ಬೇಸಿಗೆ ಕಾಲಿಟ್ಟಿದೆ. ಇವು ನಡುನೆತ್ತಿಯ ಸುಡುಬಿಸಿಲಿನ ದಿನಗಳು. ದೇಹದ ಸಂಕಟ ಉಕ್ಕಿ ಬೆವರಾಗಿ ಹರಿದು ಬಳಲಿಸುತ್ತದೆ. ಇಂಥಾ ದಿನಗಳಲ್ಲಿ ನಾವು ನಮ್ಮ ಮನುಷ್ಯತ್ವದ ಖಾತೆಯಲ್ಲಿ ಹಿತಾನುಭವ ಸಂಚಯ ಮಾಡಿಕೊಳ್ಳುವುದು ಹೇಗೆ? ಬೇಸಿಗೆಯ ಧರ್ಮವನ್ನು ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು ~ ಗಾಯತ್ರಿ
ಬೇಸಿಗೆ ದಾಳಿಯಿಟ್ಟಿದೆ. ಗಂಟಲೊಣಗಿ ದರಗಾಗುವ ಕಾಲವಿದು. ಮನುಷ್ಯರಿಗಾದರೂ ಎಲ್ಲಿಂದಲಾದರೂ ಹನಿ ನೀರು ಹೊಂಚಿಸಿಕೊಂಡು ಜೀವ ಉಳಿಸಿಕೊಳ್ಳುವ ಅವಕಾಶವುಂಟು. ಆದರೆ ಪ್ರಾಣಿ ಪಕ್ಷಿಗಳಿಗೆ?
ಪ್ರತಿ ಬೇಸಿಗೆಯಲ್ಲಿ ಸಾವಿರಕ್ಕೂ ಮೀರಿ ಪಕ್ಷಿಗಳು ದಾಹದಿಂದ ಸಾವಪ್ಪುತ್ತವೆಯಂತೆ. ಮೊದಲಾದರೆ ಕಂಡಲ್ಲಿ ನೀರ ಹೊಂಡಗಳು ಇರುತ್ತಿದ್ದವು. ನಾವೀಗ ಅವನ್ನು ನಮಗೂ ಉಳಿಸಿಕೊಂಡಿಲ್ಲ, ಇತರ ಜೀವಿಗಳಿಗೂ ಉಳಿಸಿಕೊಟ್ಟಿಲ್ಲ. ಆದ್ದರಿಂದ ಅವುಗಳ ಸಾವಿಗೆ ನಮ್ಮ ಕೊಡುಗೆಯೂ ಇದೆ. ಇದಕ್ಕೆ ಪ್ರಾಯಶ್ಚಿತ್ತ ಬೇಡವೇ?
ಆದ್ದರಿಂದ ಹೀಗೆ ಮಾಡೋಣ. ನಮ್ಮ ಮನೆ ಬಾಲ್ಕನಿಯಲ್ಲೋ, ತಾರಸಿಯ ಮೇಲೂ, ಕಾಂಪೌಂಡಿನ ತುದಿಯಲ್ಲೋ ಬೋಗುಣಿಯ ತುಂಬ ನೀರು ತುಂಬಿಡೋಣ. ಸಾಧ್ಯವಿದ್ದಷ್ಟೂ ಮನುಷ್ಯರ ಗದ್ದಲವಿರದ ಕಡೆ ಇಡುವುದು ಸೂಕ್ತ. ನೆಲದ ಮೇಲಿಟ್ಟರೆ, ಮನುಷ್ಯನಿಗೆ ಹೆದರುವ ಹಕ್ಕಿಗಳು ನೀರು ಕಂಡೂ ಕುಡಿಯದಂತಾಗಿಬಿಡುತ್ತದೆ. ಹಾಗೆಯೇ, ಗೇಟಿನ ಹೊರಗೆ ಒಂದು ಅಗಲಬಾಯಿಯ ಬಾನಿಯಲ್ಲಿ ನೀರು ಹಾಕಿಡೋದು ಒಳ್ಳೆಯದು. ಬೀದಿ ನಾಯಿಗಳಿಗೆ, ಬೀಡಾಡಿ ದನಗಳಿಗೆ ಅದರಿಂದ ಉಪಯೋಗವಾಗುತ್ತದೆ.
ಚಿಕ್ಕದೋ, ದೊಡ್ಡದೋ, ಬಾಡಿಗೆ ಮನೆಯೋ, ಬಂಗಲೆಯೋ…. ತಲೆ ಮೇಲೊಂದು ಸೂರು, ಮುಚ್ಚಟೆಯ ನಾಲ್ಕು ಗೋಡೆಗಳ ನಡುವೆ ಬದುಕುವ ಭಾಗ್ಯ ನಮ್ಮ ಪಾಲಿಗಿದೆ. ಆದರೆ ಎಷ್ಟೋ ಜನರು ಬೀದಿಯಲ್ಲೇ ಬದುಕು ಕಳೆಯುತ್ತಾರೆ. ಅಥವಾ ಕೆಲಸದ ನಿಮಿತ್ತ, ಹೊಟ್ಟೆಪಾಡಿಗಾಗಿ ಬಿಸಿಲಲ್ಲಿ ಬೀದಿ ಬೀದಿ ಸುತ್ತಬೇಕಿರುತ್ತದೆ. ಅಂಥವರಿಗಾಗಿ ಕಂಪೌಂಡಿನ ಮೇಲೆ ಒಂದು ನಲ್ಲಿ ಇರುವ ಮಡಕೆಯನ್ನಿಟ್ಟು, ಪಕ್ಕದಲ್ಲಿ ಒಂದು ಲೋಟವನ್ನಿಡಿ. ಮಡಕೆಗೆ ಒದ್ದೆ ಬಟ್ಟೆ ಸುತ್ತಿದರೆ ಇನ್ನಷ್ಟು ಒಳ್ಳೆಯದು. ಬಹಳ ಕಾಲದವರೆಗೆ ತಂಪಾಗಿರುತ್ತದೆ, ಮತ್ತು ಮಡಕೆಯೂ ಮುಕ್ಕಾಗುವುದಿಲ್ಲ.
ಹೌದು. ಒಂದು ಕೊಡ ನೀರು ಹೊಂಚಿಕೊಳ್ಳಲು ನಮಗೇ ಕಷ್ಟವಿದೆ. ಆದರೆ, ಇದ್ದುದರಲ್ಲೇ ಹಂಚಿಕೊಳ್ಳುವುದು ನಮ್ಮ ಕರ್ತವ್ಯವೂ ಆಗಿದೆ. ಮನುಕುಲ ಸಹಜೀವಿಗಳಿಗೆ ಭರಿಸಲಾಗದ ಅನ್ಯಾಯವೆಸಗಿದೆ. ನಮ್ಮ ಪಾಪ ಸಾಗರಕ್ಕೆ ದಿನಕ್ಕೊಂದು ಮಡಕೆ ನೀರು ಹನಿಲೆಕ್ಕದ ಪ್ರಾಯಶ್ಚಿತ್ತವಾಗಬಲ್ಲದು. ಅಲ್ಲವೆ?
(ಅಂದಹಾಗೆ, ಮಾರ್ಚ್ 22ರ ಇಂದು ‘ವಿಶ್ವ ಜಲ ದಿನ’)