ಸೃಷ್ಟಿಯ ಒಳಹೆಣಿಗೆಯಲ್ಲೊಂದು ಕೊಂಡಿ : ವಿಶ್ವಪ್ರಜ್ಞಾವಂತಿಕೆ ~ ಭಾಗ 2

ನಾವು ವ್ಯಕ್ತಿ ಹಾಗೂ ವಿಶ್ವ ಎಂಬ ಎರಡು ತುದಿಗಳ ನಡುವಿನ ಜಾಲದಲ್ಲಿ ಇದ್ದೇವೆ. ವಿಶ್ವ ಪ್ರಜ್ಞೆಯನ್ನು ಆದಿ ಮೂಲದ ಗಂಟು ಎಂದು ಕೊಂಡರೆ, ನಮ್ಮೆಲ್ಲರ ಪ್ರಜ್ಞೆಗಳು ಅದರಿಂದ ಹೊರಟ ಎಳೆಗಳು. ಅಥವಾ ನಾವೆಲ್ಲ ಎಳೆಗಳು ಸೇರಿ ಆ ಗಂಟು ಉಂಟಾಗಿದೆ. ಆದ್ದರಿಂದಲೇ ಈ ಎರಡರಲ್ಲಿ ಯಾವುದೊಂದರ ಮೇಲೆ ಬೀರುವ ಪರಿಣಾಮ ಮತ್ತೊಂದನ್ನು ಪ್ರಭಾವಿಸದೆ ಇರಲಾರದು ~ ಆನಂದಪೂರ್ಣ

ಹಿಂದಿನ ಭಾಗವನ್ನು ಇಲ್ಲಿ ಓದಿ

ವಿಶ್ವಪ್ರಜ್ಞೆ ಅಸ್ತಿತ್ವದ ಯೋಚನಾ ತರಂಗಗಳ ಒಟ್ಟು ಮೊತ್ತ, ಹಾಗೆಯೇ ಮೂಲ ಸ್ರೋತವೂ ಕೂಡ. ಪ್ರತಿಯೊಂದು ಅಸ್ತಿತ್ವದ ಪ್ರಜ್ಞೆಯು ಪರಸ್ಪರ ಬೆಸುಗೆಯ ಮೂಲಕ ವಿಶ್ವಪ್ರಜ್ಞೆಯನ್ನು ರೂಪಿಸಿದರೆ, ಆಯಾ ಅಸ್ತಿತ್ವಗಳ ಭಿನ್ನ ಪ್ರಜ್ಞೆಗಳು ಮೊಳೆಯುವುದೇ ವಿಶ್ವಪ್ರಜ್ಞೆಯ ಗರ್ಭದಿಂದ. ಇದು ಪರಸ್ಪರ ಸಂವಾದಿಯಾಗಿರುವ ಪ್ರಕ್ರಿಯೆ.

ಸ್ವಾಮಿ ರಾಮತೀರ್ಥರು ಒಂದು ದೃಷ್ಟಾಂತ ಹೇಳುತ್ತಾರೆ. ಒಂದೂರಿನಲ್ಲಿ ಒಬ್ಬ ಕೆಡುಕ ಇರುತ್ತಾನೆ. ಅವನನ್ನು ಕಂಡರೆ ಎಲ್ಲರಿಗೂ ಜಿಗುಪ್ಸೆ. ಆದರೆ ನೇರಾನೇರ ತೋಡಿಕೊಳ್ಳಲು ಭಯ. ಒಂದು ದಿನ ಆ ಕೆಡುಕ ಸಜ್ಜನ ಮನುಷ್ಯನೊಬ್ಬನನ್ನು ಕೆಣಕುತ್ತಾನೆ. ಯಾವತ್ತೂ ಯಾರಿಗೂ ಹಾನಿ ಮಾಡದ ಆ ಮನುಷ್ಯ ಕೋಪೋದ್ರಿಕ್ತನಾಗಿ ಆ ಕೆಡುಕನ ಹತ್ಯೆ ಮಾಡಿಬಿಡುತ್ತಾನೆ. ಆತನನ್ನು ಬಂಧಿಸಿ ರಾಜನಲ್ಲಿಗೆ ನ್ಯಾಯಕ್ಕಾಗಿ ಕರೆದೊಯ್ಯಲಾಗುತ್ತದೆ. ಆ ರಾಜನ ಆಸ್ಥಾನದಲ್ಲಿ ಋಷಿ ಸದೃಶ ಜ್ಞಾನಿಯೊಬ್ಬ ನ್ಯಾಯಾಧೀಶ. `ಕೊಲೆಗಡುಕನೆಂದು ಹೇಳಲಾಗುತ್ತಿರುವ ಈ ಮನುಷ್ಯನ ಹಿನ್ನೆಲೆ ಗಮನಿಸಿದರೆ, ಸತ್ತ ವ್ಯಕ್ತಿಯ ಕೊಲೆ ಈತನಿಂದ ನಡೆದಿದ್ದರೂ ಈತನಿಂದ ಮಾತ್ರ ನಡೆದಿರುವಂಥದ್ದಲ್ಲ. ಈ ಕೊಲೆಗೆ ಇಡಿಯ ನಗರವೇ ಕಾರಣವಾಗಿದೆ. ಆದ್ದರಿಂದ ಶಿಕ್ಷೆ ನೀಡುವುದೇ ಆದರೆ ಈ ಎಲ್ಲರೂ ಶಿಕ್ಷಾರ್ಹರೇ’ ಎನ್ನುತ್ತಾರವರು. `ಅದು ಹೇಗೆ?’ ರಾಜನ ಕುತೂಹಲ. `ಸತ್ತ ಮನುಷ್ಯ ವಿಪರೀತ ದುಷ್ಟನಾಗಿದ್ದ. ಪ್ರತಿ ದಿನವೂ ಪ್ರತಿಯೊಬ್ಬರು ಆತ ಸಾಯಲೆಂದು ಶಾಪ ಹಾಕುತ್ತಿದ್ದರು. ಅಷ್ಟೆ ಅಲ್ಲ, ಕೆಟ್ಟ ರೀತಿಯಿಂದ ಸಾಯಲೆಂದು ಶಾಪ ಹಾಕುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಈ ಪ್ರಜ್ಞಾಪೂರ್ವಕ ಬಯಕೆ ಹೆಪ್ಪುಗಟ್ಟಿದ ಹಂತದಲ್ಲಿ ಈಗ ಕೊಲೆ ಮಾಡಿದ ವ್ಯಕ್ತಿ ಆತನಿಂದ ಬಾಧೆಗೊಳಗಾಗುತ್ತಿದ್ದ. ಆದ್ದರಿಂದಲೇ ಅನಾಹುತ ಸಂಭವಿಸುವಂತಾಗಿದ್ದು’ ಎಂದು ವಿವರಿಸುತ್ತಾರೆ.

ಈ ದೃಷ್ಟಾಂತವನ್ನು ಹೇಳುವ ರಾಮತೀರ್ಥರು, `ವಿಶ್ವಪ್ರಜ್ಞೆಯ ನಿಯೋಜನೆಯಂತೆ ಆತನ ಕೊಲೆಯಾಗುತ್ತದೆ ಎನ್ನುವುದು ಒಂದಾದರೆ, ಪ್ರತ್ಯೇಕ ವ್ಯಕ್ತಿಗಳ ಪ್ರಜ್ಞೆಯ ಪರಿಣಾಮ ನಿಯತಿಯ ಮೇಲೆ ಉಂಟಾಗಿ ಕೊಲೆ ಸಂಭವಿಸುತ್ತದೆ’ ಎಂದು ವಿವರಿಸುತ್ತಾರೆ.

ನಾವು ವ್ಯಕ್ತಿ ಹಾಗೂ ವಿಶ್ವ ಎಂಬ ಎರಡು ತುದಿಗಳ ನಡುವಿನ ಜಾಲದಲ್ಲಿ ಇದ್ದೇವೆ. ವಿಶ್ವ ಪ್ರಜ್ಞೆಯನ್ನು ಆದಿ ಮೂಲದ ಗಂಟು ಎಂದು ಕೊಂಡರೆ, ನಮ್ಮೆಲ್ಲರ ಪ್ರಜ್ಞೆಗಳು ಅದರಿಂದ ಹೊರಟ ಎಳೆಗಳು. ಅಥವಾ ನಾವೆಲ್ಲ ಎಳೆಗಳು ಸೇರಿ ಆ ಗಂಟು ಉಂಟಾಗಿದೆ. ಆದ್ದರಿಂದಲೇ ಈ ಎರಡರಲ್ಲಿ ಯಾವುದೊಂದರ ಮೇಲೆ ಬೀರುವ ಪರಿಣಾಮ ಮತ್ತೊಂದನ್ನು ಪ್ರಭಾವಿಸದೆ ಇರಲಾರದು.

`ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ದೇವನೂರು ಮಹಾದೇವ ಒಂದು ಸಂಗತಿ ಹಂಚಿಕೊಂಡಿದ್ದಾರೆ. ತಜ್ಞ ಮನೋವೈದ್ಯ ಡಾ.ಅಶೋಕ್ ಪೈ ಅವರು ಮಹಾದೇವರನ್ನು ಭೇಟಿ ಮಾಡಿದಾಗ ತಾವು ನಡೆಸುತ್ತಿರುವ ಸಂಶೋಧನೆಯೊಂದರ ಬಗ್ಗೆ ಹೇಳುತ್ತಾರೆ. ಅದು ಹೀಗಿದೆ; `ಒಂದು ಕೋಣೆಯಲ್ಲಿ ಕೆಲವಷ್ಟು ಜನ ಟೀವಿ ನೋಡುತ್ತಾ ಕೂತಿರುತ್ತಾರೆಂದುಕೊಳ್ಳಿ. ಪಕ್ಕದ ಕೋಣೆಯಲ್ಲಿ ಕೆಲವರು ಇಸ್ಪೀಟಾಡುತ್ತ ಕೂತಿರುತ್ತಾರೆ. ಟೀವಿಯಲ್ಲಿ ಯಾವುದೋ ನೋವಿನ ಸನ್ನಿವೇಶ ಬರುತ್ತಿದ್ದು, ನೋಡುಗರು ಅದರ ಭಾವದಲ್ಲಿ ಲೀನವಾಗುತ್ತ ದುಗುಡಗೊಂಡಿದ್ದರೆ, ಪಕ್ಕದ ಕೋಣೆಯವರು ಟೀವಿಯಲ್ಲಿ ಏನು ಬರುತ್ತಿದೆ ಎನ್ನುವ ಅರಿವು ಇಲ್ಲದೆ ಹೋದರೂ ಟೀವಿ ನೋಡುತ್ತಿರುವವರ ಅಂತರಂಗ ಅರಿಯದೆ ಹೋದರೂ ತಮಗರಿವಿಲ್ಲದಂತೆ ಅದಕ್ಕೆ ಸ್ಪಂದಿಸುತ್ತ ಮಂಕಾಗಿರುತ್ತಾರೆ. ಅದೇ ಟೀವಿಯಲ್ಲಿ ಹಾಸ್ಯ ಕಾರ್ಯಕ್ರಮ ಬರುತ್ತಿದ್ದು, ನೋಡುಗರು ಖುಷಿಯಿಂದ ನಗೆ ತುಂಬಿಕೊಂಡಿದ್ದರೆ, ಆ ಪಕ್ಕದ ಕೋಣೆಯ ಜನರೂ ಉಲ್ಲಸಿತರಾಗಿರುತ್ತಾರೆ. ಇಲ್ಲಿ ಪರಸ್ಪರ ನೇರ ಸಂಬಂಧವಿಲ್ಲದೆ ಹೋದರೂ ಒಂದು ಸಮೂಹದ ಸ್ಪಂದನೆ ಇನ್ನೊಂದರ ಮೇಲೆ ಆಗುತ್ತದೆ’

ಈ ಮೇಲಿನ ನಿದರ್ಶನ ವಿಶ್ವಪ್ರಜ್ಞೆಯ ವಿವರಣೆಯನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಮೇಲ್ನೋಟಕ್ಕೆ ಸ್ವಲ್ಪವೂ ಸಂಬಂಧವಿಲ್ಲದೆ ಹೋದರೂ ವ್ಯಕ್ತಿಗಳ, ಸಮುದಾಯಗಳ ನಡುವಿನ ಅಂತಸ್ಸಂಬಂಧ ಸಾಮೂಹಿಕ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಅದರ ಪರಿಣಾಮ ಈ ರೀತಿಯಾಗಿ ಕೆಲಸ ಮಾಡುತ್ತದೆ.

ಹರಿವಿನೊಳಗೆ ಒಂದಾಗುವುದು
ಮರಿ ಮೀನೊಂದು ತಾಯಿ ಮೀನನ್ನ ಕೇಳುತ್ತೆ, `ಅಮ್ಮಾ, ಸಮುದ್ರ ಹೇಗಿರುತ್ತೆ?’
ತಾಯಿ ಮೀನಿನ ಉತ್ತರ, `ನನಗ್ಗೊತ್ತಿಲ್ಲ. ಆದರೆ ಸಮುದ್ರ ಅನ್ನುವುದೊಂದು ಇರೋದು ಹೌದು. ನಮ್ಮ ಪೂರ್ವಜರೆಲ್ಲ ಅದರ ಇರುವಿಕೆಯ ಬಗ್ಗೆ ಸಾಕಷ್ಟು ಹೇಳಿದ್ದಾರೆ’.
ಯಾರೂ ಅದನ್ನ ನೋಡೇ ಇಲ್ಲವೇ?’ ಮತ್ತೆ ಮರಿ ಮೀನಿನ ಪ್ರಶ್ನೆ. `ನೋಡಿದವರಿದ್ದಾರೆ. ಆದರೆ ಅದನ್ನ ವಿವರಿಸೋಕೆ ಅವರಿಗಾಗಿಲ್ಲ. ವಿವರಿಸಿದ್ದನ್ನ ಅರ್ಥ ಮಾಡಿಕೊಂಡವರೂ ಇಲ್ಲ!’ ಅನ್ನುತ್ತದೆ ತಾಯಿ ಮೀನು.

ನಮ್ಮ ಸ್ಥಿತಿಯೂ ಇದೇ ಆಗಿದೆ. ನಾವು ಯಾವ ಪ್ರಜ್ಞೆಯೊಳಗೆ ಇದ್ದೇವೆಯೋ ಅದನ್ನು ಅರಿತುಕೊಳ್ಳಲು ನಮ್ಮಿಂದಾಗುವುದಿಲ್ಲ. ಹಾಗೆ ಅರಿತುಕೊಂಡವರು ಹೇಳಿದ್ದನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ನಾವು ಪಡೆದಿಲ್ಲ.
ಆ ಮರಿಮೀನಿಗೆ ಒಂದು ಜ್ಞಾನಿ ಮೀನು ಹೇಳುತ್ತೆ, `ಅಯ್ಯೋ ಹುಚ್ಚಿ! ಸಮುದ್ರ ಎಂದರೆ ನಿನ್ನ ಸುತ್ತ ಇರುವ ಜಗತ್ತು. ಅದರೊಳಗೆ, ಅದರಿಂದಾಗಿಯೇ ನೀನು ಜೀವಿಸಿದ್ದೀಯ. ನೀನು ಅದರದ್ದೇ ಒಂದು ಭಾಗವಾಗಿದ್ದೀಯ’ ಎಂದು.

ನಾವು ಕೇಳುತ್ತಲೇ ಬಂದಿದ್ದೇವೆ. `ವಿಶ್ವಪ್ರಜ್ಞೆ ಎಂದರೆ ಏನು? ಅದನ್ನು ಕಂಡುಕೊಳ್ಳುವುದು ಹೇಗೆ?’ ಎಂದು. ದಾರ್ಶನಿಕರು ಹೇಳಿ ಹೋಗಿದ್ದಾರೆ, ಈಗಿನ ಜ್ಞಾನಿಗಳೂ ಹೇಳುತ್ತಲೇ ಇದ್ದಾರೆ. `ನಮ್ಮ ಸುತ್ತಲಿನ ಎಚ್ಚರವೇ ವಿಶ್ವಪ್ರಜ್ಞೆ. ಅದರ ಪ್ರವಾಹದಲ್ಲಿ ಒಂದಾಗಿ ನಾವು ಹರಿಯುತ್ತಿದ್ದೇವೆ…’
ನಮ್ಮ ಸುತ್ತಲಿನ ಈ ವಿಶ್ವಪ್ರಜ್ಞೆಯೊಂದಿಗೆ ನಮ್ಮ ಸ್ವಯಂ ಪ್ರಜ್ಞೆಯನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯೇ ಧ್ಯಾನ. ಧ್ಯಾನವು ನಮ್ಮನ್ನು ದೇಹದ ಗುರುತಿನಿಂದ, ಮನಸ್ಸಿನ ಹಿಡಿತದಿಂದ ಹೊರತಂದು ವಿಶ್ವಕ್ಕೆ ಮುಖಾಮುಖಿಯಾಗಿಸುತ್ತದೆ. ನಾವು ಅದರೊಳಗೊಬ್ಬರೆಂಬ ತಿಳಿವನ್ನು ನೀಡುತ್ತದೆ.

Leave a Reply