ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ… 

photoಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ. ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿದುಕೊಳ್ಳುತ್ತದೆ. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ ಶರೀರ ದುರ್ಬಲವಾಗುವುದಷ್ಟೇ ಅಲ್ಲ, ದೀರ್ಘ ಕಾಲದವರೆಗೆ ಬಾಳುವುದೂ ಇಲ್ಲ  ~ Whosoever Ji

ಚೇತನ…
ಯಾವುದಕ್ಕೆ ರೂಪವಿಲ್ಲವೋ,
ಯಾವುದು ದೇಹ ವಿಶೇಷದೊಂದಿಗೆ ತಾದಾತ್ಮ್ಯಗೊಳ್ಳುತ್ತದೆಯೋ ಮತ್ತು ಆ ಮೂಲಕ ದೇಹ ರೂಪಧಾರಣೆ ಮಾಡುತ್ತದೆಯೋ – ಅದು. 
ದೇಹವು ಹೆಣ್ಣಿನದಾದರೆ ಚೇತನವು ತನ್ನನ್ನು ತಾನು ಹೆಣ್ಣೆಂದು ಭಾವಿಸತೊಡಗುತ್ತದೆ. ಅದು ಗಂಡಿನದಾಗಿದ್ದರೆ ತಾನು ಗಂಡೆಂದು. ತೃತೀಯ ಲಿಂಗಿಯ ದೇಹ ಧರಿಸಿದಾಗಲೂ ಅಷ್ಟೇ. ಅದು ಯಾವ ದೇಹದಲ್ಲಿದೆಯೋ ಅದೇ ತಾನೆಂದು ಬಗೆಯುತ್ತದೆ. 

ಬೆಳಕು ಈ ಕೋಣೆಯೊಂದಿಗೆ ತಾದಾತ್ಮ್ಯಗೊಂಡರೆ ಅದು ಕೋಣೆಯೇ ಆಗಿಬಿಡುತ್ತದೆ. ಆದರೆ ಇದು ತಾದಾತ್ಮ್ಯಗೊಂಡರೆ ಮಾತ್ರ ಸಾಧ್ಯವಾಗುತ್ತದೆ. ತಾದಾತ್ಮ್ಯಗೊಳ್ಳದೆ ಹೋದರೆ ಬೆಳಕಿನ ಅವಸ್ಥೆಯ ಅರಿವಾಗುವುದಿಲ್ಲ. ಅಂತಹದೊಂದು ಅನುಭವವಾಗಬೇಕೆಂದರೆ, ಅದಕ್ಕೊಂದು ಸರಿಯಾದ ಆಧಾರ ಒದಗಬೇಕಾಗುತ್ತದೆ. ಸದ್ಯಕ್ಕೆ ಇಲ್ಲಿ, ಈ ನಾಲ್ಕು ಗೋಡೆಗಳೇ ಬೆಳಕಿನ ಅಸ್ತಿತ್ವ ಸಾರುವ ಆಧಾರಗಳು. 
ಈ ನಾಲ್ಕು ಗೋಡೆಗಳು ಕೋಣೆಯ ದೇಹ – ಅಂಗಾಂಗಗಳು. ದೇಹ ಇದ್ದಾಗ ಮಾತ್ರ “ನಾನು ಇದ್ದೇನೆ” ಎಂಬ ಭಾವದ ಉದಯವಾಗೋದು. ಚೇತನವು ಎಲ್ಲೆಡೆ ಇರುತ್ತದೆ. ಅದು ಸರ್ವವ್ಯಾಪಿಯಾಗಿರುತ್ತದೆ. ಆದರೆ ದೇಹದ ಅಭಾವದಿಂದ ಅದು ಅಪ್ರಕಟವಾಗಿರುತ್ತದೆ. ಯಾವಾಗ ಅದಕ್ಕೆ ದೇಹವು ಒದಗುತ್ತದೆಯೋ ಆಗ ಚೇತನವು ಪ್ರಕಟಗೊಳ್ಳುತ್ತದೆ. ಅವ್ಯಕ್ತವಾಗಿದ್ದ ಚೇತನವು ವ್ಯಕ್ತಗೊಳ್ಳುತ್ತದೆ. 

ಮನೆಯ ಯಾವುದಾದರೊಂದು ತೇವದ ಮೂಲೆಯಲ್ಲಿ ಬ್ರೆಡ್ ಚೂರೊಂದನ್ನು ಇಡಿ. ಎರಡು ಮೂರು ದಿನಗಳಲ್ಲಿ ಅದರಲ್ಲಿ ಹುಳುಹುಪ್ಪಟೆಗಳು ಹುಟ್ಟಿಕೊಳ್ಳುತ್ತವೆ. ಅವು ಹೇಗೆ ಹುಟ್ಟಿಕೊಳ್ಳುತ್ತವೆ? 
ಎಲ್ಲಿ ಆಹಾರ ಇರುತ್ತದೆಯೋ ಅಲ್ಲಿ ಜೀವಿಗಳು ಉದ್ಭವಿಸುತ್ತವೆ. ಅಲ್ಲಿ ಜೀವ ಪ್ರಕಟಗೊಳ್ಳುತ್ತದೆ. ಚೇತನ ಪ್ರಕಟಗೊಳ್ಳಲು ಯಾವುದಾದರೊಂದು ಶರೀರದ ಅವಶ್ಯಕತೆ ಇರುತ್ತದೆ, ಹಾಗೆಯೇ ಶರೀರ ನಿರ್ಮಾಣಕ್ಕೆ ಆಹಾರದ ಅಗತ್ಯವಿರುತ್ತದೆ. 

ದೇಹವೆಂದರೆ ಏನು? ಅದು ಯಾವ ವಸ್ತುವಿನಿಂದ ನಿರ್ಮಿತವಾಗಿದೆ? ಅದು ಹುಟ್ಟಿಕೊಳ್ಳುವುದು, ಬೆಳೆಯುವುದು ಯಾತರಿಂದ? ದೇಹ ನಿರ್ಮಾಣವಾಗಿರುವುದು ಆಹಾರದಿಂದ. ಅದು ಬೆಳೆಯುವುದು ಕೂಡಾ ಆಹಾರದ ಪೋಷಣೆಯಿಂದಲೇ. 
ಮಕ್ಕಳಿಗೆ ಮೊದಲು ಹಾಲು ಕುಡಿಸಲಾಗುತ್ತದೆ. ಆ ವಯಸ್ಸಿನವರಿಗೆ ಹಾಲೇ ಆಹಾರ. ಕೆಲವು ತಿಂಗಳ ನಂತರ ಅದರಲ್ಲಿ ಬಾಳೆ ಹಣ್ಣು ಅಥವಾ ಏನಾದರೂ ಹಣ್ಣು ಬೆರೆಸಿ ಕೊಡಲಾಗುತ್ತದೆ. ಅದು ಕೂಡ ಆಹಾರವೇ. ಮುಂದೆ ಕ್ರಮೇಣ ಸೊಪ್ಪು – ತರಕಾರಿ, ಅನ್ನ ಇತ್ಯಾದಿ ಕೊಡಲಾಗುತ್ತದೆ. ಮುಂದೆ ಮಗು ಬೆಳೆದು, ಇತರರೆಲ್ಲ ಏನು ತಿನ್ನುತ್ತಾರೋ ತಾನೂ ಅದನ್ನೆ ತಿನ್ನಲು ಆರಂಭಿಸುತ್ತದೆ. ಹೀಗೆ ಮಗುವಿನ ದೇಹದ ಪೋಷಣೆ ಹಾಗೂ ಬೆಳವಣಿಗೆಗೆ ಆಹಾರದ ಬಗೆ ಮತ್ತು ಪ್ರಮಾಣಗಳು ಪೂರಕವಾಗಿರುತ್ತವೆ, ಸಹಾಯಕವಾಗಿರುತ್ತವೆ. 

ಇಷ್ಟಕ್ಕೂ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ – ಮೂರು ಹೊತ್ತು ಊಟ ಮಾಡುವ ಅಗತ್ಯ ಏನಿದೆ ಹೇಳಿ? ಅದು ಕೂಡ ಪ್ರತೀ ದಿನ! ಸ್ವಲ್ಪ ಯೋಚಿಸಿ. ಕೆಲವು ದಿನಗಳ ಕಾಲ ಆಹರವನ್ನೆ ತಿನ್ನದೆ  ಹೋದರೆ ಏನಾಗುತ್ತದೆ? ಈ ಶರೀರವು ಉಳಿಯುತ್ತದೆಯೇನು? ಚೇತನವು ದೇಹದೊಳಗೆ ಉಳಿದುಕೊಳ್ಳುವುದೇನು? ಅಕಸ್ಮಾತ್ ನಲವತ್ತೈವತ್ತು ದಿನಗಳ ಕಾಲ ಆಹಾರವೇ ದೊರಕದೆ ಹೋದರೆ ಏನಾಗುತ್ತದೆ? ಹೀಗಾದರೆ ದೇಹವು ಹಂತಹಂತವಾಗಿ ದುರ್ಬಲಗೊಳ್ಳುತ್ತಾ ಹೋಗುತ್ತದೆ ಮತ್ತು ಚೇತನವು ದೇಹದಿಂದ ದೂರವಾಗುವ ಘಳಿಗೆ ಹತ್ತಿರವಾಗತೊಡಗುತ್ತದೆ. 

ಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ ಎಂದಾಯ್ತು. ಹಾಗೂ ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿಯಲು ಸಾಧ್ಯ ಎನ್ನುವುದು ಸ್ಪಷ್ಟವಾಯ್ತು. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ ಶರೀರ ದುರ್ಬಲವಾಗುವುದಷ್ಟೇ ಅಲ್ಲ, ದೀರ್ಘ ಕಾಲದವರೆಗೆ ಬಾಳುವುದೂ ಇಲ್ಲ. 
ಇದರಿಂದ ತಿಳಿದು ಬರುವುದೇನು? ಶರೀರವೆಂದರೆ ಯಾವುದು ಆಹಾರದಿಂದ ನಿರ್ಮಿತವಾಗಿ ಆಹಾರದಿಂದ ಪೋಷಣೆ ಪಡೆದು ಬೆಳೆಯುತ್ತದೆಯೋ ಅದು. ಅಲ್ಲವೆ? 
ಕಾಡಿನಲಲ್ಲಿ ನಿಮ್ಮ ಶರೀರ ಯಾವುದಾದರೂ ಹುಲಿ – ಸಿಂಹಕ್ಕೆ ಸಿಕ್ಕಿ ಹಾಕಿಕೊಂಡರೆ ನಿಮ್ಮ ಗತಿ ಏನಾಗುತ್ತದೆ?  ತೋಟದಲ್ಲಿ ಅಡ್ಡಾಡುವಾಗ ನಿಮ್ಮ ಕಣ್ಣಿಗೆ ಹಣ್ಣು ಕಂಡರೆ, ಆ ಹಣ್ಣಿನ ಗತಿ ಏನಾಗುತ್ತದೆ!?
ಇದರರ್ಥ, ನಿಮ್ಮ ಶರೀರ ಯಾವುದೋ ಹುಲಿ, ಸಿಂಹ, ಚಿರತೆ ಅಥವಾ ಕರಡಿಗೆ ಒಂದು ಹಣ್ಣಿಗಿಂತ ಹೆಚ್ಚಿನದೇನಲ್ಲ! ಅಲ್ಲವೆ? ನೀವು ಆ ಪ್ರಾಣಿಗಳಿಗೆ ಕೇವಲ ಆಹಾರ ಮಾತ್ರವಾಗಿದ್ದೀರಿ. 
ನಮ್ಮ ಈ ಶರೀರವೂ ಹಣ್ಣು – ತರಕಾರಿಗಳಂತೆ, ದವಸ – ಧಾನ್ಯಗಳಂತೆ ; ಅಥವಾ ಮಾಂಸಾಹಾರಿಗಳ ಮೀನು, ಕುರಿ, ಕೋಳಿಗಳಂತೆ ಮತ್ಯಾವುದೋ ಜೀವಿಯ ಪಾಲಿಗೆ ಕೇವಲ ಆಹಾರವೇ ಆಗಿದೆ.

ಈ ಇಡಿಯ ಸೃಷ್ಟಿಯಲ್ಲಿ ಪ್ರತಿಯೊಂದು ಪ್ರಾಣಿಯೂ ಒಂದಲ್ಲ ಮತ್ತೊಂದು ಪ್ರಾಣಿಯ ಆಹಾರವಾಗಿದೆ. ಇದು ಅಚ್ಚರಿಯ ಸಂಗತಿ, ಹಾಗೂ ಕಟು ಸತ್ಯ ಕೂಡಾ. ಈ ಇಡೀ ಸೃಷ್ಟಿಯು ಸ್ವಾವಲಂಬಿಯಾಗಿದೆ. ಸೃಷ್ಟಿಯ ಪ್ರತಿಯೊಂದೂ ಪುನರ್ಬಳಕೆಗೆ ನಿಯೋಜಿತವಾಗಿದೆ. 
ಟೀವಿಯಲ್ಲಿ ನಾವು ಜಿಯಾಗ್ರಫಿಕಲ್ ಚಾನೆಲ್ ಅಥವಾ ಅನಿಮಲ್ ಪ್ಲಾನೆಟ್ ನೋಡಿದರೆ, ಒಂದು ಪ್ರಾಣಿಯು ಇನ್ನೊಂದು ಪ್ರಾಣಿಗೆ ಹೇಗೆ ಆಹಾರವಾಗುತ್ತದೆ ಎನ್ನುವುದನ್ನು ಕಣ್ಣಾರೆ ಕಾಣಬಹುದು. ಇಲ್ಲಿ ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ. 

ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ಕಾಡಿನಲ್ಲಿ ಜಿಂಕೆಯೊಂದು ತನ್ನ ಜೀವ ಉಳಿಸಿಕೊಳ್ಳಲೋಸುಗ ಓಡುತ್ತಿದೆ. ಮತ್ತು ಹಾಗೆ ಓಡುತ್ತಿರುವ ಜಿಂಕೆಯನ್ನು ಹಿಡಿಯಲು ಹುಲಿಯೊಂದು ಅಟ್ಟಿಸಿಕೊಂಡು ಹೋಗುತ್ತಿದೆ. ಜೀವ ಉಳಿಸಿಕೊಳ್ಳಲು ಓಡುತ್ತಿರುವ ಹಾಗೂ ಜೀವ ತೆಗೆಯಲು ಓಡಿಸಿಕೊಂಡು ಹೋಗುತ್ತಿರುವ ಈ ಎರಡೂ ಜೀವಿಗಳಲ್ಲಿಯೂ ಇರುವ ಚೇತನ ಒಂದೇ. ಇದು ಜಿಂಕೆ ಹಾಗೂ ಹುಲಿ – ಇವೆರಡರಲ್ಲೂ ಸಮಾನವಾಗಿದೆ. ಯಾವ ಚೇತನವು ಹುಲಿಗೆ ಆಕ್ರಮಣ ಮಾಡುವಂತೆ ಪ್ರೇರೇಪಿಸುತ್ತದೆಯೋ ಅದೇ ಚೇತನವು ಜಿಂಕೆಗೆ ಜೀವ ಉಳಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತದೆ. ಅದರೆ ವ್ಯತ್ಯಾಸವಿರುವುದು ದೇಹಗಳಲ್ಲಿ. ಉಪಕರಣ ಹೇಗಿರುತ್ತದೆಯೋ ಕೆಲಸ ಹಾಗೆ ನಡೆಯುತ್ತದೆ. 

ಪ್ರತಿ ದೇಹದ ಗುಣಧರ್ಮವು ವಿಭಿನ್ನವಾಗಿರುತ್ತದೆ. ಪ್ರತಿ ದೇಹದ ವ್ಯವಹಾರಗಳೂ ಬೇರೆಬೇರೆಯಾಗಿರುತ್ತವೆ. ಇದು ಪ್ರಕೃತಿದತ್ತವಾಗಿ ಆಗಿರುವಂಥದ್ದು. ಪ್ರಕೃತಿಯಿಂದ ನಿಯೋಜನೆಯಾಗಿರುವುದೇ ಹೀಗೆ. ಪ್ರತಿ ದೇಹದ ಕಾರ್ಯಪ್ರಣಾಳಿಕೆ ಬೇರೆಯೇ ಇರುತ್ತದೆ. ಆದ್ದರಿಂದ ಪ್ರತಿ ದೇಹವು ತನ್ನ ಗುಣಧರ್ಮ ಹಾಗೂ ಕಾರ್ಯ ಪ್ರಣಾಳಿಕೆಗೆ ಅನುಗುಣವಾಗಿ ವ್ಯವಹರಿಸಲು ಬದ್ಧವಾಗಿರುತ್ತದೆ. ಆದರೆ ಈ ಎಲ್ಲ ಜೀವಿಗಳಲ್ಲಿಯೂ ದೇಹಗಳಲ್ಲಿಯೂ ಸಮಾನವಾದ ಅಂಶವೊಂದಿರುತ್ತದೆ. ಅದುವೇ ‘ಚೇತನ’.

(ಮೂಲ ಹಿಂದಿ: ಶಿವೋಹsಮ್ | ಕರ್ತೃ: Whosoever Ji | ಕನ್ನಡಕ್ಕೆ : ಚೇತನಾ)

1 Comment

Leave a Reply