ಸವಲತ್ತು ಕಸಿಯಬಹುದು, ಗುಣ – ಜ್ಞಾನ ಕಸಿಯಲಾಗದು : ನೀತಿಶತಕ

ಅಂಭೋಜಿನೀ ವನವಿಹಾರವಿಲಾಸಮೇವ
ಹಂಸಸ್ಯ ಹಂತಿ ನಿತರಾಂ ಕುಪಿತೋ ವಿಧಾತಾ |
ನ ತ್ವಸ್ಯ ದುಗ್ಧಜಲಭೇದವಿಧೌ ಪ್ರಸಿದ್ಧಾಂ
ವೈದಗ್ಧ್ಯಕೀರ್ತಿಮಪಹರ್ತುಮಸೌ ಸಮರ್ಥಃ|| ನೀತಿ ಶತಕ 14||

ಒಬ್ಬ ರಾಜನಿಗೆ ಅಥವಾ  ಶ್ರೀಮಂತನಿಗೆ ಒಬ್ಬ ವಿದ್ವಾಂಸನನ್ನು ನಿಯಂತ್ರಿಸಬೇಕು ಎಂಬ ದುಷ್ಟಬುದ್ಧಿ ಬಂದರೆ; ಆ ರಾಜ ಏನು ಮಾಡಬಹುದು, ಏನು ಮಾಡಲಾಗದು ಅನ್ನುವುದನ್ನು ಒಂದು ಸುಂದರ ದೃಷ್ಟಾಂತದ ಮೂಲಕ ಭರ್ತೃಹರಿ ಇಲ್ಲಿ ವಿವರಿಸಿದ್ದಾನೆ.

ಒಂದು ಹಂಸ ಇದೆ ಅಂದುಕೊಳ್ಳೋಣ.  ಚತುರ್ಮುಖ ಬ್ರಹ್ಮನಿಗೆ ಆ ಹಂಸದ ಮೇಲೆ ಸಿಟ್ಟು ಬಂದಿದೆ ಅಂತ ಭಾವಿಸೋಣ… ಆಗ ಬ್ರಹ್ಮ ಹೆಚ್ಚೆಂದರೆ ಆ ಹಂಸಕ್ಕೆ ಏನುತಾನೆ ಮಾಡಬಹುದು?

ಕಮಲದ ಹೂವಿನ ಸರೋವರದಲ್ಲಿ ವಿಹರಿಸುವುದು ಹಂಸಗಳಿಗೆ ಬಹಳ ಇಷ್ಟ . ಕೋಪಗೊಂಡ ಬ್ರಹ್ಮ ಆ ಪರಿಸರವನ್ನು ನಾಶಮಾಡಿ ಆ ಹಂಸಕ್ಕೆ ತೊಂದರೆ ಕೊಡಬಹುದಷ್ಟೇ ಹೊರತು ಹಂಸದ ವಿಹಾರವನ್ನು ಆನಂದಿಸುವ ಗುಣವನ್ನು ನಾಶಪಡಿಸಲಿಕ್ಕೆ ಬರುವುದಿಲ್ಲ. ಹಂಸಗಳ ವಿಶೇಷ ಗುಣವಾದ ಹಾಲನ್ನು ನೀರಿನಿಂದ ಬೇರ್ಪಡಿಸುವ ಶಕ್ತಿಯನ್ನು ಸ್ವತಃ ಬ್ರಹ್ಮನಿಗೂ ನಾಶಪಡಿಸಲು ಸಾಧ್ಯವಿಲ್ಲ. ಅದು ಹಂಸದ ಸ್ವಭಾವ. ಅದು ಹಂಸದ ಅಸ್ಮಿತೆ.

ಹಾಗೆಯೇ; ರಾಜನಿಗೆ ವಿದ್ವಾಂಸನ ಮೇಲೆ ಕೋಪ ಬಂದು ಆ ವಿದ್ವಾಂಸನ ಸಕಲ ಸವಲತ್ತುಗಳನ್ನು ವಶಪಡಿಸಿಕೊಂಡು, ಆತನನ್ನು ತನ್ನ ರಾಜ್ಯದಿಂದ ಹೊರಹಾಕಬಹುದು. ಆದರೆ, ಆತನ ವಿದ್ವತ್ತನ್ನು ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಭೌತಿಕ ವಸ್ತುಗಳನ್ನು ಕಿತ್ತುಕೊಳ್ಳಬಹುದು. ದೇಹಕ್ಕೆ, ಜೀವಕ್ಕೆ ಹಾನಿ ಮಾಡಬಹುದು. ಆದರೆ ಜ್ಞಾನಕ್ಕೆ, ಗುಣಕ್ಕೆ, ಆಲೋಚನೆಗೆ, ಸ್ವಭಾವಕ್ಕೆ ಧಕ್ಕೆ ತರಲು ಸಾಧ್ಯವೇ ಇಲ್ಲ.

ಈ ಮಾತನ್ನು ಮುಂದೆ ಹಲವರು ಹಲವು ಬಗೆಯಲ್ಲಿ ಹೇಳಿದ್ದನ್ನು ಕೇಳಿದ್ದೇವೆ. “ನೀವು ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನು ಕೊಲ್ಲಲಾರಿರಿ” ಎಂದು ಚೆ ಗುವೆರಾ ಮತ್ತು ಭಗತ್ ಸಿಂಗ್ ಇಬ್ಬರ ಹೇಳಿಕೆಯೂ ಇದೆ. ಪಶ್ಚಿಮದ ಕವಿ ನೆರೂದ “ನೀವು ಹೂಗಳನ್ನು ಹೊಸಕಿ ಹಾಕಬಹುದೇ ಹೊರತು ವಸಂತ ಬರದಂತೆ ತಡೆಯಲಾರಿರಿ” ಅಂದಿದ್ದಾನೆ.

ಒಟ್ಟಾರೆ ಆಶಯ ಇಷ್ಟೇ. ಬಾಹ್ಯಕ್ಕೆ ಕಾಣುವ ಭೌತಿಕ – ಐಹಿಕ ಸಂಗತಿಗಳಿಗೆ ನೀವು ಧಕ್ಕೆ ತರಬಹುದು. ಆದರೆ, ಅಂತರಂಗದಲ್ಲಿ ಹುಡುಗಿರುವ ಜ್ಞಾನಕ್ಕೆ, ಸ್ವಭಾವಕ್ಕೆ, ಗುಣ ವಿಶೇಷಕ್ಕೆ ಕುಂದುಂಟು ಮಾಡಲು ಸಾಧ್ಯವಿಲ್ಲ.

Leave a Reply