ಜಾತಕ ನೋಡೋದು ಹೇಗೆ? ಪ್ರಾಥಮಿಕ ಪಾಠ ಇಲ್ಲಿದೆ…

ಪರಿಣತ ಜ್ಯೋತಿಷಿಗಳು ಗ್ರಹಗಳ ಸ್ವಭಾವದ ಆಧಾರದ ಮೇಲೆ, ನಮ್ಮ ಜನ್ಮರಾಶಿ ಮತ್ತು ಲಗ್ನಗಳಿಗೆ ಅನುಗುಣವಾಗಿ ನಮ್ಮ ವರ್ತಮಾನವನ್ನೂ ಭವಿಷ್ಯವನ್ನೂ ಹೇಳುತ್ತಾರೆ. ಇಂಥಾ ಗ್ರಹದ ಪ್ರಭಾವದಿಂದ ಇಂಥಾ ದೆಸೆ ಉಂಟಾಗುತ್ತದೆ ಎಂದು ಮೊದಲೇ ತಿಳಿದರೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬಹುದು. ಅಥವಾ ಕೊನೆಪಕ್ಷ ಮಾನಸಿಕವಾಗಿಯಾದರೂ ತಯಾರಾಗಿರಬಹುದು ಅನ್ನೋದು ಜಾತಕ ನೋಡುವ – ನೋಡಿಸುವ ರೂಢಿಯ ಹಿಂದಿರುವ ಚಿಂತನೆ. 

ಜಾತಕ ಅಥವಾ ಜನ್ಮಕುಂಡಲಿಯನ್ನು ನಾವೆಷ್ಟು ನಂಬುತ್ತೇವೋ ಬಿಡುತ್ತೇವೋ…. ಆದರೆ ಅದನ್ನು ನೋಡುವ, ನೋಡಿಸುವ ಕುತೂಹಲವಂತೂ ಸಾಮಾನ್ಯ. ಅಂತಿಮವಾಗಿ ಮನುಷ್ಯ ಪ್ರಯತ್ನ ಮತ್ತು ದೈವಬಲವೇ ಸಕಲವನ್ನೂ ಸಾಧಿಸುವ ಮಾರ್ಗ ಎಂದಿದ್ದರೂ ಜಾತಕ ಬಿಟ್ಟುಕೊಡುವ ಸುಳಿವು ಅಧ್ಯಯನಯೋಗ್ಯವಂತೂ ಹೌದು.
ಹಿಂದೂ ಮಾತ್ರವಲ್ಲ, ಭಾರತದಲ್ಲಿ ಕೂಡು ಜೀವನ ನಡೆಸುವ ಬಹುತೇಕ ಧರ್ಮೀಯರೂ ಜಾತಕ ಮಾಡಿಸಿಟ್ಟುಕೊಂಡಿರುತ್ತಾರೆ. ಕೊನೆಪಕ್ಷ ರಾಸಿ – ನಕ್ಷತ್ರಗಳನ್ನಾದರೂ ತಿಳಿದುಕೊಂಡಿರುತ್ತಾರೆ. ಏಕೆಂದರೆ ಇಲ್ಲಿ ಜಾತಕ ನೋಡುವುದು ಧಾರ್ಮಿಕ ನಂಬಿಕೆಗಿಂತ, ಈ ನೆಲದ ಸಂಸ್ಕೃತಿಯಾಗಿಯೇ ಹೆಚ್ಚು ಚಾಲ್ತಿಯಲ್ಲಿದೆ. ಹಾಗೆಂದೇ ಜಾತಕ ನೋಡುವವರು ಎಲ್ಲೆಡೆ ಸಿಗುತ್ತಾರೆ.

ಕೆಲವು ಮೂಲಭೂತ ಸಂಗತಿಗಳನ್ನು ತಿಳಿದುಕೊಂಡರೆ ನಮ್ಮ ಜಾತಕ ನಾವೇ ನೋಡಿಕೊಳ್ಳುವುದು ಕಷ್ಟವೇನಲ್ಲ. ಅದಕ್ಕೆ ಮೊದಲು ನಿಮ್ಮ ಜಾತಕ ಸರಿಯಾಗಿರಬೇಕಷ್ಟೆ. ಅದನ್ನಿಟ್ಟುಕೊಂಡು, ಕೆಳಗಿನ ಸೂಚನೆಗಳನ್ನು ಅನುಸರಿಸಿ, ನೀವೂ ಒಮ್ಮೆ ಜಾತಕ ಓದಲು ಪ್ರಯತ್ನಿಸಿ ನೋಡಿ!

ಮೂಲಭೂತ ಸಂಗತಿಗಳು
ಜಾತಕ ಅಥವಾ ಜನ್ಮಕುಂಡಲಿ ಚೌಕಾಕಾರವಾಗಿದ್ದು, 12 ಮನೆಗಳನ್ನು ಹೊಂದಿರುತ್ತವೆ. ಈ ಹನ್ನೆರಡು ಮನೆಗಳನ್ನು ಹನ್ನೆರಡು ರಾಶಿಗಳಾಗಿ ವಿಂಗಡಿಸಲಾಗಿದೆ. ಮೇಷದಿಂದ ಮೀನರಾಶಿಯವರೆಗೆ ಯಾವುದರಲ್ಲಿ ಯಾವ ಗ್ರಹವಿದೆ; ಯಾವ ರಾಶಿಗೆ – ಗ್ರಹಕ್ಕೆ ಯಾವುದು ಮಿತ್ರ ಮತ್ತು ಯಾವುದು ಶತ್ರು? ಜಾತಕನ ಮೇಲೆ ಅದು ಯಾವ ಪ್ರಭಾವ ಬೀರುತ್ತದೆ? – ಇತ್ಯಾದಿ ಅಧ್ಯಯನವೇ ಜಾತಕ ನೋಡುವ ಪ್ರಕ್ರಿಯೆ.

ಜನ್ಮ ಕುಂಡಲಿಯ ಯಾವ ಮನೆಯಲ್ಲಿ ‘ಲ’- ಅಂದರೆ ಲಗ್ನ ಎಂದು ಬರೆದಿರುವುದೋ ಅದೇ ಮೊದಲನೆ ಮನೆಯಾಗಿರುತ್ತದೆ. ಮಗು ಹುಟ್ಟಿದ ಸಮಯಕ್ಕೆ ಸರಿಯಾಗಿ ಉದಯಕ್ಕೆ ಬರುವ ರಾಶಿಯೇ ಲಗ್ನವಾಗತ್ತೆ. ಹಾಗೆಯೇ ಯಾವ ಮನೆಯಲ್ಲಿ ಚ – ಚಂದ್ರ ಎಂದು ಬರೆಯಲಾಗಿರುತ್ತದೋ ಅದೇ ನಮ್ಮ ಜನ್ಮ ರಾಶಿಯಾಗಿರುತ್ತದೆ. ರವಿ, ಚಂದ್ರರನ್ನೂ – ಪ್ರಕಾಶ ಗ್ರಹಗಳು; ಕುಜ (ಅಂಗಾರಕ, ಮಂಗಳ ಎಂಬ ಹೆಸರುಗಳೂ ಇವೆ),ಬುಧ, ಗುರು,ಶುಕ್ರ, ಶನಿ – ತಾರಾಗ್ರಹಗಳು; ರಾಹು, ಕೇತು – ಛಾಯಾಗ್ರಹಗಳು; ಇವನ್ನು ನವಗ್ರಹಗಳೆಂದು ಕರೆಯಲಾಗಿದೆ.

ಮೇಷ ರಾಶಿಗೆ – ಕುಜ / ಮಂಗಳ ಅಧಿಪತಿ; ವೃಷಭ  ರಾಶಿಗೆ –  ಶುಕ್ರ ಅಧಿಪತಿ; ಮಿಥುನ ರಾಶಿಗೆ  – ಬುಧ ಅಧಿಪತಿ; ಕಟಕ  ರಾಶಿಗೆ – ಚಂದ್ರ ಅಧಿಪತಿ; ಸಿಂಹ ರಾಶಿಗೆ – ರವಿ ಅಧಿಪತಿ; ಕನ್ಯಾ ರಾಶಿಗೆ – ಬುಧ ಅಧಿಪತಿ; ತುಲಾ ರಾಶಿಗೆ –  ಶುಕ್ರ ಅಧಿಪತಿ; ವೃಶ್ಚಿಕ ರಾಶಿಗೆ –  ಕುಜ / ಮಂಗಳ ಅಧಿಪತಿ; ಧನು ರಾಶಿಗೆ –  ಗುರು ಅಧಿಪತಿ; ಮಕರ ರಾಶಿಗೆ –  ಶನಿ ಅಧಿಪತಿ; ಕುಂಭ ರಾಶಿಗೆ –  ಶನಿ ಅಧಿಪತಿ; ಹಾಗೂ ಮೀನ ರಾಶಿಗೆ –  ಗುರು ಅಧಿಪತಿಯಾಗಿದ್ದಾನೆ.

jataka

ಈಗ ಈ ಗ್ರಹಗಳ ಗುಣಗಳೇನು, ನೋಡೋಣ…
ರವಿ ಗ್ರಹವು ತಂದೆಯ ಗುಣ ಹೊಂದಿರುತ್ತದೆ. ಇದರ ದಿಕ್ಕು ಪೂರ್ವ. 
ಚಂದ್ರ ಗ್ರಹವು ತಾಯಿ ಮನಸ್ಸಿನ ಪ್ರತೀಕ. ಇದರ ದಿಕ್ಕು ವಾಯುವ್ಯ. 
ಕುಜ ಸಹೋದರ ಗುಣವನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಇದರ ದಿಕ್ಕು.
ಬುಧ ಗ್ರಹವು ವಿದ್ಯೆ, ವಾಕ್ಪಟುತ್ವ ಮತ್ತು ಬಂಧುತ್ವ ಗುಣಗಳನ್ನು ಹೊಂದಿರುತ್ತದೆ. ಇದರ ದಿಕ್ಕು ಉತ್ತರ.
ಗುರು ಗ್ರಹವು ಜ್ಞಾನ, ಗುಣ, ಸಂತಾನ, ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸೂಚಿಸುತ್ತದೆ. ಇದರದ್ದು ಈಶಾನ್ಯ ದಿಕ್ಕು. 
ಶುಕ್ರ ಗ್ರಹವು ಪತ್ನಿಯಂತೆ. ಜೊತೆಗೆ ಇದು ಸುಖ ಸೂಚಿ. ಆಗ್ನೇಯ ಇದರ ದಿಕ್ಕು. 
ಶನಿ ಗ್ರಹವು ಕರ್ಮಫಲ ನೀಡುವ ಗ್ರಹ.ಇದರದ್ದು ಪಶ್ಚಿಮ ದಿಕ್ಕು. 
ರಾಹು ಗ್ರಹವು ವಾತ್ಸಲ್ಯ ಸೂಚಿಸುವಂಥದ್ದು. ಇದರದ್ದು ನೈರುತ್ಯ ದಿಕ್ಕು.
ಕೇತು ಗ್ರಹವು ಪಿತಾಮಹನಂತೆ ಮಾರ್ಗದರ್ಶಕ. ಈಶಾನ್ಯ ಇದರ ದಿಕ್ಕು.

ಈಗ ಯಾವ ಮನೆ ಹೇಳುತ್ತದೆ ನೋಡೋಣ…
ಮೊದಲನೆ ಮನೆ ಅಥವಾ ಲಗ್ನವು ದೇಹವನ್ನು, ಆತ್ಮವನ್ನು, ರೂಪ, ಗುಣ, ತಲೆ, ವರ್ತಮಾನ, ಇತ್ಯಾದಿ ವಿವರ ತಿಳಿಸುತ್ತದೆ.
ಎರಡನೇ ಮನೆಯು ಕುಟುಂಬ, ಹಣ, ಆಹಾರ, ವಾಕ್ಚಾತುರ್ಯ ಇತ್ಯಾದಿ ಕುರಿತು ತಿಳಿಸುತ್ತದೆ.
ಮೂರನೇ ಮನೆ ಕಷ್ಟ, ಧೈರ್ಯ, ಸಾಹಸ, ಪರಾಕ್ರಮ, ಇತ್ಯಾದಿಗಳ ವಿವರ ನೀಡುತ್ತದೆ.
ನಾಲ್ಕನೇ ಮನೆ ಸುಖ, ನಿವೇಶನ, ಕಟ್ಟಡ, ಸೋದರಿಕೆ ಸಂಬಂಧಗಳು, ವಾಹನ, ರಾಜ್ಯ, ಪಶು ಸಂಪತ್ತು ಇತ್ಯಾದಿಗಳನ್ನು ವಿವರಿಸುತ್ತದೆ.
ಐದನೇ ಮನೆ ರಾಜಚಿಹ್ನೆ, ಹಸ್ತ, ಆತ್ಮ, ಬುದ್ಧಿ, ಧೀ ಶಕ್ತಿ, ಸಂತಾನ, ಭವಿಷ್ಯ ಜ್ಞಾನ, ಶೃತಿ, ಇತ್ಯದಿ ವಿಷಯಗಳನ್ನ ಹೇಳುತ್ತದೆ.
ಆರನೇ ಮನೆ ಸಾಲ, ಅಸ್ತ್ರ, ಕಳ್ಳತನದ ಬಗ್ಗೆ, ರೋಗ, ಶತ್ರು, ವಾಗ್ವಾದ, ಪಾಪ ಕರ್ಮ ಇದ್ಯಾದಿಗಳನ್ನು ವಿವರಿಸುತ್ತದೆ.
ಏಳನೇ ಮನೆಯು ಹೆಂಡತಿ, ಬಯಕೆ, ಕಾಮ, ಆನಂದ, ವ್ಯಾಪಾರ, ಇತ್ಯಾದಿ ವಿವರ ಹೇಳುತ್ತದೆ.
ಎಂಟನೇ ಮನೆಯು ಮಾಂಗಲ್ಯ ಸೌಭಾಗ್ಯ, ಮಾಲಿನ್ಯ, ಆಯುಷ್ಯ, ಕ್ಲೇಶ, ಅಪವಾದ, ದಾಸ್ಯ, ವಿಘ್ನಗಳ ವಿವರ ನೀಡುತ್ತದೆ.  
ಒಂಭತ್ತನೇ ಮನೆಯು ಗುರು, ದೇವತೆ, ಅದೃಷ್ಟ, ತಂದೆ, ಜಪ, ಶ್ರೇಷ್ಠತೆ ಕುಲದೇವರ ಚಿಂತನೆಗಳ ವಿವರ ಸೂಚಿಸುತ್ತದೆ.
ಹತ್ತನೇ ಮನೆ ಪದವಿ, ವೃತ್ತಿ, ಸ್ಥಾನಮಾನ, ಆಕಾಶ, ಗಮನ ಇತ್ಯಾದಿಗಳ ಬಗ್ಗೆ ತಿಳಿಸುತ್ತದೆ. 
ಹನ್ನೊಂದನೆ ಮನೆಯು ಪ್ರಾಪ್ತಿ, ಲಾಭ,  ಸಿದ್ಧಿ, ಹಿರಿಯ ಸಹೋದರ – ಸಹೋದರಿಯರು, ಶುಭವಾರ್ತೆ ಇತ್ಯಾದಿಗಳ ವಿವರ ನೀಡುತ್ತದೆ.
ಹನ್ನೆರಡನೆ ಮನೆಯು ದುಃಖ, ಖರ್ಚ, ಶಯನ, ದಾರಿದ್ರ್ಯ ಇತ್ಯಾದಿಗಳ ವಿವರ ನೀಡತ್ತದೆ.

ಯಾವ ಗ್ರಹವು ಎಷ್ಟನೇ ಮನೆಯಲ್ಲಿದೆ ಎಂಬುದನ್ನು ನೋಡಿಕೊಂಡು. ಯಾವ ಮನೆಯಲ್ಲಿದ್ದರೆ ಏನು ಪರಿಣಾಮ, ಆ ಗ್ರಹದ ಜೊತೆ ಯಾವ ಗ್ರಹವಿದೆ, ಅದರ ಆಸುಪಾಸಿನಲ್ಲಿ ಏನಿದೆ ಎಂಬುದನ್ನು ಅವಲೋಕಿಸಿ, ಅವುಗಳ ಗುಣಗಳ ಆಧಾರದ ಮೇಲೆ ನಮ್ಮ ಈಗಿನ ದೆಸೆಯನ್ನು ಅಂದಾಜು ಮಾಡಬಹುದು.

ಪರಿಣತ ಜ್ಯೋತಿಷಿಗಳು ಗ್ರಹಗಳ ಸ್ವಭಾವದ ಆಧಾರದ ಮೇಲೆ, ನಮ್ಮ ಜನ್ಮರಾಶಿ ಮತ್ತು ಲಗ್ನಗಳಿಗೆ ಅನುಗುಣವಾಗಿ ನಮ್ಮ ವರ್ತಮಾನವನ್ನೂ ಭವಿಷ್ಯವನ್ನೂ ಹೇಳುತ್ತಾರೆ. ಇಂಥಾ ಗ್ರಹದ ಪ್ರಭಾವದಿಂದ ಇಂಥಾ ದೆಸೆ ಉಂಟಾಗುತ್ತದೆ ಎಂದು ಮೊದಲೇ ತಿಳಿದರೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬಹುದು. ಅಥವಾ ಕೊನೆಪಕ್ಷ ಮಾನಸಿಕವಾಗಿಯಾದರೂ ತಯಾರಾಗಿರಬಹುದು ಅನ್ನೋದು ಜಾತಕ ನೋಡುವ – ನೋಡಿಸುವ ರೂಢಿಯ ಹಿಂದಿರುವ ಚಿಂತನೆ. ಹಾಗೆಯೇ, ಒಳ್ಳೆಯ ಗ್ರಹ, ಕೆಟ್ಟ ಗ್ರಹ ಎಂಬುದಿಲ್ಲ. ಆ ಬಗ್ಗೆ ನಾವು ಆತಂಕ ಪಡಬೇಕಾಗಿಯೂ ಇಲ್ಲ. ಅವುಗಳ ಸ್ಥಾನ ತಿಳಿದುಕೊಂಡು ನಾವು ಪ್ರಭಾವಕ್ಕೊಳಗಾಗದಂತೆ ಎಚ್ಚರಿಕೆಯಿಂದ ವರ್ತಿಸುವುದೇ ಜಾತಕ ನೋಡುವ ಮೂಲ ಉದ್ದೇಶವಾಗಬೇಕು!

ಇನ್ನು, ಗ್ರಹಗಳ ಸ್ಥಾನಕ್ಕೆ ತಕ್ಕಂತೆ ನಮ್ಮ ಬದುಕು ಎಷ್ಟು ಪ್ರಭಾವಕ್ಕೊಳಗಾಗುತ್ತದೆ ಅನ್ನುವುದು ಚರ್ಚೆಯ ವಿಚಾರವೇ. ಆದರೂ, ‘ಪ್ರಯತ್ನವೇ ಪರಮಾತ್ಮ’ ಎಂಬುದನ್ನರಿತು, ಈ ಪರಮಾತ್ಮನ ಬಲವಿದ್ದರೆ ಮತ್ತೇನೂ ಬೇಕಿಲ್ಲ ಎಂಬುದನ್ನು ಮರೆಯದೆ; ಜಾತಕ ನೋಡುವ ಹವ್ಯಾಸ ತಪ್ಪೇನಲ್ಲ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

4 Responses

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.