‘ಕರ್ಮಣ್ಯೇವಾಧಿಕಾರಸ್ತೇ’ : ಗೀತಾಚಾರ್ಯ ಕೃಷ್ಣನ ಮಾತಿನ ಅರ್ಥವೇನು?

ಗುರಿಯತ್ತ ಸಾಗುವ ಮಾರ್ಗವನ್ನು ಪರಿಶುದ್ಧವಾಗಿಟ್ಟುಕೊಳ್ಳುವ ಶಿಸ್ತನ್ನು ಗೀತಾಚಾರ್ಯ ಬೋಧಿಸುತ್ತಿದ್ದಾನೆ. ತನಗೆ ಬೇಕಿರುವ ಫಲವನ್ನು ಪಡೆಯುವುದಕ್ಕೆ ಅನೈಸರ್ಗಿಕವಾಗಿರುವುದನ್ನು ಮಾಡಬಾರದು ಎಂಬ ಶಿಸ್ತನ್ನು ಗೀತಾಚಾರ್ಯ ಬೋಧಿಸುತ್ತಿದ್ದಾನೆಂದು ನಮ್ಮ ಕಾಲ ಮತ್ತು ಸಂದರ್ಭಗಳಲ್ಲಿ ಅರ್ಥೈಸುವುದರಲ್ಲಿ ತಪ್ಪಿದೆಯೇ? ~ ಅಚಿಂತ್ಯ ಚೈತನ್ಯ

achintya chaitanya

ಭಾರತೀಯ ಜ್ಞಾನ ಪರಂಪರೆಗೆ ಒಂದು ವಿಶಿಷ್ಟ ಗುಣವಿದೆ. ಯಾವುದೇ ತಾತ್ವಿಕ ಪರಿಕಲ್ಪನೆಯ ಮೇಲೆ ಅದನ್ನು ಮಂಡಿಸಿದವರು ತಮ್ಮ ಮಾಲೀಕತ್ವವನ್ನು ಸ್ಥಾಪಿಸುವುದಿಲ್ಲ. ವ್ಯಾಸೋಚ್ಚಿಷ್ಟಂ ಜಗತ್ ಸರ್ವಂ ಎಂಬಂಥ ನುಡಿಗಳಿಗೆ ಇರುವ ಅರ್ಥವೂ ಅದುವೇ. ಎಲ್ಲವನ್ನೂ ವ್ಯಾಸರು ರಚಿಸಿಯಾಗಿದೆ. ಅದರಾಚೆಗೆ ನಾನೇನು ರಚಿಸಬಲ್ಲೆ ಎಂದು ವಿನೀತನಾಗುವ ಗುಣವಿದು. ಹಾಗೆಯೇ ಸ್ವತಃ ವ್ಯಾಸರೂ ವಾಲ್ಮೀಕಿ ಮುನಿಗಳೂ ತಮ್ಮ ಕೃತಿಗಳ ಮೇಲೆ ‘ಲೇಖಕತ್ವ’ ಅಥವಾ ಇಂಗ್ಲಿಷ್‌ನಲ್ಲಿ ಹೇಳುವ Authorship ಅನ್ನು ಸ್ಥಾಪಿಸುವುದಿಲ್ಲ. ಇನ್ಯಾರೋ ಮತ್ಯಾರಿಗೋ ಹೇಳಿದ ಕಥೆಯಂತೆ ಮಂಡಿಸುತ್ತಾರೆ.
ಈ ಮಂಡನೆಯ ಕ್ರಮದಲ್ಲಿ ಜ್ಞಾನವೆಂಬುದು ಸಾಮುದಾಯಿಕ ಸೃಷ್ಟಿ ಎಂಬ ವಿನಯ ಕಾಣಿಸುತ್ತದೆ. ಹಾಗೆಯೇ ಜ್ಞಾನದ ಸಹಜ ವಿಕಾಸಕ್ಕೆ ಅವಕಾಶ ಕಲ್ಪಿಸುವ ವಿಶಾಲ ಹೃದಯವೂ ಇಲ್ಲಿದೆ. ರಾಮಾಯಣ ಮತ್ತು ಮಹಾಭಾರತಗಳಂಥ ಕೃತಿಗಳು ಕೇವಲ ‘ಧರ್ಮ ಗ್ರಂಥ’ಗಳಾಗದೆ, ಕೇವಲ ‘ಸಾಹಿತ್ಯ’ವಾಗದೆ, ಕೇವಲ ‘ತಾತ್ವಿಕ ಜಿಜ್ಞಾಸೆ’ಯಾಗದೆ, ಇವೆಲ್ಲವೂ ಆಗಿ ನಿರಂತರವಾಗಿ ಬೆಳೆಯುತ್ತಾ ಹೋದುದರ ಹಿಂದಿನ ಕಾರಣವೂ ಇದುವೇ.
ಹಾಗಾಗಿಯೇ ಈ ಗ್ರಂಥಗಳಲ್ಲಿರುವ ವಿಚಾರಗಳು ನಮ್ಮ ಕಾಲ, ನಮ್ಮ ಸಂದರ್ಭದಲ್ಲಿಯೂ ಪ್ರಸ್ತುತವಾಗುತ್ತಾ ಹೋಗುತ್ತವೆ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋsಸ್ತ್ವಕರ್ಮಣಿ ೪೭॥
ಎಂಬ ಸಾಲುಗಳನ್ನು ಈ ತನಕ ಹಲವು ಬಗೆಯಲ್ಲಿ ಅರ್ಥೈಸಲಾಗಿದೆ. ಇದರ ಪದಶಃ ಅರ್ಥ ಬಹಳ ಸರಳ. “ನಿನ್ನ ಹಕ್ಕಿರುವುದು ಕರ್ಮದ ಮೇಲೇ ಹೊರತು ಅದರ ಫಲಗಳಲ್ಲಿ ಅಲ್ಲ. ಫಲದ ನಿರೀಕ್ಷೆಯಲ್ಲಿ ನೀನು ಕರ್ಮದಲ್ಲಿ ತೊಡಗಬೇಡ. ಹಾಗೆಯೇ ಏನನ್ನೂ ಮಾಡದಿರುವ ಅಥವಾ ಕರ್ಮದಲ್ಲಿ ತೊಡಗದೇ ಇರುವ ಗುಣ ನಿನ್ನದಾಗದಿರಲಿ” ಎಂದು ಇದನ್ನು ಅರ್ಥೈಸಬಹುದು.
ಮನುಷ್ಯ ನಿಷ್ಕ್ರಿಯನಾಗಕೂಡದು, ಹಾಗೆಯೇ ಕರ್ಮದಲ್ಲಿ ಫಲವನ್ನೂ ನಿರೀಕ್ಷಿಸಬಾರದು ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಈ ವಿಚಾರದ ಬಗ್ಗೆ ಸಾಕಷ್ಟು ಮಂಥನ ನಡೆದಿದೆ. ಇದನ್ನು ಸಂಕ್ಷಿಪ್ತೀಕರಿಸಿ, “ನಿರ್ದಿಷ್ಟ ಫಲಿತಾಂಶವನ್ನು ನಿರೀಕ್ಷಿಸಿ ಕರ್ತವ್ಯದಲ್ಲಿ ತೊಡಗುವವರು ನಿರೀಕ್ಷಿತ ಫಲ ದೊರೆಯದೇ ಹೋದಾಗ ವ್ಯಾಕುಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು ನಿರ್ದಿಷ್ಟ ಬಗೆಯ ಫಲವನ್ನು ನಿರೀಕ್ಷಿಸದೆ ಕರ್ತವ್ಯ ನಿರ್ವಹಣೆಯನ್ನಷ್ಟೇ ಮುಖ್ಯವಾಗಿ ಪರಿಗಣಿಸಬೇಕು” ಎಂದು ಹೇಳಬಹುದು. ಗೀತಾಚಾರ್ಯನ ವಾಕ್ಯಗಳ ಅರ್ಥ ಇಷ್ಟಕ್ಕೇ ಸೀಮಿತವಲ್ಲ. ಇದು ಒಂದು ಅರ್ಥ ಮಾತ್ರ.

ಫಲ ಎಂಬುದನ್ನು ನಾವು ಯಾವ ದೇಶ – ಕಾಲದೊಳಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಗಾಂಧೀಜಿಯವರು ಗುರಿ ಮತ್ತು ಮಾರ್ಗದ ಬಗ್ಗೆ ಹೇಳಿದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದಲ್ಲವೇ? ಅವರು ತಮ್ಮ ಹೋರಾಟದ ಮಾರ್ಗವನ್ನಾಗಿ ಅಹಿಂಸೆಯನ್ನು ಆರಿಸಿಕೊಂಡರು. ಅವರಿಗೆ ಬಹಳ ಮುಖ್ಯ ಅನ್ನಿಸಿದ್ದು ಮಾರ್ಗವೇ ಹೊರತು ಗುರಿಯಲ್ಲ. ಅವರ ಮಟ್ಟಿಗೆ ಗುರಿಯೆಂಬುದು ಆನುಷಂಗಿಕ.
ಗೊಲ್ಗೊಥಾದ ಶಿಲುಬೆಯಲ್ಲಿ ನೇತಾಡುವಾಗಲೂ ಯೇಸು ಕ್ರಿಸ್ತನ ಬಾಯಿಂದ ಬಂದ ಮಾತುಗಳೇನು? “ಅವರೇನು ಮಾಡುತ್ತಿದ್ದಾರೆಂದು ಅರಿತಿಲ್ಲ. ಪ್ರಭುವೇ ಅವರನ್ನು ಕ್ಷಮಿಸು”. ತನ್ನ ಕರ್ತವ್ಯಕ್ಕೆ ಬದ್ಧನಾಗಿ ನಿಂತ ಯೇಸು ತಾನು ನಂಬಿದ ಮಾರ್ಗದಿಂದ ವಿಚಲಿತನಾಗಲೇ ಇಲ್ಲ. ಗೀತಾಚಾರ್ಯನ ಮಾತುಗಳು ಅವು ಹುಟ್ಟಿದೆ ದೇಶ – ಕಾಲದ ಆಚೆಗೂ ಪ್ರಸ್ತುತವಾದದ್ದು ಹೀಗೆ!

ಇದೇ ಸಾಲುಗಳನ್ನು ಜಪಾನಿನ ಕೃಷಿ ಋಷಿ ಫುಕುವೋಕಾರ ಸಂದರ್ಭಕ್ಕೂ ಅನ್ವಯಿಸಬಹುದು. ‘Do nothing farming’ ಅಥವಾ ಏನೂ ಮಾಡದೇ ಇರುವ ಕೃಷಿ ಎಂದು ಅವರು ಹೇಳಿದ್ದರಲ್ಲಿಯೂ ಕರ್ಮ ಮತ್ತು ಫಲದ ನಡುವಣ ಸಂಬಂಧವಿದೆಯಲ್ಲವೇ!
“ಏನೂ ಮಾಡದೇ ಇರುವ ಕೃಷಿ”ಯ ಅರ್ಥವೇನು? ಕೃಷಿಕ ಪ್ರಕೃತಿಯನ್ನು ಸುಮ್ಮನೆ ಅನುಸರಿಸಬೇಕು, ಅದರಲ್ಲಿ ಅವನು ಮಧ್ಯಪ್ರವೇಶಿಸಬಾರದು. ಅಂದರೆ ಬೀಜವೊಂದು ಮೊಳಕೆಯೊಡೆದು, ಗಿಡವಾಗಿ, ಹೂವರಳಿ ಮತ್ತೆ ಬೀಜವನ್ನು ಸೃಷ್ಟಿಸುವವರೆಗಿನ ಪ್ರಕ್ರಿಯೆಯಲ್ಲಿ ಕೃಷಿಕ ಮಧ್ಯ ಪ್ರವೇಶಿಸದೇ ಅದನ್ನು ಅನುಸರಿಸುವುದು. ಬೀಜಗಳನ್ನು ಬಿತ್ತುವುದು (ಫುಕುವೋಕ ದೃಷ್ಟಿಯಲ್ಲಿ ಇದು ಚೆಲ್ಲುವುದು) ಮತ್ತು ಅದು ಬೆಳೆಯುವುದಕ್ಕೆ ಬೇಕಾದ ವಾತಾವರಣದಲ್ಲಿ ತಾನು ಮಧ್ಯಪ್ರವೇಶಿಸದೇ ಇರುವುದು ಕೃಷಿಕನ ಕರ್ತವ್ಯ. ಹೆಚ್ಚು ಇಳುವರಿ ಬೇಕೆಂದು ರಸಗೊಬ್ಬರ ಹಾಕದೇ ಇರುವುದು, ಜೀವಜಾಲದ ಕೊಂಡಿಗಳನ್ನು ನಾಶ ಪಡಿಸುವ ಕ್ರಿಮಿನಾಶಗಳನ್ನು ಸಿಂಪಡಿಸದೆ ಇರುವುದೂ ಈ ಕರ್ತವ್ಯದಲ್ಲಿ ಒಳಗೊಂಡಿವೆ. ಪ್ರಕೃತಿಯ ಸಹಜ ಪ್ರಕ್ರಿಯೆಯಲ್ಲಿ ದೊರೆಯುವುದನ್ನು ಅವನು ಕೊನೆಯಲ್ಲಿ ಪಡೆಯುತ್ತಾನೆ. ಗಾಂಧೀಜಿ, ಕ್ರಿಸ್ತ ಅಥವಾ ಫುಕುವೋಕಾರ ಉದಾಹರಣೆಯಲ್ಲಿ ಫಲಕ್ಕೆ ಪ್ರಾಮುಖ್ಯವಿಲ್ಲ; ಅಲ್ಲಿ ಅದೂ ಇದೆ. ಆದರೆ ಅದರತ್ತ ಸಾಗುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ಇದೆ.

ಗುರಿಯತ್ತ ಸಾಗುವ ಮಾರ್ಗವನ್ನು ಪರಿಶುದ್ಧವಾಗಿಟ್ಟುಕೊಳ್ಳುವ ಶಿಸ್ತನ್ನು ಗೀತಾಚಾರ್ಯ ಬೋಧಿಸುತ್ತಿದ್ದಾನೆ. ತನಗೆ ಬೇಕಿರುವ ಫಲವನ್ನು ಪಡೆಯುವುದಕ್ಕೆ ಅನೈಸರ್ಗಿಕವಾಗಿರುವುದನ್ನು ಮಾಡಬಾರದು ಎಂಬ ಶಿಸ್ತನ್ನು ಗೀತಾಚಾರ್ಯ ಬೋಧಿಸುತ್ತಿದ್ದಾನೆಂದು ನಮ್ಮ ಕಾಲ ಮತ್ತು ಸಂದರ್ಭಗಳಲ್ಲಿ ಅರ್ಥೈಸುವುದರಲ್ಲಿ ತಪ್ಪಿದೆಯೇ? ಏಕೆಂದರೆ ನಿರ್ದಿಷ್ಟ ಫಲವನ್ನು ಅಪೇಕ್ಷಿಸುವುದು ಎಂದರೆ ನಮ್ಮ ದೃಷ್ಟಿಕೋನದ ಸಕಾರಾತ್ಮಕ ಫಲಿತಾಂಶಕ್ಕಾಗಿ ಪ್ರಕ್ರಿಯೆಯನ್ನು ಮಾರ್ಪಡಿಸುವುದು. ವ್ಯಾಪಾರದಲ್ಲಿ ಲಾಭ ಮಾಡುವುದಕ್ಕಾಗಿ ಮಾರುಕಟ್ಟೆಯ ಸಹಜಗತಿಯನ್ನು ಬದಲಾಯಿಸುವಂಥ ತಂತ್ರಗಳು, ಚುನಾವಣೆಯಲ್ಲಿ ಗೆಲ್ಲಲು ಅಡ್ಡದಾರಿ ಹಿಡಿಯುವುದು – ಇಂಥವೆಲ್ಲವನ್ನೂ ಪ್ರಕ್ರಿಯೆಯನ್ನು ಸ್ವಾರ್ಥಕ್ಕಾಗಿ ಬದಲಾಯಿಸುವ ಪ್ರವೃತ್ತಿಗೆ ಹೋಲಿಸಬಹುದು.

ಭಗವದ್ಗೀತೆಯ ಈ ಸಾಲುಗಳನ್ನು ವೇದವ್ಯಾಸ ಮಹರ್ಷಿಗಳು ರಚಿಸಿದ ಕೃತಿಯ ಸಾಲುಗಳನ್ನಾಗಿ ಗ್ರಹಿಸಲು ಪ್ರಯತ್ನಿಸಿದರೂ ಇದೇ ಅರ್ಥ ಹೊಳೆಯುತ್ತದೆ. ಒಂದು ವೇಳೆ ವ್ಯಾಸರು ಮಹಾಭಾರತವೆಂಬ ಕೃತಿಯ ಮೇಲೆ ತಮ್ಮ ‘ಲೇಖಕತ್ವ’ವನ್ನು ಹೇರಿದ್ದರು ಎಂದುಕೊಳ್ಳಿ; ಈ ಸಾಲುಗಳನ್ನು ನಾವು ಗೀತಾಚಾರ್ಯನ ಉಪದೇಶವಾಗಿ ಪರಿಗಣಿಸುವುದಕ್ಕಿಂತ ಹೆಚ್ಚಾಗಿ ಯಾವುದೋ ಪುಸ್ತಕದ ಸಾಲುಗಳಂತೆ ಗ್ರಹಿಸಿಬಿಡುತ್ತಿದ್ದೆವು. ಅದೊಂದು ಲೋಕೋತ್ತರ ತತ್ವವಾಗದೆ ಕೇವಲ ಕಥೆಯೊಂದರ ಅಂಶವಾಗಿಯಷ್ಟೇ ಉಳಿದುಬಿಡುತ್ತಿತ್ತು. ಭಾರತೀಯ ಜ್ಞಾನ ಪರಂಪರೆಯ ವಿನಯದ ಮಹತ್ವವಿರುವುದು ಇಲ್ಲಿಯೇ!

 

 

Leave a Reply