ಸೊಬಗಿನ ಹೊನಲು : ಕನ್ನಡದಲ್ಲಿ ಶ್ರೀ ಶಂಕರ ಕೃತ ಸೌಂದರ್ಯ ಲಹರಿ ~ ಭಾಗ 2

shivprakashಮೂಲ ಸಂಸ್ಕೃತದಲ್ಲಿರುವ ಸೌಂದರ್ಯ ಲಹರಿ ಶ್ಲೋಕಗಳನ್ನು ನಾಡಿನ ಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ.ಎಚ್.ಎಸ್.ಶಿವಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಎರಡು ಕಂತುಗಳಲ್ಲಿ ಪ್ರಕಟಿಸಿದ್ದೇವೆ. ಮೊದಲ ಕಂತು ಇಲ್ಲಿದೆ:  https://aralimara.com/2019/03/24/saundarya/

 

ಸೌಂದರ್ಯ ಲಹರೀ

(42ರಿಂದ 100)

Screenshot-21-658x380

ಮಾಣಿಕದ ಹರಳುಗಗಳೊಂದಾಗಿ ಹೊಳೆವ ನಿನ್ನ ಮಕುಟವ
ಮನಸಾರೆ ಹಾಡಿಹೊಗಳುವಗ್ಗಳದ ಕವಿವರೇಣ್ಯನಿಗೆ
ಈರಾರು ಸೂರಿಯರೊಂದಾಗಿ ಬೆಳಗುವ ಶಶಿ ಬಿಂಬ
ಹಲರಂಗಿನ ಕಾಮನ ಬಿಲ್ಲಂತೆ ಕಂಡರೆ ಸೋಜಿಗವೆ? | 42 |

ನಮ್ಮ ತಮ ಹರಿಸಲಿ ಬಿರಿದ ನೀಲಿಯ ತಾವರೆ ಗುಣ್ಪಂತೆ
ನುಣ್ಣನೆಯ, ಒತ್ತಾದ, ಮೆತ್ತನೆಯ ನಿನ್ನ ಹೆರಳ ರಾಶಿ
ಇಂದ್ರನ ಸ್ವರ್ಗ ವನದ ಹೂಗಳೆಲ್ಲಾ ಬರಲಿ ಹೂಡಲಿ
ಅಲ್ಲೇ ಬಿಡಾರ ಸಹಜ ಗಮಲನುಳಿಸಿ ಕೊಳಲಿ ಅಲ್ಲಿ | 43 |

ಕ್ಷೇಮ ತರಲಿ ನನಗೆ ನಿನ್ನ ಮೊಗದ ಚಲುವಿನ ಹೊನಲು
ಸಿಂಧೂರ ಧರಿಸಿ ಹೊಳೆಯಾಗಿ ಹರಿವ ನಿನ್ನ ಬೈತಲೆಗೆರೆ
ನಿನ್ನ ಒತ್ತು ಕೂದಲ ಘನ ತಿಮಿರ ಸೆರೆಗೆ ಸಿಲುಕಿಯೂ
ಎಸೆಯುವೆಳೆನೇಸರ ಕೆಂಗಿರಣ ಸರಣಿಯಂತೆ | 44 |

ಗುಂಗುರು ಗಂಗುರು ನಿನ್ನ ಕಡುಗಪ್ಪು ಕೂದಲಿನ ದುಂಬಿ
ಗುಂಗುಡುತ ಎರಗತಿರುವಾಗ ನಿನ್ನ ಮೊಗದ ಸೊಗಸು
ನಾಚಿಸಿದೆ ತಾವರೆಯ. ನಿನ್ನ ಮುಗುಳನಗೆ ದಂತಕಾಂತಿ
ಘಮಘಮಾ ಪರಾಗ ಕಾಮಹರ ಕಂಗಳಿಗೆ ಕಲ್ಲುನಾರು | 45 |

ನಿನ್ನ ಲಲಾಟ ಲಕಲಕಲಕಿಸುತಿದೆ ನಕಲೆನಿಸುವ ಹಾಗೆ
ನಿನ್ನ ಮಕುಟದಲಿರುವ ಶಶಿಬಿಂಬದಿನ್ನೊಂದು ಬದಿಯಂತೆ
ತಲೆಕೆಳಗು ಮಾಡಿ ಕೂಡಿಸಲೆರಡನೂ ಸುಧೆಯ ರಸ ಸೂಸಿ
ಹೊಳೆಯುವುದು ಹುಣ್ಣಿಮೆದಿಂಗಳ ತುಂತುಂಬು ಬೆಳಕಿನಂತೆ | 46 |

ಇಳೆಯ ಅಳಲುಗಳ ಕಳೆಯಲೆಳೆಸುವ ನಿನ್ನೆರಡೂ ಹುಬ್ಬು
ದುಂಬಿಗಳಂತಂದವಾಗಿರುವ ನಿನ್ನ ಕಣ್ಣುಗಳ ಹದೆಯೇರಿಸಿ
ಬಲದ ಕೈಯಲಿ ಹಿಡಿದ ಮನುಮಥನ ಮುಂದೋಳು, ಹಿಡಿ
ಹಿಂದೆ ನಡುವಡಗಿದ ಬಿಲ್ಲು ತಾನೇ ಎಂಬ ಹಾಗೆ ತಾಯೆ | 47 |

ಸೂರ್ಯನ ಹಾಗೆ ಹಗಲು ತೋರುವುದು ನಿನ್ನ ಬಲದ ಕಣ್ಣು
ಚಂದಿರನ ಹಾಗೆ ಇರುಳ ಬೆಳಗುವುದು ನಿನ್ನ ಎಡದ ಕಣ್ಣು
ಹಗಲಿರುಳುಗಳೆರಡೂ ಕೂಡುವೆಡೆಯ ಹೊನ್ನ ತಾವರೆಯಂಥ
ಇನ್ನೊಂದು ಬೆಳಕ ಸೃಜಸುವುದು ಮೂರನೆಯ ನಿನ್ನ ಕಣ್ಣು | 48 |

ವಿಶಾಲೆ ಕಲ್ಯಾಣೀ ಅರಳು ಹೂ ಚಲುವೆ ಅಯೋಧ್ಯೆ
ಕೃಪಾಧಾರೆಗಾಧಾರವಾದ ಮಧುಮಧುರ ಮಧುರೆ
ಆವಾಗಳೂ ಪೊರೆಯುವಾವಂತಿ ನಿನ್ನ ಕಂಗಳು
ಬಹುನಗರ ವಿಸ್ತಾರೆ ವಿಜಯೇ ತಕ್ಕುವು ನಿನ್ನ ಹೆಸರಿಗೆ | 49 |

ಕವಿವರರ ಕವಿತೆ ಹೂಗೊಂಚಲಿನ ರಸ ಸವಿಯುವ ನಿನ್ನ
ಕಿವಿಗಳೆಡರ ಜೊತೆಯಿರುವ ನವರಸದಾಹಿ ಕಂಗಳೆಂಬ
ದುಂಬಿ ಜೋಡಿಯ ಕಂಡು ಕರುಬಿದ ಕರುಬಿನಿಂದ
ಕಡುಗೆಂಪಾಯಿತೇ ಹೇಳು ನಿನ್ನ ಮೂರನೆಯ ಕಣ್ಣು? | 50 |

ಶಿವನ ಶೃಂಗಾರದಲಿ ನೆನೆವೆ ಹೇಸುವೆ ಅವನ ನಿಂದಕರಿಗೆ
ಗಂಗೆಗೆ ಕಡುಮುಳಿವೆ ವಿಸ್ಮಯಗೊಂಬೆ ಹರಸಾಹಸಗಳಿಗೆ
ಹೆದರುವೆ ಹರನ ಹಾವಿಗಳಿಗೆ ಸರಸವಾಡುವೆ ಸಖಿಯರ ಜೊತೆ
ಕೆಂಪು ತಾವರೆ ಚಲುವಿನ ತಾಯೇ ನಿನ್ನ ಕರುಣ ಸಾಕು ನನಗೆ | 51 |

ನಿನ್ನ ರೆಪ್ಪೆ ಕಿವಿ ತನಕ ಚಾಚಿಕೊಂಡಿವೆ ಗರಿಗಳಂತೆ
ಮೂಪುರಹರನ ಮನದ ನೆಮ್ಮದಿಯ ಕದಡಲೆಳೆಸಿದಂತೆ
ಮಲೆಯ ದೊರೆಯ ಕುಲದ ಮಕುಟಮಣಿಯೆ ನಿನ್ನ
ಎರಡು ಕಣ್ಞು ಕಿವಿತನಕ ಸೆಳೆದ ಸ್ಮರನಂಬಿನಂದಚಂದ | 52 |

ಮೂಬಣ್ಣಗಳ ನಿನ್ನ ಕಂಗಳಿಗೆ ಕಾಡಿಗೆಯ ಪೂಸಿದಂತೆ
ಮೂರೂ ಕಂಗಳು ಶೋಭಿಸುತಿವೆ ಹೇ ಈಶಾನವನಿತೆ
ಮರಳಿ ಹಡೆಯಲು ವಿಲಯವಾದ ಅಜ, ಹರಿ, ರುದ್ರರನ್ನು
ಸತುವ, ರಜಸು, ತಮಸು ಈ ಮೂರು ಗುಣಗಳಾಗಿ. | 53 |

ಪಾವನಗೊಳಿಸುವೆ ನಮ್ಮ ಪಶುಪತಿಗಧೀನ ಮನದವಳೆ
ಕರುಣೆಕರೆವೆ ಕೆಂಪು, ಬಿಳಿ, ಕಡುನೀಲಿ ಮೂರುಕಣ್ಣುಗಳಿಂದ
ಕೆಂಪನೆಯ ಶೋಣೆ, ಬೆಳ್ಳನೆ ಗಂಗೆ, ಕಡುನೀಲಿ ಯಮುನೆ
ಪುಣ್ಯನದಿಗಳ ಕೂಡಲದ ಪುಣ್ಯ ತೀರ್ಥದಲಿ ನಮ್ಮ ಮೀಸಿ | 54 |

ನಿನ್ನ ಕಣ್ದೆವು ಜಗದುದಯ, ನೀನು ಕಣ್ಮುಚ್ಚಿದರೆ ಅಸ್ತ
ಅನ್ನುವರು ಅರಿತ ಹಿರಿಯರು, ಗಿರಿಗಳೊಡೆಯನ ಮಗಳೆ
ಕಣ್ಮುಚ್ಚಿದರೆ ನೀನು ಮಹಾಪ್ರಳಯ ಬಳಿಕ ಎಲ್ಲ ವಿನಾಶ—
ಕಣ್ಣುಗಳ ನೀ ಸದಾ ತೆರೆದಿರಲಿಕೆ ಇದೇ ಕಾರಣವೆ? | 55 |

ಕಿವಿತನಕವಿರುವ ನಿನ್ನ ಕಣ್ಣುಗಳು ದೂರುವುವೊ ತಮ್ಮೀ
ಅನುಮಾನದಿಂದ ನೀರಲಡಗುವುವು ತೆರೆದೆವೆ ಮೀನುಗಳು
ಬೆಳಗು ಹರಿದೊಡನೆ ನೀಲಿ ನೈದಿಲೆಯ ಕದ ಹಾಕಿ
ಮನೆತೊರೆದ ಸಿರಿದೇವಿ ಸೇರುವಳು ನಿನ್ನ ಕಂಗಳಲ್ಲಿ | 56 |

ನೈದಿಲೆಯ ಸೊಬಗಿನ ನೀಳ ಕಂಗಳ ಬೆಳಕಿನ ನೀರಿಂದ
ಜಳಕ ಮಾಡಿಸು ನಾನೆಂಬ ದೀನನಿಗೆ ಶಿವೆಯೆ ದಯ ಮಾಡಿ
ನಾನಾಗುವೆನು ಧನ್ಯ ಆ ಬಳಿಕ. ನಿನಗೇನೂ ಕೇಡಿಲ್ಲ
ಮಹಲು ಮಹಡಿಗಳ ಜೊತೆ ಅಡವಿಗಳನೂ ಬೆಳಗನೆ ತಣ್ಗದಿರ? | 57 |

ಡೊಂಕು ಡೊಂಕುನಿನ್ನೆರಡು ಕಿವಿಗಳಂಚು,ಮಲೆಗಳಣುಗಿಯೆ,
ಉಂಟು ಮಾಡದು ಯಾರಲ್ಲಿ ಹೇಳು ಹೂಬಿಲ್ಲನ ಭಾವನೆಯ?
ಇನ್ನು ಆ ವಾರೆನೋಟವು ದಾಟಿ ಕಿವಿಯ ಹದ್ದುಗಳನ್ನು
ಕಾಣಿಸದೆ ಗುರಿಹಿಡಿದನ ಎಸೆದ ಮದನ ತೀರದಂತೆ? | 58 |

ಕೆನ್ನೆ ಕನ್ನಡಿಗಳಲಿ ಪ್ರತಿಫಲಿಸಿ ನಿನ್ನೆರಡು ವಾಲೆಗಳು
ಮನ್ಮಥನ ನಾಕುಗಾಲಿಯ ನಿನ್ನ ಮುಖದ ರಥ-
ಹತ್ತಿ ಚಂದ್ರಸೂರ್ಯಗಾಲಿಯ ಭೂಮಿರಥವೆಂಬಂತೆ
ಮುನ್ನುಗ್ಗುವ ಸಾಯುಧ ವೀರ ಮಾರ ಕಾಮಾರಿಯ ಕಡೆಗೆ | 59 |

ಸುಧೆಯ ಸವಿಯ ಮೀರಿದ ನಿನ್ನ ಇನಿವಾತುಗಳ ಮೊಗೆದು
ಕುಡಿಕುಡಿದು ತನ್ನ ಕಿವಿಯ ಬೊಗಸೆಗಳಿಂದ ಸರಸತಿಯು
ತಲೆದೂಗಿಗಾಗ ನಿನ್ನ ನುಡಿಯ ಬೆಡಗುಗಳಿಗೆ ಮರುಮರುಳಿ
ಝಣಝಣಝಣಾ ಎಂದು ಮರುನುಡಿವವಳ ಜುಮುಕಿ | 60 |

ಮಂಜುಮಲೆ ಸಂತತಿಯ ಎತ್ತರದದಲೆಸೆವ ಗುಡಿಯೆ
ನಿನ್ನ ಬಿದಿರು ಕೊಳವೆಯ ಹೋಸುವ ನೀಳ ನಾಸಿಕ ಈಡೇರಿಸಲಿ
ವಾಂಛೆಗಳ. ಅದರೊಳಗೆ ತಂಬಿದ ಮುತ್ತುಗಳ ಚಂದ್ರಸ್ವರ
ರೇಚಿಸುವಾಗ, ಹೊರಗಡೆಯೂ ಇವೆ ಬೆಲೆಯಿರದ ಮುತ್ತುಗಳು | 61 |

ಕೇಳು ಸುದತಿ! ನಿನ್ನ ಅತುಲ ಅಸಲು ಚೆಂದುಟಿಗೆ ಉಪಮೆ
ಹವಳದ ಬಳ್ಳಿ ತಾ ಬೆಳೆದು ಫಲ ನೀಡಿದಾಗ ಮಾತ್ರ
ನಿನ್ನ ತುಟಿಗಳ ಕೆಂಪು ರಂಗನು ತುಸತುಸಾ ಬಿಂಬಿಸುವ
ತೊಂಡೆ ಹಣ್ಣುಗಳಿಗೆ ಪೂರ್ಣ ಹೋಲಿಕೆಯ ಪುಣ್ಯವಿಲ್ಲ ಇಲ್ಲ | 62 |

ನಿನ್ನ ತಿಂಗಳುಮೊಗದ ಮುಗುಳುನಗೆ ಬೆಳಕು ಹೊನಲನು
ಹೀರಿ ಹೀರಿ ಮಿತಿ ಮೀರಿ ಮೀರಿ ಚಕೋರಗಳು ಕೊನೆಗೆ
ರುಚಿಗೆಡಲು ಕೊಕ್ಕುಗಳು ಹುಳಿರಸಕೆ ಬಯಬಯಸಿ
ಕುಡಿಯುತಿವೆ ಪ್ರತಿ ಇರುಳೂ ತೆಳುಗಂಜಿಯಂತೆ ಸೊದೆಯ | 63 |

ಬಿಡುವಿರದೆ ಪತಿ ಶಿವನ ಅಗಣಿತ ಗುಣ ಗಾನ ಜಪದಲ್ಲಿ
ತೊಡಗಿರುವ ನಿನ್ನ ನಾಲಗೆಗೆ ಕೆಂಪು ದಾಸವಾಳದಂತೆ
ಅದರ ತುದಿಯಲ್ಲಿ ಸರಸತಿಯ ಪಳಿಕೆ ಬೆಳುಮೈಯಿ
ಬದಲಾಗುತಿದೆ ಹರಳು ಮಾಣಿಕದಂತೆ ಕೆಂಪಾಗಿ. | 64 |

ಸಂಗರದಲಿ ಅಸುರಕುಲದ ಕವಚ ಶಿರಸ್ತ್ರಾಣಗಳ ಗೆದ್ದು
ಹಿಂದಿರುಗಿದಾಗ ನೀನು ಶಿವನೆಂಜಲ ಸೇವಿಸವೆಂದ
ಉಪೇಂದ್ರ, ಇಂದ್ರ ಸ್ಕಂಧಾದಿ ದೇವತೆಗಳು ನಿನ್ನ
ತಂಬುಲದ ಕಪ್ಪುರದ ಬಿಳಿ ತುಣುಕಗಳ ತಿನುತಿರುವರು | 65 |

ವೀಣೆ ನುಡಿಸುತ ವಾಣಿ ಪಶಪತಿಯ ಹಲಗೆಲುವುಗಳ
ಗಾನ ಮಾಡುತಿರಲು ತಲೆದೂಗಿ ನೀನು ಸೈಸೈಯೆನಲು
ವೀಣೆ ನುಡಿಯ ನಗೆಪಾಟಲಾಗಿಸುವ ನಿನ್ನಿನಿದನಿ ಕೇಳಿ
ನಾಚಿ ವಾಣಿ ವೀಣೆಯ ಹುದುಗಿಸುವಳು ಹೊದಿಕೆಯಲ್ಲಿ | 66 |

ಮಗಳೆ ಮಗಳೆಂತನ ತುಹಿನಗಿರಿದೊರೆ ಹಿಡಿದೆತ್ತಿದ ಗಲ್ಲ
ಕೆಳದುಟಿಯ ರಸ ಕುಡಿಯಲು ಶಿವ ಹಿಡಿದೆತ್ತುದಿದ್ದ ಗಲ್ಲ
ಹರನ ಕರ ಹಿಡಿದ ಮುಖಗನ್ನಡಿಯ ಹಿಡಿಯಾಗಿರುವ ಗಲ್ಲ
ಬಣ್ಣಿಸಲೆಂತು ನಾನು? ಹೋಲಿಕೆಯಿಲ್ಲದ್ದು ನಿನ್ನ ಗಲ್ಲ | 67|

ಪುರಹರನ ತನ್ನ ತೋಳುಗಳಲ್ಲಿ ನಿನ್ನನಪ್ಪಿಕೊಂಡಾಗೆಲ್ಲ
ಪುಳಕಿತ ಮೊಗದಾವರೆಯ ದಂಟಾಯ್ತು ನಿನ್ನ ಕೊರಳು
ಅದರಡಿಯ ಮುತ್ತಿನ ಮಾಲೆ ಬಿಳುಪಾದರೂ ಈಗದಕೆ
ಕೃಷ್ಣಾಗುರುಲೇಪನದಿಂದ ಕಮಲದಂಟಿನ ಸೊಬಗು | 68 |

ಹೇ ಹಾಡುಗಾತಿ! ತೋರಿವೆ ನಿನ್ನ ಕೊರಳ ಆ ಮೂರುಗೆರೆಗಳು
ಮದುವೆಯಲ್ಲಿ ಶಿವನು ನಿನಗಿತ್ತ ಸೂತ್ರದ ಮೂರು ಎಳೆಗಳಂತೆ
ಸೊಗಸುತಿವೆ ಆ ಮೂರು ನಾನಾ ಬಗೆಯ ಇನಿರಾಗಗಳ ಮೂಲ
ಮೂರಾಗಿರುವ ರಾಗರಾಣಿಯರರಾಜ್ಯಗಳ ಗಡಿರೇಖೆಯಂತೆ | 69 |

ನಳಿನದಂತೆ ಚಲುವಾದ ನಿನ್ನ ನಾಕು ತೋಳುಗಳನು
ನಾಕೂ ಬಾಯ್ ತುಂಬ ಹೊಗಳುತಿರುವ ನಳಿನಭವನು
ಮೊದಲ ತಲೆಯನು ಚಿವುಟಿ ಬಿಸುಟ ಶಿವನ ನಖಕೆ ಅಂಜಿ
ನಾಕಾರ ತಲೆಗಳ ಉಳುಹಿಕೊಳಲು ನಿನಗೆ ಶರಣು ಬಂದು | 70 |

ನಿನ್ನ ಉಗುರಿಂದೊಗೆವ ತಾವರೆ ಮೀರಿದ ಕಾಂತಿಗೆ,
ಆ ಕೈಗಳಿಗೆ ಯಾವ ಉಪಮೆ?, ಹೇಳು ನನಗೆ ಉಮೆ
ಲಕುಮಿ ಅಂಗಾಲು ಅರಗು ರಸದಂದ ನಲಿಯುವಾಗ
ಅವಳ ಪದಸೋಕಿನಂದ ಈ ಹೋಲಿಕೆಯ ಕಮಲಕೆ | 71 |

ಮುರುಗ, ಗಣಪರಿಗೆ ಸಮಸಮ ಹಾಲನು ಕೊಡುವ
ನಿನ್ನವಳಿ ಮೊಲೆಗಳು ನೀಗಿಸಲಿ ನಮ್ಮೆಲ್ಲ ಅಳಲುಗಳ
ಹಾಲೊಸರುವ ನಿನ್ನ ಮೊಲೆತೊಟ್ಟು ಕಂಡು ಗಣಪ ತನ್ನ
ಕುಂಭಸ್ಥಲವೆಂದು ಬಗೆದು ಸೋಕಿ ನಗೆಗೀಡಾದನಲ್ಲ. | 72 |

ಸೊದೆಯು ತುಂಬಿದ ಮಾಣಿಕದ ಕೊಡವೆರಡರ ಹಾಗೆ
ಮೊಲೆಯೆರಡು ನಿನ್ನವು-ಸಂದೇಹವಿಲ್ಲ ನಮಗೆ
ಮಲೆಕುಲದ ಬಾವುಟವೆ! ಅದ ಕುಡಿದು ಬೆಳದವರು
ಗಣಪ, ಕುಮಾರರಿನ್ನೂ ಹೆಣ್ಣಿನ ಸುಖ ಬೇಡೆಂಬರು | 73 |

ಅಂಬೆ ನೀ ಧರಿಸಿರುವ ಗಜಾಸುರನ ಕುಂಭಸ್ಥಲದಿಂದ
ಬಂದಮಲ ಮುತ್ತಿನ ಸರವ ನಿನ್ನ ತೋರುಮೊಲೆಗಳ ಮೇಲೆ
ತೊಂಡೆತುಟಿಗಳ ಬಿಂಬಿತವಾಗಿ ಅದರೊಳಗೆ ಶೋಭಿಸಿವೆ
ಅಂಬಿಕಾಪತಿಯ ಬಲುಮೆ ಕೆಂಪು, ಗರಿಮೆ ಬಿಳುಪು  | 74 |

ನಿನ್ನ ಮೊಲೆಗಳಿಂದ,ಮಲೆದೊರೆಯಮಗಳೆ, ಒಸರುತಿದೆ
ಸರಸತಿಯೇ ತಾನಾಗಿ ಹಾಲಿನ ಕಡಲು. ನೀನದನು
ದಯೆ ಮಾಡಿ ನೀಡಿದ ಮೇಲೆ ಈ ದ್ರಾವಿಡರ ಕೂಸಿಗೆ
ಮಧುರ ಕವಿಯಾದ ಆತ ಹಿರಿಯ ಕವಿಗಣದ ನಡುವೆ. | 75 |

ಹರನ ಕೋಪದ ಜ್ವಾಲಾಮುಖಿ ಸುಡಲು ತನ್ನ ಒಡಲ
ಸ್ಮರ ಅವಿಸಿಕೊಂಡಾಗ ನಿನ್ನ ಹೊಕ್ಕಳಿನ ಕೊಳದ ಆಳದಲ್ಲಿ
ಹೊಗೆಯ ಬಳ್ಳಿಯೆದ್ದಿತು ನಿನ್ನ ಹೊಕ್ಕುಳನಿಂದ
ಅದುವೆ ನಿನ್ನ ರೋಮಾವಳಿ ಎಂದು ಜನರ ಮಾತು | 76 |

ಕಾಳಿಂದಿ ನದಿಯ ನೀಲ ಸುಳಿಗಳ ಹಾಗೆ ಸುಳಿತೆಗೆದು
ಬಡ ನಡುವಿನಲಿ ಬೆಳೆದಿರುವ ರೋಮಾವಳಿ ಹೇ ಶಿವೆ
ಮೊಲೆಗಳೆರಡರ ನಡುವೆ ಒತ್ತೊತ್ತಿಸಿಕೊಂಡು ಕುಗ್ಗಿ
ನಾಭಿ ಗವಿಯೊಳಗಡಗಿದ ನೀಲಿ ಆಕಾಶವೆ?  | 77 |

ನಿನ್ನ ಮೊಲೆ ಜೋಡಿಯನು ಬಣ್ಣಿಸಲು ಬಾಯಿಲ್ಲ. ಮೊಲೆ-
ಮೊಗ್ಗುಗಳ ತಳೆದ ರೋಮಾವಳಿಗೆ ಅವು ನೀರ ಪಾತಿ
ಮನ್ಮಥನ ತೇಜಸಿಗೆ ಯಜ್ಞಕುಂಡ.ರತಿ ವಿಲಾಸದ ಮನೆ.
ಮನ್ಮಥಾರಿಯ ತಪಸಿಗೆಂದೇ ಇರುವ ನಿಗೂಢ ಗುಹೆ | 78 |

ಹುಟ್ಟಿಂದಲೇ ತೆಳ್ಳನೆಯ ನಿನ್ನ ನಡು, ಹೇ ನಾರೀ ಕುಲ ಮಣಿ,
ದಪ್ಪದಪ್ಪ ಮೊಲೆಗಳ ವಜನು ತಾಳದೆ ಬೀಳುವಂತಿದೆ
ಒಂದಲ್ಲಾ ಒಂದು ದಿನ ಒಡ್ಡೊಡೆದ ನದಿ ತೀರದಲಿ ನಿಂತ
ಮರ ತಡಬಡಿಸುವಂತೆ. ಒಳಿತೆ ಆಗಲಿ ಅದಕೆ. | 79 |

ಮೊಲೆಯೆರಡ ಕುಪ್ಪುಸಗಳುಜ್ಜಿ, ಕಂಕುಳು ಬೆವರಿದಾಗ ನೀ
ಅವುಗಳನೆತ್ತಿ ನೋಡಿರಲು ತಾ ಮಾಡಿಟ್ಟ ಆಹೊಂಗಳಸಗಳು
ಕೆಳಗೆಲ್ಲಿ ಬೀಳುವುವೊ ಎಂಬ ದಿಗಿಲಿಂದ ಮುನ್ನೆಚ್ಚರಿಕೆಯಾಗಿ
ನಿರ್ಮಿಸಿದ ಕಾಮ ಹಿಡಿದು ಕಟ್ಟುವ ಹಾಗೆ ತ್ರಿವಳಿಗಳನು  | 80 |

ಗಿರಿಯ ರಾಜನ ಮಗಳೆ ನಿನ್ನ ಜನಕ ಗಿರಿರಾಜನು ನಿನಗಾಗಿ
ತನ್ನ ಹರಹನ್ನು ತನ್ನ ವಜನನ್ನು ಮದುವೆಯಲಿ ಮುಯ್ಯಿ ಕೊಟ್ಟ
ಅದರ ಪರಿಣಾಮ ನಿನ್ನ ಅಂಡುಗಳ ಹರಹು, ಭಾರ
ನೆಲದುದ್ದ ಹರಡಿ ನೆಲಮರೆಸಿ ನೆಲ ಬಲು ಹಗುರಾಯಿತು | 81 |

ಆನೆ ಸೊಂಡಿಲಿನ ಹಾಗೆ ದುಂಡಾಗಿ ದುಂಡಾಗಿ
ಹೊಂಬಾಳೆ ಹಾಗೆ ಸೊಬಗು ಸೊಬಗುನಿನ್ನೆರಡು ತೊಡೆಗಳು
ಪ್ರತಿ ದಿವಸ ಪತಿಗೆ ನಮಿಸಿ ನಮಿಸಿ ಒರಟಾಗಿ ಹೋದ
ನಿನ್ನ ಮಂಡಿಗಳು ಕಣ್ಸೆಳುವುವು ಆನೆ ಕುಂಭ ಸ್ಥಳದ ಹಾಗೆ  | 82 |

ಸೋಲಿಸಲುಹೊಂಟು ಕಾಮಾರಿಯನ್ನು ತನ್ನ ತೀರಗಳ
ಇರಿಸಿಕೊಳ್ಳಲು ಮಾರ ನಿನ್ನ ಮೊಣಕಾಲ ಬತ್ತಳಿಕೆ ಮಾಡೆ
ನಿನ್ನ ಪಾದಗಳ ಹೊಗರಿನುಗುರುಗಳು ಸಾಣೆಹಿಡಿದಂತೆ
ಸುರರಮಣಿ ಮಕುಟಗಳ ಮೇಲೆ ಆದವಿಷ್ಟು ಚೂಪು  | 83 |

ನಿನ್ನ ನುತಿಸಿ ಶ್ರುತಿ ಧರಿಸಿವೆ ನಿನ್ನ ಪದಗಳ ತಲೆ ಮೇಲೆ
ನಿನ್ನ ಪಾದೋದಕವೇ ಶಿವೆ ಶಿವನ ಜಟೆಯ ಗಂಗೆ
ನಿನ್ನಡಿಗಳರಗಿನ ಕೆಂಪು ತೂಡಾಮಣಿ ಹರಿಮಕುಟದಲ್ಲಿ
ನನ್ನ ತಲೆಮೇಲೆ ಚರಣವಿರಿಸಿ ಹರಸೆನ್ನ ತಾಯೆ  | 84 |

ಶರಣು ಅನ್ನುವೆವು ಅರುಣ ರಂಗಿನ ನಿನ್ನ ಚರಣಗಳಿಗೆ
ಅವುಗಳಿಂದೊದೆಸಿಕೊಳಲೆಂದೇ ಪ್ರಮದವನಗಳಲ್ಲಿ
ದೋಹದಕೆ ಕಾದಿರುವ ಅಶೋಕ ಮರಗಳ ಕಂಡು
ಕರಕರ ಕರಬುವ ಪರಶಿವನ ಕತೆಯ ನೋಡಿ | 85 |

ಮದನಕೇಳಿಯಲಿ ಪತಿಯ ಬಾಯಲ್ಲಿ ಕೇಳಿ ಬೇರೆ ಹೆಸರ
ಸಿಡುಕಾಗಿ ಅವನ ಸುಡುಗಣ್ಣ ನೀನು ಒದೆಯುತಿಲು
ನಿನ್ನ ಗೆಜ್ಜೆಗಳ ಇನಿ ನಾದ ಗಳಿರು ಗಳಿರುಗಳಿರೆನಲು
ಸುಡುಗಣ್ಣು ಸುಟ್ಟ ಶಿವವೈರಿ ಕಾಮ ನಗುವ ಕಿಲಕಿಲೆಂದು  | 86 |

ಮಂಜ ಮಗಳೆ ಮಂಜು ಗಿರಿಗಳಲಿ ಸಂಚಾರ ಮಾಡುವುವು
ಹಗಲು ಇರುಳಲ್ಲೂ ಅರಳಿಕೊಂಡಿದ್ದು ಸಮಯಪೂಜಕರಿಗೆ
ಗುರುವಾಗಿ ಮುಂದೆ ಹಾದಿ ತೋರುವುವು ನಿನ್ನ ಪಾದಗಳು
ಛಳಿಗೆ ಮುದುಡುವ ಕಮಲೆ ಲಕುಮಿಗೂ ಮಿಗಿಲುಮಿಗಿಲು

ನಿನ್ನ ಪಾದಗಳ ಹಾಡಿ ಕೊಂಡಾಡಿ ಕವಿ ವರೇಣ್ಯರುಗಳು
ಹೆಣ್ಣಾಮೆ ಬೆನ್ನ ಹೋಲಿಕೆ ನೀಡಿದರು ಯಾಕೆ ಅವಕೆ?
ನಿನ್ನ ಮೆತ್ತನೆಯ ಹೂವಿನಡಿಗಳನು ಕಲ್ಲ ಮೇಲಿಡಿಸುವಂತೆ
ನಿನ್ನ ಗಂಡ ಶಿವನ ಪ್ರೇರಿಸಿದಾವ ಕರುಣೆ ಹೇಳು | 88 |

ತಮ್ಮ ಉಗರುಗಳ ಚಂದ್ರಕಿರಣದಿಂದ ಮುದುಡಿರುವ
ಕರಗಳಿಂದ ದಿವಿಜಲಲನೆಯರ ಬೇಡಲವರಿಗೆಲ್ಲ
ಚಿಗುರೆಲೆ ಕರದಿಂದ ಬೇಡಿದನೀವ ಕಲ್ಪದ್ರುಮಕು ಮೇಲು
ಕಡಬಡವರಿಗೂ ಕೇಳಿದ್ದನೊಡನೆ ನೀಡುವ ನಿನ್ನ ಚರಣ  | 89 |

ದೀನದಲಿತರಿಗೆ ಬೇಡಿದ್ದ ಕೊಡುವ, ಹೂ ಜೇನು ಸುರಿವ
ಕಲ್ಪವೃಕ್ಷದ ಹೂಗೊಂಚಲಂಥ ನಿನ್ನ ಚರಣದಲ್ಲಿ ಸುಭಗೆ
ನನ್ನ ಮನಸು ಇಂದ್ರಿಯಗಳೆಲ್ಲ ಮುಳುಗಿಹೋದರೆ
ದುಂಬಿಯಂತಾರುಪಾದಗಳೊಡನೆ ಧನ್ಯ ನಾನು  | 90 |

ನಿನ್ನ ನಡಿಗೆಯನು ಕಲಿಯ ಹೊರಟ ಅರಸುಮಹಲಿನ
ನಿನ್ನ ಹಂಸಗಳು ಎಡವಿ ಬಿದ್ದರೂ ಹಟ ಬಿಡವು
ನಿನ್ನ ಅಡಿಗಳ ರನ್ನದಂದುಗೆಯ ಗಣಿಲು ಗಣಿಲು
ಗಣಿಲು ಶಬುದ ನಡೆ ಕಲಿಸುತಿವೆ ಬಡ ಹಂಸಗಳಿಗೆ 91

ನಿನ್ನ ಮಂಚದ ನಾಕು ಕಾಲು ಬ್ರಹ್ಮ, ಹರಿ, ಹರ, ಈಶರು
ಇನ್ನು ಸದಾಶಿವ ತಿಳಿ ಬೆಳಗಿನ ನಿನ್ನ ಹೊದಿಕೆಯಾಗಿ
ತೋರಿರುವ ಕಾಂಬ ಕಂಗಳಿಗೆ ಶೃಂಗಾರ ರಸದ ಹಾಗೆ
ನಿನ್ನ ಮೈಕೆಂಪು ಕಾಂತಿಯೊಳಗೆ ಪ್ರತಿಫಲಿತನಾಗಿ  | 92 |

ಕೊಂಕುಡೊಂಕು ನಿನ್ನ ಕುರುಳು ಸಹಜ ಮೊಗ್ಗುನಗೆ
ಬಾಗೆಹುವ್ವಂತೆ ಮಿದು ಮನಸು ವಜ್ರಕಠಿಣ ದಟ್ಟ ಮೊಲೆ
ನಡು ಸಣ್ಣ ನಿನ್ನ ಅಂಡುಗಳು ಅದೇಸು ಅಗಲ ಭಾರ
ಹರಕರುಣೆಯೇ ಅರುಣರಾಗದಲಿ ಹೆಣ್ಣಾಗಿ ಮೂಡಿತೇನು?  | 93 |

ಚಂದ್ರಕಲೆಯ ಕಸ್ತೂರಿ ಚಂದ್ರಬಿಂಬದ ಅತ್ತರು ಮಾಡಿ
ಚಂದ್ರಕಿರಣಗಳ ಪಚ್ಚೆ ಕಪ್ಪುರದ ಚೂರಾಗಿಸಿ ಸ್ವತಃ ಅಜ
ತಂಬಿಡುವ ಸಿಂಗಾರ ದ್ರವ್ಯಗಳ ತಾಯಿ ನಿನಗಾಗಿ
ಖಾಲಿ ಮಾಡಲು ನೀ ಪ್ರತಿದಿನ ಪುನಃ ತುಂಬಿಸಿಡುವ  | 94 |

ತ್ರಿಪುರಹರನೊಳಮನೆಯ ರಾಣಿ, ಅಪರೂಪ ನಿನ್ನ ಚರಣಸೇವೆ
ಪೂಜೆ ವಿಧಿಗಳ ಮರ್ಮವರಿಯದ ಚಪಲಮನಸಿನವರಿಗೆ
ಶತಶತಾಶ್ವ ಯಾಗ ಮಾಡಿಸಿದ ಇಂದ್ರಾದಿ ದೇವತೆಗಳೂ
ನಿನ್ನ ಮನೆ ಬಾಗಿಲ ಕಾವ ಅಣಿಮಾದಿಯಿಂದಲೇ ಸಂತೃಪ್ತರು | 95 |

ಬ್ರಹ್ಮನರಸಿಯನು ಒಲಿಸಿ ಕವಿಗಳಾದವರೇಸು ಜನ?
ಲಕ್ಷ್ಮಿದೇವಿಯ ಕರುಣದಿಂದ ಸಿರಿ ಗಳಿಸರೆಷ್ಟು ಜನ?
ಹೇ ಮಹೇಶ ನಿನ್ನ ಸತಿ ಸತಿಯರಲ್ಲಿ ಸತಿಯು
ಆ ಮೊಲೆ ಬಳಿಯೂ ಸಾರದು ಗೋರಂಟಿ ಗಿಡ ಕೂಡ | 96 |

ಅಜನ ಮಡದಿ ವಾಣಿಯೆಂದು ಹರಿಯ ಸತಿ ಕಮಲೆಯೆಂದು
ಶಿವನ ಪತ್ನಿ ಗಿರಿಪುತ್ರಿಯೆಂದು ಕರೆವರಾಗಮ ಪಂಡಿತರು
ಆ ಮೂವರಿಗೂ ಹೊರತು ಸೀಮೆಗಳ ದಾಟಿ ಹೋಗಿರುವಿ
ಮಹಮಾಯೆ, ಜಗವನಾವರಿಸಿದ ಪರಬ್ರಹ್ಮನರಸಿ | 97 |

ಅರಗು ರಸ ಬಳಿದ ನಿನ್ನ ಚರಣಗಳ ತೊಳೆದ ಕೆಂಪು
ನೀರನ್ನು ವಿದ್ಯಾರ್ಥಿ ನಾ ಕುಡಿವುದು ಎಂದು ತಾಯಿ?
ವಾಗ್ದೇವಿಯ ಬಾಯದಂಬುಲವ ಮೆಲಿದು ಕವಿಯಾದ
ಮೂಕನಿಗೆ ಸಮ ನನಗಾ ಪುಣ್ಯ ಎಂದು ತಾಯಿ? | 98 |

ಸಿರಿ, ಸರಸತಿ ಜೊತೆ ವಿಹರಿಸುವ ಹರಿ, ವಿರಿಂಚಿಗಳಂತೆ
ರತಿಯ ಪಾತಿವ್ರತ್ಯವ ಸಡಿಲಿಸಿ ಬಿಡುವ ಮೈಯ ಚಲುವಿನಿಂದ
ಚಿರಬುಧ್ಧಿಯಲಿ ನೆಲೆಸಿ ಕಳಚಿಹಾಕಿ ಪಶುಪಾಶಗಳನ್ನು
ಪರಮಾನಂದರಸದ ಸದಾ ಸವಿವ ನಿನ್ನ ಭಕ್ತ | 99 |

ಕೈಯ ದೀವಿಗೆಯಿಂದ ಸೂರ್ಯಗಾರತಿ ಮಾಡಿದಂತೆ
ಚಂದ್ರಶಿಲೆ ಜಲದಿಂದ ಚಂದ್ರನಿಗೆ ಆರ್ಘ್ಯವೀವ ಹಾಗೆ
ಜಲಧಿ ಜಲದಿಂದಲೇ ಮಹಾಜಲಧಿಯ ಪೂಜೆ ಮಾಡುವಂತೆ
ಹೇ ಮಾತುಗಳ ಮಾತೆ ನಿನ್ನ ಸ್ತುತಿ ಈ ಮಾತುಗಳ ಮಾಲೆ | 100 |

(ಮುಗಿಯಿತು)

Leave a Reply