ಶಂಭೂಕ ವಧಾ ಪ್ರಸಂಗ ~ ಒಂದು ಚಿಂತನೆ : ಅರಳಿಮರ ಸಂವಾದ

ಯಾವಾಗ ಶಂಬೂಕನ/ಅಜ್ಞಾನದ ಶಿರಶ್ಚೇಧವಾಯಿತೋ ಆ ಕ್ಷಣವೇ ಆ ಬಾಲಕನಿಗೆ ಎರಡನೇ ಜನ್ಮ ಪ್ರಾಪ್ತಿಯಾಯಿತು ಅಥವಾ ಜ್ಞಾನದ ಉತ್ಪತ್ತಿಯಾಯಿತು. ಇದೆ ಶಾಸ್ತ್ರದಲ್ಲಿ ಹೇಳುವ ದ್ವಿಜತ್ವ, ದ್ವಿಜತ್ವ ಎಂದರೆ ಜ್ಞಾನದಿಂದ ಪ್ರಾಪ್ತಿಯಾದ ಎರಡನೇ ಜನ್ಮ ಎಂದರ್ಥ. ಇಲ್ಲಿ ಆದದ್ದು ಅಜ್ಞಾನದ ಶಿರಶ್ಚೇಧ ಇದು ಸ್ಥೂಲ ದೇಹ ವಿಷಯವಲ್ಲ. ಇದು ಶಂಬೂಕ ವಧಾ ಪ್ರಸಂಗದ ನಿಜವಾದ ಅರ್ಥ ~ ಅಪ್ರಮೇಯ ಅಸ್ತಿತ್ವ

ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ |
ತಾವದ್ರಾಮಣಕಥಾ ಲೋಕೇಷು ಪ್ರಚರಿಷ್ಯತಿ ||
ಎಲ್ಲಿಯವರೆಗೆ ಬೆಟ್ಟಗುಡ್ಡ ಪ್ರಕೃತಿಯು ಈ ಭೂಮಿಯ ಮೇಲೆ ನೆಲೆಸಿರುವುದೋ ಅಲ್ಲಿಯವರೆಗೂ ರಾಮಾಯಣದ ಪ್ರಚಾರ ನಡೆಯುತ್ತಲೇ ಇರುತ್ತದೆ ಎಂದು ಮಹರ್ಷಿ ವಾಲ್ಮೀಕಿಗಳು ಹೇಳಿರುವಂತೆ ಇಂದೂ ಕೂಡ ವಿಶ್ವದೆಲ್ಲೆಡೆ ಸಕಾರಾತ್ಮವಾಗಲಿ, ನಕಾರಾತ್ಮಕವೇ ಆಗಲಿ ರಾಮಯಾಣದ ಕುರಿತಾದ ಚರ್ಚೆಗಳು, ಅನುವಾದಗಳು, ವಿಮರ್ಶೆಗಳು, ಸಂಶೋಧನೆಗಳು ನಡೆಯುತ್ತಲೇ ಇವೆ. ಮಹರ್ಷಿ ವಾಲ್ಮೀಕಿಗಳ ಮಾತು ಇಂದಿಗೂ ಸತ್ಯವೆಂದು ನಿರೂಪಿತವಾಗಿದೆ.

ಎಲ್ಲರಿಗೂ ಮತ್ತು ಎಲ್ಲಾಕಾಲದಲ್ಲೂ ಪ್ರಿಯವಾಗುವ ಯಾವೊಬ್ಬನೂ ಈ ಭೂಮಿಯ ಮೇಲೆ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದೂ ಇಲ್ಲ. ಎಷ್ಟೇ ಒಳ್ಳೆಯವನಾಗಿದ್ದರು, ಇಂತಹ ಉನ್ನತ ತತ್ವವುಳ್ಳವನಾದರೂ ಕೆಲವೊಬ್ಬರಿಗೆ ಅಪ್ರಿಯವಾಗಲೇ ಬೇಕು ಇದೇ ಪ್ರಕೃತಿ ನಿಯಮ, ಇದೆ ನಿಯತಿ.  ರಾಮನ ಮೇಲೆ ಮಾಡಲಾಗುವ ಬಹುದೊಡ್ಡ ಆರೋಪವೆಂದರೆ ಶೂದ್ರ ತಪಸ್ವಿ ಶಂಭೂಕನ ವಧೆ, ರಾಮ ಶಂಬೂಕನ ಶಿರಶ್ಚೇಧ ಮಾಡಿದ್ದು ನಿಜ, ಶಂಬೂಕ ಶೂದ್ರ ಎನ್ನುವ ಕಾರಣಕ್ಕಾಗಿ ರಾಮ ಅವನನ್ನು ವಧಿಸಿದನೆ ? ಇಲ್ಲ ಖಂಡಿತ ಇಲ್ಲ…

ಹಾಗೆ ನೋಡಿದರೆ ಹುಟ್ಟಿನ ಆಧಾರದಲ್ಲಿ ರಾವಣ ಕೂಡ ಒಬ್ಬ ಬ್ರಾಹ್ಮಣ ಕ್ಷತ್ರಿಯನಾದ ರಾಮ ಬ್ರಾಹ್ಮಣನಾದ ರಾವಣನನ್ನು ಕೊಲ್ಲುವುದು ಎಂದರೆ ಸಾಮಾನ್ಯ ಮಾತೇ ? ಹಾಗಾದರೆ ರಾಮ ಬ್ರಾಹ್ಮಣ ವಿರೋಧಿ ಎನ್ನುವ ಪಟ್ಟವನ್ನೂ ಕಟ್ಟಿಕೊಳ್ಳಬೇಕಾಗಿತ್ತು. ರಾಮನ ಈ ನಿಷ್ಪಕ್ಷಪಾತ ನಡೆಯತ್ತ ದೂಷಕರು ಗಮನಹರಿಸುವುದೇ ಇಲ್ಲ.  ವರ್ಣದ ಆಧಾರದ ಮೇಲೆ ರಾಮ ಶೂದ್ರನನ್ನು ಕೊಂದ ಎನ್ನುವುದಾದರೆ ರಾವಣನನ ಹತ್ಯೆಯೂ ನಡೆಯಬಾರದಾಗಿತ್ತಲ್ಲವೇ ?

ಶಂಬೂಕವಧೆಯ ನಿಜಾರ್ಥ ಹೀಗಿದೆ…

ಸನಾತನ ಸಾಹಿತ್ಯಕ್ಕೆ ಪ್ರಮುಖವಾಗಿ ಮೂರು ಅರ್ಥ ಬೇಧಗಳುಂಟು
1.ಆಧಿ ದೈವಿಕ ಅರ್ಥ
2.ಆಧಿ ಭೌತಿಕ ಅರ್ಥ
3ಆಧ್ಯಾತ್ಮಿಕ/ತಾತ್ವಿಕ ಅರ್ಥ
ಅಥವಾ
1. ಲೌಕಿಕ ಅರ್ಥ
2.ಪಾರಮಾರ್ಥಿಕ ಅರ್ಥ.

ನಾವು ಸನಾತನ ಸಾಹಿತ್ಯದ ಯಾವುದೇ ಗ್ರಂಥವನ್ನು ತೆಗೆದುಕೊಂಡರೂ ಈ ಮೂರು ರೀತಿ ಅರ್ಥಬೇಧಗಳನ್ನು ಕಾಣಬಹುದು, ಮಧ್ಯಮ ಜ್ಞಾನಿಗಳಿಗೆ ಸತ್ಯ ಸಂಗತಿಗಳನ್ನು ಸುಲಭವಾಗಿ ಅರ್ಥೈಸಲು ಋಷಿಮುನಿಗಳು ಈ ರೀತಿಯ ಅರ್ಥಬೇಧಗಳನ್ನೆಲ್ಲಾ ಸಮನ್ವಯ ಮಾಡಿ ತಾತ್ವಿಕ ರೂಪದಲ್ಲೊ ಅಥವಾ ಕಥೆಯ ರೂಪದಲ್ಲಿಯೋ ಹೇಳಿರುತ್ತಾರೆ.
ಈ ರೀತಿಯ ಅರ್ಥಬೇಧಗಳು ರಾಮಾಯಣದಲ್ಲೂ ಇವೆ, ಶಂಬೂಕ ವಧಾ ಪ್ರಸಂಗದಲ್ಲೂ ಈ ರೀತಿ ಅರ್ಥ ಬೇಧಗಳನ್ನು ಕಾಣಬಹುದು.

ರಾವಣನ ಮೊದಲನೇ ಹೆಸರು ದಶಕಂಠ ಎಂದರೆ ಹತ್ತು ತಲೆಗಳು, ಇಪ್ಪತ್ತು ಕೈಗಳು ಎನ್ನುವ ಅರ್ಥವಲ್ಲ ಇವನು ಚಿಂತನೆಯಲ್ಲಿ ಹತ್ತು ತಲೆಗಳಿಗೆ ಸಮ ಬಲದಲ್ಲಿ ಇಪ್ಪತ್ತು ಕೈಗಳಿಗೆ ಸಮ ಎನ್ನುವ ತಾತ್ವಿಕ ವಿಚಾರ.

ಶೂದ್ರತ್ವದಿಂದ ಬ್ರಾಹ್ಮಣತ್ವಕ್ಕೇರಿದ ಮಹರ್ಷಿ ವಾಲ್ಮೀಕಿಗಳು ಶಂಬೂಕನ ಪ್ರಸಂಗವನ್ನು ಸೃಷ್ಟಿಸಿ ಅದರ ಮೂಲಕ ಎರಡು ಪ್ರಮುಖ ಸಂಗತಿಗಳನ್ನು ಜಗತ್ತಿಗೆ ಸಾರಿ ಹೇಳಲು ಹೊರಟಿದ್ದಾರೆ.
ಶಂಬೂಕನ ವಧಾ ಪ್ರಸಂಗದ ಎರಡು ಪ್ರಮುಖ ಅರ್ಥಬೇಧಗಳು

1.ಲೌಕಿಕ ಅರ್ಥ : ಹುಟ್ಟಿನ ಆಧಾರದ ಮೇಲೆ ಯಾರೂ ಶೂದ್ರರಾಗುವುದಿಲ್ಲ, ಅಥವಾ ಹುಟ್ಟಿನ ಆಧಾರದ ಮೇಲೆ ವರ್ಣಗಳು ನಿರ್ಧಾರವಾಗುವುದಿಲ್ಲ ಎನ್ನುವ ಲೌಕಿಕ ವಿಚಾರ ಒಂದನೆಯದು
2.ಆಧ್ಯಾತ್ಮಿಕ ಅರ್ಥ/ಪಾರಮಾರ್ಥಿಕ ಅರ್ಥ : ಸ್ಥೂಲ ದೇಹದ ಸಮೇತವಾಗಿ ಸೂಕ್ಷ್ಮ ಜಗತ್ತನ್ನು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಆಧ್ಯಾತ್ಮಿಕ ವಿಚಾರ ಎರಡನೆಯ ಸಂಗತಿ
ಈ ಎರಡು ಸತ್ಯ ಸಂಗತಿಗಳನ್ನು ಮಹರ್ಷಿ ವಾಲ್ಮೀಕಿಗಳು ಶಂಬೂಕನ ಪ್ರಸಂಗದ ಮೂಲಕ ಅದ್ಭುತವಾಗಿ ಚಿತ್ರಿಸಿದ್ದಾರೆ.
ಉತ್ತರಕಾಂಡದಲ್ಲಿ ಈ ಶಂಬೂಕನ ಕಥೆ ಬರುತ್ತದೆ.
ಮೊದಲನೆಯದಾಗಿ ಶಂಬೂಕ ಎನ್ನುವವನು ಒಬ್ಬ ವ್ಯಕ್ತಿಯೇ ಆಗಿರಲಿಲ್ಲ ಅದೊಂದು ಅಜ್ಞಾನ ಮತ್ತು ಕೀಳರಿಮೆಯ ಸಾಂಕೇತವಷ್ಟೇ. ದೇಹವೆಂಬ ರಾಜ್ಯದಲ್ಲಿ ಪುರುಷನೇ ರಾಜ/ರಾಮ ಇಲ್ಲಿ ರಾಮನನ್ನು ಪುರುಷನಿಗೆ, ಶಂಬೂಕನನ್ನು ಅಜ್ಞಾನ/ಕೀಳರಿಮೆಗೆ, ಬ್ರಾಹ್ಮಣನ ಮಗನನ್ನು ದ್ವಿಜತ್ವಕ್ಕೆ ಸಂಕೇತಿಸಿ ವಿವರಿಸಲಾಗಿದೆ.

ಒಂದು ದಿನ ಬ್ರಾಹ್ಮಣನೊಬ್ಬ ಅಕಾಲ ಮೃತ್ಯುವಿಗೆ ತುತ್ತಾದ ತನ್ನ ಮಗನನ್ನು ಹೊತ್ತು ರೋಧಿಸುತ್ತಾ ರಾಜದ್ವಾರವನ್ನು ಪ್ರವೇಶಿಸುತ್ತಾನೆ. ನನ್ನ ಮಗನ ಅಕಾಲ ಮೃತ್ಯುವಿಗೆ ರಾಮನೇ ಹೊಣೆ, ರಾಜ್ಯಅಡಳಿತದಲ್ಲಾದ ಯಾವುದೋ ಅಕಾರ್ಯವೇ ನನ್ನ ಮಗನ ಸಾವಿಗೆ ಕಾರಣವಾಗಿದೆ, ರಾಮ ನನ್ನ ಮಗನನ್ನು ಬದುಕಿಸಿಕೊಡು ಇಲ್ಲದಿದ್ದರೆ ನನ್ನ ಪತ್ನಿಯೊಡನೆ ಈ ರಾಜದ್ವಾರದ ಬಳಿಯೇ ಪ್ರಾಣಬಿಡುತ್ತೇವೆ ಆಗ ನಿನಗೆ ಬ್ರಹ್ಮಹತ್ಯಾ ದೋಷವು ಗಂಟು ಬೀಳುತ್ತದೆ ಎಂದು ಮಗನ ಸಾವಿನ ಸಂಕಟದಿಂದ ರಾಮನನ್ನು ವಿಧ ವಿಧವಾಗಿ ನಿಂದಿಸುತ್ತಾನೆ.

ನಂತರ ಮೃತ ಶಿಶುವಿನ ತಂದೆಯ ಆರ್ತನಾದವನ್ನು ಕೇಳಿದ ರಾಮ ಶಿಶುವಿನ ಮರಣದ ನಿಜ ಕಾರಣವನ್ನು ತಿಳಿಯಲು ಎಂಟು ಋಷಿಗಳನ್ನೊಳಗೊಂಡ ಒಂದು ತುರ್ತು ಸಭೆಯನ್ನು ಏರ್ಪಡಿಸುತ್ತಾನೆ. ಆ ಸಭೆಯಲ್ಲಿ ಎಂಟು ಋಷಿಗಳ ಪರವಾಗಿ ನಾರದರು ತೇತ್ರಾಯುಗದಲ್ಲಿ ಶೂದ್ರನಿಗೆ ತಪಸ್ಸಿನ ಅಧಿಕಾರವಿಲ್ಲವಾದ್ದರಿಂದ ನಿನ್ನ ರಾಜ್ಯದಲ್ಲಿ ಯಾರೋ ಅಬ್ರಾಹ್ಮಣನೊಬ್ಬ ತಪಸ್ಸು ಮಾಡುತ್ತಿರಬೇಕು ಆದ್ದರಿಂದಲೇ ಈ ಬಾಲಕನ ಸಾವಾಗಿದೆ ಎಂದು ಹೇಳುತ್ತಾನೆ.
ನಂತರ ಶ್ರೀರಾಮ ಪುಷ್ಪಕ ವಿಮಾನವನ್ನೇರಿ ಆ ತಪಸ್ವಿಯ ಅನ್ವೇಷಣೆಗೆ ಹೊರಡುತ್ತಾನೆ. ಆಗ ಸರಸ್ಸಿ ತೀರದಲ್ಲೊಬ್ಬ ತಲೆಕೆಳಗಾಗಿ ನೇತಾಡುತ್ತಾ ತಪಸ್ಸಿನಲ್ಲಿ ನಿರತನಾಗಿರುವುದನ್ನು ಕಂಡನು, ನಂತರ ಸಮೀಪಕ್ಕೆ ಬಂದು ಗೌರವ ಪೂರ್ಣವಾಗೆ ಕೇಳುತ್ತಾನೆ.
ಎಲೈ ತಪೋನಿಷ್ಟನೆ, ನೀನು ಯಾರು ? ಯಾವ ಯೋನಿಯಲ್ಲಿ ಜನಿಸಿದವನು ? ನಿನ್ನ ತಪಸ್ಸಿನ ಉದ್ದೇಶ ಸ್ವರ್ಗಲೋಕ ಪ್ರಾಪ್ತಿಯೊ ಅಥವಾ ಅನ್ಯವರದ ಅಪೇಕ್ಷೆಯೂ ? ನೀನು ಯಾವ ವರ್ಣದವನು ?
ಇದಕ್ಕೆ ಉತ್ತರವಾಗಿ ಆ ತಪಸ್ವಿ, ಶಂಬೂಕ ಎನ್ನುವುದು ನನ್ನ ಹೆಸರು ನಾನು ಶೂದ್ರಯೋನಿಯಲ್ಲಿ ಜನಿಸಿದವನು ಆದ್ದರಿಂದ ನನ್ನನ್ನು ಶೂದ್ರನೆಂದೇ ತಿಳಿ ಎಂದು ಉತ್ತರಿಸುತ್ತಾನೆ ಅಲ್ಲದೆ ನಾನು ಸ್ಥೂಲ ಶರೀರ ಸಹಿತನಾಗಿ ದೈವತ್ವ ಪ್ರಾಪ್ತಿ & ದೈವಲೋಕವನ್ನು ವಶಪಡಿಸಿಕೊಳ್ಳುವುದು ನನ್ನ ತಪಸ್ಸಿನ ಉದ್ದೇಶವೆಂದು ಹೇಳುತ್ತಿದ್ದಂತೆಯೇ ರಾಮ ತನ್ನ ಹರಿತವಾದ ಖಡ್ಗದಿಂದ ಶಂಬೂಕನ ತಲೆಯನ್ನು ಕತ್ತರಿಸಿ ಹಾಕಿದ. ಇದು ಕಥೆ

ಮೊದಲನೆಯದಾಗಿ ಯಾರೋ ಶೂದ್ರನೊಬ್ಬ ತಪಸ್ಸು ಮಾಡಿದರೆ ಬ್ರಾಹ್ಮಣನ ಮಗ ಸಾಯುತ್ತಾನೆ ಎನ್ನುವುದನ್ನು ವೇದವು ಹೇಳುವುದಿಲ್ಲ ಇದು ಸಂಪೂರ್ಣವಾಗಿ ವೇದಕ್ಕೆ ವಿರುದ್ಧವಾಗಿದೇ ಯಾವುದು ವೇದಕ್ಕೆ ವಿರುದ್ಧವಾಗಿದೆಯೋ ಅದನ್ನು ಕೈಬಿಡಬೇಕು ಎನ್ನುವುದು ಶಾಸ್ತ್ರ. ಅಲ್ಲದೆ ಶೂದ್ರನ ತಪಸ್ಸಿನಿಂದ ಸಾವಾಗುತ್ತದೆ ಎನ್ನುವುದಾದರೆ ಇಡೀ ಬ್ರಾಹ್ಮಣರ ಮಕ್ಕಳೆಲ್ಲರೂ ಸಾಯಬೇಕಾಗಿತ್ತು ಇಡೀ ಬ್ರಾಹ್ಮಣ ಕುಲವೆ ನಷ್ಟವಾಗದೇ ಯಾರೋ ಒಬ್ಬ ಬ್ರಾಹ್ಮಣನ ಮಗ ಸಾಯಲು ಕಾರಣವೇನು ?
ಕಾರಣ ಬೇರೇನು ಅಲ್ಲ ಅದೇ ತಾತ್ವಿಕ ವಿಚಾರ ಶರೀರವೆಂಬ ರಾಜ್ಯದಲ್ಲಿ ಪುರುಷನೇ ರಾಜ, ಇಲ್ಲಿ ಪುರುಷನ ಸ್ಥಾನದಲ್ಲಿ ರಾಮನನ್ನು ಕಲ್ಪಿಸಿ ಹೇಳಲಾಗಿದೇ , ಇಲ್ಲಿ ಜ್ಞಾನ ಮರೆಯಾಗಿರುವುದನ್ನೇ ಬಾಲಕ ಸಾವಿಗೆ ಹೋಲಿಸಿ ಹೇಳಲಾಗಿದೆ. ಜ್ಞಾನವನ್ನು ಮುಸುಕು ಮಾಡಿರುವವನೆ ಶಂಬೂಕ/ಅಜ್ಞಾನ ಎನ್ನುವ ಸಂಕೇತ.

ಶೂದ್ರಯೋನ್ಯಾಂ ಪ್ರಸೂತೋsಸ್ಮಿ ಶಂಬೂಕೋ ನಾಮ ನಾಮತಃ |
ದೇವತ್ವಂ ಪ್ರಾರ್ಥಯೇ ರಾಮ ಸತರೀರೋ ಮಹಾಶಯಃ ||
[ ಉತ್ತರಾಕಾಂಡ, ಸರ್ಗ ೭೬.೨ ]
ನ ಮಿಥ್ಯಾಹಂ ವದೇ ರಾಮ ದೇವ ಲೋಕಜಿಗೀಷಯಾ |
ಶೂದ್ರಂ ಮಾಂ ವಿದ್ಧಿ ಕಾಕುತ್ಥ್ಸತಪ ಸಮಾಸ್ಥಿತಮ್ ||
[ ಉತ್ತರಾಕಾಂಡ, ಸರ್ಗ೭೬.೩ ]
ನಾನು ಶೂದ್ರಯೋನಿಯಲ್ಲಿ ಜನಿಸಿದವನು ಆದ್ದರಿಂದ ನಾನು ಶೂದ್ರ ಎಂದು ಹೇಳಿ ಹುಟ್ಟಿನ ಆಧಾರದ ಮೇಲೆ ವರ್ಣವನ್ನು ನಿರ್ಧರಿಸಿಕೊಂಡಿದ್ದು & ಸ್ಥೂಲ ದೇಹದ ಸಹಿತ ಸೂಕ್ಶ್ಮ ಜಗತ್ತನ್ನು ಪ್ರವೇಶಿಸುತ್ತೇನೆ ಎನ್ನುವುದು ಇದೆ ಅಜ್ಞಾನ ಈ ಅಜ್ಞಾನದ ಮೂರ್ತ ಸ್ವರೂಪವೇ ಶಂಬೂಕ ( ವ್ಯಕ್ತಿಯಲ್ಲ ). ಈ ಅಜ್ಞಾನದ ಚಿಂತನೆಯ ಶಿರಶ್ಚೇದ ಮಾಡುವುದೇ ಶಂಬೂಕನ ವಧೆಯ ನಿಜಾರ್ಥ.
ಏತೇ ದ್ವಿಜರ್ಷಭಾಃ ಸರ್ವ ಆಸನೇಷೂಪವೇಶಿತಾಃ |
[ ಉತ್ತರಾಕಾಂಡ, ಸರ್ಗ ೭೪.೫ ]

ನಂತರ ರಾಮ ಅಜ್ಞಾನದ ಮುಸುಕಿಗೆ ಕಾರಣವನ್ನು ಹುಡುಕಲು ಎಂಟು ಋಷಿಗಳ ತುರ್ತು ಸಭೆಯನ್ನು ಏರ್ಪಡಿಸಿದರ ಅರ್ಥ ಪ್ರಮುಖ ಎಂಟು ದೃಷ್ಟಿಕೋನದಿಂದಲೂ ಈ ಸಮಸ್ಯೆಗೆ ಪರಿಹಾರವನ್ನು ಹುಡುಕಲು ಯತ್ನಿಸುತ್ತಾನೆ ದಶದಿಕ್ಕುಗಳ ಪಥದಲ್ಲಿ ತನ್ನ ಚಿಂತನಾ ಕುದುರೆಗಳನ್ನು ಓಡಿಸುತ್ತಾನೆ ಎನ್ನುವುದು ಇದರ ಅರ್ಥ ಅದರಲ್ಲಿ ನಾರದವೆಂಬ ಒಂದು ದೃಷ್ಟಿಕೋನದಿಂದ ತೇತ್ರಾಯುಗದಲ್ಲಿ ಶೂದ್ರರಿಗೆ ತಪಸ್ಸಿನ ಅಧಿಕಾರವಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲಾಗಿದೆ.

ತೇತ್ರಾಯುಗದಲ್ಲಿ ಶೂದ್ರರಿಗೆ ತಪಸ್ಸು ಅಧಿಕಾರವಿಲ್ಲ ಎಂದು ಹೇಳಲಾಗಿ ಆದರೆ ಅದೇ ತೇತ್ರಾಯುಗದ ಮಾತಂಗ ಮಹರ್ಷಿಯರು ಶೂದ್ರತ್ವದಿಂದಾ ಮಹರ್ಷಿಯ ಸ್ಥಾನಕ್ಕೇರುತ್ತಾರೆ.
ಅಲಂಕೃತ್ಯ ಶಿರಶ್ಚೇಧ :-
ಇಲ್ಲಿ ವಿರೋಧಬಾಸವೇನೂ ಇಲ್ಲ ಯಾರು ಯಾವಾಗ ಬೇಕಾದರೂ ತಪಸ್ಸು ಮಾಡಬಹುದು ತಪಸ್ಸಿಗೆ ಯಾರೂ ಅಧಿಕಾರಿಗಳಿಲ್ಲ ಎಂದು ಹೇಳಲೆಂದೇ ಮೊದಲು ಈ ರೀತಿಯ ಅಜ್ಞಾನದ ಅಲಂಕಾರವನ್ನು ಮಾಡಿ ನಂತರ ಅದರ ಶಿರಶ್ಚೇದ ಮಾಡುವ ಮೂಲಕ ಅದು ತಪ್ಪು ಎಂದು ತಿಳಿಸಲಾಗಿದೆ. ದೇವರಿಗೆ ಪ್ರಾಣಿಗಳನ್ನು ಹೇಗೆ ಬಲಿಕೊಡುವ ಮೊದಲು ಅಲಂಕಾರ ಮಾಡಲಾಗುವುದೋ ಹಾಗೆ.

ಹಾಗಾಗಿಯೇ ರಾಮನಿಂದ “ನೀನು ಯಾರು ? ಯಾವ ಯೋನಿಯಲ್ಲಿ ಜನಿಸಿದವನು ? ನಿನ್ನ ತಪಸ್ಸಿನ ಉದ್ದೇಶ ಸ್ವರ್ಗಲೋಕ ಪ್ರಾಪ್ತಿಯೊ ಅಥವಾ ಅನ್ಯವರದ ಅಪೇಕ್ಷೆಯೂ ? ನೀನು ಯಾವ ವರ್ಣದವನು ?”  ಈ ರೀತಿಯಾಗಿ ಹೇಳಿಸಿ ಮೂಲಕ ಅಜ್ಞಾನವನ್ನು ಅಲಂಕರಿಸಿದ್ದಾರೆ ಮಹರ್ಷಿ ವಾಲ್ಮೀಕಿ.

ರಾಮ ಶಂಬೂಕನ ಅನ್ವೇಷಣೆಗೆ ಹೊರಡುತ್ತಾನೆ ಅಂದರೆ ಸಮಸ್ಯೆ ಅಥವಾ ಅಜ್ಞಾನದ ಮೂಲಕ್ಕೆ ಬರುತ್ತಾನೆ ಎನ್ನುವ ಅರ್ಥ.
ಲಂಬಮಾನಮಧೋಮುಖಮ್ |
[ ಉತ್ತರಾಕಾಂಡ, ಸರ್ಗ ೨೪.೧೪ ]
ಸಮೀಪಕ್ಕೆ ಬಂದ ರಾಮ ತಲೆಕೆಳಗಾಗಿ ತಪಸ್ಸು ಮಾಡುತ್ತಿದ್ದ ಶಂಬೂಕನನ್ನು ಕಾಣತ್ತಾನೆ.

ರಾಮಾಯಣದಲ್ಲಿ ಶಬರಿ ರಾಮನಿಗಾಗಿ ಕಾಯುತಿದ್ದದ್ದು ಕೂಡ ಒಂದು ತಪಸ್ಸು ಎಂದು ಹೇಳಲಾಗಿದೆ. ಅದೇ ರಾಮಾಯಣದಲ್ಲಿ ಮತ್ತೊಂದು ಕಡೆ ಶ್ವೇತನೆಂಬುವವನು ದಾನ ಧರ್ಮಗಳನ್ನು ಮಾಡದೆ ಸತ್ಯವನ್ನು ಆಚರಿಸದೆ ಕೇವಲ ಒಂದು ಕಡೆ ಕುಳಿತು ತಪಸ್ಸು ಮಾಡಿ ಬ್ರಹ್ಮಲೋಕ ಪ್ರಾಪ್ತಿಯಾದರೂ ಹಸಿವು ಬಾಯಾರಿಕೆಗಳು ತಪ್ಪದೆ ತನ್ನ ದೇಹವನ್ನು ತಾನೇ ಭಕ್ಷೀಸುವ ಪರಿಸ್ಥಿತಿ ಬಂದೊದಗಿತು ಎಂದು ಹೇಳುತ್ತದೆ. ಅಂದರೆ ತಪಸ್ಸಿನಲ್ಲಿ ನಾನಾ ಪ್ರಕಾರದ ತಪಸ್ಸುಗಳುಂಟು ಕೇವಲ ಕಣ್ಣು ಮುಚ್ಚಿ ಕುಳಿತು ಕೊಳ್ಳುವುದಷ್ಟೇ ತಪಸ್ಸಲ್ಲ ಅದನ್ನೇ ವೇದ ಹೀಗೆ ಹೇಳಿದೆ….

ಋತಂ ತಪಃ ಸತ್ಯಂ ತಪಃ ಶ್ರುತಂ ತಪಃ ಶಾನ್ತಂ ತಪೋ ದಾನಂ ತಪೋ ಯಜ್ಞ |
ಸ್ತಪೋ ಭೂರ್ಭುವಃ ಸುವರ್ಬ್ರಹ್ಮೈತದುಪಾಸ್ಸ್ವೈತತ್ತಪಃ ||10||
ಯಥಾರ್ಥ ಶುದ್ಧಭಾವವು ತಪಸ್ಸು
ಸತ್ಯವನ್ನು ಅಂಗೀಕರಿಸುವುದು ತಪಸ್ಸು
ಸತ್ಯವನ್ನು ಮಾತನಾಡುವುದು ತಪಸ್ಸು
ಸತ್ಯವನ್ನಾಚರಿಸುವುದು ತಪಸ್ಸು

ಗುರುಮುಖದಿಂದ ಶ್ರವಣ ಮಾಡುವುದು ತಪಸ್ಸು, ಎಂತಹ ಪ್ರಸಂಗದಲ್ಲಿಯೂ ಶಾಂತನಾಗಿರುವದು ತಪಸ್ಸು ದೇಹೇಂದ್ರಿಯ-ಮನವನ್ನು ಜಯಿಸುವುದು ತಪಸ್ಸು ದಾನಯೋಗ್ಯರಿಗೆ ಯಥಾಶಕ್ತಿ ದಾನಮಾಡುವುದು ತಪಸ್ಸು ಹೋಮ – ಹವನಾದಿ ಮಾಡುವುದು ತಪಸ್ಸು ಸಚ್ಚಿದಾನಂದಾತ್ಮಕ ಬ್ರಹ್ಮಸ್ವರೂಪದ ಉಪಾಸನೆ ನಡೆಸುವುದು ತಪಸ್ಸು
ಆತ್ಮಾನ್ವೇಷಣೆ ತಪಸ್ಸು.

ಆದ್ಯ ತಪ್ಯತಿ ದುರ್ಬುದ್ಧಿಸ್ತೇನ ಬಾಲವಧೋ ಹ್ಯಯಮ್ |
[ ಉತ್ತರಾಕಾಂಡ, ಸರ್ಗ ೭೪.೨೯ ]
ಆದರೆ ಶಂಬೂಕನದ್ದು ತಲೆಕೆಳಗಾದ ತಪಸ್ಸು ಅಂದರೆ ಸತ್ಯವಿರುದ್ಧವಾದ ತಪಸ್ಸು ಎಂದರ್ಥ.
ಶಂಬೂಕ ತಲೆ ಕೇಳಗಾಗಿಯೇ ರಾಮನಿಗೆ ಉತ್ತರಿಸುತ್ತಾನೆ ಅಂದರೆ ಶಂಬೂಕನದು ಕೆಳಮಟ್ಟದ ಯೋಚನೆಗಳು, ಕೆಳಮಟ್ಟದಿಂದ ಬಂದವುಗಳು ಎಂಬ ಅರ್ಥವೇ ಹೊರತುಬೇರೇನೂ.
ಹುಟ್ಟಿನ ಆಧಾರದ ಮೇಲೆ ವರ್ಣವನ್ನು ನಿರ್ಧರಿಸಿಕೊಂಡಿದ್ದು ಕೆಳಮಟ್ಟದಲ್ಲದೆ ಮತ್ತಿನ್ನೇನೂ ಅಲ್ಲ ಆದ್ದರಿಂದಲೇ ಅದನ್ನು ತಲೆಕೆಳಗಾಗಿ ತೋರಿಸಿ ನಂತರ ರಾಮ ತನ್ನ ವಿಚಾರವಂತಿಕೆಯ ಎಂಬ ಹರಿತವಾದ ಖಡ್ಗದಿಂದ ಆ ಕೆಳಮಟ್ಟದ ಚಿಂತನೆಯ ಶಿರಶ್ಚೇದ ಮಾಡಿದ.

ದ್ವಿಜತ್ವದ ಪ್ರಾಪ್ತಿ :
ಯಾವಾಗ ಶಂಬೂಕನ/ಅಜ್ಞಾನದ ಶಿರಶ್ಚೇಧವಾಯಿತೋ ಆ ಕ್ಷಣವೇ ಆ ಬಾಲಕನಿಗೆ ಎರಡನೇ ಜನ್ಮ ಪ್ರಾಪ್ತಿಯಾಯಿತು ಅಥವಾ ಜ್ಞಾನದ ಉತ್ಪತ್ತಿಯಾಯಿತು. ಇದೇ ಶಾಸ್ತ್ರದಲ್ಲಿ ಹೇಳುವ ದ್ವಿಜತ್ವ, ದ್ವಿಜತ್ವ ಎಂದರೆ ಜ್ಞಾನದಿಂದ ಪ್ರಾಪ್ತಿಯಾದ ಎರಡನೇ ಜನ್ಮ ಎಂದರ್ಥ. ಇಲ್ಲಿ ಆದದ್ದು ಅಜ್ಞಾನದ ಶಿರಶ್ಚೇಧ ಇದು ಸ್ಥೂಲ ದೇಹ ವಿಷಯವಲ್ಲ. ಇದು ಶಂಬೂಕ ವಧಾ ಪ್ರಸಂಗದ ನಿಜವಾದ ಅರ್ಥ
ಸನಾತನ ಸಾಹಿತ್ಯದಲ್ಲಿ ತತ್ವಗಳನ್ನು ವ್ಯಕ್ತಿಯ ಸ್ವರೂಪದಲ್ಲಿ ವರ್ಣಿಸುವುದು ಸರ್ವೇ ಸಾಮಾನ್ಯ, ಉದಾ: ಶಿವ ಮನ್ಮಥವನ್ನು( ಕಾಮವನ್ನು ) ತನ್ನ ಜ್ಞಾನವೆಂಬ ಮೂರನೇ ಕಣ್ಣಿನಿಂದ ಸುಟ್ಟುಭಸ್ಮ ಮಾಡಿದ್ದು.

ಬುದ್ಧನೂ ಕೂಡ ಕಾಮನೆಯನ್ನು ಮಾರನೆಂಬ ವ್ಯಕ್ತಿಯಾಗಿ ಚಿತ್ರಿಸಿದ್ದಾನೆ. ಮಾರ ಕಾಮನೆ ಸಂಕೇತವಾದರೆ ಶಂಬೂಕ ಅಜ್ಞಾನ ಮತ್ತು ಕಿಳರಿಮೆಯ ಸಂಕೇತ. ಬುದ್ಧ ಮಾರನನ್ನು ಜಯಿಸಬೇಕು ಅಥವಾ ಕೊಲ್ಲಬೇಕು (ಇಲ್ಲವಾಗಿಸಬೇಕು) ಎಂದೇ ಹೇಳುತ್ತಾನೆ.
ಮಾರ/ಶಂಬೂಕ ಎರಡೂ ತಾತ್ತ್ವಿಕ ವಿಚಾರಗಳೇ.
ರಾಮ ವರ್ಣ ವ್ಯವಸ್ಥೆಯ ಪ್ರತಿಪಾದಕನಲ್ಲ ರಾಮ.  ಉಚ್ಚ-ನೀಚ, ಮೇಲು-ಕೀಳು ಗಳೆಂಬ ಅಜ್ಞಾನದ ಶಿರಶ್ಚೇದ ಮಾಡಿದವನೇ ರಾಮ. ಕೇವಲ ಇದೊಂದೇ ಪ್ರಸಂಗವಲ್ಲ ಶಬರಿ, ಗುಹಾನ ವಿಚಾರದಲ್ಲಿ ಮೇಲು-ಕೀಲುಗಳ ಭಾವನೆಗೆ ಮೂಲಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದಾನೆ.

(ಶಂಭೂಕವಧಾ ಪ್ರಸಂಗದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶವಿದೆ)

Leave a Reply