ಕರ್ನಾಟಕದ ಪಶ್ಚಿಮ ಕರಾವಳಿ ತೀರ್ಥಕ್ಷೇತ್ರಗಳಿಂದ ಸಮೃದ್ಧವಾಗಿದ್ದು, ವರ್ಷದ ಎಲ್ಲ ಕಾಲವೂ ತೀರ್ಥಯಾತ್ರಿಗಳನ್ನು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಸರಿಯಾದ ಯೋಜನೆ ಹಾಕಿಕೊಂಡು ಹೊರಟರೆ ಮೂರು ದಿನಗಳಲ್ಲಿ ಗೋಕರ್ಣದ ಮಹಾಬಲೇಶ್ವರ, ಕರಿಕಾನ ಪರಮೇಶ್ವರಿ, ಇಡಗುಂಜಿಯ ವಿನಾಯಕ, ಮುರ್ಡೇಶ್ವರದ ಈಶ್ವರ, ಗುಂಡಬಾಳದ ಆಂಜನೇಯ, ಕೊಲ್ಲೂರು ಮೂಕಾಂಬಿಕ, ಇತ್ಯಾದಿ ಕ್ಷೇತ್ರಗಳನ್ನು ಸಂದರ್ಶಿಸಬಹುದು. ನಿಮ್ಮ ಊರಿನಿಂದ ಗೋಕರ್ಣ ತಲುಪಿಕೊಂಡರೆ, ಅಲ್ಲಿಂದ ಟಾಕ್ಸಿ ಮಾಡಿಕೊಂಡು ಎಲ್ಲ ದೇಗುಲಗಳನ್ನೂ ಸಂದರ್ಶಿಸಬಹುದು.
ಗೋಕರ್ಣ
ಗೋಕರ್ಣ ಅರಬ್ಬೀ ಸಮುದ್ರದ ತಟದಲ್ಲಿದೆ. ಇಲ್ಲಿ ಮಂದಿರದಲ್ಲಿರುವ ಮಹಾಬಲೇಶ್ವರ ಸಾಕ್ಷಾತ್ ಶಿವನ ಆತ್ಮಲಿಂಗವೇ ಎನ್ನುತ್ತದೆ ಸ್ಥಳಪುರಾಣ. ತನ್ನ ಮಾತೆಯ ಪೂಜೆಗೋಸ್ಕರ ಕೈಲಾಸದಲ್ಲಿರುವ ಶಿವನ ಆತ್ಮಲಿಂಗವನ್ನು ರಾವಣನು ಘೋರವಾದ ತಪಸ್ಸಿನಿಂದ ಪಡೆದು ಲಂಕೆಗೆ ಬರುತ್ತಿರುತ್ತಾನೆ. ದಾರಿಯಲ್ಲಿ ಸಾಯಂಕಾಲದ ವೇಳೆ ರಾವಣನು ಸಂಧ್ಯಾವಂದನೆ ಮಾಡುವಾಗ ಶಿವಲಿಂಗವನ್ನು ನೆಲದ ಮೇಲೆ ಇಡಲಾಗದೇ ಚಡಪಡಿಸುತ್ತಿರುವಾಗ ದೇವತೆಗಳ ಇಚ್ಚ್ಹೆಯಂತೆ ಬಾಲಕ ಸ್ವರೂಪಿಯಾಗಿ ಗಣಪತಿಯು ಅಲ್ಲಿ ಕಾಣಿಸಿಕೊಳ್ಳುತ್ತಾನೆ. ರಾವಣನು ಗಣಪತಿಯ ಕೈಗೆ ಲಿಂಗವನ್ನು ಕೊಟ್ಟು, ನೆಲದ ಮೇಲೆ ಇಡಬಾರದೆಂದೂ ಹಾಗೇನಾದರೂ ಭಾರವೆನಿಸಿ ಇಡಬೇಕಾದರೆ, ಮೂರು ಸಲ ಕೂಗಬೇಕೆಂದು ಹೇಳಿ, ಸಾಯಂ ಸಂಧ್ಯಾವಂದನೆಯ ಮೂರು ಅರ್ಘ್ಯ ಬಿಡುತ್ತಿರುವಷ್ಟರಲ್ಲಿ ಗಣಪತಿಯು ಮೂರುಸಲ ಕೂಗಿ ಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ಅಲ್ಲಿಗೆ ಬಂದ ರಾವಣನು ನಡೆದದ್ದನ್ನು ನೋಡಿ ಕೋಪಗೊಂಡು ಬಾಲ ಗಣಪತಿಯ ತಲೆ ಮೇಲೆ ಗುದ್ದಿ ಕೋಪ ತೀರಿಸಿಕೊಳ್ಳುತ್ತಾನೆ.
ತನ್ನ ಬಲವನ್ನೆಲ್ಲಾ ಉಪಯೋಗಿಸಿ ಲಿಂಗವನ್ನೆತ್ತಲು ಪ್ರಯತ್ನಿಸಿ ಸೋಲುತ್ತಾನೆ. ಅವನ ಬಲ ಪ್ರಯೋಗದಿಂದ ಲಿಂಗವು ಗೋವಿನ ಕಿವಿಯಾಕಾರ ಪಡೆಯುತ್ತದೆ. ಇದಕ್ಕಾಗಿ ಗೋಕರ್ಣೇಶ್ವರ ಎಂದೂ, ರಾವಣನ ಬಲಪ್ರಯೋಗಕ್ಕೂ ಎತ್ತಲು ಸಾಧ್ಯವಾಗದ್ದರಿಂದ ಮಹಾಬಲೇಶ್ವರನೆಂದೂ ಪ್ರಸಿದ್ಧಿ ಯಾಗಿದೆ.
ಈ ಪೂರ್ಣ ಗೋಕರ್ಣಾಕಾರದ ಲಿಂಗದ ದರ್ಶನ ಮಾಡಬೇಕಾದರೆ 80 ವರ್ಷಗಳಿಗೊಮ್ಮೆ ನಡೆಯುವ ಅಷ್ಟಬಂಧ ಮಹೋತ್ಸವಕ್ಕೆ ಕಾಯಬೇಕು. ಈ ಮಹೋತ್ಸವ ಕಳೆದ ಬಾರಿ 1983ರಲ್ಲಿ ನಡೆದಿತ್ತು. ಅಷ್ಟಬಂಧ ಮಹೋತ್ಸವವಾದ ನಂತರ ಲಿಂಗವನ್ನು ಮುಚ್ಚಿಬಿಡುತ್ತಾರೆ. ಮುಚ್ಚಿದ ಮೇಲೆ ನಮಗೆ ಸಿಗುವುದು ಒಂದು ಸಣ್ಣ ಕುಳಿಯಲ್ಲಿರುವ ಶಿವಲಿಂಗದ ಮೇಲಿನ ತುದಿ ಮಾತ್ರ. ಭಕ್ತಾದಿಗಳು ಅದನ್ನು ಮುಟ್ಟಿ ಪೂಜಿಸಬಹುದು, ರುದ್ರಾಭಿಷೇಕ ಮಾಡಬಹುದು.
ಗೋಕರ್ಣೇಶ್ವರನ ಪಕ್ಕದಲ್ಲಿಯೇ ಮಾತೆ ಪಾರ್ವತಿಯ ಪೂಜಾಗೃಹವಿದೆ. ಈ ಮಂದಿರದ ಸಂಕೀರ್ಣದಲ್ಲಿ ತಾಮ್ರ ಗೌರಿ, ಚಂಡಿಕೇಶ್ವರ, ಆದಿ ಗೋಕರ್ಣೇಶ್ವರ, ದತ್ತಾತ್ರೇಯ ಪೂಜಾಗೃಹಗಳನ್ನೂ ಸಂದರ್ಶಿಸಬಹುದು.
ಗೋಕರ್ಣೇಶ್ವರ ಮಂದಿರವು 1500 ವರ್ಷ ಪುರಾತನವಾದದ್ದು ಹಾಗೂ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟು ನೋಡಲು ಮನೋಹರವಾಗಿದೆ. ಇಲ್ಲಿರುವ ಕೋಟಿ ತೀರ್ಥ ಪವಿತ್ರವಾದುದು, ಇದರಲ್ಲಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.
ಸಮುದ್ರತಟದಲ್ಲಿ ನಮಗೆ ಗೋಕರ್ಣ ಬೀಚ್, ಕೂಡ್ಲೆ ಬೀಚ್, ಓಮ್ ಬೀಚ್, ಅರ್ಧ ಚಂದ್ರ(ಹಾಫ಼್ ಮೂನ್) ಬೀಚ್, ಸ್ವರ್ಗ(ಪಾರಡೈಸ್) ಬೀಚ್ ನೋಡಲು ಸಿಗುತ್ತವೆ.
ಗೋಕರ್ಣ ಕ್ಷೇತ್ರವು ಗೋಕರ್ಣ ರೈಲ್ವೇ ಸ್ಟೇಷನ್ ನಿಂದ 10 ಕಿ.ಮಿ. ದೂರದಲ್ಲಿದೆ.
ಕರಿಕಾನ ಪರಮೇಶ್ವರಿ
ಗೋಕರ್ಣದಿಂದ 57 ಕಿ.ಮಿ. ದೂರ ಪಯಣಿಸಿ ಒಂದು ಬೆಟ್ಟದ ಮೇಲಿರುವ ಕರಿ ಕಾನ ಪರಮೇಶ್ವರಿಯ ದೇಗುಲ ತಲುಪಬಹುದು. ಇದು ಹೊನ್ನಾವರದಿಂದ ಅರೆಅಂಗಡಿ ಮೂಲಕ ಹೋದರೆ 12 ಕಿ.ಮಿ. ದೂರದಲ್ಲಿದೆ.
ಬಸ್ ಸಂಚಾರವಿಲ್ಲದ ಕಾಡಿನ ಮಧ್ಯದಲ್ಲಿರುವ ಇಕ್ಕಟ್ಟಾದ ಅಂಕು ಡೊಂಕು ಗಳಿಂದ ಕೂಡಿದ ದಾರಿಯಲ್ಲಿ ಬೆಟ್ಟವನ್ನು ಹತ್ತಿ ಹೋಗಬೇಕಾಗುತ್ತದೆ.
ಬೆಟ್ಟದ ಮೇಲೆ ನಿಂತು ಒಮ್ಮೆ ಸುತ್ತ ಕಣ್ಣು ಹಾಯಿಸಿ ನೋಡಿದರೆ ಕಾಣುವ ದಿಗಂತದಲ್ಲಿ ಅರಬ್ಬೀ ಸಮುದ್ರವೂ, ಚಿಕ್ಕ ಚಿಕ್ಕ ನದಿಗಳೂ ಮತ್ತು ಕರಾವಳಿಯ ನಿಸರ್ಗ ಸೌಂದರ್ಯವೂ ಅತ್ಯಂತ ಮನಮೋಹಕವಾಗಿ ಕಾಣುತ್ತವೆ. ಇಂಥಾ ರುದ್ರ ರಮಣೀಯ ಸ್ಥಳದಲ್ಲಿ ದೇವಿ ನೆಲೆಸಿದ್ದಾಳೆ. ಇಲ್ಲಿಯ ಕಡುಹಸಿರು ಕಾಡಿನಿಂದಾಗಿ ಈ ಬೆಟ್ಟಕ್ಕೆ ‘ಕರಿಕಾನು’ ಎಂದೂ, ಅಲ್ಲಿ ನೆಲೆಸಿದ ದೇವಿಗೆ ಕರಿಕಾನ ಪರಮೇಶ್ವರಿ ಎಂದೂ ಹೆಸರು ಬಂದಿದೆ.
ಇಡಗುಂಜಿ
ಅಲ್ಲಿಂದ ಸುಮಾರು 14 ಕಿಮೀ ಕ್ರಮಿಸಿದರೆ ಪ್ರಸಿದ್ಧ ಗಣೇಶ ಕ್ಷೇತ್ರ ಇಡಗುಂಜಿ ತಲುಪಬಹುದು. ಇದು ಶರಾವತಿಯ ಎಡ ದಂಡೆಯಲ್ಲಿದೆ. ಇಲ್ಲಿಯ ಗಣೇಶನ ವಿಶಾಲವಾದ ದೇಗುಲವು ಸುಮಾರು 1500 ವರ್ಷಗಳಷ್ಟು ಪುರಾತನ ವಾದದ್ದು. ಇದರ ಉಲ್ಲೇಖ ಸ್ಕಂದ ಪುರಾಣದಲ್ಲಿ ಸಿಗುತ್ತದೆ. ತನ್ನ ತಪಸ್ಸಿಗೆ ಬಂದ ವಿಘ್ನ ನಿವಾರಣೆಗಾಗಿ ವಾಲಾಖಿಲ್ಯ ಮುನಿಯು ನಾರದರ ಸಹಾಯದಿಂದ ಗಣಪತಿಯನ್ನು ಪ್ರಾರ್ಥಿಸುತ್ತಾನೆ. ಅವನ ಪ್ರಾರ್ಥನೆಗೆ ಮೆಚ್ಚಿ ದೇವಾದಿ ದೇವತೆಗಳೊಡನೆ ಪ್ರತ್ಯಕ್ಷನಾದ ವಿಘ್ನೇಶ್ವರನು ಮುನಿಯ ವಿಘ್ನ ನಿವಾರಣೆ ಮಾಡಲು ಶರಾವತಿ ನದಿಯ ಎಡದಂಡೆಯಲ್ಲಿರುವ ಕುಂಜಾರಣ್ಯದಲ್ಲಿ ನೆಲಸುತ್ತಾನೆ. ಎಡ ಕುಂಜಾರಣ್ಯ ಕಾಲಕ್ರಮೇಣ ವಿಪ್ರಭ್ರಂಶ ಹೊಂದಿ ಎಡಗುಂಜಿ ಆಗಿದೆ. ಇದು ಇಲ್ಲಿಯ ಸ್ಥಳ ಪುರಾಣ.
ಇಲ್ಲಿಯ ಗಣೇಶನ ಕರಿ ಶಿಲೆಯ ಸುಂದರವಾದ ಮೂರ್ತಿಯು ದ್ವಿಭುಜಾಕೃತಿಯುಳ್ಳದ್ದಾಗಿದ್ದು, ಒಂದು ಕೈಯ್ಯಲ್ಲಿ ಪದ್ಮವನ್ನೂ, ಇನ್ನೊಂದು ಕೈಯ್ಯಲ್ಲಿ ಮೋದಕವನ್ನೂ ಹಿಡಿದು, ಚಿಕ್ಕ ಕಾಲುಗಳ ಮೇಲೆ ನಿಂತಿರುವ ಭಂಗಿಯಲ್ಲಿದೆ.
ದೇವಳದಲ್ಲಿ ಉಚಿತ ಊಟ, ಹಾಗೂ ಸಂಕಷ್ಟ ಚತುರ್ಥಿಯಂದು ಫಲಾಹಾರದ ವ್ಯವಸ್ಥೆ ಇದೆ. ಇಲ್ಲಿ ಇಳಿದುಕೊಳ್ಳಲು ವಸತಿ ಗೃಹಗಳಿವೆ.
ಮುರ್ಡೇಶ್ವರ
ಅಲ್ಲಿಂದ 20 ಕಿಮಿ. ದೂರ ಕ್ರಮಿಸಿದರೆ ಮುರ್ಡೇಶ್ವರ ತಲುಪಬಹುದು. ಗೋಕರ್ಣದ ಶಿವನ ಆತ್ಮಲಿಂಗವನ್ನು ರಾವಣನು ಕೀಳುತ್ತಿದ್ದಾಗ ಅದರ ಒಂದು ಭಾಗವು ಇಲ್ಲಿ ಬಿತ್ತು ಎನ್ನುತ್ತದೆ ಸ್ಥಳ ಪುರಾಣ.
ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ, ಸಮುದ್ರ ತಟದಲ್ಲಿ ಸುಮಾರು 123 ಅಡಿ ಎತ್ತರದ ಶಿವನ ವಿಗ್ರಹವಿದೆ. ಈ ಶಿವನ ವಿಗ್ರಹವು ಪ್ರಪಂಚದಲ್ಲಿರುವ ಅತಿ ಎತ್ತರವಾಗಿರುವ ಶಿವನ ಮೂರ್ತಿಗಳಲ್ಲೇ ಮೂರನೆಯದು ಎನ್ನಲಾಗಿದೆ. ವಿಗ್ರಹದ ಕೆಳಗಿನ ಸುರಂಗದಲ್ಲಿ ರಾವಣನು ಶಿವನಿಂದ ಆತ್ಮಲಿಂಗ ಪಡೆದದ್ದರಿಂದ ಹಿಡಿದು, ಅದು ಗೋಕರ್ಣದಲ್ಲಿ ಪ್ರತಿಷ್ಟಿಸಲ್ಪಡುವ ಕಥೆಯನ್ನು ಭಿತ್ತಿ ಚಿತ್ರಗಳ ಮೂಲಕ ತಿಳಿಸಿ ಹೇಳಲಾಗಿದೆ.
ಗುಂಡಬಾಳ
ಮುರ್ಡೇಶ್ವರದಿಂದ ಸುಮಾರು 40 – 45 ಕಿಮಿ ದೂರದಲ್ಲಿದೆ ಗುಂಡ ಬಾಳ .
ಗುಂಡಬಾಳದಲ್ಲಿರುವ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ್ವರ ದೇವಾಲಯವು ತನ್ನದೇ ಆದ ಚಾರಿತ್ರ್ಯವನ್ನು ಹೊಂದಿದೆ ಹಾಗೂ ಸುಮಾರು 800 ವರ್ಷ ಪುರಾತನವಾದದ್ದು.
ಇಲ್ಲಿ ಭಕ್ತಾದಿಗಳು ಕಷ್ಟ ಬಂದರೆ ಅದರ ನಿವಾರಣೆಯಾದರೆ ದೇವರಿಗೆ ಯಕ್ಷಗಾನ ಮಾಡಿಸುವುದಾಗಿ ಹರಕೆ ಹೊತ್ತು ನಿಗದಿತ ಅಡ್ವಾನ್ಸ್ ಅನ್ನ್ನು ದೇವಳದ ಕಾರ್ಯಾಲಯದಲ್ಲಿ ನೀಡುತ್ತಾರೆ. ಅವರ ಸರತಿ ಬರಲು ಸುಮಾರು ೪-೫ ವರ್ಷಗಳು ಕಾಯುತ್ತಾರೆ. ಹೀಗಾಗಿ ಸರತಿಯಲ್ಲಿ ಕಾಯುತ್ತಿರುವವರ ಸಂಖ್ಯೆ ಬಹಳ ಇದೆ. ಕಷ್ಟ ನಿವಾರಣೆಯಾಗಿ ಹರಕೆ ತೀರಿಸುವ ತಮ್ಮ ಸರದಿ ಬಂದಾಗ ಉಳಿದ ಹಣವನ್ನು ದೇವಾಲಯದಲ್ಲಿ ಸಂದಾಯ ಮಾಡಿದರೆ, ಅವರ ಹೆಸರಲ್ಲಿ ಇಡೀ ರಾತ್ರಿ ಯಕ್ಷಗಾನ ಸೇವೆ ದೇವರ ಮುಂದಿನ ರಂಗಮಂಟಪದಲ್ಲಿ ನಡೆಯುತ್ತದೆ. ಪ್ರೇಕ್ಷಕರಿರಲಿ ಇಲ್ಲದಿರಲಿ, ದೇವರೇ ಪ್ರೇಕ್ಷಕನೆಂದು ಮಳೆಗಾಲವೊಂದನ್ನು ಬಿಟ್ಟ್ಯು ಪ್ರತಿನಿತ್ಯವೂ ಇಲ್ಲಿ ರಾತ್ರಿಯ ಹೊತ್ತು ಯಕ್ಷಗಾನ ನಡೆಯುತ್ತದೆ.
ದೇವಳದಲ್ಲಿ ಊಟ ಮತ್ತು ವಸತಿ ಸೌಕರ್ಯವಿದೆ.