ಸೌಗಂಧಿಕಾ ಪುಷ್ಪ ತರಲು ಹೋದ ಭೀಮ, ದಾರಿಗೆ ಅಡ್ಡ ಬಂದ ಹನುಮ! : ಇದೇನು ಕಥೆ?

ದ್ರೌಪದಿ ಕೇಳಿದಳೆಂದು ಭೀಮೇನ ಸೌಗಂಧಿಕಾಪುಷ್ಟ ತರಲು ಹೊರಟ. ನಡುವೆ ಸಾಧಾರಣ ವಾನರನ ರೂಪದಲ್ಲಿ ಅಡ್ಡ ಬಂದ ಹನುಮ ಅವನಿಗೆ ದಾರಿ ಬಿಡದೆ ಸತಾಯಿಸಿದ! ಮಹಾಭಾರತದ ಈ ಕುತೂಹಲಕಾರಿ ಕಥೆ ಓದಿ…

ಅದು ಪಾಂಡವರು ವನವಾಸದಲ್ಲಿದ್ದ ಕಾಲ. ಒಂದು ಸಂಜೆ ಭೀಮಸೇನ ದ್ರೌಪದಿಯೊಡನೆ ವಿಹರಿಸುತ್ತಿದ್ದ. ಅದೇವೇಳೆಗೆ ದಿವ್ಯ ಸುಗಂಧ ಸೂಸುತ್ತಾ ಹೂವೊಂದು ಗಾಳಿಯಲ್ಲಿ ತೇಲಿ ಬಂದು ದ್ರೌಪದಿಯ ಪಾದಗಳ ಬಳಿ ಬಿದ್ದಿತು. ಅದರ ಹೆಸರು ಸೌಂಗಧಿಕಾ ಪುಷ್ಟ. ಅದನ್ನು ನೋಡಿ ದ್ರೌಪದಿಗೆ ಬಹಳ ಸಂತೋಷವಾಯಿತು. ಇಂಥಾ ಮತ್ತಷ್ಟು ಹೂಗಳು ಬೇಕೆನ್ನಿಸಿತು. ಭೀಮಸೇನನ ಹೆಗಲು ಜಗ್ಗುತ್ತಾ, “ನನಗೆ ಮತ್ತಷ್ಟು ಇಂಥಾ ಹೂಗಳನ್ನು ತಂದುಕೊಡು” ಅಂದಳು. ಅವಳ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಆಸೆಗೆ ಭೀಮಸೇನ ಕರಗಿಹೋದ. ಪ್ರೀತಿಯ ಮಡದಿ ಹೂಗಳನ್ನು ಕೇಳುತ್ತಿದ್ದಾಳೆ. ಅಷ್ಟೂ ಮಾಡಲಾರೆನೆ? ಅಂದುಕೊಳ್ಳುತ್ತಾ ಕೂಡಲೇ ಅಲ್ಲಿಂದ ಹೊರಟ.

ಹೋಗುತ್ತಾ ಹೋಗುತ್ತಾ ದಟ್ಟಾರಣ್ಯ ಎದುರಾಯಿತು. ಅದನ್ನು ಹಾದು ಮುಂದುವರೆದರೆ ಅಲ್ಲೊಂದು ಕದಳೀವನ; ಅರ್ಥಾತ್ ಬಾಳೆಯ ತೋಟ. ಆ ಬಾಳೆಯ ತೋಟ ಪ್ರವೇಶಿಸುವಲ್ಲಿ ವಾನರನೊಬ್ಬ ಬಾಲ ಚಾಚಿ ಉದ್ದಕ್ಕೆ ಮಲಗಿಬಿಟ್ಟಿದ್ದಾನೆ!

ಭೀಮ ಆ ವಾನರನನ್ನು ಕುರಿತು ತನೆಗ ದಾರಿಬಿಡುವಂತೆ ಕೇಳಿಕೊಂಡ. ವಾನರ ಅಲ್ಲಾಡಲಿಲ್ಲ. ಜೋರು ಮಾತುಗಳಲ್ಲಿ ಎಚ್ಚರಿಸಿದ. ಆಗಲೂ ವಾನರ ಕದಲಲಿಲ್ಲ. ಗದೆಯನ್ನು ನೆಲಕ್ಕೂರಿ ಅಬ್ಬರಿಸಿದ… ವಾನರ ಅದೆಲ್ಲವನ್ನೂ ನಿರ್ಲಕ್ಷಿಸಿ ತನ್ನ ಪಾಡಿಗೆ ಮಲಗೇ ಇದ್ದ.

ಕೊನೆಗೆ ಭೀಮಸೇನ, “ನಾನು ಚಂದ್ರವಂಶದ ರಾಜಕುಮಾರ. ಒಳ್ಳೆ ಮಾತಿನಲ್ಲಿ ದಾರಿ ಬಿಡು. ನಿನ್ನನ್ನು ದಾಟಿ ನಿನ್ನಲ್ಲಿರುವ ಪರಮಾತ್ಮನಿಗೆ ಅಪಮಾನ ಮಾಡಲು ಇಷ್ಟವಿಲ್ಲ. ಇಲ್ಲದಿದ್ದರೆ ಹನುಮಂತನು ಸಮುದ್ರವನ್ನು ದಾಟಿದ ಹಾಗೆ ನಿನ್ನನ್ನು ಈ ಬೆಟ್ಟವನ್ನೂ ದಾಟಿಕೊಂಡು ಹೋಗುವುದು ನನಗೆ ಹೆಚ್ಚಿನ ಕೆಲಸವೇನೂ ಅಲ್ಲ” ಅಂದ.

bhima hanumaಆಗ ವಾನರ, “ಈ ಹನುಮಂತ ಎನ್ನುವವನು ಯಾರು?” ಎಂದು ಕೇಳಿದ.
ಭೀಮ, “ಹನುಮಂತ ನನ್ನ ಅಣ್ಣ. ಮಹಾ ಗುಣವಂತ, ಬುದ್ಧಿವಂತ, ಬಲಶಾಲಿ, ಶ್ರೀರಾಮನ ಭಕ್ತ. ಅವೆಲ್ಲ ಕಥೆ ಆಮೇಲೆ ಹೇಳುವೆ, ಮೊದಲು ನೀನು ಎದ್ದೇಳು. ನನಗೆ ದಾರಿ ಬಿಡು” ಅಂದ.
ವಾನರ ಆಯಾಸ ನಟಿಸುತ್ತಾ, “ಅಯ್ಯಾ ಸಿಟ್ಟು ಮಾಡಿಕೊಳ್ಳಬೇಡ, ನಾನು ಮುದುಕ. ಒಂದಿಂಚು ಕದಲುವಷ್ಟೂ ನನ್ನಲ್ಲಿ ತ್ರಾಣವಿಲ್ಲ. ನೀನೇ ನನ್ನ ಬಾಲ ಅತ್ತ ಸರಿಸಿ ದಾರಿ ಮಾಡಿಕೋ” ಅಂದು ಮುಖ ತಿರುಗಿಸಿ ಮಲಗಿಬಿಟ್ಟ.
ಭೀಮ ‘ಅಷ್ಟ ತಾನೆ?” ಅನ್ನುವಂತೆ ನಕ್ಕ. ವಾನರನ ಬಾಲವನ್ನು ಗದೆಯ ಮೊನೆಯಿಂದ ನೂಕಿದ. ಅದು ಅಲ್ಲಾಡಲಿಲ್ಲ. ಕಾಲಿನಿಂದ ದಬ್ಬಿದ. ಊಹೂಂ… ಪ್ರಯೋಜನವಾಗಲಿಲ್ಲ. ತನ್ನೆಲ್ಲ ಬಲ ಉಪಯೋಗಿಸಿ ತಳ್ಳಿದ. ಬಾಲ ಜಪ್ಪಯ್ಯ ಅನ್ನಲಿಲ್ಲ. ಮಂಡಿಯೂರಿ ಕುಳಿತು ಕೈಗಳಿಂದ ಬಾಲವನ್ನು ಎತ್ತಲು ಯತ್ನಿಸಿದ. ಅದನ್ನು ಒಂದಿಷ್ಟೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಅದು ನೂರು ಪರ್ವತಗಳಷ್ಟು ತೂಕವಿರುವಂತೆ ಭೀಮನಿಗೆ ಭಾಸವಾಯಿತು.

“ಇದು ಸಾಧಾರಣ ವಾನರನಲ್ಲ!” ಭೀಮ ಯೋಚಿಸಿದ. ಇಷ್ಟು ಶಕ್ತಿಶಾಲಿಯಾದ ಈತ ಯಾರೋ ಮಹಾನುಭಾವನೇ ಇರಬೇಕೆಂದುಕೊಂಡ. ಕೈಮುಗಿದು “ಅಯ್ಯಾ ವಾನರ! ನೀನಾರು? ನಿನ್ನ ಪರಿಚಯ ಹೇಳು” ಎಂದು ಕೇಳಿಕೊಂಡ.
ಆಗ ವಾನರ ಎದ್ದು ಕುಳಿತುಕೊಳ್ಳುತ್ತಾ, “ಇಷ್ಟು ಹೊತ್ತು ನೀನು ಯಾರ ಗುಣಗಾನ ಮಾಡಿದೆಯೋ, ಆ ಹನುಮಂತನೇ ನಾನು” ಅಂದ.
ಭೀಮನಿಗೆ ರೋಮಾಂಚನವಾಯಿತು. ತನ್ನ ಅಣ್ಣ. ಮಹಾವೀರ, ಹನುಮಂತನನ್ನು ಸಾಕ್ಷಾತ್ ಕಂಡು ಆನಂದ ಬಾಷ್ಪ ಸುರಿಸಿದ. ಹನುಮಂತ ಅವನನ್ನು ಸಂತೈಸಿ ಆಲಿಂಗಿಸಿದ. “ನಾನೇ ವೀರನೆಂಬ ಅಹಂಕಾರ ಯಾರಿಗೂ ಸಲ್ಲದು. ಈ ಪಾಠ ಕಲಿಸಲೆಂದೇ ಚಿಕ್ಕ ನಾಟಕ ಹೂಡಿದೆ ಅಂದ.”

ಭೀಮ ನಾಚಿ, ಈ ಪಾಠ ಕೊನೆವರೆಗೂ ನೆನಪಿಟ್ಟುಕೊಳ್ಳುತ್ತೇನೆಂದು ವಿನಮ್ರನಾಗಿ ನುಡಿದ. ಹನುಮನನ್ನೇ ಹೆಮ್ಮೆಯಿಂದ ನೋಡುತ್ತಾ, “ಅಣ್ಣಾ! ಸಾಗರೋಲ್ಲಂಘನ ಮಾಡಿದಾಗ ನೀನು ಬೃಹದಾಕಾರ ತಳೆದಿದ್ದೆಯಲ್ಲ, ಆ ರೂಪವನ್ನು ನೋಡಬೇಕೆಂದು ಬಯಕೆಯಾಗುತ್ತಿದೆ. ದಯಮಾಡಿ ನಡೆಸಿಕೊಡು” ಅಂದ.
ಭೀಮ ನೋಡನೋಡುತ್ತಲೇ ಹನುಮ ಬೃಹದಾಕಾರ ಬೆಳೆದು ಸಾವಿರ ಸೂರ್ಯರ ತೇಜಸ್ಸಿನಿಂದ ಕಂಗೊಳಿಸತೊಡಗಿದ. ಪುನಃ ಮೊದಲಿನ ರೂಪಕ್ಕೆ ಮರಳಿ ಭೀಮಸೇನನನ್ನು ಆಶೀರ್ವದಿಸಿದ. ಮತ್ತು ಮುಂಬರುವ ಯುದ್ಧದಲ್ಲಿ ಅರ್ಜುನನ ಧ್ವಜದಲ್ಲಿ ನೆಲೆಸಿ ವೈರಿಗಳ ಎದೆನಡುಗಿಸುವಂತೆ ಘರ್ಜಿಸುವ ಮಾತುಕೊಟ್ಟ.
ಅನಂತರ ತಾನೇ ಭೀಮಸೇನನಿಗೆ ಸೌಗಂಧಿಕಾ ಪುಷ್ಪದ ನೆಲೆ ತಿಳಿಸಿ ಅಲ್ಲಿಂದ ಹೊರಟುಹೋದ.

ತನ್ನ ಅಣ್ಣ, ಮಹಾಭಕ್ತ, ವೀರಾಧಿವೀರ ಹನುಮಂತನನ್ನು ಕಂಡ ಸಂತಸದೊಡನೆ ಸೌಗಂಧಿಕಾ ಪುಷ್ಪ ದೊರಕಿಬಿಟ್ಟ ಸಂತಸವೂ ಸೇರಿಕೊಂಡು ಭೀಮ ಕುಣಿದಾಡಿದ. ಮನಸ್ಸಿಗೆ ತೃಪ್ತಿಯಾಘುವಷ್ಟು ಹೂಗಳನ್ನು ಸಂಗ್ರಹಿಸಿ ತಂದು ದ್ರೌಪದಿಯ ಉಡಿ ತುಂಬಿದ.

Leave a Reply