ಲೋಕದ ಅರಿವನ್ನು ಸಾಂದ್ರವಾಗಿ ಹೇಳುವ ಸುಭಾಷಿತಗಳು

ಪದಗಳು ಮಿತ ಆದರೆ ಹಿತ, ವಿಚಾರಪೂರಿತ, ಅರ್ಥಭರಿತ- ಇದೇ ಸುಭಾಷಿತ. ಅನುಭವ ಹರಳುಗಟ್ಟಿ ಮಾತಿನ ಬಂಧಗಳಾಗಿ ಮಾನವ ಜೀವನದ ವ್ಯವಹಾರಗಳಿಗೂ, ನಿತ್ಯಸತ್ಯಗಳಿಗೂ ಪ್ರಸ್ತುತವಾಗಿರುವುದು ಸುಭಾಷಿತಗಳ ವೈಶಿಷ್ಟ್ಯ ~ ನಾಗೇಶ್ಚಂದ್ರ

ಸುಭಾಷಿತ ಎಂದರೆ ಒಳ್ಳೆಯ ನುಡಿ, ಸರಳವಾಗಿ, ಸಂಕ್ಷಿಪ್ತವಾಗಿ ಮತ್ತು ಧ್ವನಿಪೂರ್ಣವಾಗಿ ಪದ್ಯರೂಪದಲ್ಲಿ ಶಬ್ದಗಳನ್ನು ಹಣೆದಾಗ ಅವು ಸುಭಾಷಿತಗಳಾಗುತ್ತವೆ.
ಸುಭಾಷಿತದ ಅತಿಶಯತೆಯನ್ನು ವಿವರಿಸುತ್ತಾ ಸುಭಾಷಿತ ರತ್ನ ಭಂಡಾರದಲ್ಲಿ ಒಂದು ಸುಂದರ ಉಕ್ತಿ ಇದೆ-
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಅಂದರೆ ಸುಭಾಷಿತದ ರುಚಿ ಅದೆಷ್ಟು ಮಧುರವೆಂದರೆ ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯು ಬಾಡಿತು. ಸಕ್ಕರೆ ಕಲ್ಲಾಯಿತು. ಅಮೃತವು ಹೆದರಿ ಸ್ವರ್ಗಕ್ಕೆ ಓಡಿಹೋಯಿತು!

ಸುಭಾಷಿತಗಳು ಆವರಿಸದ ವಸ್ತುಗಳಿಲ್ಲ. ಸಂಸಾರ, ಧರ್ಮ-ಕರ್ಮ, ಸುಖ-ದುಃಖ, ಹಾಸ್ಯ, ಲೋಕನೀತಿ, ಇತ್ಯಾದಿ ಎಲ್ಲಾ ವಿಷಯಗಳ ಮೇಲೂ ಬೆಳಕು ಚೆಲ್ಲಿದೆ.
ಸಂಸಾರ ಕಟುವೃಕ್ಷಸ್ಯ ದ್ವೇಫಲೇಹ್ಯಮೃತೋಪಮೇ |
ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ ||
ಈ ಸಂಸಾರವೆಂಬುದು ಒಂದು ಕಹಿಯಾದ ವೃಕ್ಷ ಆದರೆ ಅದರಲ್ಲಿಯೂ ಅಮೃತದಂತಹ ಎರಡು ಹಣ್ಣುಗಳಿವೆ. ಅದರಲ್ಲಿ ಮೊದಲನೆಯದು ಸುಭಾಷಿತ, ಎರಡನೆಯದು ಸತ್ಸಂಗ. ಸುಭಾಷಿತ ಮಂಜರಿಯಿಂದ ಆರಿಸಿಕೊಂಡ ಈ ತತ್ವಶ್ಲೋಕ ನಿಜಕ್ಕೂ ಅನುಸ್ಮರಣೀಯ. ಸಂಸಾರವೆಂದರೇ ಒಂದು ರೀತಿಯ ಕಷ್ಟತರವಾದ ಅನುಭವವುಳ್ಳ ಜೀವನ. ಇಂತಹ ಜೀವನದಲ್ಲಿ ಅಮೃತ ಸಮಾನೋಪಾದಿಯಲ್ಲಿ ನೆರವೀಯುವುದೇ ಈ ಸುಭಾಷಿತದ ಮಹತ್ವ. “ಕಲ್ಲುಸಕ್ಕರೆಯ ಸವಿ ಬಲ್ಲವರೇ ಬಲ್ಲರು” ಎಂಬಂತೆ ಈ ಸುಭಾಷಿಗಳ ಸವಿ ಬಲ್ಲವರೇ ಬಲ್ಲರು.

ಚಿಂತೆ ನಮಗೆ ಎಷ್ಟು ಪರಿಚಿತವೋ ಈ ಕೆಳಗಿನ ಸುಭಾಷಿತವೂ ಅಷ್ಟೇ ಪ್ರಚಲಿತ.
ಚಿಂತಾಯಾತ್ಚಚಿತಾಯಶ್ಚ ಬಿಂದು ಮಾತ್ರಂ ವಿಶಿಷ್ಟ್ಯತೇ |
ಚಿತಾ ದಹತಿ ನಿರ್ಜೀವ ಚಿಂತಾ ದಹತಿ ಜೀವಿತಂ||
ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ. ಚಿತೆ ಜೀವವಿಲ್ಲದ ಹೆಣವನ್ನು ಮಾತ್ರ ಸುಡುತ್ತದೆ. ಚಿಂತೆಯಾದರೋ ಜೀವವಿರುವವನನ್ನೇ ಸುಡುತ್ತದೆ. ಈ ಒಂದು ಶ್ಲೋಕವು ಚಿಂತೆಯ ಸ್ವರೂಪವನ್ನೂ ದುಷ್ಪರಿಣಾಮವನ್ನೂ ಒಟ್ಟಿಗೆ ತೋರಿಸಿಕೊಡುತ್ತದೆ.

ಸುಭಾಷಿತಗಳಲ್ಲಿ ಹಾಸ್ಯದ ಚಟಾಕಿಗಳಿಗೇನೂ ಕಮ್ಮಿಯಿಲ್ಲ. ಹಾಕಿಕೊಳ್ಳುವ, ಉಡುವ ಬಟ್ಟೆಯು ಮಾನವನ ಯೋಗ್ಯತೆಯನ್ನು ನಿರ್ಣಯಿಸಬಹುದೇ ಎಂಬುದಕ್ಕೆ ಸುಭಾಷಿತಕಾರರು ಪುರಾಣದ ಪ್ರಸಂಗವೊಂದನ್ನು ಉಪಯೋಗಿಸಿಕೊಂಡು ಈ ಕೆಳಗಿನಂತೆ ಹಾಸ್ಯದ ಚಟಾಕಿಯನ್ನು ಹಾರಿಸಿದ್ದಾರೆ.
ಕಿಂ ವಾಸಸೈವ ನ ವಿಚಾರಣೀಯಂ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ |
ಪೀತಾಂಬರಂ ವೀಕ್ಷ್ಯಾ ದದೌ ತನುಜಾಂ ದಿಗಂಬರಂ ವೀಕ್ಷ್ಯಾ ವಿಷ ಸಮುದ್ರಃ||
ಯಾವ ಬಟ್ಟೆಹಾಕಿದರೇನು ಎಂದು ಭಾವಿಸಬಾರದು. ಬಟ್ಟೆಯು ಮಾನವನ ಯೋಗ್ಯತೆಯನ್ನು ನಿರ್ಣಯಿಸುತ್ತದೆ. ಪೀತಾಂಬರಧಾರಿಯಾದ ವಿಷ್ಣುವಿಗೆ ಸಮುದ್ರರಾಜನು ಮಗಳನ್ನು ಕೊಟ್ಟನು. ದಿಗಂಬರನಾದ ಶಿವನಿಗೆ ವಿಷವನ್ನು ಕೊಟ್ಟನು.

ಅಂತೆಯೇ ಲೋಕಾರೂಢಿಯಾದ ಕೆಲವು ಸುಭಾಷಿತಗಳನ್ನು ಗಮನಿಸೋಣ.
ಕನ್ಯಾ ವರಯತೇ ರೂಪಂ ಮಾತಾ ವಿತ್ತಂ ಪಿತಾ ಶೃತಂ |
ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ||
ವರನು ಸುಂದರವಾಗಿರಬೇಕೆಂದು ಕನ್ಯೆಯ ಬಯಕೆ. ಅವನಲ್ಲಿ ಐಶ್ವರ್ಯವಿರಬೇಕೆಂದು ತಾಯಿಯ ಬಯಕೆ, ಅವನು ವಿದ್ಯಾವಂತನಾಗಿರಬೇಕೆಂಬುದು ತಂದೆಯ ಬಯಕೆ, ಉತ್ತಮ ಕುಲದವನಾಗಿರಬೇಕೆಂದು ಬಂಧುಗಳ ಬಯಕೆ, ಇತರರು ಬಯಸುವುದು ಸೊಗಸಾದ ಊಟವನ್ನು.

ಉದ್ಯಮೇನ ಹಿ ಸಿದ್ದ್ಯಂತಿ ಕಾರ್ಯಾಣಿ ನ ಮನೋರಥೈಃ|
ಸುಪ್ತಸ್ಯ ಸಿಂಹಸ್ಯ ಮುಖೇ ನ ಹಿ ಪ್ರವಿಶಂತಿ ಮೃಗಾಃ||
ಮನಸ್ಸಿನಲ್ಲಿ ಆಂದುಕೊಳ್ಳುವುದರಿಂದ ಆಥವಾ ಇಚ್ಛಿಸುವುದರಿಂದ ಯಾವ ಕೆಲಸವೂ ಆಗುವುದಿಲ್ಲ. ಪ್ರಯತ್ನಪೂರ್ವಕವಾಗಿ ಕಾರ್ಯ ನಿರ್ವಹಿಸಲೇಬೇಕು. ಹೇಗೆಂದರೆ ಮಲಗಿರುವ ಸಿಂಹದ ಬಾಯೊಳಗೆ ಪ್ರಾಣಿಗಳು ತಾವೇ ತಾವಾಗಿ ಹೇಗೆ ಪ್ರವೇಶಿಸುವುದಿಲ್ಲವೋ ಹಾಗೆ. ಸಿಂಹ ಎದ್ದು ಎಚ್ಚರಿಕೆಯಿಂದ ಕಾದು ಬೇಟೆಯಾಡಬೇಕು; ಆಗ ಮಾತ್ರ ಅದಕ್ಕೆ ಆಹಾರರೂಪವಾಗಿ ಪ್ರಾಣಿಗಳು ಸಿಗಬಲ್ಲವು;

ಲಾಲನೇ ಬಹವೋ ದೋಷಾಃ ತಾಡನೇ ಬಹವೋ ಗುಣಾಃ|
ತಸ್ಮಾತ್ ಪುತ್ರಮ್ ಚ ಶಿಷ್ಯಮ್ ಚ ತಾಡಯೇತ್ ನತು ಲಾಲಯೇತ್||
-ಮಕ್ಕಳನ್ನು ಮುದ್ದಿಸುವುದರಲ್ಲಿ ಬಹಳ ಕೆಡಕುಗಳಿವೆ. ಅಂತೆಯೇ ಹೊಡೆಯುವುದರಲ್ಲಿ ಅಥವಾ ಬೈಯುವುದರಲ್ಲಿ ಬಹಳ ಪ್ರಬೇಧಗಳಿವೆ. ಆದ್ದರಿಂದ ಮಕ್ಕಳನ್ನು ಹಾಗೂ ವಿದ್ಯಾರ್ಥಿಗಳನ್ನು (ತಪ್ಪು ಮಾಡಿದಾಗ) ಶಿಕ್ಷಿಸಬೇಕೇ ವಿನಃ ಮುದ್ದು ಮಾಡಬಾರದು.
ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕು.

ಪ್ರಸಿದ್ಧಿಗೆ ಬರಬೇಕು ಎಂಬ ಅಭಿಲಾಷೆಯಿದ್ದಲ್ಲಿ-
ಘಟಂ ಭಿಂದ್ಯಾತ್ ಪಟಂ ಛಿಂದ್ಯಾತ್ ಕುರ್ಯಾದ್ವಾ ಗಾರ್ಧಭಸ್ವನಂ|
ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವೇತ್||
ಗಡಿಗೆಯನ್ನಾದರೂ ಒಡೆಯಬೇಕು. ಬಟ್ಟೆಯನ್ನಾದರೂ ಹರಿಯಬೇಕು. ಕತ್ತೆಯಂತಾದರೂ ಕಿರುಚಬೇಕು. ಅಂತೂ ಹೇಗಾದರೂ ಪ್ರಸಿದ್ಧಿಗೆ ಬರಬೇಕು. ಇದೇ ಗುರಿ ಗುರಿಯಾಗಬೇಕು. ಎಂಬುದು ಈ ಸುಭಾಷಿತದ ತಾತ್ಪರ್ಯ.

ಇದೇ ರೀತಿಯಲ್ಲಿ ಮನುಸ್ಮೃತಿಯಲ್ಲಿ ವಿವಿಧ ಚಪಲಗಳ ಬಗ್ಗೆ ಉಲ್ಲೇಖವಿದ್ದು ಇವುಗಳನ್ನು ಮಾಡಬಾರದು. ಇದು ನಿಷಿದ್ಧ ಎಂಬುದಾಗಿ ಈ ಕೆಳಕಾಣಿಸಿದ ಸುಭಾಷಿತ ಅತ್ಯಂತ ಮಾರ್ಮಿಕವಾಗಿ ಎಚ್ಚರಿಸುತ್ತದೆ.
ನ ಪಾಣಿಪದ ಚಪಲೋ ನ ನೇತ್ರ ಚಪಲೋ ನೃಜುಃ|
ನ ಸ್ಯಾದ್ವಾಕ್ಚಪಲಶ್ಚೈವ ನ ಪರದ್ರೋಹ ಕರ್ಮಧೀಃ||
ಬೇಡದ ಕೆಲಸಕ್ಕೆ ಕೈ ಹಾಕುವುದು ಕಂಡ-ಕಂಡದ್ದನ್ನೆಲ್ಲಾ ಮುಟ್ಟಿ ನೋಡುವುದು-ಇದೆಲಾ ಪ್ರಾಣಿ ಚಪಲ. ಇದು ಮಾಡಬಾರದು. ಎಲ್ಲೆಂದರಲ್ಲಿ ನಡೆದಾಡುವುದು. ಕಾಲ ಮೇಲೆ ಕಾಲು ಹಾಕಿಕೊಂಡು ಅಲುಗಾಡಿಸುತ್ತಿರುವುದು- ಇದೆಲ್ಲಾ ಪಾದ ಚಪಲ. ಇದು ಕೂಡದು. ಎಲ್ಲೆಂದರಲ್ಲಿ ಕಣ್ಣು ಹಾಯಿಸುವುದು, ಮನಸ್ಸನ್ನು ಕೆರಳಿಸುವಂಥದ್ದನ್ನು ನೋಡುವುದು-ಇವೆಲ್ಲಾ ನೇತ್ರ ಚಪಲ. ಇದು ನಿಷಿದ್ಧ. ಸುಳ್ಳು-ಪಳ್ಳು ಹೇಳುವುದು. ಮೋಸದಿಂದ ನಡೆದುಕೊಳ್ಳುವುದು ಇವೆಲ್ಲಾ ಅವೃಜುತ್ವ. ಹರಟೆ ಹೊಡೆಯುವುದು, ಕುಚೇಷ್ಟೆಯ ಮಾತನಾಡುವುದು. ಇವೆಲ್ಲಾ ವಾಕ್ ಚಪಲ. ಹೇಳುವುದೊಂದು ಮಾಡುವುದು ಮತ್ತೊಂದು, ಇತರರನ್ನು ಚೆನ್ನಾಗಿ ನಂಬಿಸಿ ಸಮಯ ನೋಡಿ ಕೈಕೊಡುವುದು- ಇವೆಲ್ಲಾ ದೋಷ ಪೂರ್ಣ ದ್ರೋಹಬುದ್ಧಿ. ಇದು ಕೂಡದು, ಇವನ್ನೆಲ್ಲಾ ಮಾಡಬಾರದು. ಇದರಿಂದ ದೊಡ್ಡ ಅನಾಹುತವೇ ಆದೀತು.

ಮೂರ್ಖರು ಎಂದು ಗೊತ್ತಾದ ಮೇಲೆ ಅಂತಹವರನ್ನು ಕಾಣಲು ಹೋಗಬಾರದು. ಅವರೊಡನೆ ವಾದಕ್ಕಂತೂ ಇಳಿಯಲೇಬಾರದು. ಅವರೊಡನೆ ಇರಬಾರದು. ಒಂದು ವೇಳೆ ಇದ್ದರೂ ಅವರೊಡನೆ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೂ ಅವರಂತೆಯೇ ಮಾತನಾಡಬೇಕು. ಎಂಬುದಾಗಿ ಸುಭಾಷಿತ ನಿಧಿಯಿಂದ ಆರಿಸಿಕೊಂತಹ ಈ ಕೆಳಗಿನ ಶ್ಲೋಕ ಬಹಳ ಚೆನ್ನಾಗಿ ಅರ್ಥೈಸುತ್ತದೆ.
ಮೂರ್ಖಾನ ದೃಷ್ಟಿವ್ಯಾ ದ್ರಷ್ಟವ್ಯಾಶ್ಚೇತ್ ನ ತೈಸ್ತು ಸಹ ತಿಷ್ಠೇತ್|
ಯದಿ ತಿಷ್ಠೇತ್ ನ ಕಥಯೇತ್ ಯದಿ ಕಥಯೇತ್ ಮೂರ್ಖವತ್ ಕಥಯೇತ್||
ಸುಭಾಷಿತದ ಸೊಬಗು ಅನುಭವಿಸಿದರೆ ತಿಳಿದೀತು. ಅದರ ರಸಾಸ್ವಾದನೆಯಿಂದ ಮನಸ್ಸು ಅರಳುತ್ತದೆ. ಮುಂದಿನ ಎಲ್ಲಾ ಕಾರ್ಯಗಳಿಗೆ ಮಾರ್ಗದರ್ಶಿಯಾಗಿ, ಅತಿ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಈ ಕೆಳಗಿನ ಸುಭಾಷಿತಗಳಿಗೆ ವಿವರಣೆ ಬೇಕಾಗುವುದಿಲ್ಲ.

ಅತಿ ಪರಿಚಯಾದವಜ್ಞಾ ಸಂತತ ಗಮನಾದನಾದರೋ ಭವತಿ|
ಮಲಯೇ ಛಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನ ಕುರುತೇ||
ಪರಿಚಯವು ಅತಿಯಾದರೆ ಅನಾದರಣೆಯುಂಟಾಗುತ್ತದೆ. ಯಾವಾಗಲೂ ಹೋಗಿಬರುತ್ತಿರುವುದರಿಂದ ಸಲುಗೆ ಹೆಚ್ಚಾಗಿ ಅಪರೂಪದ ಆದರವಿರುವುದಿಲ್ಲ. ಹೇಗೆಂದರೆ ಮಲಯ ಪರ್ವತದಲ್ಲಿ ಹಾಗೂ ಗುಡ್ಡಗಾಡುಗಳಲ್ಲಿ ವಾಸಿಸುವ ಕಿರಾತ ಸ್ತ್ರೀಯರು ಯಾವಾಗಲೂ ಶ್ರೀಗಂಧದ ಮರಗಳಡಿಯಲ್ಲೇ ವಾಸಮಾಡುವುದರಿಂದ ಅವರಿಗೆ ಅದರ ಬೆಲೆ ತಿಳಿಯದೇ ಶ್ರೀಗಂಧದ ಮರವನ್ನೂ ಸಹ ಸೌದೆಯಾಗಿ ಬಳಸುತ್ತಾರೆ.

ಪಯಃಪಾನಂ ಭುಜಂಗಾನಾಂ ಕೇವಲಂ ವಿವರ್ಧನಂ|
ಮೂರ್ಖಾಣಾಂ ಉಪದೇಶಾಯ ಪ್ರಕೋಪಾಯ ನ ಶಾಂತಯೇ||
ಹಾವಿಗೆ ಹಾಲೆರೆಯುವುದರಿಂದ ಅವುಗಳ ವಿಷವನ್ನು ಹೆಚ್ಚಿಸಿದಂತೆ ಆಗುವುದೇ ಹೊರತು ಅವುಗಳ ಸಮಾಧಾನಕ್ಕಲ್ಲ. ಹಾಗೆ ಮೂರ್ಖನಿಗೆ ಉಪದೇಶ ಮಾಡುವುದರಿಂದ ಅವರ ಸಿಟ್ಟು ಹೆಚ್ಚುವುದೇ ಹೊರತು ಅವರನ್ನು ಶಾಂತಗೊಳಿಸಲಾಗುವುದಿಲ್ಲ.

ಪಿತ್ರೋರ್ನಿತ್ಯಂ ಪ್ರಿಯಂ ಕುರ್ಯಾದಾಚಾರ್ಯಸ್ಯ ಚ ಸರ್ವದಾ|
ತೇಷು ಹಿ ತ್ರಿಷು ತುಷ್ಟೇಷು ತಪಃ ಸರ್ವಂ ಸಮಾಪ್ಯತೇ||
ತಾಯಿ ತಂದೆಗಳಿಗೆ ಮತ್ತು ಗುರುವಿಗೆ ಯಾವಾಗಲೂ ಪ್ರಿಯವಾದುದನ್ನೇ ಮಾಡಬೇಕು. ಈ ಮೂವರು ತೃಪ್ತರಾದರೆ ಇಡೇ ಬ್ರಹ್ಮಾಂಡವೇ ತೃಪ್ತವಾದಂತೆ. ಎಲ್ಲ ತಪಸ್ಸೂ ಪೂರ್ಣವಾಗುತ್ತದೆ. ಸಕಲ ಕಾರ್ಯಗಳೂ ಸಿದ್ಧಿಸುತ್ತವೆ. ಆದ್ದರಿಂದ ಅವರ ಸೇವೆ ನಿರಂತರವಾಗಿರಬೇಕು ಹಾಗೂ ಸದುದ್ದೇಶವಾಗಿರಬೇಕು ಎಂದು ಈ ಸುಭಾಷಿತಯ ತಿಳಿಸುತ್ತದೆ.

ಈ ರೀತಿಯಾಗಿ ಸುಭಾಷಿತಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಸುಭಾಷಿತದ ಸೊಬಗು ಬಲ್ಲವನೇ ಬಲ್ಲ.

Leave a Reply