ಪಂಚಕೋಶ ಸಿದ್ಧಾಂತ : ನಮ್ಮ ದೇಹದ 5 ಕೋಶಗಳು ಮತ್ತು ಅವುಗಳ ಕಾರ್ಯವೇನು ಗೊತ್ತೆ?

ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಮತ್ತು ವೇದಾಂತದ ಪ್ರಕಾರ ಮಾನವರನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು ಹೇಳಬಹುದು. ಅವುಗಳಿಗೆ ಪಂಚ ಕೋಶಗಳೆಂದು ಕರೆಯುತ್ತಾರೆ. ಮಾನವನು ಪಂಚ ಕೋಶಗಳಿಂದ ಉಂಟಾಗಿರುವನೆಂದು ವೇದಾಂತವೂ ಹೇಳುತ್ತದೆ. ತೈತ್ತರೀಯ ಉಪನಿಷತ್ ನಲ್ಲಿ ಇದರ ಸೂಕ್ಷ್ಮ ನಿರೂಪಣೆ ಇದೆ. ಶ್ರೀ ಆದಿ ಶಂಕರರು ರಚಿಸಿರುವ ವಿವೇಕ ಚೂಡಾಮಣಿಯಲ್ಲಿಯೂ ಇದರ ವರ್ಣನೆ ಬರುತ್ತದೆ.

ಮಾನವ ದೇಹವನ್ನು ರೂಪಿಸಿರುವ ಈ ಐದು ಕೋಶಗಳು ಹೀಗಿವೆ:
ಅನ್ನಮಯ (ದೇಹ), ಪ್ರಾಣಮಯ (ಉಸಿರು), ಮನೋಮಯ (ಮನಸ್ಸು), ವಿಜ್ಞಾನಮಯ (ಜ್ಞಾನ). ಆನಂದಮಯ (ಸಂತೋಷ)

1. ಅನ್ನಮಯಕೋಶ

ದೇಹೋsಯಮನ್ನಭವನೋsನ್ನಮಯಸ್ತು ಕೋಶಶ್ಚಾನ್ನೇನ ಜೀವತಿ ವಿನಶ್ಶತಿ ತದ್ವಿಹೀನಃ |
ತ್ವಕ್ಚರ್ಮ-ಮಾಂಸ- ರುಧಿರಾಸ್ಥಿ ಪುರೇಷರಾಶಿರ್ನಾಯಂ ಸ್ವಯಂ ಭವಿತುಮರ್ಹತಿ ನಿತ್ಯ ಶುದ್ಧಃ || (154)

ಈ ಶರೀರವು ಅನ್ನದಿಂದ ಹುಟ್ಟಿದೆ, ಅನ್ನಮಯ ಕೋಶವಾಗಿದೆ. ಇದು ಅನ್ನದಿಂದ ಬದುಕಿಉವುದು. ಅದು ಇಲ್ಲದಿದ್ದರೆ ನಾಶವಾಗುತ್ತದೆ. ಚರ್ಮ (ತ್ವಕ್), ಮಾಂಸ, ರಕ್ತ, ಮೂಳೆಇವುಗಳ ರಾಶಿಯಾಗಿರುವೀ ಶರೀರವು ನಿತ್ಯ ಶುದ್ಧವಾದ ಆತ್ಮವಾಗಿರಲಾರದು. 

ದೇಹೋsಹಮಿತ್ಯೇವಜಡಸ್ಯ ಬುದ್ಧಿರ್ದೇಹೇಚಜೀವೇ ವಿದುಷ ಸ್ತ್ವಹಂ ಧೀಃ|
ವಿವೇಕ -ವಿಜ್ಞಾನವತೋ ಮಹಾತ್ಮನೋ ಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ || 160||

ಜಡನಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳುತ್ತಾನೆ . ಲೌಕಿಕ ಪಂಡಿತನಾದವನು ಸ್ಥೂಲ ಶರೀರದಲ್ಲಿಯೂ ಮತ್ತು ಜೀವನಲ್ಲಿಯೂ ನಾನು ಎಂಬ ಬುದ್ಧಿಯನ್ನು ಮಾಡುತ್ತಾನೆ . ಆತ್ಮಾನಾತ್ಮ ವಿವೇಚನದಲ್ಲಿ ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮಸ್ವರೂಪದಲ್ಲಿಯೇ ನಾನು ಬ್ರಹ್ಮ ಎಂಬ ಬುದ್ದಿಯುಂಟಾಗುತ್ತದೆ. 

ಕರ್ಮೇಂದ್ರಿಯಗಳು ಅನ್ನಮಯ ಕೋಶಕ್ಕೆ ಸೇರಿದ್ದರೂ ಪ್ರಾಣಮಯಕೋಶದಲ್ಲಿ ಹೇಳಿದೆ. (ವಾಕ್, ಪಾಣಿ, ಪಾದ, ಪಾಯು, ಉಪಸ್ತ.)

2. ಪ್ರಾಣಮಯಕೋಶ:

ಕರ್ಮೇಂದ್ರಿಯೈಃ ಪಂಚರಭಿರಂಚಿತೋsಯಂ ಪ್ರಾಣೋ ಭವೇತ್ ಪ್ರಾಣಮಯಸ್ತು ಕೋಶಃ |
ಯೇನಾತ್ಮವಾನನ್ನಮಯೋನುಪ್ರರ್ಣಃ ಪ್ರವರ್ತತೇsಸೌ ಸಕಲ ಕ್ರಿಯಾಸು ||165||

ಪಂಚ ಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು ಪ್ರಾಣಮಯಕೋಶವಾಗಿರುತ್ತದೆ. ಅನ್ನಮಯಕೋಶವು ಪ್ರಾಣಮಯ ಕೋಶದಿಂದ ತುಂಬಲ್ಪಟ್ಟು ಆತ್ಮವಂತನಾಗಿ ಎಲ್ಲಾ ಕ್ರಿಯೆಗಳಲ್ಲಿಯೂ ಪ್ರವರ್ತಿಸುತ್ತದೆ. 

ನೈವಾತ್ಮಾsಪಿ ಪ್ರಾಣಮಯೋ ವಾಯುವಿಕಾರೋ ಗತಾಂಗತಾ ವಾಯುವದಂತರ್ಬಹಿರೇಶಃ|
ಯಸ್ಮಾತ್ ಕಿಂಚಿತ್ ಕ್ವಾಪಿನವೇತ್ತೀಷ್ಟಮನಿಷ್ಟಂ ಸ್ವಂ ವಾsನ್ಯಂ ವಾ ಕಿಂಚನ ನಿತ್ಯಂ ಪರತಂತ್ರಃ||166||

ಈ ಪ್ರಾಣಮಯ ಕೋಶವು ವಾಯುವಿನ ರೂಪಾಂತರವಾಗಿರುವುದರಿಂದ ಆತ್ಮವಲ್ಲ ; ಏಕೆಂದರೆ ವಾಯುವಿನಂತೆ ಒಳಕ್ಕೆ ಹೋಗುತ್ತಲೂ ಹೊರಕ್ಕೆ ಬರುತ್ತಲೂ ಇರುತ್ತದೆ. ಇದು ಎಲ್ಲಿಯೂ ಇಷ್ಟವನ್ನಾಗಲೀ ಅನಿಷ್ಟವನ್ನಾಗಲೀ ಸ್ವಲ್ಪವೂ ಅರಿತುಕೊಳ್ಳಲಾರದು. ತನ್ನನ್ನಾಗಲೀ ಮತ್ತೊಂದನ್ನಾಗಲೀ ಸ್ವಲ್ಪವೂ ಅರಿಯಲಾರದು . ಯಾವಾಗಲೂ ಪರಾಧೀನವಾಗಿರುತ್ತದೆ. 
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ  – ಇವು ಪಂಚಪ್ರಾಣಗಳು

3. ಮನೋಮಯ ಕೋಶ:

ಜ್ಞಾನೇಂದ್ರಿಯಾಣಿ ಚ ಮನಶ್ಚ ಮನೋಮಯಸ್ಮಾತ್ ಕೋಶೋಮಮಾಹಮಿತಿ ವಸ್ತು-ವಿಕಲ್ಪ ಹೇತುಃ|
ಸಂಜ್ಞಾದಿಬೇಧ-ಕಲನಾ-ಕಲಿತೋ ಬಲೀಯಾಂಸ್ತತ್ಪೂರ್ವಕೋಶಮಭಿಪೂರ್ಯ ವಿಜೃಂಭತೇಯಃ ||167||

ಜ್ಞಾನೇಂದ್ರಿಯಗಳೂ ಮನಸ್ಸೂ ಸೇರಿಕೊಂಡು ಮನೋಮಯ ಕೋಶವಾಗಿದೆ. ಇದು ನಾನು ನನ್ನದು ಎಂಬ ವಸ್ತುಗಳ ಭೇದಗಳ ಕಾರಣವಾಗಿದೆ. ನಾಮವೇ ಮೊದಲಾದ ಭೇದಗಳ ಕಲ್ಪನೆಯಿಂದ ಕೂಡಿರುತ್ತದೆ, ಬಲಿಷ್ಟವಾಗಿರುತ್ತದೆ. ಹಿಂದಿನ ಪ್ರಾಣಮಯ ಕೋಶವನ್ನು ವ್ಯಾಪಿಸಿಕೊಂಡು ಹರಡುತ್ತದೆ.

ಪಂಚೇದ್ರಿಯೈಃ ಪಂಚಭಿರೇವ ಹೋತೃಭಿಃ ಪ್ರಚೀಯಮಾನೋ ವಿಷಯಾಜ್ಯ-ಧಾರಯಾ |
ಜಾಜ್ವಲ್ಯಮಾನೋ ಬಹುವಾಸನೇಂಧನೈರ್ಮನೋಮಯಾಗ್ನಿರ್ದಹತಿಪ್ರಪಂಚಮ್ ||168||

ಪಂಚೇಂದ್ರಿಯಗಳೆಂಬ ಪಂಚಹೋತೃಗಳು ಸುರಿಯುತ್ತಿರುವ ತುಪ್ಪದ ಧಾರೆಯಿಂದ ವರ್ಧಿಸುತ್ತಿರುವ , ಬಹುಬಗೆಯ ವಾಸನೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸ್ಮತ್ತಿರುವ ಮನೋಮಯ ಕೋಶವೆಂಬ ಅಗ್ನಿಯು ಇಡೀ ಪ್ರಪಂಚವನ್ನೇ ಸುಡುತ್ತಿರುವುದು.

ನ ಹಸ್ತ್ಯ ವಿದ್ಯಾ ಮನಸೋsತಿರಿಕ್ತಾ ಮನೋಹ್ಯವಿದ್ಯಾ ಭವಬಂಧಹೇತುಃ ||
ತಸ್ಮಿನ್ ವಿನಷ್ಟೇ ಸಕಲಂ ವಿನಷ್ಟಂ ವಿಜೃಂಭಿತೇsಸ್ಮಿನ್ ಸಕಲಂ ವಿಜೃಂಭತೇ ||169||

ಮನಸ್ಸಿಗಿಂತ ಬೇರೆಯಾದ ಅವಿದ್ಯೆಯು ಇಲ್ಲವೇ ಇಲ್ಲ . ಮನಸ್ಸೇ ಸಂಸಾರಕ್ಕೇ ಕಾರಣವಾದ ಅವಿದ್ಯೆಯು.ಅದು ನಷ್ಟವಾದಾಗ ಎಲ್ಲವೂ ನಷ್ಟವಾಗುತ್ತದೆ. ಅದು ವಿಜೃಂಭಿಸುತ್ತಿರುವಾಗ ಎಲ್ಲವೂ ವಿಜೃಂಭಿಸುತ್ತದೆ.

ಸ್ವಪ್ನೇ sರ್ಥಶೂನ್ಯೇ ಸೃಜತಿ ಸ್ವಶಕ್ತ್ಯಾ ಭೋಕ್ತ್ರಾದಿ ವಿಶ್ವಂ ಮನೇವ ಸರ್ವಮ್||
ತಥೈವ ಜಾಗ್ರತ್ಯಪಿನೋ ವಿಶೇಷಸ್ತರ್ವ ಮೇತನ್ಮನಸೋ ವಿಜೃಂಭಣಮ್ ||170||

ಯಾವುದೊಂದು ಬಾಹ್ಯವಸ್ತುವೂ ಇಲ್ಲದಿರುವ ಸ್ವಪ್ನಾವಸ್ತೆಯಲ್ಲಿ ಮನಸ್ಸೇ ತನ್ನ ಶಕ್ತಿಯಿಂದ ಭೋಕ್ತೃವೇ ಮೊದಲಾದ ಪ್ರಪಂಚವೆಲ್ಲವನ್ನೂ ಸೃಜಿಸುತ್ತದೆ . ಹಾಗೆಯೇ ಜಾಗ್ರದವಸ್ಥೆಯಲ್ಲಿಯೂ ಯಾವ ವಿಶೇಷವೂ ಇರುವುದಿಲ್ಲ . ಆದುದರಿಂದ ಇದೆಲ್ಲವೂ ಮನಸ್ಸಿನ ವಿಜೃಂಭಣೆಯೇ .

ದೇಹಾದಿ ಸರ್ವವಿಷಯೇ ಪರಿಕಲ್ಪ್ಯ ರಾಗಂ ಬಧ್ನಾತಿ ತೇನ ಪುರುಷಂ ಪಶುವದ್ಗುಣೇನ ||
ವೈರಸ್ಯಮತ್ರ ವಿಷವತ್ ಸುವಿಧಾಯ ಪಶ್ಚಾದೇನಂ ವಿಮೋಚಯತಿ ತನ್ಮನ ಏವ ಬಂಧಾತ್||173||

ಈಮನಸ್ಸು ದೇಹವೇ ಮೊದಲಾದ ಸಮಸ್ತ ವಿಷಯಗಳಲ್ಲಿಯೂ ಆಸಕ್ತಿಯನ್ಮ್ನಂಟುಮಾಡಿ, ಅದರಿಂದಲೇ ಮನಷ್ಯನನ್ನು -ಹಗ್ಗದಿಂದ ಪಶುವನ್ನು ಕಟ್ಟುವಂತೆ -ಕಟ್ಟುತ್ತದೆ. ಆ ಮನಸ್ಸೇ ಅನಂತರ ಈವಿಷಯಗಳಲ್ಲಿ ವಿಷದಲ್ಲಿ ಹೇಗೋಹಾಗೆ , ವೈರಾಗ್ಯವನ್ನುಂಟುಮಾಡಿ ಈ ಜೀವನನ್ನು ಬಿಡಿಸುತ್ತದೆ. 

ತಸ್ಮಾನ್ಮನಃ ಕಾರಣಮಸ್ಯ ಜಂತೋರ್ಬಂಧಸ್ಯ ಮೋಕ್ಷಸ್ಯ ಚ ವಾ ವಿಧಾನೇ ||
ಬಂಧಸ್ಯ ಹೇತುರ್ಮಲಿನಂ ರಜೋಗುಣೈರ್ಮೋಕ್ಷಸ್ಯ ಶುದ್ಧಂ ವಿರಜಸ್ತಮಸ್ಕಮ್ ||174||

ಆದುದರಿಂದ ಈ ಜೀವನಿಗೆ ಬಂಧನವನ್ನಾಗಲೀ ಮೋಕ್ಷವನ್ನಾಗಲೀ ಉಂಟುಮಾಡುವ ವಿಷಯದಲ್ಲಿ ಮನಸ್ಸೇ ಕಾರಣವಾಗಿರುತ್ತದೆ. ರಜೋಗುಣಗಳಿಂದ ಮಲಿನವಾದ ಈಮನಸ್ಸೇ ಬಂಧಕ್ಕೆ ಕಾರಣವು. ರಜಸ್ತಮೋಗುಣಗಳಿಂದ ರಹಿತವಾದ ಶುದ್ಧವಾದ ಮನಸ್ಸು ಮೋಕ್ಷಕ್ಕೆ ಕಾರಣವು. 

ಮನಃ ಪ್ರಸೂತೇ ವಿಷಯಾನಶೇಷಾನ್ ಸ್ಥೂಲಾತ್ಮನಾ ಸೂಕ್ಷ್ಮತಯಾ ಚ ಭೋಕ್ತುಃ ||
ಶರೀರ -ವರ್ಣಾಶ್ರಮ -ಜಾತಿ ಭೇದಾನ್ ಗುಣ-ಕ್ರಿಯಾ-ಹೇತು-ಫಲಾನಿ ನಿತ್ಯಂ ||177||

ಮನಸ್ಸೇ ಸಂಸಾರಿಗೆ ಸ್ಥೂಲರೂಪದಿಂದಲೂ ಸೂಕ್ಷ್ಮರೂಪದಿಂದಲೂ ವಿಷಯಗಳಲ್ಲವನ್ನೂ ಉಂಟುಮಾಡುತ್ತದೆ. ಮತ್ತು ಶರೀರ, ವರ್ಣ, ಆಶ್ರಮ, ಜಾತಿ ಇವುಗಳನ್ನೂ ಗುಣ, ಕ್ರಿಯೆ, ಹೇತು, ಫಲ, ಇವುಗಳನ್ನು ಯಾವಾಗಲೂ ಉಂಟುಮಾಡುತ್ತದೆ. 

ದೇವ, ತಿರ್ಯಙ , ಮನುಷ್ಯ ಇತ್ಯಾದಿ -ಶರೀರಗಳು; ಗುಣ – ಶಬ್ದಾದಿಗಳು; ಕ್ರಿಯೆ -ಕಾರ್ಯ; ಹೇತು -ಕಾರಣ – ಉಪಾದಾನ; ನಿಮಿತ್ತ ಕಾರಣಗಳು; ಫಲ- ಕಾರಣದಿಂದ ಆದ ಗಡಿಗೆ ಮೊದಲಾದ ಕಾರ್ಯಗಳು.

ಅತಃ ಪ್ರಾಹುರ್ಮುನಿನೋ ವಿದ್ಯಾಂ ಪಂಡಿತಾಸತ್ತ್ವ ದರ್ಶಿನಃ |
ಯೇನೈವ ಭ್ರಾಮ್ಯತೇ ವಿಶ್ವಂ ವಾಯು ನೇವಾಭ್ರಮಮಂಡಲಮ್ ||180||

ಆದುದರಿಂದ ತತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ ಅವಿದ್ಯೆಯೆಂದು ಹೇಳುತ್ತಾರೆ. ಗಾಳಿಯು ಮೇಘಮಂಡಲವನ್ನು ಸುತ್ತಿಸುವಂತೆ ಈ ಮನಸ್ಸು ವಿಶ್ವವೆಲ್ಲವನ್ನೂ ಸುತ್ತುತ್ತಿರುವುದು.

4. ವಿಜ್ಞಾನಮಯಕೋಶ

ಬುದ್ಧಿರ್ಬುದ್ಧೀಂದ್ರಿಯೈಃ ಸಾರ್ಧಂ ಸವೃತ್ತಿಃ ಕರ್ತೃ ಲಕ್ಷಣಃ |
ವಿಜ್ಞಾನಮಯಕೋಶಃ ಸ್ಯಾತ್ ಪುಂಸಃ ಸಂಸಾರ ಕಾರಣಮ್ ||184||

ಜ್ಞಾನೇಂದ್ರಿಯಗಳಿಂದ ಕೂಡಿದ ವೃತ್ತಿ ಸಹಿತವಾದ ಬುದ್ಧಿಯು ಕರ್ತೃವಿನ ಲಕ್ಷಣವುಳ್ಳ ವಿಜ್ಞಾನಮಯ ಕೋಶವಾಗಿರುತ್ತದೆ(೨). ಇದು ಮನುಷ್ಯನ ಸಂಸಾರಕ್ಕೆ ಕಾರಣವು. 

ಅನುವ್ರಜಚ್ಚಿತ್ಪ್ರತಿಬಿಂಬ ಶಕ್ತಿರ್ವಿಜ್ಞಾನ ಸಂಜ್ಞಃ ಪ್ರಕೃತೇರ್ವಿಕಾರಃ |
ಜ್ಞಾನಕ್ರಿಯಾವಾನಹಮಿತ್ಯಜಸ್ರಂ ದೇಹೇಂದ್ರಿಯಾದಿಷ್ವಭಿಮಾನ್ಯತೇ || 185||

ಚಿದಾತ್ಮನ ಪ್ರತಿಬಿಂಬದ ಶಕ್ತಿಯಿಂದ ಅನುಸರಿಸಲ್ಪಟ್ಟ ವಿಜ್ಞಾನವೆಂಬ ಪ್ರಕೃತಿಯ ವಿಕಾರವು ಜ್ಞಾನಕ್ರಿಯೆಗಳುಳ್ಳದ್ದು. ಇವು ದೇಹ ಇಂದ್ರಿಯ ಇವೇ ಮೊದಲಾದವುಗಳಲ್ಲಿ ನಾನು ಎಂಬ ಅಭಿಮಾನವನ್ನು ಪಡೆಯುತ್ತದೆ.
(ವಿಜ್ಞಾಮಯ ಕೋಶವು ಅಚೇತನವು ; ಚಿತ್ ಶಕ್ತಿಯ ಪ್ರಭಾವದಿಂದ ಚೇತನವಾಗಿರುವಂತೆ ತೋರುತ್ತದೆ)

ಅನಾದಿಕಾಲೋsಯಂಮಹಂಸ್ವಭಾವೋ |ಜೀವಃ ಸಮಸ್ತ ವ್ಯವಹಾರ ವೋಢಾ ||
ಕರೋತಿ ಕರ್ಮಾಣ್ಯಪಿ ಪೂರ್ವವಾಸನಃ | ಪುಣ್ಯಾನ್ಯ ಪುಣ್ಯಾನಿ ಚ ತತ್ಫಾಲಾನಿ ||186||
ಭುಂಕ್ತೇ ವಿಚಿತ್ರಾಸ್ವಪಿ ಯೋನಿಷು ವ್ರಜ-| ನ್ಯಾಯಾತಿ ನಿರ್ಯಾತ್ಯಧ ಊರ್ಧ್ವ ಮೇಷಃ |
ಅಸ್ಯೈವ ವಿಜ್ಞಾನ ಮಯಸ್ಯ ಜಾಗ್ರತ್ -| ಸ್ವಪ್ನಾದ್ಯವಸ್ಥಾಃ ಸುಖದುಃಖ ಭೋಗಃ ||187||

ವಿಜ್ಞಾನ ಮಯನಿಗೆ ಆದಿ ಇಲ್ಲ. ಇವನು ದೇಹೇಂದ್ರಿಯಾದಿಗಳಲ್ಲಿ ನಾನು ಎಂಬ ಬುದ್ಧಿಯುಳ್ಳವನು. ಜೀವನೆಂಬ ಹೆಸರುಳ್ಳವನು. ಸಮಸ್ತ ವ್ಯವಹಾರಗಳನ್ನೂ ಮಾಡುವವನು. (ಎಲ್ಲಾ ಕರ್ಮಗಳನ್ನೂ ಮಾಡಿ ಅದರ ಫಲವನ್ನು ಉಣ್ಣುವವನು). ಇವನು ಪೂರ್ವ ವಾಸನೆಯಿಂದ ಸುಕೃತ – ದುಷ್ಕೃತಗಳನ್ನು ಮಾಡುತ್ತಾನೆ. ಅವುಗಳ ಫಲವನ್ನೂ ಉಣ್ಣುತ್ತಾನೆ. ಬಗೆ ಬಗೆಯ ಯೋನಿಗಳಲ್ಲಿ ಪ್ರವೇಶಿಸಿ ಕೆಳಕ್ಕೇ ಬರುತ್ತಾನೆ , ಮೇಲಕ್ಕೆ ಹೋಗುತ್ತಾನೆ. ಜಾಗ್ರತ್ -ಸ್ವಪ್ನ-ಸುಷುಪ್ತಿ ಮೊದಲಾದ ಅವಸ್ಥೆಗಳೂ , ಸುಖ ದುಃಖಗಅನುಭವವೂ ಈ ವಿಜ್ಞಾನ ಮಯನಿಗೆ ಉಂಟಾಗುತ್ತವೆ.

ದೇಹಾದಿ -ನಿಷ್ಠಾಶ್ರಮ -ಧರ್ಮ-ಕರ್ಮ- ಗುಣಾಭಿಮಾನಂ ಸತತಂ ಮವೇತಿ |
ವಿಜ್ಞಾನಮಯಕೋಶೋsಯಮತಿ ಪ್ರಕಾಶಃ , ಪ್ರಕೃಷ್ಟ-ಸಾನ್ನಿಧ್ಯ-ವಶಾತ್ ಪರಮಾತ್ಮನಃ|
ಅತೋ ಭವತ್ಯೇಷ ಉಪಾಧಿರಸ್ಯ ಯದಾತ್ಮಧಿಃ ಸಂಸರತಿ ಭ್ರಮೇಣ ||188||

ಇದು ದೇಹಾದಿ – ಸಂಘಾತಗಳಲ್ಲಿ ಕಲ್ಪಿತವಾದ ವರ್ಣಾಶ್ರಮ ಧರ್ಮಗಳ ಕರ್ಮಗಳು, ಗುಣಗಳು -ಇವುಗಳಲ್ಲಿ ಯಾವಾಗಲೂ ನನ್ನವು ಎಂದು ಅಭಿಮಾನವನ್ನು ಮಾಡುತ್ತದೆ. ಈ ವಿಜ್ಞಾನಮಯಕೋಶವು ಪರಮಾತ್ಮನ ಪ್ರಬಲ ಸಾಮೀಪ್ಯದಿಂದ ವಿಶೇಷ ಪ್ರಕಾಶವುಳ್ಳದ್ಧಾಗಿರುತ್ತದೆ. ಆದುದರಿಂದ ಈ ಆತ್ಮನಿಗೆ ಇದು ಉಪಾದಿಯಗಿರುತ್ತದೆ. ಈ ಉಪಾದಿಯಲ್ಲಿ ನಾನು ಎಂಬ ಬುದ್ಧಿಯುಳ್ಳವನಾಗಿ ಆತ್ಮನು ಭ್ರಮೆಯಿಂದ ಸಂಸಾರ ಬಂಧನಕ್ಕೆ ಸಿಕ್ಕಿಬೀಳುತ್ತಾನೆ. 
ಈ ಆತ್ಮನು ನಿರ್ವಿಕಾರನಾಗಿದ್ದರೂ, ಉಪಾದಿ ವಶದಿಂದ ಕರ್ತೃವೂ ಭೋಕ್ತೃವೂ ಆಗುತ್ತಾನೆ. ಇವನು ಈ ಕಾರಣದಿಂದ ತನ್ನನ್ನೇ ತನಗಿಂತ ಬೇರೆಯಾಗಿ ನೋಡುತ್ತಾನೆ. ನಾನು ಸುಖಿ ದುಃಖಿ ಇತ್ಯಾದಿ ಉಪಾದಿಯ ಧರ್ಮವನ್ನು ಅನುಸರಿಸುತ್ತಾನೆ.

5. ಆನಂದಮಯ ಕೋಶ

ಆನಂದ -ಪ್ರತಿಬಿಂಬ- ಚುಂಬಿತ ತನರ್ವ್ಲತ್ತಿ ಸ್ತಮೋಜೃಂಭಿತಾ- |
ಸ್ಯಾದಾನಂದಮಯಃ ಪ್ರಿಯಾದಿ ಗುಣಕಃ ಸ್ವೇಷ್ಟಾರ್ಥ ಲಾಭೋದಯಃ |
ಪುಣ್ಯಸ್ಯಾನುಭವೇ ವಿಭಾತಿ ಕೃತಿ ನಾಮಾನಂದ ರೂಪಃ ಸ್ವಯಂ|
ಭೂತ್ವಾssನಂದತಿ ಯತ್ರ ಸಾಧು ತನುಭೃನ್ಮಾತ್ರಃ ಪ್ರಯತ್ನಂ ವಿನಾ || 207 ||

ಆನಂದದ ಪ್ರತಿಬಿಂಬವಾದ ವ್ಯಾಪ್ತವಾದ ಸ್ವರೂಪವುಳ್ಳ ಅವಿದ್ಯೆಯೆಂಬ ತಮಸ್ಸಿನಿಂದ ಹುಟ್ಟಿದ ವೃತ್ತಿಯು ಆನಂದ ಮಯ ಕೋಶವಾಗುತ್ತದೆ. (ಎಂದರೆ ಅವಿದ್ಯಾ ಪರಿಣಾಮ ವೃತ್ತಿಯಲ್ಲಿ ಆತ್ಮ ಚೈತನ್ಯವು ಪ್ರತಿಬಿಂಬಿಸುತ್ತದೆ.) ಇದು ಪ್ರಿಯವೇ ಮೊದಲಾದ ಗುಣವನ್ನು ಪಡೆದಿದೆ. ಇಷಾರ್ಥವು ಕೈಗೂಡಿದಾಗ ಉದಯವಾಗುತ್ತದೆ. ಪುಣ್ಯವಂತರಿಗೆ ಪುಣ್ಯ ಕರ್ಮಫಲದ ಅನುಭವವಾದಾಗ ತೋರಿಕೊಳ್ಮ್ಳತ್ತದೆ; ಈ ಆನಂದ ಮಯ ಕೋಶದಲ್ಲಿ ಶರೀರವುಳ್ಳವನು ಪ್ರಯತ್ನಮಾಡದೆಯೇ ಸ್ವಯಂ ಆನಂದರೂಪನಾಗಿ ಚೆನ್ನಾಗಿ ಸಂತೋಷಿಸುತ್ತಾನೆ.

ಆನಂದಮಯ ಕೋಶಸ್ಯ ಸುಷುಪ್ತೌ ಸ್ಫೂರ್ತಿರುತ್ಕಟಾ |
ಸ್ವಪ್ನ ಜಾಗರಯೋ ರೀಷದಿಷ್ಟ ಸಂದರ್ಶ ನಾದಿನಾ ||208||

ಸುಷುಪ್ತಿಯಲ್ಲಿ ಆನಂದಮಯ ಕೋಶದ ಸ್ಫೂರ್ತಿಯು ಪೂರ್ಣವಾvರುತ್ತದೆ. ಕನಸು ಎಚ್ಚರ ಇವುಗಳಲ್ಲಿ ಪ್ರಿಯ ವಸ್ತುಗಳ ದರ್ಶನವೇ ಮೊದಲಾದ ಕಾರಣಗಳಿಂದ ಸ್ವಲ್ಪವಾಗಿ ತೋರುತ್ತದೆ. 

ನೈವಾನಂದಮಯಃ ಪರಮಾತ್ಮಾ ಸೋಪಾಧಿಕತ್ವಾತ್ ಪ್ರಕೃತೇರ್ವಿಕಾರಾತ್ |
ಕಾರ್ಯತ್ವಹೇತೋಃ ಸುಕೃತಕ್ರಿಯಾಯಾ ವಿಕಾರ-ಸಂಘಾತಾ -ಸಮಾಹಿತತ್ವಾತ್||209||

ಈ ಆನಂದಮಯಕೋಶವೂ ಪರಮಾತ್ಮನಲ್ಲ. ಏಕೆಂದರೆ ಇದು ಉಪಾದಿಯಿಂದ ಕೂಡಿದೆ ; ಪ್ರಕೃತಿಯ ವಿಕಾರವಾಗಿದೆ. ಪುಣ್ಯ ಕರ್ಮದ ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ. 

ಆತ್ಮನು ಕೇವಲ ಸಾಕ್ಷಿ
ಪಂಚಾನಾಮಪಿ ಕೋಶಾನಾಂ ನಿಷೇಧೇ ಯುಕ್ತಿತಃ ಶ್ರುತೇ |
ತನ್ನಿಷೇಧಾವಧಿಃ ಸಾಕ್ಷೀ ಬೋಧರೂಪೋsಪಶಿಷ್ಯತೇ ||
ಶ್ರುತಿಯಿಂದಲೂ ಯುಕ್ತಿಯಿಂದಲೂ ಈ ಐದು ಕೋಶಗಳನ್ನೂ ನಿರಾಕರಿಸಿದರೆ , ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿಯೂ ಜ್ಞಾನ ಸ್ವರೂಪನೂ ಆದ ಪರಮಾತ್ಮನು ಉಳಿದುಕೊಳ್ಳುತ್ತಾನೆ.

(ಆಕರ ಕೃಪೆ : ವಿವೇಕ ಚೂಡಾಮಣಿ -ಶ್ರೀ ಶಂಕರ ಭಗವತ್ಪಾದ ಪ್ರಣೀತ;ಲೇ:ಸ್ವಾಮಿ ಆದಿದೇವಾನಂದ ; ಪ್ರಕಾಶಕರು: ಶ್ರೀ ರಾಮಕೃಷ್ಣಾಶ್ರಮ ಮೈಸೂರು )

Leave a Reply