ಸತ್ಯವನ್ನು ಹುಡುಕಿ ತಂದ ಸಹೋದರರು : ಓಶೋ ಹೇಳಿದ ಕಥೆ

Osho-playing-lute-562x513

ಮ್ಮೆ ಒಬ್ಬ ತಂದೆ ತನ್ನ ಐವರು ಮಕ್ಕಳನ್ನು ಕರೆದು, “ಸತ್ಯವನ್ನು ಹುಡುಕಿಕೊಂಡು ಬನ್ನಿ” ಅನ್ನುತ್ತಾನೆ.

ತಂದೆಯ ಆದೇಶವನ್ನು ಹೊತ್ತು ಐವರೂ ಸಹೋದರರು ವಿಭಿನ್ನ ದಿಕ್ಕುಗಳಿಗೆ ತೆರಳುತ್ತಾರೆ. ವರ್ಷಗಳ ನಂತರ ಮರಳಿ ಬರುತ್ತಾರೆ. ಆಗ ಮರಣಶಯ್ಯೆಯಲ್ಲಿರುವ ತಂದೆ ಅವರನ್ನು ಕುರಿತು, “ಸತ್ಯವು ದೊರೆಯಿತೆ?” ಎಂದು ಕೇಳುತ್ತಾನೆ.

ಆಗ ಮೊದಲನೆಯವನು ವೇದಗಳೆಲ್ಲದರ ಸಾರಾಂಶವನ್ನು ಕಂಠಪಾಠವಾಗಿ ಒಪ್ಪಿಸುತ್ತಾನೆ. ಎರಡನೆಯವನು ಉಪನಿಷತ್ ಸೂತ್ರಗಳನ್ನೆಲ್ಲ ಹೇಳುತ್ತಾನೆ. ಮೂರನೆಯವನು ಪುರಾಣಗಳ ಸಾರಸರ್ವವನ್ನು ಹೇಳುತ್ತಾನೆ. ನಾಲ್ಕನೆಯವನು ಧರ್ಮಶಾಸ್ತ್ರಗಳೆಲ್ಲವನ್ನು ಅರುಹುತ್ತಾನೆ. ಐದನೆಯವನು ಮಾತ್ರ ತಂದೆ ಎದುರು ತಲೆ ಬಾಗಿ ಮೌನವಾಗಿ ನಿಲ್ಲುತ್ತಾನೆ.

ತಂದೆ “ಯಾಕೆ? ನೀನು ಸತ್ಯವನ್ನು ಹುಡುಕಲು ಯತ್ನಿಸಲಿಲ್ಲವೆ? ನಿನಗೆ ಸತ್ಯ ಯಾವುದರಲ್ಲೂ ಸಿಗಲಿಲ್ಲವೆ?” ಎಂದು ಕೇಳಿದ.

ಮಗ ತಂದೆಯನ್ನೆ ದಿಟ್ಟಿಸಿದ. ಅವನ ಕಣ್ಣುಗಳಲ್ಲಿ ಶಾಂತಿ ತುಂಬಿತುಳುಕುತ್ತಿತ್ತು. ಮುಖ ಪ್ರಸನ್ನವಾಗಿತ್ತು.

ತಂದೆ ಮತ್ತೊಮ್ಮೆ ತನ್ನ ಪ್ರಶ್ನೆಯನ್ನು ಪುನರಾವರ್ತಿಸಿದ. ಮಗನ ಮೌನವೂ ಮುಂದುವರೆಯಿತು. ಎಷ್ಟು ಬಾರಿ ಕೇಳಿದರೂ ಅವನಿಂದ ಮೌನವೇ ಉತ್ತರ.

“ಐವರಲ್ಲಿ ಕನಿಷ್ಠ ಒಬ್ಬ ಮಗನಾದರೂ ಸತ್ಯವನ್ನು ತಿಳಿಯಲು ಸಫಲನಾದ! ನಾನಿನ್ನು ನಿಶ್ಚಿಂತೆಯಿಂದ ಸಾಯಬಹುದು. ಅವನ ಮೌನವೇ ಎಲ್ಲವನ್ನೂ ಹೇಳುತ್ತಿದೆ” ಅನ್ನುತ್ತಾ ತನ್ನ ಕಿರಿಮಗನನ್ನು ಆ ತಂದೆ ಬಿಗಿದಪ್ಪಿದ.

(ಓಶೋ ಹೇಳಿದ ದೃಷ್ಟಾಂತ ಕಥೆ )

Leave a Reply