ಅವಧೂತ ಯಾವ 5 ಗುರುಗಳಿಂದ ಯಾವ ಪಾಠ ಕಲಿತ?

ಭಾಗವತದಲ್ಲಿ ಅವಧೂತನೊಬ್ಬ 24 ಗುರುಗಳಿಂದ ಬೋಧನೆ ಪಡೆದ ಎಂದು ಹೇಳಲಾಗಿದೆ. ಅವುಗಳಲ್ಲಿ ಐವರು ಗುರುಗಳಿಂದ ಅವಧೂತ ಕಲಿತ ಪಾಠಗಳ ಕಿರು ವಿವರ ಹೀಗಿದೆ. ಕಲಿಯುವ ವಿವೇಕವಿದ್ದರೆ ಪ್ರತಿಯೊಂದೂ ನಮಗೆ ಗುರುವೇ ಎಂಬುದನ್ನು ಈ ಪ್ರಕರಣ ಮನದಟ್ಟು ಮಾಡಿಸುತ್ತದೆ. 

ಬೇಟೆಗಾರ
ಒಂದು ಸಲ ಅವಧೂತನು ನಡೆದು ಹೋಗುತ್ತಿದ್ದಾಗ, ಸ್ವಲ್ಪ ದೂರದಲ್ಲಿ ಬಾಣ ಬಿರುಸುಗಳಿಂದ ಕೂಡಿದ ಮದುವೆ ಮೆರವಣಿಗೆಯೊಂದು ವಾದ್ಯಗಳ ಸದ್ದನ್ನು ಹೊಮ್ಮಿಸುತ್ತ ಬರುತ್ತಿತ್ತು. ಅದರ ಸಂಭ್ರಮದ ಸದ್ದನ್ನು ಕೇಳಿ ಅವಧೂತನು ಮುಂದೆ ಹೋಗದೆ ಅಲ್ಲಿಯೇ ನಿಂತುಕೊಂಡನು. ಅಲ್ಲಿಯೇ ಸ್ವಲ್ಪ ದೂರದಲ್ಲಿ ಬೇಟೆಗಾರನೊಬ್ಬ ಬಿಲ್ಲು ಹಿಡಿದು ತನ್ನ ಬೇಟೆಯತ್ತ ಗುರಿ ನೆಟ್ಟಿದ್ದನು. ಮೆರವಣಿಗೆಯ ಸದ್ದು ಹತ್ತಿರ ಬರುತ್ತ ಜೋರಾಗುತ್ತಿದ್ದರೂ ಬೇಟಗಾರ ವಿಚಲಿತಗೊಳ್ಳದೆ ತನ್ನ ಏಕಾಗ್ರತೆಯಲ್ಲಿ ಮುಂದುವರೆದಿದ್ದನು.
ಅದನ್ನು ಕಂಡು ಅವಧೂತನು ಬೇಟೆಗಾರನಿಗೆ ಕೈಮುಗಿದು, “ನನಗೆ ನೀವೇ ಗುರು. ನಾನು ಧ್ಯಾನಕ್ಕೆ ಕುಳಿತಿರುವಾಗ ಮನಸ್ಸು ಯಾವುದರಿಂದಲೂ ವಿಚಲಿತವಾಗದೆ ತಲ್ಲೀನವಾಗಿರಬೇಕು ಅನ್ನುವ ಪಾಠವನ್ನು ನಿಮ್ಮಿಂದ ಕಲಿತೆನು” ಅನ್ನುತ್ತಾ ವಂದಿಸಿದನು.

ಬೆಸ್ತ
ಅವಧುತನು ನಡೆಯುತ್ತಾ ನದೀ ತೀರಕ್ಕೆ ಬಂದನು. ಮುಂದಿನ ಊರಿಗೆ ಹೋಗುವ ದಾರಿ ತಿಳಿಸಯದೆ, ಅಲ್ಲಿ ಮೀನು ಹಿಡಿಯಲು ಗಾಳ ಹಾಕಿ ಕುಳಿತಿದ್ದ ಬೆಸ್ತನೊಬ್ಬನನ್ನು ಕುರಿತು, “ಆ ಊರಿಗೆ ಹೋಗುವ ದಾರಿ ಯಾವುದು?” ಎಂದು ವಿಚಾರಿಸಿದನು. ನೀರಿನಲ್ಲಿದ್ದ ಗಾಳದ ಬೆಂಡಿಗೆ ಸಿಕ್ಕಿಸಿದ್ದ ಆಹಾರವನ್ನು ಮೀನು ಇನ್ನೇನು ಕಚ್ಚಿಕೊಳ್ಳಲಿದೆ ಎಂದು ಕಾಯುತ್ತಾ ಕುಳಿತಿದ್ದ ಬೆಸ್ತ, ಈತನ ಪ್ರಶ್ನೆಗೆ ಗಮನವನ್ನೆ ಕೊಡಲಿಲ್ಲ. ಅವನ ಗಾಳಕ್ಕೆ ಮೀನು ಸಿಕ್ಕಿಬಿದ್ದ ಮೇಲೆ, “ಕ್ಷಮಿಸಿ ಸ್ವಾಮಿ, ನೀವೇನೋ ಕೇಳುತ್ತಿದ್ದಿರಿ…” ಅಂದನು.
ಅವಧೂತನು ಅವನಿಗೆ ಶಿರ ಬಾಗಿ, “ಸ್ವಾಮಿ, ನೀವು ನನ್ನ ಗುರುಗಳು. ಇಷ್ಟದೇವರ ಸ್ಮರಣೆ ಮಾಡುವಾಗ ಮನಸ್ಸು ಹೇಗೆ ಏಕಾಗ್ರವಾಗಿರಬೇಕು ಎಂಬುದನ್ನು ನಿಮ್ಮಿಂದ ಕಲಿತೆನು” ಎಂದು ನಮಸ್ಕರಿಸಿದನು.

ಹದ್ದು
ಮುಂದೆ ನಡೆಯುತ್ತಿರಲು, ಬಾಯಲ್ಲಿ ಮೀನನ್ನು ಕಚ್ಚಿಕೊಂಡಿದ್ದ ಒಂದು ಹದ್ದನ್ನು ಕಾಗೆ ಹಿಂಡು ಹಿಂಬಾಲಿಸುತ್ತ ಇದ್ದುದನ್ನು ನೋಡಿದನು. ಆ ಕಾಗೆ ಹಿಂಡು ಹದ್ದಿನ ಮೈಮೇಲೆ ಎರಗುತ್ತಾ ಪೀಡಿಸುತ್ತಿತ್ತು. ಆ ಹದ್ದು ತನ್ನ ಬಾಯಲ್ಲಿದ್ದ ಮೀನನ್ನು ಕೆಳಕ್ಕೆಸೆದು ಒಂದು ಮರದ ಮೇಲೆ ವಿಶ್ರಮಿಸಿತು. ಕಾಗೆ ಹಿಂಡು ಹದ್ದನ್ನು ಬಿಟ್ಟು ಕೆಳಗೆ ಬಿದ್ದ ಮೀನಿನತ್ತ ಹಾರಿತು.
ಇದನ್ನು ಕಂಡ ಅವಧೂತನು “ನೀನು ನನ್ನ ಗುರು. ಉಪಾಧಿಗಳಿಂದ ಮುಕ್ತನಾದರೆ ಶಾಂತಿ ಲಭಿಸುವುದು ಎಂಬುದನ್ನು ನಿನ್ನಿಂದ ಅರಿತೆ” ಎನ್ನುತ್ತಾ ಹದ್ದಿಗೆ ಕೈಮುಗಿದನು.

ಕೊಕ್ಕರೆ
ಅದೇ ನದಿಯ ತೀರದಲ್ಲೆ ಇನ್ನೊಂದು ವಿದ್ಯಮಾನವನ್ನು ಅವಧೂತನು ಕಂಡನು. ಕೊಕ್ಕರೆಯೊಂದು ಕಳ್ಳಹೆಜ್ಜೆ ಇಡುತ್ತಾ ತನ್ನ ಕಣ್ಣಳತೆಯಲ್ಲಿದ್ದ ಮೀನನ್ನು ಹಿಡಿಯಲು ಹೊಂಚುಹಾಕುತ್ತಿತ್ತು. ಬೇಟೆಗಾರನೊಬ್ಬ ಕೊಕ್ಕರೆಯ ಬೆನ್ನ ಹಿಂದೆ ನಿಧಾನವಾಗಿ ನಡೆಯುತ್ತಾ, ಅದನ್ನು ಬಲೆಗೆ ಕೆಡವಿಕೊಳ್ಳಲು ಹವಣಿಸುತ್ತಿದ್ದನು. ಆದರೆ ಮೀನನ್ನು ಹಿಡಿಯಲು ಹೊರಟಿದ್ದ ಕೊಕ್ಕರೆಗೆ ಇದರ ಅರಿವೇ ಇರಲಿಲ್ಲ.
ಅವಧೂತನು “ನನ್ನ ಮನಸ್ಸು ಧ್ಯಾನಿಸುತ್ತಿರುವಾಗ ಈ ಕೊಕ್ಕರೆಯನ್ನು ಅನುಸರಿಸಲಿ. ಈ ಕೊಕ್ಕರೆ ನನ್ನ ಗುರು” ಎಂದು ಅದಕ್ಕೆ ವಂದಿಸಿ ಮುಂದೆ ಹೊರಟನು.

ಜೇನು ಹುಳುಗಳು
ಅಲ್ಲೊಂದು ಬೃಹದಾಕಾರದ ಮರದ ಟೊಂಗೆಯಲ್ಲಿ ಜೇನುಹುಳುಗಳು ಗೂಡು ಕಟ್ಟಿದ್ದವು. ಅವಧೂತ ನೋಡುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಬಂದು, ಗೂಡನ್ನು ಹಿಂಡಿ ಜೇನುತುಪ್ಪವನ್ನು ಸಂಗ್ರಹಿಸಿಕೊಂಡು ಹೊರಟುಹೋದನು. ಇದನ್ನು ನೋಡಿದ ಅವಧೂತನು “ಈ ಜೇನುಹುಳಗಳು ನನ್ನ ಗುರುಗಳು. ಯಾರು ಹಣವನ್ನು ಸಂರಕ್ಷಿಸಿಡುತ್ತಾರೋ ಅವರ ಪಾಡು ಇಷ್ಟೇ ಎಂದು ಇವು ತೋರಿಸಿಕೊಟ್ಟವು” ಎಂದು ಕೈಮುಗಿದನು.

Leave a Reply