ನಾರದ ಭಕ್ತಿಸೂತ್ರ ಹೇಳುವ 11 ವಿಧದ ಭಕ್ತಿಗಳು

ಪರಮಾತ್ಮನಲ್ಲಿ ಪರಿಪೂರ್ಣ ಅನುರಕ್ತಿಯೇ ಭಕ್ತಿ. ಈ ಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹಲವು ಬಗೆಗಳಿವೆ. ಭಕ್ತ ಭಾಗವತ ಪ್ರಹ್ಲಾದನು ನವವಿಧ ಭಕ್ತಿಯ ಕುರಿತು ಹೇಳಿದ್ದರೆ, ನಾರದರು ತಮ್ಮ ‘ಭಕ್ತಿಸೂತ್ರ’ದಲ್ಲಿ ಹನ್ನೊಂದು ವಿಧದ ಭಕ್ತಿಯನ್ನು ಉಲ್ಲೇಖಿಸುತ್ತಾರೆ. ಇಲ್ಲಿ ಭಕ್ತಿಯನ್ನು ‘ಆಸಕ್ತಿ’ ಎಂದು ಕರೆದಿದ್ದು, ಅವು ಹೀಗಿವೆ:

  1. ಗುಣಮಾಹಾತ್ಮ್ಯಾಸಕ್ತಿ : ಭಗವಂತನ ಗುಣ – ಮಹಿಮೆಗಳಲ್ಲಿ ಆಸಕ್ತರಾಗಿರುವುದು. ಭಗವಂತನ ಮಹಿಮೆಯ ಗುಣಗಾನ ಮಾಡುವುದು.
  2. ರೂಪಾಸಕ್ತಿ : ಭಗವಂತನ ರೂಪದಲ್ಲಿ ಆಸಕ್ತಿಯನ್ನು ಹೊಂದಿರುವುದು. ಪರಮಾತ್ಮನ ರೂಪ ವರ್ಣನೆಯಲ್ಲಿ ತಲ್ಲೀನರಾಗಿ ಆರಾಧಿಸುವುದು.
  3. ಪೂಜಾಸಕ್ತಿ : ಷೋಡಶೋಪಚಾರವೇ ಮೊದಲಾದ ಪೂಜೆ ಪುನಸ್ಕಾರಗಳಿಂದ ಭಗವಂತನನ್ನು ಅರ್ಚಿಸುವುದರಲ್ಲೇ ಆನಂದ ಹೊಂದುವುದು
  4. ಸ್ಮರಣಾಸಕ್ತಿ : ಭಗವಂತ ನಾಮಸ್ಮರಣೆಯೊಂದೇ ಬಾಳಿನ ಸರ್ವಸ್ವವೆಂದು ತಿಳಿದು, ಸದಾ ಭಗವಂತನನ್ನು ನೆನೆಯುವುದು
  5. ದಾಸ್ಯಾಸಕ್ತಿ : ಭಗವಂತ ಒಡೆಯ, ನಾನು ಆತನ ದಾಸ ಎಂಬ ಭಾವನೆ ಹೊಂದಿರುವುದು. ಭಗವಂತನ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುವುದು.
  6. ಸಖ್ಯಾಸಕ್ತಿ : ಪರಮಾತ್ಮನನ್ನು ಪರಮ ಮಿತ್ರನೆಂದು ಭಾವಿಸುತ್ತಾ ಸಲುಗೆ ಪ್ರೀತಿಗಳಿಂದ ಅವನನ್ನು ಕಾಣುವುದು.
  7. ವಾತ್ಸಲ್ಯಾಸಕ್ತಿ : ಪರಮಾತ್ಮನನ್ನು ಮಗುವಿನಂತೆ ಭಾವಿಸುತ್ತಾ ತನ್ನಲ್ಲಿ ಮಾತೃತ್ವವನ್ನು ಆರೋಪಿಸಿಕೊಂಡು ವಾತ್ಸಲ್ಯದಿಂದ ಕಾಣುವುದು
  8. ಕಾಂತಾಸಕ್ತಿ : ಭಗವಂತನನ್ನು ಪ್ರಿಯತಮನಂತೆ ಮಧುರ ಭಾವದಿಂದ ಕಾಣುವುದು.
  9. ಆತ್ಮನಿವೇದನಾಸಕ್ತಿ : ತನ್ನದೆಲ್ಲವನ್ನೂ ಭಗವಂತನಿಗೆ ಸಮರ್ಪಿಸಿ ಸಂಪೂರ್ಣ ಶರಣಾಗತಿ ಹೊಂದುವುದು
  10. ತನ್ಮಯಾಸಕ್ತಿ : ಸದಾಕಾಲ ತಪೋನಿರತರಾಗಿದ್ದು, ಭಗವಂತನಲ್ಲಿ ತಲ್ಲೀನರಾಗುವುದು
  11. ಪರಮವಿರಹಾಸಕ್ತಿ : ಸದಾಕಾಲ ಭಗವಂತನ ಸಾನ್ನಿಧ್ಯ ಬಯಸುತ್ತಾ, ಅದು ದೊರೆಯದ ವಿರಹದಲ್ಲಿ ಪರಿತಪಿಸುವುದು; ವಿರಹದಲ್ಲಿ ನಿತ್ಯ ಸ್ಮರಣೆ ಮಾಡುವುದು.

Leave a Reply