ರಾಜಯೋಗ ಸೂಚಿಸುವ ನಾಲ್ಕು ಹಂತಗಳ ಧ್ಯಾನ ವಿಧಾನ

ರಾಜಯೋಗವು ನಾಲ್ಕು ಹಂತಗಳಲ್ಲಿ ಧ್ಯಾನ ವಿಧಾನವನ್ನು ಸೂಚಿಸುತ್ತದೆ.

ಮೊದಲನೆಯ ಹಂತ : ಸಹಜವಾಗಿ ಉಸಿರಾಡಿ. ಉಸಿರನ್ನು ಒಳಗೆಳೆದುಕೊಳ್ಳುವಾಗ ಆರೋಗ್ಯ ಮತ್ತು ಶಾಂತಿಯನ್ನು ಒಳಗೆ ಸೆಳೆದುಕೊಳ್ಳುತ್ತಿದ್ದೇನೆಂದು ಭಾವಿಸಿ. ಉಸಿರು ಹೊರಬಿಡುವಾಗ ನಿಮ್ಮ ದೋಷ, ನ್ಯೂನತೆಗಳೆಲ್ಲವನ್ನೂ ಹೊರಹಾಕುತ್ತಿರುವುದಾಗಿ ಭಾವಿಸಿ.

ಎರಡನೆಯ ಹಂತ : ಕಣ್ಣುಗಳನ್ನು ಮುಚ್ಚಿ, ನಿಮ್ಮ ಹೃದಯಭಾಗದಲ್ಲಿ ಪ್ರಕಾಶಮಾನವಾದ ಬೆಳಕು ಇದೆಯೆಂದು ಭಾವಿಸಿಕೊಳ್ಳಿ. ಅಂತೆಯೇ ನಿಮ್ಮ ದೇಹವು ಪಾರದರ್ಶಕವಾಗಿದೆಯೆಂದು ಕಲ್ಪಿಸಿಕೊಳ್ಳಿ. ನಿಮ್ಮ ದೇಹದೊಳಗೆ ಕಾಣುತ್ತಿರುವ ಬೆಳಕು ನಿಸ್ವಾರ್ಥ ಪ್ರೇಮದ ಬೆಳಕು. ಇದು ಎಲ್ಲೆಡೆಗೂ ಹರಡಿ ಪ್ರಪಂಚದ ಎಲ್ಲರನ್ನೂ ಅದು ಸಂತೋಷಗೊಳಿಸುತ್ತಿರುವುದಾಗಿ ಕಲ್ಪಿಸಿಕೊಳ್ಳಿ.

ಮೂರನೆಯ ಹಂತ : ಕಣ್ಣುಗಳನ್ನು ಮುಚ್ಚಿ. ನಿಮ್ಮ ತಲೆಯ ಕೆಲವೇ ಇಂಚುಗಳ ಮೇಲ್ಭಾಗದಲ್ಲಿ ಒಂದು ಕಮಲದ ಹೂವು ಇರುವಂತೆ ಭಾವಿಸಿ. ಒಳ್ಳೆಯ ಮೌಲ್ಯಗಳು ಅದರ ನಡುವಿನ ಭಾಗವೆಂದೂ, ಜ್ಞಾನವು ಅದರ ಕಾಂಡವೆಂದೂ ಭಾವಿಸಿ. ಯೋಗಿಯ ಎಂಟು ಅತೀಂದ್ರಿಯ ಶಕ್ತಿಗಳು ಅದರ ಎಂಟು ದಳಗಳಾಗಿರಲಿ. ತ್ಯಾಗವೇ ಅದರ ಕೇಸರ ಮತ್ತು ಶಲಾಕೆಗಳು.

ಶಕ್ತಿಗಳ ತ್ಯಾಗವೇ ಶ್ರೇಷ್ಠ ತ್ಯಾಗವೆಂದು ಪರಿಗಣಿಸಲ್ಪಡುತ್ತದೆ. ಕಮಲದ ಒಳಗೆ ವಿರಾಜಮಾನನಾಗಿರುವ ಭಗವಂತನು ಬಂಗಾರದ ಬಣ್ಣದವನೂ, ಸುಸ್ಪಷ್ಟನೂ, ಓಂಕಾರಸ್ವರೂಪಿಯೂ, ವರ್ಣನಾತೀತನೂ ಮತ್ತು ಪ್ರಕಾಶವಾದ ಬೆಳಕಿನಿಂದ ಆವೃತನೂ ಆಗಿದ್ದಾನೆ. ಅವನನ್ನು ಕುರಿತು ಧ್ಯಾನ ಮಾಡಿ.

ನಾಲ್ಕನೆಯ ಹಂತ : ಕಣ್ಣುಗಳನ್ನು ಮುಚ್ಚಿ. ನಿಮ್ಮ ಹೃದಯದಲ್ಲಿ ಒಂದು ಭಾಗವನ್ನು ಊಹಿಸಿಕೊಳ್ಳಿ. ಅದರ ಮಧ್ಯಭಾಗದಲ್ಲಿ  ಸದಾ ಉರಿಯುತ್ತಿರುವ ಜ್ವಾಲೆ ಇದೆಯೆಂದು ಭಾವಿಸಿ. ಆ ಜ್ವಾಲೆಯೇ ನಿಮ್ಮ ‘ಆತ್ಮ’ವೆಂದುಕೊಳ್ಳಿ. ಆ ಆತ್ಮದ ಅಂತರಂಗದಲ್ಲಿ ಇನ್ನೊಂದು ಬೆಳಕು ಇದೆ. ಅದೇ ನಿಮ್ಮ ಆತ್ಮದ ಆತ್ಮನಾದ ಭಗವಂತ. ಅವನನ್ನು ನಿಮ್ಮ ಹೃದಯದೊಳಗೆ ಸ್ಥಾಪಿಸಿಕೊಂಡು, ಧ್ಯಾನ ಮಾಡಿ.

ಭಕ್ತಿಯೋಗದ ಪ್ರಕಾರ ಧ್ಯಾನ

ಕಣ್ಣನ್ನು ಮುಚ್ಚಿ. ದೇವರ ಮುಂದೆ ಕುಳಿತಿರುವಂತೆ ಭಾವಿಸಿ. ಆ ದೇವಪುರುಷನ ದೇಹದಿಂದ ಹಿತವಾದ ಬೆಳಕು ಹೊರಹೊಮ್ಮುತ್ತಿರುವಂತೆ ಭಾವಿಸಿ. ಆ ದೇವನ ಸ್ಪಷ್ಟ ರೂಪವನ್ನು ಊಹಿಸಿಕೊಳ್ಳಿ. ಎಣೆಯಿಲ್ಲದ ಪ್ರೀತಿ ಮತ್ತು ಕರುಣೆಯ ಮೂರ್ತರೂಪನನ್ನಾಗಿ ಆತನನ್ನು ಪರಿಭಾವಿಸಿ. ಈ ಅಪರಿಮಿತ ಪ್ರೀತಿಯನ್ನು ಪಡೆಯುತ್ತಿರುವ ಅವನ ಮಗು ನೀವು ಎಂಬುದಾಗಿ ಭಾವಿಸಿಕೊಳ್ಳಿ. ದೇವನು ನಿರಾಕಾರನೆಂದು ನೀವು ಭಾವಿಸುವವರಾದರೆ ಅವನನ್ನು ಕರುಣೆ ಮತ್ತು ಪ್ರೀತಿ ತುಂಬಿದ ತೇಜೋರಾಶಿಯಾಗಿ ಪರಿಭಾವಿಸಿ.

ಜ್ಞಾನಯೋಗದ ಪ್ರಕಾರ ಧ್ಯಾನ

ಕಣ್ಣುಗಳನ್ನು ಮುಚ್ಚಿ. ಈ ಮಾತುಗಳನ್ನು ದೃಢವಾಗಿ ಹೇಳಿಕೊಳ್ಳಿ; “ನಾನು ಇಂದ್ರಿಯಗಳಾಗಲಿ. ಅವುಗಳ ಶಕ್ತಿಯಾಗಲಿ ಅಲ್ಲ. ಯಾವುದರ ಬಗ್ಗೆಯೂ ದ್ವೇಷವಾಗಲೀ ಮೋಹವಾಗಲೀ ನನಗಿಲ್ಲ. ಅತಿಯಾಸೆ, ಅಸೂಯೆ, ಅಹಂಕಾರ ನನಗಿಲ್ಲ. ನಾನು ಸುಶೀಲನಾಗಲೀ ದುಶ್ಶೀಲನಾಗಲೀ ಅಲ್ಲ. ಪ್ರಾಪಂಚಿಕವಾದ ಯಾವುದೂ ನನ್ನನ್ನು ತಟ್ಟದು. ಯಾವ ಅಶುದ್ಧತೆಯೂ ನನ್ನನ್ನು ಮುಟ್ಟದು. ಸದಾ ಪರಿಶುದ್ಧವಾದ ಪವಿತ್ರಾತ್ಮ ನಾನು. ನನಗೆ ಹುಟ್ಟುಸಾವುಗಳಿಲ್ಲ. ನಾನು ಸದಾ ಮುಕ್ತ. ನಾನು ದಿವ್ಯಾತ್ಮನೊಡನೆ, ದಿವ್ಯ ಜ್ಞಾನದೊಡನೆ, ಪರಿಪೂರ್ಣ ಆನಂದದೊಡನೆ ಒಂದಾಗಿದ್ದೇನೆ. ನಾನು ಅಪರಿಮಿತನೂ ಅನಂತನೂ ಆಗಿದ್ದೇನೆ.” ಅನಂತರ ಈ ಅವಸ್ಥೆಯಲ್ಲೇ ಕೆಲವು ನಿಮಿಷಗಳ ಕಾಲ ವಿರಮಿಸಿ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.