ನಿಮ್ಮ ಆಯ್ಕೆಯ ಬಣ್ಣ ಯಾವುದು ತಿಳಿಸಿ… ನಿಮ್ಮ ಗುಣವನ್ನು ಹೇಳುತ್ತೇವೆ!!

ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಕ್ಲೋಸೆಟ್ ತೆಗೆದು ನೋಡಿದರೆ, ತಮಗೇ ಅರಿವಿಲ್ಲದಂತೆ ತಮಗಿಷ್ಟದ ಬಣ್ಣದ ಬಟ್ಟೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನೋಡಬಹುದು.

ನಮಗೆ ನಿರ್ದಿಷ್ಟ ಬಣ್ಣವು ಇಷ್ಟವಾಗಲು ಕಾರಣವೇನು? ನಮ್ಮ ಬಣ್ಣದ ಆಯ್ಕೆ ನಮ್ಮ ಯಾವ ಗುಣವನ್ನು ತೋರುತ್ತದೆ? ಇಲ್ಲಿದೆ, ಭಾವಕ್ಕೆ ತಕ್ಕಂತೆ ಬಣ್ಣಗಳ ಚುಟುಕು ವಿವರ…

ಕಪ್ಪು : ಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಸೂಕ್ಷ್ಮ ಮನಸ್ಥಿತಿ ಹೊಂದಿರುತ್ತಾರೆ. ಇವರು ಸದಾ ತಮ್ಮದೇ ಆದ ಗುಂಗಿನಲ್ಲಿರುತ್ತಾರೆ. ಹಾಗೆಂದು ಇದನ್ನು ಅಂತರ್ಮುಖತೆ ಎಂದು ಭಾವಿಸಬೇಕಿಲ್ಲ. ಇತರರ ಜೊತೆ ಏನು, ಎಷ್ಟು ಹಂಚಿಕೊಳ್ಳಬೇಕು ಎನ್ನುವ ಕುರಿತು ಜಾಗ್ರತೆ ಹೊಂದಿರುತ್ತಾರೆ.

ಬಿಳಿ : ಇವರಿಗೆ ಪ್ರತಿಯೊಂದೂ ಸುವ್ಯವಸ್ಥಿತವಾಗಿರಬೇಕು. ಅದಕ್ಕಾಗಿ ಯಾರ ಮೇಲೂ ಅವಲಂಬಿತರಾಗದೆ ತಾವೇ ಎಲ್ಲವನ್ನೂ ಮಾಡಿಕೊಳ್ಳುತ್ತಾರೆ. ಜೀವನದಲ್ಲಿಯೂ ಇವರು ಸುಮ್ಮನೆ ಜನರನ್ನು ಗುಡ್ಡೆ ಹಾಕಿಕೊಳ್ಳದೆ, ತಾವು ಒಡನಾಟ ಇಟ್ಟುಕೊಳ್ಳಬಹುದಾದ ಜನರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ.

ಕೆಂಪು : ಕೆಂಪು ಬಣ್ಣವನ್ನು ಇಷ್ಟಪಡುವವರು ತಮ್ಮ ಜೀವನವನ್ನು ಇಡಿಇಡಿಯಾಗಿ ಬದುಕುತ್ತಾರೆ. ತಮ್ಮ ಗುರಿಯತ್ತ ದೃಢ ಹೆಜ್ಜೆಗಳನ್ನಿಡುವ ಇವರನ್ನಿ ಚಾಂಚಲ್ಯ ತೀರ ಅಪರೂಪ.

ನೀಲಿ : ಶಾಂತಿಯನ್ನು ಬಯಸುವ ಸ್ನೇಹಪರ ಜೀವಿಗಳು ನೀಲಿಯನ್ನು ಇಷ್ಟ ಪಡುತ್ತಾರೆ. ಇವರನ್ನು ಸುಲಭವಾಗಿ ನಂಬಬಹುದು. ತಮ್ಮ ಸುತ್ತಮುತ್ತಲೂ, ವೈಯಕ್ತಿಕ ಜೀವನದಲ್ಲೂ ಸ್ಪಷ್ಟತೆಗೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಹಸಿರು : ಇವರು ಎಲ್ಲರನ್ನೂ ಪ್ರೀತಿಸಬಲ್ಲ ವಿಶಾಲ ಹೃದಯಿಗಳು. ಪ್ರಾಮಾಣಿಕರು ಮತ್ತು ನೇರವಂತಿಕೆಯ ಜನ. ತಮ್ಮ ರೆಪ್ಯುಟೇಶನ್ ಬಗ್ಗೆ ಅತೀವ ಕಾಳಜಿ ಹಿಂದಿರುವ ಇವರು, ತಮ್ಮ ಬಗ್ಗೆ ಯಾರು ಏನು ತಿಳಿದಿದ್ದಾರೆ ಎನ್ನುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.

ಹಳದಿ : ಇವರಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ. ಹೊಸತನ್ನು ಕಲಿಯುತ್ತಲೇ ಇರುವುದನ್ನು, ಕಲಿತದ್ದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದು ಇವರಿಗೆ ರೂಢಿ. ಸದಾ ಖುಷಿಖುಷಿಯಾಗಿರುವ ಇವರೆಂದರೆ ಗೆಳೆಯರ ಬಳಗದಲ್ಲಿ ಎಲ್ಲರಿಗೂ ಇಷ್ಟ.

ನೇರಳೆ :  ಕಲಾಭಿರುಚಿ ಹೊಂದಿರುವ, ಅಪರೂಪದ ಚಿಂತನೆ ಹೊಂದಿರುವ ಜನರಿಗೆ ನೇರಳೆ ಬಣ್ಣ ಇಷ್ಟವಾಗುತ್ತದೆ. ಮತ್ತೊಬ್ಬರನ್ನು ಹೃತ್ಪೂರ್ವಕವಾಗಿ ಗೌರವಿಸುವ ಇವರು, ಮತ್ತೊಬ್ಬರಿಂದಲೂ ಅದನ್ನು ಬಯಸುತ್ತಾರೆ. ಕೆಲವೊಮ್ಮೆ ಗರ್ವ ಹೊಂದಿರುವಂತೆ ಕಂಡರೂ ಅದು ಅವರ ಆತ್ಮಾಭಿಮಾನವಾಗಿರುತ್ತದೆ.

ಕಂದು : ಶ್ರಮಜೀವಿಗಳು, ಸ್ನೇಹಪರರು, ಸುಲಭವಾಗಿ ನಂಬಬಹುದಾದವರು. ಇವರಿಗೆ ಥಳಕುಬಳಕು ಇಷ್ಟವಾಗುವುದಿಲ್ಲ. ಇವರಿಗೇನಿದ್ದರೂ ಸುಭದ್ರ ಬದುಕು ಕಟ್ಟಿಕೊಳ್ಳುವತ್ತ ಒಲವು.

ವಿಶೇಷ ಟಿಪ್ಪಣಿ
ಬಣ್ಣಗಳು ಮನಸ್ಸಿನ ಮೇಲೆ ಬೀರುವ ಪ್ರಭಾವ, ಬಣ್ಣಗಳ ಆಯ್ಕೆ ಮತ್ತು ಅದರ ಹಿಂದಿನ ಮನಸ್ಥಿತಿ – ಇವೆಲ್ಲವೂ ಬಹಳ ಹಳೆಯ ಚರ್ಚೆ. ಕಾಲಗಟ್ಟಲೆ ಅಧ್ಯಯನಕಾರರು ಸಂಶೋಧನೆ ನಡೆಸಿ ಬಣ್ಣ ಮತ್ತು ಮನಸ್ಸಿನ ಸಂಬಂಧಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.  ಹೀಗೆ ಹಲವು ಮನಶ್ಶಾಸ್ತ್ರಜ್ಞರು ಕಂಡುಕೊಂಡು ವರದಿ ಮಾಡಿದ ಟಿಪ್ಪಣಿಗಳಿಂದ ಆಯ್ದ ಕೆಲವೇ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.

Leave a Reply