನಾಲೂ ಖುಷಿ ಪಡುವೆ..✍️ ಬೆಳಕು ಹರೀಶ್

Leave a Reply