ರಾಮ ವಾಲಿಯನ್ನು ಕೊಂದಿದ್ದು ಮೋಸವೇ? ವಾಲ್ಮೀಕಿ ರಾಮಾಯಣದ ಈ ಕಥೆ ಓದಿ

ರಾಮಾಯಣದ, ರಾಮನ ವಿಷಯ ಬಂದಾಗ ಸಾಮಾನ್ಯವಾಗಿ ವಾಲಿವಧೆ ಪ್ರಸಂಗವೂ ಪ್ರಶ್ನೆಗೆ ಒಳಗಾಗುತ್ತದೆ. ಈ ಸಂದರ್ಭದಲ್ಲಿ ರಾಮನ ನಡೆ ಸರಿಯಾಗಿತ್ತೇ ತಪ್ಪಾಗಿತ್ತೇ ಎಂದು ವಿವರಿಸುವ ಪ್ರಯತ್ನ ಇಲ್ಲಿದೆ …

ರಾವಣನಿಂದ ಅಪಹೃತಳಾದ ಸೀತೆಯನ್ನು ರಾಮ ಲಕ್ಷ್ಮಣರು ಹುಡುಕುತ್ತಾ ಹೊರಟರು. ಋಷ್ಯಮೂಕ ಪರ್ವತದಲ್ಲಿ ಹನುಂತ ಅವರನ್ನು ನೋಡಿ ವಿಚಾರಿಸಿದ. ಅದು ಬೇರಾರೂ ಅಲ್ಲ, ರಘುವಂಶದ ಸಾಕ್ಷಾತ್ ಶ್ರೀ ರಾಮ ಎಂದು ಹನುಮನಿಗೆ ತಿಳಿಯಿತು. ತನ್ನ ಆರಾಧ್ಯ ದೈವವನ್ನು ಕಂಡು ಕುಣಿದಾಡಿದ ಹನುಮಂತ ಸಾದರಪೂರ್ವಕವಾಗಿ ಅವರಿಬ್ಬರನ್ನು ವಾನರರ ಪದಚ್ಯುತ ರಾಜ ಸುಗ್ರೀವನ ಬಳಿ ಕರೆದೊಯ್ದ.

ಸುಗ್ರೀವ ಮತ್ತು ವಾನರರ ಸಮ್ಮುಖದಲ್ಲಿ ರಾಮಲಕ್ಷ್ಮಣರು ತಮ್ಮ ಹುಡುಕಾಟವನ್ನು ವಿವರಿಸಿದರು. ಆಗ ಸುಗ್ರೀವ ನಾವು ನಿಮಗೆ ಸೀತಾಮಾತೆಯನ್ನು ಹುಡುಕಲು ಸಹಾಯ ಮಾಡುತ್ತೇವೆ. ನಿಮ್ಮಿಂದಲೂ ನಮಗೊಂದು ಸಹಾಯವಾಗಬೇಕು ಎಂದು ಕೋರಿದ. ಅದೇನು ಸಹಾಯ ಎಂದು ಕೇಳಿದಾಗ ಸುಗ್ರೀವ ತನ್ನ ಸಹೋದರ ವಾಲಿಯ ಕಥೆ ಹೇಳಿದ. ನನ್ನ ಬಗ್ಗೆ ತಪ್ಪು ತಿಳಿದ ವಾಲಿ ನನ್ನನ್ನು ಕೊಲ್ಲುವ ಪಣ ತೊಟ್ಟಿದ್ದಾನೆ. ನನ್ನ ಪ್ರೀತಿಯ ಪತ್ನಿ ರುಮೆಯನ್ನು ಅಪಹರಿಸಿ ತನ್ನ ಪತ್ನಿಯನ್ನಾಗಿ ಮಾಡಿಕೊಂಡಿದ್ದಾನೆ. ರಾಜ್ಯವನ್ನೂ ಪರಿವಾರವನ್ನೂ ಪತ್ನಿಯನ್ನೂ ಕಳೆದುಕೊಂಡು ನಾನು ದುಃಖಿತನಾಗಿದ್ದೇನೆ ಎಂದು ಹೇಳಿದ.

ಸುಗ್ರೀವನ ಮಾತುಗಳನ್ನು ಕೇಳಿ ರಾಮ ತಾನು ವಾಲಿಯನ್ನು ಸಂಹರಿಸುವುದಾಗಿ ಮಾತು ಕೊಟ್ಟ.

ಅದರಂತೆ ಸುಗ್ರೀವ ವಾಲಿಯನ್ನು ದ್ವಂದ್ವ ಯುದ್ಧಕ್ಕೆ ಪ್ರಚೋದಿಸಿದ. ಅಸೀಮ ಬಲನಾಗಿದ್ದ ವಾಲಿಯೂ ಹೂಂಕರಿಸುತ್ತಾ ಸುಗ್ರೀವನ ಮೇಲೆರಗಿದ. ಅವನ ಕುತ್ತಿಗೆಯಲ್ಲಿ ಇಂದ್ರ ನೀಡಿದ ಹೂವಿನ ಹಾರವಿತ್ತು. ಅದರ ಪ್ರಭಾವದಿಂದ ಎದುರಾಳಿ ಸುಗ್ರೀವನ ಶಕ್ತಿ ಕುಂದತೊಡಗಿತು.

ಆದರೆ ಸುಗ್ರೀವ ಎಂದಿನಂತೆ ಓಡಿ ಹೋಗದೆ ಮತ್ತೆ ಮತ್ತೆ ರಾಮನಿಗಾಗಿ ಎಲ್ಲ ಕಡೆ ನೋಡುತ್ತಿದ್ದ. ಸುಗ್ರೀವನ ಶಕ್ತಿ ತಗ್ಗುವುದನ್ನು ಗಮನಿಸಿದ ರಾಮ ತನ್ನ ಬಿಲ್ಲಿಗೆ ಬಾಣವನ್ನು ಹೂಡಿದ.

ಬಿಲ್ಲಿನ ಠೇಂಕಾರ ಕೇಳಿ ವಾಲಿ ತಿರುಗಿ ನೋಡುವಷ್ಟರಲ್ಲಿ ನುಗ್ಗಿ ಬಂದ ರಾಮಬಾಣ ವಾಲಿಯ ಹೃದಯವನ್ನು ಹೊಕ್ಕಿತ್ತು. ವಾಲಿ ಕೆಳಗುರುಳಿದ.

ತಕ್ಷಣ ರಾಮಲಕ್ಷ್ಮರು, ಸುಗ್ರೀವನ ಮಂತ್ರಿಗಳು ಅಲ್ಲಿಗೆ ಬಂದರು. ಪಕ್ಕದಲ್ಲಿ ಸುಗ್ರೀವ ಕೈ ಕಟ್ಟಿ ನಿಂತುಕೊಂಡ.

ವಾಲಿಗೆ ಇಲ್ಲಿಯವರೆಗೆ ನಡೆದುದೆಲ್ಲ ಅರ್ಥವಾಗಿಹೋಯಿತು. ತನ್ನ ತಮ್ಮ ರಾಮನ ಸಹಾಯ ಪಡೆದು ತನ್ನನ್ನು ವಧಿಸಿದನೆಂದು ತಿಳಿಯಿತು. ರಾಮನನ್ನೇ ದಿಟ್ಟಿಸಿ ನೋಡುತ್ತಾ, ಕಷ್ಟದಿಂದ ತೊದಲುತ್ತಾ, “ರಾಮ! ನಿನ್ನನ್ನು ಧಾರ್ಮಿಕ, ಪರಾಕ್ರಮಿ ಎನ್ನುತ್ತಾರೆ. ಹಾಗಿದ್ದೂ ಯುದ್ಧ ಮಾಡುವಾಗ ಹಿಂದಿನಿಂದ ಬಾಣ ಬಿಡಲು ನಾಚಿಕೆಯಾಗುವುದಿಲ್ಲವೇ? ಯುದ್ಧವನ್ನು ಬಂಗಾರಕ್ಕಾಗಿ, ಬೆಳ್ಳಿಗಾಗಿ ಅಥವಾ ಭೂಮಿಗಾಗಿ ಮಾಡಬೇಕು. ಆದರೆ ನನಗೂ ನಿನಗೂ ಈ ಯಾವ ವಿಷಯದಲ್ಲಿ ತಕರಾರಿದೆ? ನನ್ನ ಚರ್ಮ ಧರಿಸಲು ಬರುವುದಿಲ್ಲ. ನನ್ನ ಮಾಂಸವನ್ನೂ ತಿನ್ನಲಾಗುವುದಿಲ್ಲ. ನಾನು ಮರಗಳ ಮೇಲಿರುವ ಎಲೆ, ಹಣ್ಣುಗಳನ್ನು ತಿಂದು ಬದುಕುವ ಶಾಕಾಹಾರಿ ಮೃಗ. ನೀನು ಮನುಷ್ಯ! ಧರ್ಮವೆಂಬ ಮುಖವಾಡ ಹೊದ್ದಿರುವ ನೀನು ಕೈಯಲ್ಲಿ ಬಿಲ್ಲು ಹಿಡಿದು, ಕಂಡ ಪ್ರತಿ ಪ್ರಾಣಿಯನ್ನೂ ಹಿಂಸಿಸುವ ಸ್ವಭಾವ ಹೊಂದಿರುವೆ.

ನನ್ನ ಎದುರಿಗೆ ಬಂದು ಯುದ್ಧ ಮಾಡಿದ್ದರೆ ಇಷ್ಟು ಹೊತ್ತಿಗೆ ನಿನ್ನನ್ನು ಯಮನ ಬಳಿ ಕಳಿಸುತ್ತಿದ್ದೆ. ನೀನು ನನ್ನನ್ನು ಕೊಲ್ಲಲು ಮುಂದಾಗಿದ್ದರ ಕಾರಣವೇನು? ನೀನು ಮಾಡಿದ್ದು ತಪ್ಪಲ್ಲವೇ? ನಿನ್ನ ಹೆಂಡತಿಯನ್ನು ಕಾಡಿನಲ್ಲಿ ಹುಡುಕುತ್ತಾ ಅಲೆಯುತ್ತಿರುವೆಯಂತೆ? ನಿನ್ನ ಹೆಂಡತಿಯನ್ನು ಹೊತ್ತುಕೊಂಡು ಹೋದ ರಾವಣ ನನ್ನ ಕಿಂಕರ. ನೀನು ನನಗೆ ಒಂದು ಮಾತು ಹೇಳಿದ್ದರೆ ನಾನು ಅವನನ್ನು ಪ್ರಾಣಿಯನ್ನು ಎಳೆದುಕೊಂಡು ಬಂದಂತೆ ಎಳೆದುಕೊಂಡು ಬಂದು ಬಿಸಾಕುತ್ತಿದ್ದೆ. ನೀನು ನನಗೆ ಹೇಳದೆ ನನ್ನನ್ನೇ ಗೆಲ್ಲಲಾಗದ ಸುಗ್ರೀವನ ಆಶ್ರಯ ಪಡೆದಿದ್ದೀಯ. ಸುಗ್ರೀವನಿಗಾಗಿ ನನ್ನನ್ನು ಕೊಂದಿದ್ದೀಯ. ಇದು ವಂಚನೆಯಲ್ಲವೆ?” ಎಂದು ರಾಮನನ್ನು ಪ್ರಶ್ನಿಸಿದ.
ವಾಲಿಯ ಪ್ರಶ್ನೆಗೆ ಉತ್ತರವಾಗಿ ರಾಮ ಹೇಳಿದ್ದಿಷ್ಟು:
ಧರ್ಮಂ ಅರ್ಥಂ ಚ ಕಾಮಂ ಚ ಸಮಯಂ ಚ ಅಪಿ ಲೌಕಿಕಂ
ಅವಿಜ್ಞಾಯ ಕಥಂ ಬಾಲ್ಯಾತ್ ಮಾಂ ಇಹ ಅದ್ಯ ವಿಗರ್ವಸಿ!
“ನಿನಗೆ ಏನು ತಿಳಿದಿದೆಯೆಂದು ನನ್ನ ಮೇಲೆ ಆರೋಪ ಮಾಡುತ್ತಿದ್ದೀಯ? ಧರ್ಮ, ಅರ್ಥ, ಕಾಮ, ಮೋಕ್ಷ ವಿಚಾರಗಳಲ್ಲಿ ಏನಾದರೂಸಂದೇಹವಿದ್ದರೆ ಬಲ್ಲವರನ್ನು ಕೇಳಿ ತಿಳಿದುಕೊಳ್ಳಬೇಕು. ಅದು ಬಿಟ್ಟು ಸುಮ್ಮನೆ ಏನೂ ಅರಿಯದ ಬಾಲಕರಂತೇಕೆ ಬಡಬಡಿಸುತ್ತಿದ್ದೀಯ!?

ಈ ಪ್ರದೇಶ ಇಕ್ಷ್ವಾಕು ವಂಶಕ್ಕೆ ಸೇರುತ್ತದೆ. ಈಗ ನಮ್ಮ ವಂಶವನ್ನು ಭರತ ಪಾಲನೆ ಮಾಡುತ್ತಿದ್ದಾನೆ. ನಮ್ಮರಾಜ್ಯದಲ್ಲಿ ಅಧರ್ಮವೇನಾದರೂ ನಡೆದರೆ ಅದನ್ನು ನಿಗ್ರಹಿಸುವ ಅಧಿಕಾರ ನಮಗಿದೆ. ನಿನಗೆ ಕಾಮವೊಂದುಳಿದು ಬೇರೇನೂ ಗೊತ್ತಿಲ್ಲ. ನಿನಗೆ ಧರ್ಮಾಧರ್ಮವಿಚಕ್ಷಣೆಮಾಡುವ ಅಧಿಕಾರವಿಲ್ಲ. ಹಿರಿಯಣ್ಣ, ವಿದ್ಯೆ ಕಲಿಸಿದ ಗುರು ತಂದೆಯ ಸಮಾನ. ಅಂತೆಯೇ ಜೊತೆಯಲ್ಲಿ ಹುಟ್ಟಿದ ತಮ್ಮ, ತನ್ನ ಬಳಿ ವಿದ್ಯೆ ಕಲಿತ ಶಿಷ್ಯ ಪುತ್ರರಸಮಾನ. ನಿನ್ನ ತಂದೆ ಮರಣಿಸಿರುವುದರಿಂದ ನಿನ್ನ ತಮ್ಮನಿಗೆ ನೀನು ತಂದೆಯ ಸಮಾನ. 

ಸುಗ್ರೀವನ ಪತ್ನಿ ರುಮೆ ನಿನಗೆ ಸೊಸೆಸಮಾನ. ಆದರೆ ಸುಗ್ರೀವಬದುಕಿರುವಂತೆಯೇ ಅವನ ಪತ್ನಿಯನ್ನು ಅನುಭವಿಸಿ, ನಿನ್ನ ಪತ್ನಿಯನ್ನಾಗಿ ಮಾಡಿಕೊಂಡಿದ್ದೀಯ. ಮಾವ ತನ್ನ ಸೊಸೆಯನ್ನು ಕಾಮದಿಂದ ನೋಡಿದರೆ ಎಷ್ಟುದೋಷವೋ ಅಷ್ಟೇ ದೋಷ ನಿನ್ನ ಕೃತ್ಯಕ್ಕೂ ಇದೆ. ಧರ್ಮದ ಪ್ರಕಾರ ಇದಕ್ಕೆ ಮರಣವೇ ಶಿಕ್ಷೆ. ನೀನು ರಾಜ. ನೀನು ಧರ್ಮ ತಪ್ಪಿದರೆ ನಿನ್ನ ಹಿಂದೆಯಿರುವವರೂ ಧರ್ಮತಪ್ಪುತ್ತಾರೆ. ನಾನು ಕ್ಷತ್ರಿಯ. ನಿನ್ನನ್ನು ಶಿಕ್ಷಿಸುವ ಅಧಿಕಾರ ನನಗಿದೆ. ತಪ್ಪು ಎಂದು ತಿಳಿದೂ ನಾನು ನಿನ್ನನ್ನು ಶಿಕ್ಷಿಸದಿದ್ದರೆ, ನೀನು ಮಾಡಿದ ಪಾಪ ನನಗೆ ಬರುತ್ತದೆ.ಹಿಂದೆ ಇಕ್ಷ್ವಾಕು ವಂಶದಲ್ಲಿಯೇ ಮಾಂಧಾತನೆಂಬ ನಮ್ಮ ಪೂರ್ವಿಕ ಶ್ರಮಿಕನೆಂಬುವವನನ್ನು ಈ ದೋಷಕ್ಕಾಗಿಯೇ ಕೊಂದ. 

ಇನ್ನು ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರ: ಮೊದಲೆನೆಯದು, ನಿನ್ನ ಜೊತೆ ಸ್ನೇಹ ಮಾಡಿದ್ದರೆ, ಸೀತೆಯನ್ನು ತಂದುಕೊಡುತ್ತಿದ್ದೆ. ಆದರೆ ನಾನು ನಿನ್ನಂತಹ ಅಧರ್ಮಿಯಜೊತೆ ಸ್ನೇಹ ಮಾಡುವುದಿಲ್ಲ. ಎರಡೆನೆಯದು, ನಾನು ನಿನ್ನನ್ನು ಮರದ ಹಿಂದಿನಿಂದ, ನೀನು ಬೇರೆಯವರ ಜೊತೆ ಯುದ್ಧ ಮಾಡುತ್ತಿದ್ದಾಗ, ಕೊಂದೆನೆಂಬುದು.

ನ ಮೇ ತತ್ರ ಮನಸ್ತಾಪೋ ನ ಮನ್ಯುಃ ಹರಿಪುಂಗವ
ವಾಗುರಾಭಿಃ ಚ ಪಾಶೈಃ ಚ ಕೂಟೈಃ ಚ ವಿವಿಧೈಃ ನರಾಃ
ನೀನೇ ಹೇಳಿದಂತೆ ನಾನು ಮಾನವ, ನೀನು ವಾನರ. ಮಾಂಸಾಹಾರಿಯಾದ ಕ್ಷತ್ರಿಯ ಯಾವುದಾದರೂ ಮೃಗವನ್ನು ಕೊಲ್ಲಬೇಕಾದರೆ, ಆ ಮೃಗ ಸ್ತ್ರೀ ಮೃಗದ ಜೊತೆ ಸಂಗಮಿಸುವ ಸಮಯದ ಹೊರತಾಗಿ ಯಾವಾ ಬೇಕಾದರೂ, ಯಾವ ರೀತಿಯಿಂದ ಬೇಕಾದರೂ ಕೊಲ್ಲಬಹುದು. ಮಿತಿಮೀರಿ ಉಪಟಳ ನೀಡುವ ಮೃಗಗಳನ್ನು ಕೊಲ್ಲುವುದು ನನ್ನ ಕ್ಷತ್ರಿಯ ಧರ್ಮದ ಪರಿಪಾಲನೆಯೇ ಆಗಿದೆ. ಅದರಂತೆ ನಾನು ನಿನ್ನನ್ನು ಸಂಹರಿಸಿದ್ದೇನೆ. ಆದ್ದರಿಂದ ಇದು ಅಧರ್ಮವಲ್ಲ”

ರಾಮನ ಮಾತುಗಳಿಗೆ ವಾಲಿಯ ಬಳಿ ಉತ್ತರವಿರಲಿಲ್ಲ. ಕಣ್ಮುಚ್ಚುವ ವೇಳೆ ರಾಮದರ್ಶನ ಪಡೆದುದರಿಂದ, ಮರಣಾನಂತರ ಉತ್ತಮ ಲೋಕ ಹೊಂದುವ ಪುಣ್ಯ ವಾಲಿಯ ಪಾಲಿಗೆ ಒದಗಿ ಬಂತು.

ಈಗ ಹೇಳಿ, ರಾಮನ ವಿವರಣೆ ಕೇಳಿದ ಮೇಲೂ ವಾಲಿ ವಧೆ ವಂಚನೆ ಅನ್ನಿಸುತ್ತದೆಯೇ?

Leave a Reply