ಭಗವಂತನನ್ನು ಏಕೆ ಭಜಿಸಬೇಕು? ಶಂಕರಾಚಾರ್ಯರ ವಿವರಣೆ ಹೀಗಿದೆ….

lach

ಶ್ರೀ ಶಂಕರಾಚಾರ್ಯ ವಿರಚಿತ “ಭಜ ಗೋವಿಂದಂ” ಸ್ತೋತ್ರವು ಅವರ ‘ಮೋಹಮುದ್ಗರ’ದಲ್ಲಿ ಕಾಣಸಿಗುತ್ತದೆ. ಮೂಲತಃ ಶ್ರೀ ಶಂಕರರು 11 ಶ್ಲೋಕಗಳನ್ನು ಮಾತ್ರ ರಚಿಸಿದ್ದಾರೆಂದೂ, ಉಳಿದವು ಅವರ ಶಿಷ್ಯರಿಂದ ಕಾಲಕ್ರಮದಲ್ಲಿ ಸೇರಿಸಲ್ಪಟ್ಟವೆಂದೂ ಹೇಳಲಾಗುತ್ತದೆ. ನಾವು ಭಗವಂತನನ್ನು (ಗೋವಿಂದನನ್ನು) ಏಕೆ ಭಜಿಸಬೇಕು ಎಂದು ಈ ಶ್ಲೋಕಗಳು ಮನದಟ್ಟು ಮಾಡಿಸುವುದು ಈ ಶ್ಲೋಕಗಳ ಮೂಲ ಆಶಯ. ‘ಭಜಗೋವಿಂದಮ್’ ಸ್ತೋತ್ರ ಮಾಲೆಯ ಮೊದಲ 16 ಶ್ಲೋಕಗಳನ್ನು ಭಾಗ 1ರಲ್ಲಿ ಪ್ರಕಟಿಸಿದ್ದೇವೆ: https://aralimara.com/2019/04/03/govindam/   ಎರಡನೇ ಭಾಗ ಇಲ್ಲಿದೆ: 

ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||
ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗೆಯಲ್ಲಿ ಮೀಯುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ. ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ. ಏನು ಮಾಡಿದರೇನು? ಆತ್ಮಜ್ಞಾನವಿಲ್ಲದೆ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷ ದೊರೆಯದು.

ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||
ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಕೃಷ್ಣಾಜಿನವನ್ನು ಹೊದ್ದುಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ. ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||
ಅದು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತರಾಗಿರಲಿ.
ಯಾರ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆವರು ಅಮಿತವಾದ ಆನಂದದಲ್ಲಿ ಮುಳುಗಿರುತ್ತಾರೆ, ಇದು ನಿಶ್ಚಿತ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||
ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು. ಮುರಾರಿಯನ್ನು (ಕೃಷ್ಣನನ್ನು) ಒಂದು ಸಲ ಪೂಜಿಸಿದರೂ ಸಾಕು, ಅಂತವರಿಗೆ ಯಮನಿಂದ ಯಾವ ಬಾಧೆಯೂ ಇರುವುದಿಲ್ಲ.

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||
ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ಜನ ಮರಣ ಚಕ್ರಕ್ಕೆ ಕೊನೆಯೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ದಯವಿಟ್ಟು ಇದರಿಂದ ನನ್ನನ್ನು ಪಾರು ಮಾಡು. .

ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||
ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು. ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನವಿಷಯವೇ ಎಂಬುದನ್ನರಿತು, ಅದನ್ನು ದೂರವಿಟ್ಟು ಚಿಂತನ ಮಂಥನ ನಡೆಸು.

ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ
ರಮತೇ ಬಾಲೋನ್ಮತ್ತವದೇವ ||23||
ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿಕೊಳ್ಳುತ್ತಾನೆ. ಪಾಪ-ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ.
ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದುಕೊಳ್ಳುತ್ತಾನೆ.

ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||
ನಿನ್ನಲ್ಲಿ, ನನ್ನಲ್ಲಿ, ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ. ವ್ಯರ್ಥವಾಗಿ ತಾಳ್ಮೆಗೆಟ್ಟು ನನ್ನ ಮೇಲೇಕೆ ಕೋಪಿಸಿಕೊಳ್ಳುತ್ತೀಯೆ!? ನೀನು ವಿಷ್ಣುತ್ವವನ್ನು ಹೊಂದಬಯುವೆಯಾದರೆ, ಎಲ್ಲರಲ್ಲಿಯೂ ಒಬ್ಬನೇ ವಿಷ್ಣು ಇದ್ದಾನೆಂದು ತಿಳಿದು ಸಮಚಿತ್ತನಾಗು.

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||
ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸಬೇಡ. ಎಲ್ಲದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ. ಎಲ್ಲವನ್ನೂ ಪ್ರತ್ಯೇಕಿಸುವ ಭೇದ ಬುದ್ಧಿಯನ್ನು ತೊಡೆದು ಹಾಕು.

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||
ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಎಲ್ಲೆಡೆಯೂ ಒಬ್ಬನೇ ಆತ್ಮನಿದ್ದಾನೆಂದೂ ಅದು ನಾನೇ ಎಂದೂ ತಿಳಿದು ‘ಸೋsಹಂ’ ಎಂದೇ ನಿಶ್ಚಯಿಸುತ್ತಾನೆ. ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ಯಾತನೆಗಳನ್ನು ಅನುಭವಿಸುತ್ತಾರೆ.

ಆದ್ದರಿಂದ,
“ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಮೂಢನಂತಾಡದೆ, ಭಗವಂತನನ್ನು ಸ್ಮರಿಸು. ಜ್ಞಾನವನ್ನು ಪಡೆ. ಸತ್ಕರ್ಮಗಳಿಂದ ಬದುಕನ್ನು ಸಾರ್ಥಕಗೊಳಿಸಿಕೋ” ಎಂದು ಶಂಕರಾಚಾರ್ಯರು ಕರೆ ನೀಡುತ್ತಾರೆ.

(ಮುಗಿಯಿತು)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.