ಅಮರನಾಥ ಯಾತ್ರೆಗೆ ಸಿದ್ಧರಾಗಿ! : ಎಲ್ಲಿ, ಯಾವಾಗ, ನೋಂದಣಿ ಹೇಗೆ? ವಿವರ ಇಲ್ಲಿದೆ…

ಅಮರನಾಥ ಯಾತ್ರೆಗೆ ಆನ್’ಲೈನ್ ನೋಂದಣಿ ಆರಂಭಗೊಂಡಿದೆ. ಈ ವೆಬ್’ಸೈಟ್ ನಲ್ಲಿ : https://amarnathjiyatra.com/amarnath-yatra-2019/ ನೀವು ನೇರ ನೋಂದಣಿ ಮಾಡಿಸಿಕೊಳ್ಳಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು. ಇಲ್ಲಿ ಹೆಲಿಕಾಪ್ಟರ್ ಪ್ಯಾಕೇಜ್ ಮತ್ತು ಟೆಂಟ್ ಬುಕಿಂಗ್ ಕೂಡಾ ಲಭ್ಯವಿದೆ. ಅಮರನಾಥ ಯಾತ್ರೆ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖನ ಓದಿ…

ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಹಿಮಲಿಂಗರೂಪಿ ಅಮರನಾಥನ ದರ್ಶನ ಪ್ರಮುಖ ಯಾತ್ರಾ ಸ್ಥಳ. ಅಮರನಾಥ ಯಾತ್ರೆ ಹಿಮಾಲಯ ಚಾರಣ – ತೀರ್ಥಯಾತ್ರೆಗಳ ಅವಿಸ್ಮರಣೀಯ ಅನುಭವ ಕಟ್ಟಿಕೊಡುತ್ತದೆ. ಶ್ರಾವಣ ಮಾಸದಲ್ಲಿ ಅಂದರೆ ಜೂನ್‌ನಿಂದ ಆಗಸ್ಟ್ ಮಧ್ಯದ ವರೆಗೂ ಈ ಯಾತ್ರೆ ನಡೆಯುತ್ತದೆ. ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಸರಕಾರ ಈ ಯಾತ್ರೆಯನ್ನು ಆಯೋಜಿಸುತ್ತದೆ. ಅಮರನಾಥಕ್ಕೆ ಹೋಗುವವರು ಮೊದಲು ಜಮ್ಮು ಕಾಶ್ಮೀರದ ಬ್ಯಾಂಕ್‌ನಲ್ಲಿ ಪರವಾನಗಿ ಪಡೆಯಬೇಕು. ಇದು ಕರ್ನಾಟಕದ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕ್ ಇದೆ.

ಇದಲ್ಲದೆ, ಅಮರನಾಥ ಯಾತ್ರೆಗೆ ಆನ್’ಲೈನ್ ನೋಂದಣಿ ಈಗ ಆರಂಭಗೊಂಡಿದ್ದು, https://amarnathjiyatra.com/amarnath-yatra-2019/  ಈ ವೆಬ್’ಸೈಟ್ ನಲ್ಲಿ ನೀವು ನೇರ ನೋಂದಣಿ ಮಾಡಿಸಿಕೊಳ್ಳಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು. ಇಲ್ಲಿ ಹೆಲಿಕಾಪ್ಟರ್ ಪ್ಯಾಕೇಜ್ ಮತ್ತು ಟೆಂಟ್ ಬುಕಿಂಗ್ ಕೂಡಾ ಲಭ್ಯವಿದೆ. 

ಅಮರನಾಥ ತಲುಪಲು ಮೊದಲು ನಾವು ಪ್ರಯಾಣಿಸಬೇಕಿರುವುದು ದೆಹಲಿಗೆ. ಅಲ್ಲಿಂದ ಜಮ್ಮುವಿಗೆ ರೈಲಿನಲ್ಲಿ ಅಥವಾ ವಿಮಾನದಲ್ಲಿ ಪ್ರಯಾಣಿಸಬಹುದು. ಅದಕ್ಕಾಗಿ ಎರಡು ತಿಂಗಳು ಮೊದಲೇ ಟಿಕೆಟ್ ಬುಕ್ ಮಾಡಿಕೊಂಡರೆ ಅನುಕೂಲ. ದೆಹಲಿಯಿಂದ ಜಮ್ಮು ಸುಮಾರು 650ಕಿ.ಮೀ ಅಂತರದಲ್ಲಿದೆ.  ಬೆಂಗಳೂರಿನಿಂದ ನೇರವಾಗಿ ಜಮ್ಮುವಿಗೆ ವಿಮಾನದ ಮೂಲಕವೂ ಪ್ರಯಾಣಿಸಬಹುದು. ಜಮ್ಮುವಿನಿಂದ ಬಸ್, ಖಾಸಗಿ ವಾಹನಗಳ ಮೂಲಕ ಅಮರನಾಥದ ಬುಡವನ್ನು ತಲುಪಿ ಅಲ್ಲಿಂದ ಚಾರಣ ನಡೆಸಬೇಕಾಗುತ್ತದೆ. ಸೋನ್ ಮಾರ್ಗ್ ಹಾದು ಕಾಶ್ಮೀರ ತಲುಪಿ, ಅಲ್ಲಿಂದ ಅಮರನಾಥಕ್ಕೆ ಪ್ರಯಾಣಿಸುವ ಹಾದಿ ಬಹಳ ಸುಂದರವಾಗಿದೆ. 

ಅಮರನಾಥ ಚಾರಣಕ್ಕೆ ಬಾಲ್ಟಾಲ್ ಮತ್ತು ಪಹಲ್ಗಾಮ್ ಎರಡು ಆರಂಭದ ಕೇಂದ್ರಗಳು. ಬಾಲ್ಟಾಲ್’ನಿಂದ ಚಾರಣ ಪಹಲ್ಗಾಮ್’ಗಿಂತ ತುಸು ಸುಲಭ. ಪಹಲ್ಗಾಮ್’ನಿಂದ ಹೆಲಿಕಾಪ್ಟರ್ ಮೂಲಕ ಅಮರನಾಥ ಪರ್ವತದ ಮೇಲಕ್ಕೆ ಬರಲು 20 ನಿಮಿಷ ಹಿಡಿಯುತ್ತದೆ. ಬಾಲ್ಟಾಲ್’ನಿಂದ ಹೆಲಿಕಾಪ್ಟರ್’ನಲ್ಲಿ ಮೇಲೆ ತಲುಪಲು 10 ನಿಮಿಷ ಸಾಕು. ಯಾವ ಮಾರ್ಗದಿಂದ ಬಂದರೂ ಹೆಲಿಕಾಪ್ಟರ್ ಕೇವಲ ಪಂಚತರಣಿವರೆಗೆ ಯಾತ್ರಿಗಳನ್ನು ಹೊತ್ತೊಯ್ಯಬಲ್ಲದು. ಅಲ್ಲಿಂದ ಮುಂದೆ, ಸುಮಾರು 6 ಕಿ.ಮೀ.ಗಳಷ್ಟು ನಡೆಯುವುದು ಅನಿವಾರ್ಯ. ಅನಂತರವಷ್ಟೇ ಅಮರನಾಥನ ದರ್ಶನ ಪಡೆಯಬಹುದು. 

ದೇಹದಲ್ಲಿ ಶಕ್ತಿ ಇರುವವರು ಮಾತ್ರ ಹಿಮಚ್ಚಾದಿತ ಶಿಖರಗಳನ್ನು ಏರಿ ಹೋಗಬಹುದು, ಇಲ್ಲವಾದರೆ ಹೆಲಿಕಾಪ್ಟರ್, ಕುದುರೆಗಳು ಅಥವಾ ಡೋಲಿಗಳ ಸೇವೆ ಇರುತ್ತದೆ. ಯಾತ್ರಿಗಳು ಹೆಚ್ಚಾದಲ್ಲಿ ಮಾತ್ರ ಹೆಲಿಕಾಪ್ಟರ್ ಸೌಲಭ್ಯ ನೀಡಲಾಗುತ್ತದೆ. ಚಾರಣದ ದಾರಿಯುದ್ದಕ್ಕೂ ಲಂಗರ್’ಗಳಿದ್ದು, ಆಹಾರದ ಬಗ್ಗೆ ಚಿಂತಿಸುವ ಅಗತ್ಯವೇ ಬೀಳದೆ ನಿರಾತಂಕವಾಗಿ ಅಮರನಾಥನ ದರ್ಶನ ಮಾಡಬಹುದು. ಈ ಒಟ್ಟು ಪ್ರದೇಶದ ಉಷ್ಣಾಂಶ 0 ಇಂದ 5 ಡಿಗ್ರಿ ಸೆಲ್ಷಿಯಸ್’ವರೆಗೆ ಇರುತ್ತದೆ. 

ಅಮರನಾಥ ಯಾತ್ರೆಗೆ ದೈಹಿಕ ಮತ್ತು ಮಾನಸಿಕ ಸಿದ್ಧತೆ ಅತ್ಯಗತ್ಯ. ಬುಕಿಂಗ್ ಮಾಡಿದ ಮರುದಿನದಿಂದಲೇ ಪ್ರತಿದಿನ ಎರಡರಿಂದ ಮೂರು ಕಿಮೀ ನಡಿಗೆ ಆರಂಭಿಸಿ. ದೇಹವನ್ನು ಥಂಡಿ ಸಹಿಸುವಂತೆ ಒಗ್ಗಿಸಿಕೊಳ್ಳಿ. ಅಮರನಾಥದ ಸೌಂದರ್ಯ ಮತ್ತು ಮಹಾದೇವನ ದರ್ಶನ ನಿಮ್ಮೆಲ್ಲ ದಣಿವು ನಿವಾರಿಸುವುದು ನಿಜವಾದರೂ ನಿಮ್ಮ ಆರೋಗ್ಯ ಕಾಯ್ದುಕೊಲ್ಳುವುದು ನಿಮ್ಮದೇ ಜವಾಬ್ದಾರಿ. ಉಸಿರಾಟದ ತೊಂದರೆ ಇರುವವರು ರಿಸ್ಕ್ ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ಹಾಗಿದ್ದೂ ಹೋಗಲು ಮನಸ್ಸು ಮಾಡಿದರೆ ಪ್ರಾಥಮಿಕ ಚಿಕಿತ್ಸೆ ಕಿಟ್ ಸಿದ್ಧಮಾಡಿಕೊಂಡು, ವೈದ್ಯರ ಸಲಹೆಯೊಂದಿಗೆ ಯಾತ್ರೆ ಬೆಳೆಸಿ. 

ಐತಿಹ್ಯ:
ಗುಹೆಯೊಳಗೆ ಉದ್ಭವ ಹಿಮಲಿಂಗ ಇಲ್ಲಿನ ವಿಶೇಷ ಪ್ರಕೃತಿ ದತ್ತವಾದ ಈ ಸಂರಚನೆ 5 ಸಾವಿರ ವರ್ಷಗಳಿಂದ ಅನೂಚಾನವಾಗಿದೆ. ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ, ಇದ್ದು ಅದು ಪಾರ್ವತಿ ಮತ್ತು ಗಣೇಶ ಎಂದು ನಂಬಲಾಗುತ್ತಿದೆ. ಅಮರನಾಥದ ಬಗ್ಗೆ ಕಲ್ಹಣನ ರಾಜತರಂಗಿಣಿ, ಮುಂತಾದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಶಂಕರಾಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರೆಂಬ ಐತಿಹ್ಯವಿದೆ.

ಮಹಾದೇವ ಶಂಕರನು ಪಾರ್ವತಿಗೆ ಅಮರತ್ವದ ರಹಸ್ಯ ಬೋಧಿಸಿದ ಸ್ಥಳವಿದು ಎಂದು ಹೇಳಲಾಗುತ್ತದೆ. ಇಲ್ಲಿ ಎರಡು ಬಿಳಿ ಪಾರಿವಾಳಗಳು ದಶಕಗಟ್ಟಲೆಯಿಂದಲೂ ವಾಸಿಸುತ್ತಿವೆ. ಪ್ರತಿ ಅಮರನಾಥ ಯಾತ್ರೆ ಸಂದರ್ಭದಲ್ಲಿ ಇವು ಹಿಮಲಿಂಗ ಇರುವ ಸ್ಥಳದಲ್ಲಿ ಹಾರಾಡುವುದು ಕಂಡುಬರುತ್ತದೆ. ಅಷ್ಟು ಎತ್ತರದಲ್ಲಿ, ಆ ಉಷ್ಣಾಂಶದಲ್ಲಿ ಜೋಡಿ ಪಾರಿವಾಳಗಳು ಅಷ್ಟು ಕಾಲದಿಂದ ಿರಲು ಹೇಗೆ ಸಾಧ್ಯ ಎನ್ನುವುದೊಂದು ಸೋಜಿಗವಾಗಿಯೇ ಉಳಿದಿದೆ. 

 

 

Leave a Reply